ಏಳುಮಲೆ
ಸುತ್ತಲೂ ದಟ್ಟ ಹಸಿರು ಹೊದ್ದ ಭೂರಮೆ. ಅಲ್ಲಲ್ಲಿ ಹಳದಿ ಕೇಸರಿಯ ಚುಕ್ಕಿ. ಮಧ್ಯ ಮಧ್ಯ ಝಗಮಗಿಸುವ ಸೂರ್ಯನ ಕಿರಣ. ಛಂಗನೆ ಪ್ರತ್ಯಕ್ಷವಾಗುವ ಕಾಡುಪ್ರಾಣಿಗಳು. ಎತ್ತರೆತ್ತರದ ಗಿಡಮರಗಳು. ಕಣ್ಣು ಹಾಯಿಸಿದಷ್ಟು ಎಣಿಕೆ ತಪ್ಪುವ ಗಿರಿಗಳು. ದಾರಿಯುದ್ದಕ್ಕೂ ಭೂಮಿಯಿಂದ ಹೂರಬಂದ ಬೇರುಗಳ ದರ್ಶನ. ಅರೆ! ಮರಗಳೇನಾದರೂ ಕುಸಿದು ಬಿದ್ದರೆ ಗತಿಯೇನು ಎಂಬ ಭಯ ಒಮ್ಮೆ ಮನದಲ್ಲಿ ಕಾಡದಿರದು.
ಕಣ್ಣುಕುಕ್ಕುವ ಈ ದೃಶ್ಯದಿಂದ ಬಲವಂತವಾಗಿ ಕಣ್ಣನ್ನು ಯಾವ ದಿಕ್ಕಿಗೆ ಸರಿಸಿದರೂ ಛೇ, ನಾ ಇಲ್ಲಿಯೇ ನೋಡಬೇಕಿತ್ತು... ಕಣ್ಣು ಮಿಟುಕಿಸಿದರೆ ಸಾಕು ಅದೆಷ್ಟೋ ಅದ್ಭುತಗಳನ್ನು ಮಿಸ್ ಮಾಡಿಕೊಂಡೆವಾ? ನಮಗೆ ಇನ್ನೆರಡು ಕಣ್ಣುಗಳಿರಬಾರದಿತ್ತೇ? ಒಮ್ಮೆ ವಾಹನದ ಬ್ರೇಕ್ ಹಾಕಬಾರದೇ... ಎಂದುಕೊಳ್ಳುತ್ತಿದ್ದತೆ ಮುದ್ದು ಮಾದಪ್ಪಗೆ ಒಂದು ಸಾರಿ ಉಘೇ ಅನ್ರಪ್ಪ... ಉಘೇ ಉಘೇ... ಎನ್ನುವ ಇಂಪಾದ ಭಕ್ತಿಯ ದನಿ ಮಾದೇಶನ ಭಕ್ತರಿಂದ ದಾರಿಯುದ್ದಕ್ಕೂ ಕೇಳಿಸುತ್ತದೆ.
ಒಮ್ಮೆ ಕೂಸಿನ ನಡಿಗೆಯಲ್ಲಿ ರಸ್ತೆ ಏರಿದರೆ, ಮತ್ತೆ ಯವ್ವನ ಪುಟಿಯುವ ಲಲನೆಯಂತೆ ಇಳಿಯಬೇಕು. ಹೀಗೆ ಏರುತ್ತ ಇಳಿಯುತ್ತಾ ಹಾವಿನ ನಡಿಗೆಯಲ್ಲಿ ಸಾಗುತ್ತೆ ಪಯಣ. ಇಂಥ ಪ್ರಕೃತಿಯ ರಸದೌತಣ ಮಲೆಮಹದೇಶ್ವರ ಬೆಟ್ಟ.
ಆನೂಮಲೆ, ಜೇನುಮಲೆ, ಗುಂಜುಮಲೆ, ಗುರುಗುಂಜುಮಲೆ, ಕಾನುಮಲೆ, ಪುಷ್ಪಮಲೆ, ಮೊನ್ನಾಚಿಮಲೆ, ಕೊಂಗುಮಲೆ, ಪವಳಮಲೆ... ಹೀಗೆ ಎಪ್ಪತ್ತೇಳು ಪರ್ವತಾರೋಹಿಣಿಯೇ ಮಲೆಮಹದೇಶ್ವರ ಬೆಟ್ಟ.
ಎಪ್ಪತ್ತೇಳು ಬೆಟ್ಟಗಳ ಮಧ್ಯ ಮಹದೇಶ್ವರ ಸ್ವಾಮಿ ನೆಲೆಸಿದ್ದಾನೆ. ಆ ಕಾರಣದಿಂದಾಗಿ ಮಲೆಮಹದೇಶ್ವರ ಬೆಟ್ಟ ಎನ್ನುವ ಪ್ರತೀತಿ. 700 ವರ್ಷಗಳ ಇತಿಹಾಸ ಇರುವ ಈ ದೇವಸ್ಥಾನವನ್ನು ಅಲಂಬಾಡಿಯ ಜುಂಜೇಗೌಡ ಕಟ್ಟಿಸಿದ್ದು ಎನ್ನಲಾಗುತ್ತದೆ. ಐಎಸ್ಒ ಮಾನ್ಯತೆ ಪಡೆದ ರಾಜ್ಯದ ಪ್ರಥಮ ದೇಗುಲ ಇದು. ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟ ಸಂರಕ್ಷಿತ ಅರಣ್ಯ ಪ್ರದೇಶ. 930 ಮಿ.ಮೀ. ಎತ್ತರವಿದೆ. ಕಾಡುಗಳ್ಳ ವೀರಪ್ಪನ್ ವಾಸವಿದ್ದದ್ದು ಇಲ್ಲೆ. ಹೀಗಾಗಿ ನೀವೀಗ ಅಲ್ಲಿಗೆ ಟ್ರಿಪ್ ಹೋಗಬಹುದು.
ನಾಗಮಲೆಯ ಟ್ರಕ್ಕಿಂಗ್
ಟ್ರಕ್ಕಿಂಗ್ ಪ್ರಿಯರಿಗೆ ನಾಗಮಲೆ ಅಚ್ಚುಮೆಚ್ಚು. ಮಾದೇಶ್ವರ ದೇಗುಲದಿಂದ 16 ಕಿ.ಮೀ. ಸಾಗಿದರೆ ನಾಗಮಲೆ ಸಿಗುತ್ತದೆ. 9 ಕಿ.ಮೀ. ವರೆಗೂ ಆ ರಸ್ತೆಗಾಗಿಯೇ ಇರುವ ಜೀಪ್ಗಳಲ್ಲಿ, ಅಲ್ಲಿನ ಡ್ರೈವರ್ಗಳೊಂದಿಗೆ ಹೋಗಬೇಕು. ಬೈಕು, ಕಾರು ಮತ್ತು ಬಸ್ಸುಗಳು ಹೋಗಲು ಸಾಧ್ಯವಿಲ್ಲ. ಮಂದೆ 6 ಕಿ.ಮೀ. ದುರ್ಗಮ ಹಾದಿಯಲ್ಲಿ ಕಲ್ಲು ಮುಳ್ಳು ಎನ್ನದೆ ಕಾಲುನಡಿಗೆಯಲ್ಲೇ ಸಾಗಬೇಕು. ನೆನೆಪಿರಲಿ, ಇಲ್ಲಿ ಕೆಲವೇ ಮಂದಿ ಟ್ರಕ್ಕಿಂಗ್ ಮಾಡುವುದು ಸೂಕ್ತವಲ್ಲ. ನಾಗಮಲೆಯ ತುದಿಯನ್ನೇರಿ ನಿಂತರೆ ಕಾವೇರಿ ನದಿ ತಮಿಳುನಾಡಿಗೆ ಹರಿಯುವ ಮತ್ತು ತಮಿಳುನಾಡಿನ ಮೆಟ್ಟೂರು ಜಲಾಶಯದ ವಿಹಂಗಮ ನೋಟ ಕಣ್ಣಿಗೆ ಕಟ್ಟುತ್ತದೆ. ದಾರಿಯುದ್ದಕ್ಕೂ ಮಂಗಗಳು ಸರೀಸೃಪಗಳು, ನಾನಾ ಪಕ್ಷಿಗಳು, ಚಿಟ್ಟೆಗಳು ಕಾಣಸಿಗುತ್ತವೆ. ಕಾಡಿನ ಒಳಹೋದರೆ ಕ್ರೂರ ಪ್ರಾಣಿಗಳ ದರ್ಶನವಾಗುತ್ತದೆ.
ನೀವು ಹೋಗ್ತೀರಾ?
ಮಲೆಮಹದೇಶ್ವರ ಬೆಟ್ಟ ಬೆಂಗಳೂರಿನಿಂದ 210 ಕಿ.ಮೀ ದೂರವಿದೆ. ಕೊಳ್ಳೆಗಾಲದಿಂದ 80 ಕಿ.ಮೀ ದೂರ. ಮೈಸೂರಿನಿಂದ 150 ಕಿ.ಮೀ ದೂರ. ಬೆಟ್ಟ ಹತ್ತಲು ಸರ್ಪನದಾರಿ, ಬಸವನ ದಾರಿ ಎಂಬ ಎರಡು ದಾರಿಗಳಿವೆ. ಹೆಸರಿಗೆ ತಕ್ಕಂತೆ ಹಾವಿನ ನಡಿಗೆಯಂತೆ ಸರ್ಪನ ದಾರಿಯಿದೆ. ಇದು ಕಿರಿದಾದ ಡಾಂಬರು ರಸ್ತೆ. ಪಾದಯಾತ್ರಿಗಳು ಬಸವನ ದಾರಿಯಲ್ಲಿ ನಡೆಯುತ್ತಾರೆ. ಪರ್ವತ ಹತ್ತಿ ಇಳಿಯಲು ಅಲ್ಲಲ್ಲಿ ಮೆಟ್ಟಿಲುಗಳಿವೆ.
ಚಿತ್ರ, ಲೇಖನ: ಅರುಣ ಎಂ.ಜಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.