ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ನಿಮ್ಮ ಮಕ್ಕಳಿಗೆ ಹಕ್ಕಿದೆ

Rashmi Kasaragodu
Updated On : 3 Aug 2013, 3:03 am

ರತ್ನ, ಚನ್ನರಾಯಪಟ್ಟಣ
ನನ್ನ ಅತ್ತೆಯವರಿಗೆ ಪಿತ್ರಾರ್ಜಿತ ಆಸ್ತಿ ಇದ್ದು, ಅವರು ಈಗ ತೀರಿಕೊಂಡಿರುತ್ತಾರೆ. ನನ್ನ ಗಂಡ ಈ ಮೊದಲೇ ತೀರಿಕೊಂಡಿರುತ್ತಾರೆ. ಈಗ ಆಕೆಯ ಆಸ್ತಿಯಲ್ಲಿ ನನಗೇನೂ ಹಕ್ಕಿಲ್ಲವೆಂದು ಆಕೆಯ ಹೆಣ್ಣುಮಕ್ಕಳು ಹೇಳುತ್ತಿದ್ದಾರೆ. ಕಾನೂನು ಏನು ಹೇಳುತ್ತದೆ?
- ಹಿಂದೂ ಉತ್ತರಾಧಿಕಾರ ಕಾಯ್ದೆಯ ಕಲಂ 15 ಮತ್ತು 16ರ ಪ್ರಕಾರ ನಿಮ್ಮ ಅತ್ತೆಯವರ ಆಸ್ತಿಯಲ್ಲಿ ನಿಮ್ಮ ಮಕ್ಕಳಿಗೂ, ನಿಮ್ಮ ಗಂಡನ ಪಾಲಿನಲ್ಲಿ ಹಕ್ಕು ಇರುತ್ತದೆ. ಆದರೆ ಆಕೆ ವಿಲ್ ಮಾಡಿ ಬೇರೆಯವರಿಗೆ ಬರೆದಿದ್ದರೆ ಅದು ವಿಲ್ ಯಾರ ಹೆಸರಿಗೆ ಮಾಡಿದ್ದಾರೋ ಅವರಿಗೇ ಹೋಗುತ್ತದೆ.

ಕೆಲಸಕ್ಕೇನೂ ತೊಂದರೆಯಿಲ್ಲ
ಹೆಸರು, ಊರಿಲ್ಲ
ತಂದೆ ಒಂದು ಕೆಲಸದ ತರಬೇತಿಯಲ್ಲಿದ್ದಾಗ ನಡೆದ ಘಟನೆಯಲ್ಲಿ ಲಾಠಿಛಾರ್ಜ್ ಹಾಗೂ ಗೋಲೀಬಾರ್ ಆಗಿ ಕೆಲವರನ್ನು ಬಂಧಿಸಿದ್ದರು. ಅದರಲ್ಲಿ ನನ್ನ ತಂದೆಯೂ ಒಬ್ಬರು. ನಂತರ ಜಾಮೀನಿನ ಮೇಲೆ ಹೊರಬಂದು ತರಬೇತಿ ಮುಗಿಸಿ ಕೆಲಸಕ್ಕೆ ಸೇರಿದರು. ಕೆಲ ದಿನಗಳ ನಂತರ ಸರ್ಕಾರ ಎಲ್ಲ ಪ್ರಕರಣಗಳನ್ನೂ ವಾಪಸ್ ಪಡೆಯಿತು. ಈಗ ನಮ್ಮ ಪಕ್ಕದ ಮನೆಯವರು ನಮ್ಮ ತಂದೆಯನ್ನು ಕೆಲಸದಿಂದ ತೆಗೆಸುತ್ತೇನೆಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಪರಿಹಾರವೇನು?
- ಪ್ರಕರಣ ವಾಪಸ್ ಪಡೆದಿರುವುದರಿಂದ ಕೆಲಸಕ್ಕೇನೂ ತೊಂದರೆ ಇಲ್ಲ. ಪಕ್ಕದ ಮನೆಯವರ ಮೇಲೆ ಪೊಲೀಸರಿಗೆ ಅಥವಾ ನ್ಯಾಯಾಲಯಕ್ಕೆ ದೂರು ನೀಡಬಹುದು.

ನ್ಯಾಯಾಲಯಕ್ಕೆ ದೂರು ನೀಡಿ
ಹೆಸರು, ಊರು ಇಲ್ಲ
ನನ್ನ ಸಹೋದ್ಯೋಗಿಯೊಬ್ಬರು ಏಕಕಾಲದಲ್ಲಿ ಎರಡು ಕಡೆ ಸರ್ಕಾರದಿಂದ ವೇತನ ಪಡೆದಿರುವುದನ್ನು ಮಾಹಿತಿ ಹಕ್ಕು ಕಾನೂನಿನಡಿ ನಾನು ಮಾಹಿತಿ ಪಡೆದಿರುತ್ತೇನೆ. ಈ ವಿಷಯ ತಿಳಿದ ಅವರು ಗುಂಪು ಕಟ್ಟಿಕೊಂಡು ನನ್ನನ್ನು ಬೆದರಿಸುತ್ತಿದ್ದಾರೆ. ನಾನು ಹೇಗೆ ಅವರ ವಿರುದ್ಧ ಹೋರಾಡಬಹುದು ತಿಳಿಸಿ.
- ಸರ್ಕಾರಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ವಿಷಯ ತಿಳಿಸಿ. ಪೊಲೀಸ್ ಹಾಗೂ ನ್ಯಾಯಾಲಯಕ್ಕೆ ದೂರು ನೀಡಿ. ಆದರೆ ಒಂದು ಕಿವಿಮಾತು, ಇಂತಹ ಕೆಲಸ ಮಾಡುವ ಮುಂಚೆ ಅದರ ಪರಿಣಾಮಗಳನ್ನೂ ನೀವು ಯೋಚಿಸುವುದು ಒಳಿತು. ಸರ್ಕಾರವಾಗಲಿ, ಪೊಲೀಸರಾಗಲಿ ನಿಮ್ಮ ಸಹಾಯಕ್ಕೆ ತುದಿಗಾಲಲ್ಲಿ ನಿಂತಿರುವುದಿಲ್ಲ!
ಮಾರಿದ ಹಣವನ್ನು ಕೋರ್ಟಿಗೇ ಕಟ್ಟಬೇಕು

ಮುನಿಚೆಲುವಯ್ಯ, ವಿದ್ಯಾನಗರ, ಮಾಗಡಿರಸ್ತೆ, ಬೆಂಗಳೂರು
ನಮ್ಮ ಪಿತ್ರಾರ್ಜಿತ ಜಮೀನನ್ನು ಬೇರೊಬ್ಬರು ಮೋಸದಿಂದ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡಿದಾಗ ನಾವು ವಿಶೇಷ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಅದನ್ನು ವಜಾ ಮಾಡಿಸಿದ್ದೇವೆ. ಈಗ  ಆ ಖರೀದಿದಾರರು ಇದರ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದು ಇನ್ನೂ ಇತ್ಯರ್ಥವಾಗಿಲ್ಲ. ಈಗ ನಾವು ಮಧ್ಯಕಾಲದಲ್ಲಿ ಆ ಜಮೀನನ್ನು ಪರಭಾರೆ ಮಾಡಬಹುದೇ?
- ಹೈಕೋರ್ಟಿನ ಅನುಮತಿ ಪಡೆದು ಮಾಡಬಹುದಾದರೂ ಆ ಹಣವನ್ನು ಕೋರ್ಟಿಗೇ ಕಟ್ಟಬೇಕಾಗಬಹುದು. ಅಲ್ಲದೆ ಖರೀದಿದಾರರೂ ಹಿಂದು ಮುಂದು ನೋಡಿ ಬೆಲೆ ಬರದೇಹೋಗಬಹುದು.

ಎಲ್ಲ ಮಕ್ಕಳಿಗೂ ಸಮಾನ ಹಕ್ಕಿದೆ
ಊರು, ಹೆಸರು ಇಲ್ಲ
1. ಖಾಲಿ ನಿವೇಶನಕ್ಕೆ ಗ್ರಾಮ ಪಂಚಾಯ್ತಿಯಲ್ಲಿ ಖಾತೆ ಮಾಡಿದ್ದು, ಎರಡು ವರ್ಷಗಳ ನಂತರ ಅದನ್ನು ಬೇರೊಬ್ಬರ ಹೆಸರಿಗೆ ಮಾಡಿದ್ದಾರೆ.
2. 1952ರಲ್ಲಿ ಮದುವೆಯಾದ ಹೆಣ್ಣುಮಕ್ಕಳಿಗೆ ತಂದೆ ತಾಯಿ ಆಸ್ತಿಯಲ್ಲಿ ಪಾಲು ಬರುತ್ತದೆ ಎಂಬ ಕಾನೂನಿರುವುದು ನಿಜವೇ?
- 1. ಖಾತೆ ಬದಲಾವಣೆ ಮಾಡಿದ್ದರ ವಿರುದ್ಧ ನೀವು ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಬಹುದು. ಜತೆಗೆ ಲೋಕಾಯುಕ್ತಕ್ಕೂ ದೂರು ನೀಡಬಹುದು.
2. 9.9.205ರಿಂದ ಹಿಂದೂ ಉತ್ತರಾಧಿಕಾರ ಕಾಯಿದೆಯನ್ವಯ ಎಲ್ಲ ಹೆಣ್ಣುಮಕ್ಕಳಿಗೂ ಹುಟ್ಟಿನಿಂದಲೇ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡುಮಕ್ಕಳಂತೆಯೇ ಸಮಾನ ಹಕ್ಕಿದೆ (ಯಾವಾಗ ಮದುವೆಯಾಗಿದ್ದರೂ ಸರಿ).


- ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement