ಫ್ಯಾಮಿಲಿ ಬಿಸಿನೆಸ್
ವೈದ್ಯರ ಮಕ್ಕಳು ಡಾಕ್ಟರಾಗುವುದು, ಇಂಜಿನಿಯರ್ ಮಗ ಇಂಜಿನಿಯರ್ ಆಗುವುದು ಸಹಜ. ಆದರೆ ಸಾಹಿತಿಯ ಮಕ್ಕಳು ಅಕ್ಷರದ್ವೇಷಿ...
ವೈದ್ಯರ ಮಕ್ಕಳು ಡಾಕ್ಟರಾಗುವುದು, ಇಂಜಿನಿಯರ್ ಮಗ ಇಂಜಿನಿಯರ್ ಆಗುವುದು ಸಹಜ. ಆದರೆ ಸಾಹಿತಿಯ ಮಕ್ಕಳು ಅಕ್ಷರದ್ವೇಷಿಗಳಾಗುವುದೇ ಸಾಮಾನ್ಯ. ಅಂಥಲ್ಲಿ ಒಂದಿಡೀ ಕುಟುಂಬವೇ ಕಾದಂಬರಿ ಬರೆಯುತ್ತಿರುವಂಥ ವೈಚಿತ್ರ್ಯ ಇಲ್ಲಿದೆ. ಇದು ಬೇರಾರೂ ಅಲ್ಲ, ಜನಪ್ರಿಯ ಹಾರರ್ ರೈಟರ್ ಸ್ಟೀಫನ್ ಕಿಂಗ್ನ ಕುಟುಂಬ.
ಕ್ಯಾರೀ, ಮಿಸರಿ, ಶೈನಿಂಗ್, ಶ್ವಶಾಂಕ್ ರಿಡೆಂಪ್ಷನ್, ಗ್ರೀನ್ ಮೈಲ್ಗಳ ಮೂಲಕ ಹೆಸರಾಗಿರುವ ಕಿಂಗ್ನ ಮಡದಿ ತಬಿತಾ ಕಿಂಗ್ ಈಗಾಗಲೇ ಏಳೆಂಟು ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾಳೆ. ಮಗ ಜೋ ಈಗಾಗಲೇ ಬೆಸ್ಟ್ ಹಾರರ್ ಕಾದಂಬರಿಕಾರ. ಮಗಳು ಒವೆನ್ಳ ಕಾಮಿಡಿ ಕಾದಂಬರಿ ಮಾರ್ಚ್ನಲ್ಲಿ ಬಿಡುಗಡೆಯಾಗಿದೆ. ಅಳಿಯ ಕೆಲ್ಲಿ ಕೂಡ ಹಾರರ್ಗಳ ಮೂಲಕ ಓದುಗರನ್ನು ಹೆದರಿಸುವುದರಲ್ಲಿ ಪರಿಣತ. ಇವರು ಹೀಗೆ ಒಬ್ಬರನ್ನು ಮೀರಿಸುವಂತೆ ಇನ್ನೊಬ್ಬರು ಪುಸ್ತಕಗಳನ್ನು ಓದುಗರ ಮೇಲೆ ಛೂ ಬಿಡುತ್ತಿರುವುದು ನೋಡಿದರೆ, ಕನ್ನಡಿಗರನ್ನು ದೇವರೇ ಕಾಪಾಡಿದ ಎನ್ನಬಹುದು. ಸದ್ಯ, ಇಲ್ಲಿ ಇಂಥ ಫ್ಯಾಮಿಲಿ ಇಲ್ಲವಲ್ಲ!
ಸಾಹಿತ್ಯವೇಕೆ?
ಮಕ್ಕಳಿಗೆ ಬೋಧಿಸುವ ಸಾಹಿತ್ಯದ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ನಾವಿಲ್ಲಿ ತಲೆ ಚಚ್ಚಿಕೊಳ್ಳುವುದು ಇದ್ದದ್ದೇ. ಇದು ನಮ್ಮ ಪಾಡು ಮಾತ್ರವಲ್ಲ. ಬ್ರಿಟನ್ನವರದ್ದು ಕೂಡಾ ಎಂಬುದು ಇತ್ತೀಚೆಗೆ ಗೊತ್ತಾಯಿತು.
ಬ್ರಿಟನ್ನಲ್ಲಿ ಕಳೆದ ಕೆಲ ವರ್ಷಗಳಿಂದೀಚೆಗೆ 'ಕಾಮನ್ ಕೋರ್' ಎಂಬ ಶಿಕ್ಷಣಕ್ರಮ ಅಳವಡಿಸಲಾಗಿದೆ. ಅದರಂತೆ, ಜೀವನಕೌಶಲ್ಯ ವೃದ್ಧಿಗೊಳಿಸುವ ಬರಹಗಳಿಗೆ ಹೆಚ್ಚು ಹೆಚ್ಚು ಆದ್ಯತೆ ನೀಡಲಾಗುತ್ತಿದೆ.
ಇದರಿಂದ ಏನಾಗಿದೆಯೆಂದರೆ, ಶೇಕ್ಸ್ಪಿಯರ್ನ ಕೃತಿಗಳಿರಬೇಕಾದ ಜಾಗದಲ್ಲಿ 'ಡಿಎನ್ಎ ಮತ್ತು ಅಪರಾಧ ಪತ್ತೇದಾರಿಕೆ', ಎಲಿಯಟ್ನ ಕವನಗಳಿರಬೇಕಾದ ಸ್ಥಳದಲ್ಲಿ ತೋಟಗಾರಿಕೆಯ ಬಗ್ಗೆ ಮಾಹಿತಿ... ಇತ್ಯಾದಿಗಳು ತುಂಬಿಕೊಂಡಿವೆ ಎಂಬುದು ಸಾಹಿತ್ಯಾಭಿಮಾನಿಗಳ ತಕರಾರು.
ಉನ್ನತ ಶಿಕ್ಷಣದಲ್ಲಿ ಪ್ರೌಢ ಸಾಹಿತ್ಯದ ಅಗತ್ಯವಿಲ್ಲ ಎಂದು ಪ್ರತಿಪಾದಿಸುವ ಇಂಥ ಚಿಂತನೆ ಅಪಾಯಕಾರಿ ಎಂಬುದನ್ನು ಬೇರೆ ಹೇಳಬೇಕಿಲ್ಲ. ಆದರೆ ಇದು ಜಾಗತಿಕ ವಿದ್ಯಮಾನ ಎಂಬುದು ಗಮನಿಸಬೇಕಾದ್ದು.
ಹಾಯಿಕು
ಒಡೆದ ಎದೆಗೆ
ತಡೆ ಇರದು
ಪದಗಳು ಸರಾಗ
ಹಕ್ಕಿ ಗರಿಗೆ
ನೆಲ ತಲುಪುವ
ಆಸೆಯೇ ಇಲ್ಲ
ಪದ ಜೋಡಣೆ
ಐರಿಶ್ ಸಾಹಿತಿ ಜೇಮ್ಸ್ ಜಾಯ್ಸ್ ('ಯೂಲಿಸಿಸ್' ಬರೆದಾತ) ಬಗ್ಗೆ ಒಂದು ಪ್ರಸಂಗವಿದೆ. ಈತ ಪದಗಳ ಆಯ್ಕೆ, ಬಳಕೆಯ ಬಗ್ಗೆ ಸಿಕ್ಕಾಪಟ್ಟೆ ಕಾಳಜಿ ವಹಿಸುತ್ತಿದ್ದವನು.
ಒಮ್ಮೆ ಈತ ಸಿಕ್ಕಾಪಟ್ಟೆ ಬೇಜಾರಿನಲ್ಲಿದ್ದ. ಅಷ್ಟರಲ್ಲಿ ಆತನ ಗೆಳೆಯ ಬಂದ. ಕೇಳಿದ: 'ಇದೇನು ಇಷ್ಟೊಂದು ಬೇಜಾರು? ಇವತ್ತು ಬೇಕಾದ ಪದಗಳು ಸಿಗಲಿಲ್ವೆ?'
'ಸಿಗ್ತು. ಏಳು ಪದ' ಏಳು ಶಬ್ದಗಳು ಅಂದರೆ ಸಾಕಷ್ಟಾಯಿತು ಅನ್ನುವುದು ಸಾಹಿತ್ಯವೃತ್ತಿಯಲ್ಲಿದ್ದ ಆ ಗೆಳೆಯನಿಗೂ ತಿಳಿದದ್ದೇ. ಕೇಳಿದ: 'ಅರೆ, ಮತ್ಯಾಕೆ ಬೇಜಾರು?'
'ಅದನ್ನು ಹೇಗೆ ಜೋಡಿಸೋದು ತಿಳೀತಿಲ್ಲ ಮಾರಾಯ!'
-ಕೇರ