ಲೋಟಗಳ ಚೂರು ಜಗತ್ತನ್ನು ಕಂಪಿಸಿದ ಸಂಗೀತ
ಕೆಲವು ವರ್ಷಗಳ ಹಿಂದೆ ಇಂಗ್ಲೆಂಡ್ನ ದೂರದರ್ಶನದಲ್ಲಿ ಒಂದು ವಿಶೇಷ ಕಾರ್ಯಕ್ರಮ. ಸಾವಿರಾರು ದರ್ಶಕರು ಈ ಕಾರ್ಯಕ್ರಮ ನೋಡಲು ತಮ್ಮ ತಮ್ಮ ಮನೆಗಳಲ್ಲಿ ಟಿವಿಯ ಮುಂದೆ ಕಾತರರಾಗಿ ಕಾದು ಕುಳಿತಿದ್ದರು. ಆ ಕಾರ್ಯಕ್ರಮವೇನೆಂದರೆ ಇಂಗ್ಲಂಡ್ನ ಒಬ್ಬ ಗಾಯಕಿ ಮಿಸ್ ಏಲಿಯಸ್ ಎಂಬಾಕೆ ಅಂದು ತಾನು ಹಾಡುವುದರ ಮೂಲಕ ಗಾಜಿನ ಲೋಟಗಳನ್ನು ಒಡೆಯುವವಳಿದ್ದಳು! ಸ್ಟುಡಿಯೋನಲ್ಲಿ ಅವಳ ಮುಂದೆ ನಾಲ್ಕು ಗಾಜಿನ ಲೋಟಗಳನ್ನು ಇಡಲಾಗಿತ್ತು. ಏಲಿಯಸ್ ಹಾಡಲು ಪ್ರಾರಂಭಿಸಿದಳು... ಹಾಡಿಯೇ ಹಾಡಿದಳು... ಆದರೆ ಎಲ್ಲರೂ ಅಂದುಕೊಂಡಂತೆ ಅಥವಾ ನಾವೀಗ ಅಂದುಕೊಳ್ಳುತ್ತಿರುವಂತೆ ಆ ಗ್ಲಾಸುಗಳು ಒಡೆಯಲೇ ಇಲ್ಲ...!
ಬಹಳ ದರ್ಶಕರಿಗೂ ನಿರಾಸೆ. ದೂರದರ್ಶನ ವಾಹಿನಿಯವರಿಗೂ ನಿರಾಸೆ. ಏಲಿಯಸ್ಗೂ ಯಾಕೆ ಅದು ಈ ಬಾರಿ ಸಾಧ್ಯವಾಗಲಿಲ್ಲ ಎಂದು ನಿರಾಸೆ...
ಆದರೆ ಅದರ ಮಾರನೆಯ ಎರಡು ದಿನಗಳಲ್ಲಿ ದೂರದರ್ಶನ ಕಚೇರಿಗೆ ಪತ್ರಗಳ ಮೇಲೆ ಪತ್ರಗಳು... ಮಿಸ್ ಏಲಿಯಸ್ ಹಾಡುತ್ತ ಹಾಡುತ್ತ ತನ್ಮಯಳಾಗಿ ತಾರ ಸಪ್ತಕದ ಸ್ವರ ಒಂದನ್ನು ವಿಶಿಷ್ಟವಾಗಿ ಹಚ್ಚಿದಾಗ ಅದನ್ನು ಟಿವಿಯಲ್ಲಿ ನೋಡುತ್ತ ಕುಳಿತಿದ್ದ ಅವರ ಮನೆಯಲ್ಲಿ ಎದುರಿಗಿಟ್ಟ ಗಾಜಿನ ಲೋಟಗಳು ಚೂರಾಗಿದ್ದವು! ಒಂದಲ್ಲ, ಎರಡಲ್ಲ, ಈ ರೀತಿ ಇಪ್ಪತ್ತೊಂದು ಮನೆಗಳಲ್ಲಿ ಏಲಿಯಸ್ ಆ ಸ್ವರವನ್ನು ಹಚ್ಚಿದಾಗಲೇ ಗಾಜುಗಳು ಒಡೆದಿದ್ದವು!
ಅವರೆಲ್ಲ ಪತ್ರಬರೆದು ಜತೆಗೆ ಆ ಗಾಜಿನ ಚೂರುಗಳನ್ನೂ ಕಳಿಸಿದ್ದರು!
ಅಂದರೆ, ಸ್ಟುಡಿಯೋದಲ್ಲಿ ಶಬ್ದ- ನಾದದ ಅಲೆಗಳು ಸಹಜವಾಗಿ ಪಸರಿಸಬಾರದೆಂದು ವಿಶಿಷ್ಟವಾಗಿ ಅದನ್ನು ರಚನೆ ಮಾಡಿರುವುದರಿಂದ ಅಲ್ಲಿ ಏಲಿಯಸ್ಳ ಗಾಯನ ತನ್ನ ಪ್ರಭಾವವನ್ನು ಸರಿಯಾಗಿ ಬೀರಲಾಗಿರಲಿಲ್ಲ. ಆದರೆ ಅದೇ ಗಾಯನ ಟಿವಿಯ ಮೂಲಕ ಸಹಜವಾದ ಸ್ಥಿತಿಯಲ್ಲಿ ಮನೆಮನೆಗಳಲ್ಲಿ ಬಿತ್ತರಿಸಲ್ಪಟ್ಟಾಗ ಅದು ಅಷ್ಟೂ ಮನೆಗಳಲ್ಲಿ ವ್ಯವಸ್ಥಿತವಾಗಿ ತನ್ನ ಪ್ರಭಾವ ಬೀರಿತ್ತು!
ಮೊನ್ನೆ ಸಂಗೀತದ ಗ್ರಂಥವೊಂದರಲ್ಲಿ ಈ ನೈಜ ಘಟನೆಯನ್ನು ಕುರಿತು ಓದಿದಾಗ ಅದನ್ನು ಹಂಚಿಕೊಳ್ಳಲೇಬೇಕೆನಿಸಿತು.
ಅಷ್ಟೇ ಅಲ್ಲ, ನಮ್ಮ ಹಿಂದುಸ್ತಾನೀ ಶಾಸ್ತ್ರೀಯ ಸಂಗೀತ ದಿಗ್ಗಜ ಪಂ. ಓಂಕಾರ್ನಾಥ್ ಠಾಕೂರ್ ಲಖನೌದಲ್ಲಿ ಒಮ್ಮೆ, ಬೋನಿನಲ್ಲಿ ನಿಂತು ಕ್ರೂರವಾಗಿ ನೋಡುತ್ತಿದ ಹುಲಿಯ ಮುಂದೆ ಹಾಡುತ್ತ ವಿಶಿಷ್ಟವಾಗಿ ಕೋಮಲ ಗಂಧಾರವನ್ನು ಹಚ್ಚಿದಾಗ, ಕೆಲವೇ ಕ್ಷಣಗಳಲ್ಲಿ ಅದು ಸೌಮ್ಯವಾಗಿ ಬಾಲ ಅಲ್ಲಾಡಿಸಿ ಕಣ್ಣಲ್ಲಿ ನೀರು ತುಂಬಿಸಿಕೊಂಡಿತಂತೆ... ಇದನ್ನೂ ಪ್ರಯೋಗಾತ್ಮಕವಾಗಿ ಮಾಡಲಾಗಿತ್ತಂತೆ.
ಜಗತ್ತಿನ ಮೂಲ, ಉತ್ಪತ್ತಿ, ಲಯ ಎಲ್ಲವೂ 'ನಾದ' ಎಂದಾದಮೇಲೆ ಇನ್ನು ಉಳಿದಿದ್ದೇನು? ಟಿ
-ಶ್ರುತಿ ಭಟ್
shrutikbhat @gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.