ಮೇರಾ ಬಾರ್ ಮಹಾನ್
ಬ್ಯಾಂಡಿನ ಸದ್ದಿಗಿಂತ ಜೋರಾಗಿ ಮುಂಬೈನ ಬಾರ್ ಹುಡುಗಿಯರ ಎದೆ ಆತಂಕದಲ್ಲಿ ಬಡಿದುಕೊಳ್ಳುತ್ತಿದೆ. ನಿತ್ಯ ಅನ್ನ ಕೊಡುವ ಈ ಬಾರ್ ಬದುಕಿನ ಮೇಲೆ ಡಿಸಿಎಂ ಆರ್ಆರ್ ಪಾಟೀಲ್ ಪರ್ಮನೆಂಟಾಗಿ ಬರೆ ಎಳೀತಾರೇನೋ ಎಂಬುದೇ ಅವರ ದಿಗಿಲಿಗೆ ಕಾರಣ. ಆದರೆ, ಆ ದುಃಖವನ್ನೂ ಮರೆತು ಆ ಹುಡುಗಿಯರೀಗ ಒಂದು ಖುಷಿಯಲ್ಲಿ ಮುಖ ಅರಳಿಸಿದ್ದಾರೆ.
ನಮ್ಮೊಟ್ಟಿಗೆ ಅನುಷ್ಕಾ ಶರ್ಮಾಳೂ ಸೇರಿಕೊಳ್ತಿದ್ದಾಳಲ್ಲ ಅಂತ! ಅನುಷ್ಕಾ ಈಗ ಒಂದು ಸಿನಿಮಾಕ್ಕಾಗಿ ಬಾರ್ಗರ್ಲ್ ಆಗ್ತಿದ್ದಾಳಂತೆ. 'ಜಬ್ ತಕ್ ಹೈ ಜಾನ್'ನಲ್ಲಿ ಬೆಸ್ಟ್ ಸಪೋರ್ಟಿಂಗ್ ಆ್ಯಕ್ಟರ್ ಅವಾರ್ಡ್ ಗೆದ್ದರೂ ಬೇಡಿಕೆಗಳಿಲ್ಲದೆ ಬಾಲಿವುಡ್ನ ಬದಿ ಸೇರಿದ್ದ ಅನುಷ್ಕಾ, ಈ ಚಿತ್ರದಲ್ಲಿ ಅರವತ್ತರ ದಶಕದ ಜಾಝ್ ಸಿಂಗರ್ ಆಗಿ ಬಾರ್ನಲ್ಲಿ ಕಾಣಿಸಿಕೊಳ್ಳಲಿದ್ದಾಳೆ.
ಅಂದಹಾಗೆ, ಚಿತ್ರದ ಹೆಸರು 'ಬಾಂಬೆ ವೆಲ್ವೆಟ್'. ಅನುರಾಗ್ ಕಷ್ಯಪ್ ಇದನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕಥೆಗೆ ಹೊಂದಿಕೊಳ್ಳುವಂತೆ ಇಂಡೋ ಆಸ್ಟ್ರೇಲಿಯನ್ ಕಲರಿನ ಒಬ್ಬಳು ಹೀರೋಯಿನ್ನಿನ ಅಗತ್ಯವಿತ್ತಂತೆ. ಮೊದಲು ಆಸ್ಟ್ರೇಲಿಯನ್ ಹುಡುಗಿಯನ್ನೇ ಕರೆಸುವ ಆಲೋಚನೆಯೂ ಕಶ್ಯಪ್ಗೆ ಬಂದಿತ್ತು. ನಂತರ, ಬಾಲಿವುಡ್ ನಟಿಯರಲ್ಲೇ ಯಾರಾಗಬಹುದೆಂಬ ಲೆಕ್ಕಾಚಾರವೂ ಬಂತು. ಇನ್ನೇನು ಕರೀನಾ ಕಪೂರ್ಳನ್ನೇ ಮಾಡೋದು ಅಂತ ಇದ್ದ ಕಶ್ಯಪ್, ಚಿತ್ರತಂಡಕ್ಕೆ ದಿಢೀರನೆ ಶಾಕ್ ಕೊಟ್ಟರು. ಜಾಝ್ ಸಿಂಗರ್ಗೆ ಅನುಷ್ಕಾ ಶರ್ಮಾಳೇ ಸರಿ ಎಂದು ಷರಾ ಬರೆದರು. ರಣಬೀರ್ ಕಪೂರ್ ಹೀರೋ ಆಗಿ ಆಯ್ಕೆಯಾಗಿದ್ದಾರೆ.
ಆದರೆ, ಅನುಷ್ಕಾಳಿಗೆ ಈಗ ತಲೆಬಿಸಿಯಂತೆ. 'ನಾನು ಯಾವತ್ತೂ ಜಾಝ್ ಮ್ಯೂಸಿಕ್, ಡ್ಯಾನ್ಸುಗಳನ್ನು ನೋಡೇ ಇಲ್ಲ. ಆದರೆ, ಈ ಸವಾಲನ್ನು ಎದುರಿಸುತ್ತೇನೆ. ಜಬ್ ತಕ್ ಹೈ ಜಾನ್ನಲ್ಲಿ ಗೆದ್ದಂತೆ ಎಲ್ಲರಿಂದ ಮೆಚ್ಚುಗೆ ಪಡೆಯುತ್ತಾನೆ' ಅಂದಿದ್ದಾಳೆ. ಇದಕ್ಕಾಗಿ ಆಕೆಗೆ ವಿಶೇಷ ತರಬೇತಿಯನ್ನೂ ಕೊಡಲಾಗುತ್ತಿದೆ. ಆಸ್ಟ್ರೇಲಿಯಾದಿಂದ ಪರಿಣತ ಕೊರಿಯೊಗ್ರಾಫರ್ ಅನ್ನೂ ಕರೆಸಿಕೊಳ್ಳಲಾಗಿದೆ. ಆಂಗಿಕ ಭಾಷೆ, ಹಾಡುವಾಗ ದೇಹಭಂಗಿಗಳೆಲ್ಲ ಹೇಗಿರಬೇಕೆಂಬ ಪಾಠ ನಡೀತಿದೆ. ಅಂದಹಾಗೆ, ಚಿತ್ರದಲ್ಲಿ ಕರಣ್ ಜೋಹಾರ್ ಕೂಡ ಕಾಣಿಸುತ್ತಿದ್ದಾರೆ.
'ಚಾಂದ್ನಿ ಬಾರ್' ಥರದ ಕಥೆಯಲ್ಲದಿದ್ದರೂ 'ಬಾಂಬೆ ವೆಲ್ವೆಟ್'ನಲ್ಲೇನೋ ನಶಾಲೋಕದ ಥ್ರಿಲ್ಲಿದೆ ಅಂತ ವಿಶ್ಲೇಷಣೆಗಳು ಶುರುವಾಗಿವೆ. ಸದ್ಯ ಶ್ರೀಲಂಕಾ ಟೂರ್ನಲ್ಲಿರುವ ಅನುಷ್ಕಾ ವಾಪಸಾದ ಮೇಲೆ ಚಿತ್ರೀಕರಣ ಆರಂಭವಾಗಲಿದೆ. ಬಾರ್ಅಮ್ಮ ಬೇಗ ಬಾ...
-ಮಿಲೀ