ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಹ್ಯಾಟ್ರಿಕ್ ಸಾಧಕಿ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಪೂರ್ವಭಾರತದ ದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್- ಕಮ್ಯುನಿಸ್ಟರ ವಿರುದ್ಧ ದಶಕಗಳ ಕಾಲ ಏಕಾಂಗಿನಿಯಾಗಿಯೇ...

Rashmi Kasaragodu
Updated On : 3 Aug 2013, 2:44 am

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಪೂರ್ವಭಾರತದ ದೊಡ್ಡ ರಾಜ್ಯದಲ್ಲಿ ಕಾಂಗ್ರೆಸ್- ಕಮ್ಯುನಿಸ್ಟರ ವಿರುದ್ಧ ದಶಕಗಳ ಕಾಲ ಏಕಾಂಗಿನಿಯಾಗಿಯೇ ಹೋರಾಡಿ, ಜನತಾಂತ್ರಿಕ ಚುನಾವಣೆಯಲ್ಲಿ ನಿರ್ಣಾಯಕವಾಗಿ ಮೇಲೆದ್ದು ಬಂದು ನಿಂತಿರುವ ಮಮತಾ ಬ್ಯಾನರ್ಜಿ ಈಗ ನಾಡಿನ ಪ್ರಾದೇಶಿಕ ನಾಯಕರಲ್ಲಿನ ಅಗ್ರಗಣ್ಯ ಸ್ಥಾನ ಪಡೆಯುವ ಎಲ್ಲ ಅರ್ಹತೆಯನ್ನು ಪಡೆದಿದ್ದಾರೆ.
ಒಂದು ರೀತಿಯಲ್ಲಿ ಮಮತಾ ಸ್ವಯಂಭೂ. ಭದ್ರ ಲೋಕದ ಪ್ರತಿಷ್ಠಿತ ಪ್ರತಿಭಾವಂತರನ್ನೇ ಆರಾಧಿಸುವ ವಂಗಭೂಮಿಯಲ್ಲಿ ಒಂದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ಯಾವ ವಿಚಾರದಲ್ಲೂ ಹೇಳಿಕೊಳ್ಳುವಂತಹ ಪಾಂಡಿತ್ಯವನ್ನು ಪ್ರದರ್ಶಿಸದಿರುವ ಮಮತಾ ಬ್ಯಾನರ್ಜಿ ಒಂದೇ ದಶಕದಲ್ಲಿ ಆ ರಾಜ್ಯದ ಅಗ್ರಮಾನ್ಯ ರಾಜಕೀಯ ನಾಯಕಿಯಾದದ್ದೇ ಒಂದು ಪವಾಡ ಸದೃಶ ಸಾಧನೆ.
ಏರು ಯೌವ್ವನದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ಎಳೆಯ ವಯಸ್ಸಿನಲ್ಲೇ ಅಪ್ಪನನ್ನು ಕಳೆದುಕೊಂಡು, ಒಂದು ಸಾಧಾರಣ ಮಧ್ಯಮ ವರ್ಗದ ಪ್ರದೇಶದಲ್ಲಿ ಅಮ್ಮನ ಬಂಧುಗಳ ಜತೆಯಲ್ಲೇ ಬದುಕಿ, ಪದವಿ ಗಳಿಸಿ, ವಕೀಲಿ ಪರೀಕ್ಷೆಯನ್ನು ಮುಗಿಸಿ, ಸಾರ್ವಜನಿಕ ಜೀವನಕ್ಕೆ ಧುಮುಕಲು ಕರೆ ಬಂದಾಗ ಆಕೆ ಹಿಂದೆ ಮುಂದೆ ನೋಡಲಿಲ್ಲ.
ಬಂಗಾಳದ ಬೀದಿಗಳಲ್ಲಿ ಪ್ರದರ್ಶನದ ಹಕ್ಕುಗಳ ಮೇಲೆ ಕಮ್ಯುನಿಸ್ಟರು ಏಕಸ್ವಾಮ್ಯ ಸ್ಥಾಪಿಸಿದ್ದ ಕಾಲದಲ್ಲೇ, ಸಂಜಯ ಗಾಂಧಿ, ಮಮತಾ ಅವರ ಮಾತಿಗೆ ಮರುಳಾಗಿ, ಅವರಲ್ಲಿದ್ದ ಚೈತನ್ಯವನ್ನು ಗುರ್ತಿಸಿ, ಏಕ್‌ದಮ್ ರಾಜ್ಯದ ಯುವ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಆರಿಸಿದ ವಾರದಲ್ಲೇ ಮಮತಾ ಕೋಲ್ಕತ್ತಾದ ಬೀದಿಗಳಲ್ಲಿ ಪ್ರಚಂಡ ಚಳವಳಿಗಾರ್ತಿಯ ಸ್ವರೂಪದಲ್ಲಿ ಕಾಣಿಸಿಕೊಂಡರು.
ಬಂಗಾಳದ ಆಗಿನ ಕಮ್ಯುನಿಸ್ಟ್ ನಾಯಕರಲ್ಲಿ ಜ್ಯೋತಿ ಬಸು, ಇಂದ್ರಜಿತ್ ಗುಪ್ತ, ಭೂಪೇಶ್ ಗುಪ್ತ ಅವರಂತಹ ಪ್ರಚಂಡ ಮಾರ್ಕ್ಸವಾದಿ ಕಮ್ಯುನಿಸ್ಟರನ್ನು  ಬೀದಿ ಬೀದಿಗಳಲ್ಲಿ ಎದುರಿಸಿದ ಯುವತಿಯ ಕೆಚ್ಚನ್ನು ಯುವ ಜನಾಂಗ ಮೆಚ್ಚಿತ್ತು. 1984ರ ಲೋಕಸಭೆ ಚುನಾವಣೆ ಮಮತಾ ಪಾಲಿಗೆ ಮೊದಲ ಚುನಾವಣೆ ಸಮರ. ಕೊಲ್ಕತ್ತಾದ ಅತಿ ಪ್ರತಿಷ್ಠಿತ ಜಾಧವಪುರ ಕ್ಷೇತ್ರದಲ್ಲಿ ಅವರ ಎದುರಾಳಿ ವಿಖ್ಯಾತ ವಕೀಲ, ವಿದೇಶೀ ಶಿಕ್ಷಣದ ಪಾಂಡಿತ್ಯ ತುಂಬಿಕೊಂಡಿದ್ದ ಸೋಮನಾಥ ಚಟರ್ಜಿ.
ಮಮತಾ ಗೆದ್ದರು. ಅನಂತರ ಅವರಿಬ್ಬರೂ ಜಾಧವಪುರ ಕ್ಷೇತ್ರವನ್ನು ಬಿಟ್ಟರು. ಅಲ್ಲಿಂದ ಮಮತಾ ಯಶೋಗಾಥೆಗೆ ಅಡ್ಡಿಯೇ ಇರಲಿಲ್ಲ. ಹೋರಾಟಗಳ ಮೂಲಕವೇ ಕೇಂದ್ರದಲ್ಲಿ ರೈಲ್ವೆ ಮಂತ್ರಿ. ಕಾರಣಾಂತರಗಳಿಂದ ಕಾಂಗ್ರೆಸ್ಸನ್ನು ಬಿಟ್ಟು ಸಂಯುಕ್ತ ರಂಗದ ಸರ್ಕಾರದಲ್ಲಿ ಪಾಲುಗೊಂಡಾಗಲೂ ರೈಲ್ವೆ ಮಂತ್ರಿ.
ದೆಹಲಿಯಲ್ಲಿ ಅವರ ರಾಜಕೀಯ ಹೇಗಾದರೂ ಇರಲಿ, ಬಂಗಾಳದಲ್ಲಿ ಮಾತ್ರ ಅವರ ಏಕಮಾತ್ರ ಎದುರಾಳಿ ಕಮ್ಯುನಿಸ್ಟ್ ವಾಮರಂಗವೇ. 34 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಜನಜೀವನವನ್ನೇ ಬಿಗಿ ಮುಷ್ಟಿಯಲ್ಲಿ ಹಿಡಿದುಕೊಂಡಿದ್ದ ಮಾರ್ಕ್ಸ್‌ವಾದಿ ಕಮ್ಯುನಿಸ್ಟರನ್ನು 2009ರ ಲೋಕಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನಿರ್ಣಾಯಕವಾಗಿ ಸೋಲಿಸಿದರು. ಅದಾದ ಅನಂತರ 2012ರಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಕಮ್ಯುನಿಸ್ಟರನ್ನು ಸೋಲಿಸಿ, ಮುಖ್ಯಮಂತ್ರಿಯಾದರು. ಈಗ 2013ರಲ್ಲಿ ರಾಜ್ಯದೆಲ್ಲಕಡೆ ತೃಣಮೂಲ ಕಾಂಗ್ರೆಸ್ ಕಮ್ಯುನಿಸ್ಟರನ್ನು ಪಂಚಾಯಿತಿ ರಾಜ್ಯ ಸಂಸ್ಥೆಗಳ ಚುನಾವಣೆಯಲ್ಲಿ ಸೋಲಿಸಿದೆ.
ಬಂಗಾಳದ ರಾಜಕೀಯದಲ್ಲಿ ಕಮ್ಯುನಿಸ್ಟರು ಹಲವು ಬಗೆಯ ಶಕ್ತಿಗಳನ್ನು ಸಂಘಟಿಸಿ, ಜನ ಜೀವನವನ್ನೇ ನಿಯಂತ್ರಿಸುವಂತಹ ಉದ್ದೇಶವನ್ನು ಸ್ಪಷ್ಟವಾಗಿ ಪ್ರದರ್ಶಿಸಿದಾಗ ಒಬ್ಬ ಸಾಮಾನ್ಯ ಹೆಣ್ಣು ಮಗಳು ಕಮ್ಯುನಿಸ್ಟರನ್ನು ಬುಡಸಮೇತ, ಪಂಚಾಯಿತಿಯಿಂದ ಪಾರ್ಲಿಮೆಂಟಿನವರೆಗೂ ಸೋಲಿಸಿದ್ದು ಅಸಾಮಾನ್ಯ ಸಾಧನೆಯೇ. ಅದು ಹ್ಯಾಟ್ರಿಕ್ ಸಾಧನೆಯೂ ಹೌದು. ಮಮತಾ ಬ್ಯಾನರ್ಜಿಗೆ ಹಟಮಾರಿ ಎನ್ನುವ ಹೆಸರು ಬಂದಿದ್ದು ಕೋಲ್ಕತ್ತಾ ಸಮೀಪದಲ್ಲಿನ ನಂದಿಗ್ರಾಮ- ಸಿಂಗೂರುಗಳಲ್ಲಿ ಕಮ್ಯುನಿಸ್ಟ್ ಸರ್ಕಾರ ರೈತರನ್ನು ಒಕ್ಕಲೆಬ್ಬಿಸಿ, ಟಾಟಾ ಮೋಟಾರ್ಸ್‌ಗೆ ನ್ಯಾನೋ ಕಾರು ತಯಾರಿಕಾ ಘಟಕದ ಸ್ಥಾಪನೆಗೆ ಭೂಮಿಯನ್ನು ಕೊಟ್ಟಾಗ.
ವಾಮರಂಗದ ಸರ್ಕಾರದ ನಿರ್ಧಾರವನ್ನು ಜಾರಿಗೆ ತಂದೇ ತರುತ್ತೇನೆ ಎನ್ನುವ ಹಟದಿಂದ ಮಾರ್ಕ್ಸ್‌ವಾದಿ ಕಮ್ಯುನಿಸ್ಟರ ದಳಗಳು ನಂದಿ ಗ್ರಾಮದಲ್ಲಿ ಬೀಡು ಬಿಟ್ಟಾಗ, ಅಲ್ಲಿನ ರೈತರ ಜತೆಯಲ್ಲೇ ನಡೆದವರು ಮಮತಾ. ಆ ವೇಳೆಗೆ ಆಕೆ ಮಮತಾ ದೀದಿ ಅಥವಾ ಮೇಡಂ ಆಗಿದ್ದರು. ಅನಧಿಕೃತ ಗುಂಡಿನ ಕಾಳಗಗಳೂ ನಡೆದವು. ನಂದಿ ಗ್ರಾಮದಲ್ಲಿ ರಕ್ತ ಚೆಲ್ಲಿದಾಗ, ಮಮತಾ ಬ್ಯಾನರ್ಜಿ ಅವರಿಗೆ ನಕ್ಸಲೀಯ ದಳಗಳು ಆಸರೆಯಾಗಿದ್ದವು ಎನ್ನುವ ವದಂತಿಗಳೂ ಇವೆ. ಆ ಕಾಲದಲ್ಲಿ ರೈತರ ಜತೆ ಮಮತಾ ಹಲವು ರಾತ್ರಿಗಳನ್ನು ಜೀಪುಗಳಲ್ಲಿ ಕೂತೇ ನಿದ್ದೆ ಮಾಡಿ ಕಳೆದಿದ್ದಾರೆ.
 ಇಷ್ಟೆಲ್ಲ ಆದ ನಂತರ ಬಂಗಾಳದಲ್ಲಿ ಕಮ್ಯುನಿಸ್ಟರು ಗೆಲ್ಲುವ ಸಂಭವವೇ ಇರಲಿಲ್ಲ. ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಗೆದ್ದೇ ಗೆಲ್ಲತ್ತೆ, ಮಮತಾ ಮುಖ್ಯಮಂತ್ರಿ ಆಗೇ ಆಗ್ತಾರೆ ಎನ್ನುವುದು ಜನಜನಿತವಾಗಿ ಹಬ್ಬಿದ ನಂಬಿಕೆ ನಿಜವಾಯಿತು. ಈಗ ಎಲ್ಲ ಪ್ರಾದೇಶಿಕ ನಾಯಕರಿಗೂ ಆಗುವಂತೆ, ಮಮತಾ ಬ್ಯಾನರ್ಜಿಗೂ ರಾಷ್ಟ್ರೀಯ ರಾಜಕೀಯದಲ್ಲಿ ಕೈಯಾಡಿಸುವ ಆಸೆ ಬಲವಾಗಿದೆಯಂತೆ. ಅದಕ್ಕಾಗಿ ಆಕೆ ಬಿಹಾರದ ನಿತೀಶ್‌ಕುಮಾರ್, ಒಡಿಶಾದ ನವೀನ ಪಟ್ಟನಾಯಕ ಅವರ ನೆರವನ್ನು ಬಯಸಿದ್ದಾರೆ. ಆದರೆ ಅದಕ್ಕೆ ಅನುಕೂಲಕರವಾದ ಪ್ರತಿಕ್ರಿಯೆ ಸಿಕ್ಕಿಲ್ಲ.
ಮಮತಾ ಬ್ಯಾನರ್ಜಿಯ ನೇತೃತ್ವದ ತೃಣಮೂಲ ಕಾಂಗ್ರೆಸ್ ಹಾದಿ- ಬೀದಿಯಲ್ಲಿ ತಿರುಗಾಡಿಕೊಂಡಿರುವ ಪಾಪ ಪೋಕರ ಪಕ್ಷವಲ್ಲ. ಈಚೆಗೆ ಕೋಲ್ಕತ್ತಾದ ಭದ್ರ ಲೋಕದ ಬೌದ್ಧಿಕ ನಾಯಕರೂ ಮಮತಾ ಬ್ಯಾನರ್ಜಿ ಅವರ ಅಸಾಮಾನ್ಯ ವ್ಯಕ್ತಿತ್ವ ಕುರಿತು ಪ್ರಬಂಧಗಳನ್ನು ರಚಿಸಿದ್ದಾರೆ.
ಮಮತಾ ಬ್ಯಾನರ್ಜಿ ತಮ್ಮ ಬಿಡುವಿಲ್ಲದ ರಾಜಕೀಯದ ನಡುವೆಯೂ ತಮ್ಮ ಮನಸ್ಸಿಗೆ ತೋಚಿದ್ದನ್ನು ಗೀಚಿದ್ದಾರೆ. ಅವರ ಹೆಸರಿನಲ್ಲಿ 25 ಪುಸ್ತಕಗಳು ಬೆಳಕು ಕಂಡಿವೆ. ಆಗೀಗ ವರ್ಣ ಚಿತ್ರಗಳನ್ನೂ ಬರೆಯುತ್ತಾರಂತೆ. ಅವರ ಈ ಚಟುವಟಿಕೆಗೆ ಪ್ರಚಾರ ಸಿಕ್ಕಿಲ್ಲ.  ಮುಖ್ಯಮಂತ್ರಿ ಬರೆದ ಪುಸ್ತಕ, ಅವರು ಬಿಡಿಸಿದ ವರ್ಣಚಿತ್ರಗಳು ಎಂದರೆ ಕೇಳಬೇಕೇ? ಬೇಕಾದಷ್ಟು ಜನ ಹೊಗಳಿದ್ದಾರೆ. ಕೆಲವರು ಕೋಟಿ ರುಪಾಯಿಗೆ ಕೊಂಡಿದ್ದಾರೆ. ಮಾರಾಟದಿಂದ ಬರುವ ಎಲ್ಲ ಹಣವನ್ನೂ, ಅವರ ಸಂಬಳ- ಭತ್ಯದಂತೆಯೇ ಮಮತಾ ಬ್ಯಾನರ್ಜಿ ಪಕ್ಷಕ್ಕೇ ಬರೆದು ಕೊಟ್ಟಿದ್ದಾರೆ.
ಅವರ ಸ್ವಂತ ಜೀವನಕ್ಕೆ ಪಕ್ಷವೇ ಹಣ ಕೊಡಬೇಕು. ಅದು ಬಂಗಾಳದ ರಾಜಕಾರಣಿಗಳಿಗೆ ಹೊಸದೇನೂ ಅಲ್ಲ. ಕಮ್ಯುನಿಸ್ಟರಲ್ಲಿ ಅದೊಂದು ನಿಯಮವೇ. ಜ್ಯೋತಿ ಬಸು, ಬುದ್ಧದೇವ ಭಟ್ಟಾಚಾರ್ಯ ಅವರೆಲ್ಲರೂ ಆ ನಿಯಮಕ್ಕೆ ಬದ್ಧ. ತೃಣಮೂಲ ಕಾಂಗ್ರೆಸ್ಸಿನಲ್ಲಿ ಅಂತಹ ನಿಯಮ ಇಲ್ಲದಿದ್ದರೂ, ಪಕ್ಷದಿಂದ ಸಿಕ್ಕ ಸ್ಥಾನದಿಂದ ದಕ್ಕುವ ಎಲ್ಲ ಬಗೆಯ ಸಂಭಾವನೆಯೂ ಪಕ್ಷಕ್ಕೇ ಸೇರಬೇಕೆನ್ನುವುದು ಮಮತಾ ನಂಬಿಕೆ.
ಮಮತಾ ಬ್ಯಾನರ್ಜಿ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಸಾವಿರಾರು ಸಂದರ್ಶನಗಳನ್ನು ಮಾಧ್ಯಮ ಪ್ರಪಂಚಕ್ಕೆ ನೀಡಿರಬಹುದು. ಅವರನ್ನು ಕುರಿತ ಪುಸ್ತಕಗಳೇ ಬಂಗಾಳಿಯಲ್ಲಿ ಪ್ರಕಟವಾಗಿದೆಯಂತೆ. ಆದರೆ ಯಾವ ಸಂದರ್ಶಕನಿಗೂ, ಲೇಖಕರಿಗೂ ಅವರ ಮದುವೆಯ ವಿಚಾರವನ್ನು ಪ್ರಸ್ತಾಪಿಸುವ ಧೈರ್ಯವೇ ಬಂದಿಲ್ಲ. ಅದಕ್ಕೇನು ಕಾರಣ? ಮಮತಾ ಅಮ್ಮನಿಗೂ ಅದು ಗೊತ್ತಿಲ್ಲವಂತೆ!

-ಸತ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments