ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಕಾಂತಾವರದ ಬಯಲ ಬೆಟ್ಟ

Lingaraj Badiger
Updated On : 24 Aug 2013, 3:39 am

ಒಬ್ಬ ಸಾಹಿತಿಯ ಭೌಗೋಳಿಕ ಮಿತಿಯು ಕೆಲವೊಮ್ಮೆ ಆತನ ಸೃಜನಶೀಲತೆಯ ಮಿತಿಯೂ ಆಗಿಹೋಗುತ್ತದೆ. ಹಾಗಾಗಿ ಕೆಲವು ಸಾಹಿತಿಗಳು ಸದಾ ಬಾಹ್ಯ ಜಗತ್ತಿನ ಸಂಚಾರದಲ್ಲೇ ಇರುತ್ತಾರೆ. ಇನ್ನು ಕೆಲವು ಸಾಹಿತಿಗಳು  ತನ್ನ ಭೌಗೋಳಿಕ ಮಿತಿಗಳನ್ನು ಕುಳಿತಲ್ಲೇ ಅಂತರಂಗದ ಸಂಚಾರದಿಂದ ಮೀರುತ್ತಾರೆ. ಆ ಮೂಲಕ ಮನುಷ್ಯ ಮಿತಿಗಳನ್ನೂ, ಭೌಗೋಳಿಕ ಮಿತಿಗಳನ್ನೂ ದಾಟಿ ಮನುಷ್ಯ ಮನಸ್ಸುಗಳನ್ನು ಮುಟ್ಟುತ್ತಾರೆ, ತಟ್ಟುತ್ತಾರೆ. ಹೀಗೆ ಅಂತರಂಗದ ಸಂಚಾರಿಯಾಗಿ ತನ್ನ ಪುಟ್ಟ ಊರಾದ ಕಾಂತವರದ ಭೌಗೋಳಿಕ ಮಿತಿಗಳನ್ನು ಮೀರಿನಿಂತು, ಮನುಷ್ಯ ಬದುಕಿನ ಸಾರ್ಥಕ ಕ್ಷಣಗಳನ್ನು ತನ್ನ ಸಾಹಿತ್ಯ ಮೂಲಕ ಶೋಧಿಸುತ್ತಿರುವ ಹಿರಿಯ ಸಾಹಿತಿ ಡಾ.ನಾ ಮೊಗಸಾಲೆ.
ಬಂಡಾಯೋತ್ತರದ ಒಂದು ಗಟ್ಟಿ ಧ್ವನಿಯಾಗಿ ಮೂಡಿ ಬಂದ ಮೊಗಸಾಲೆ, ಕಷ್ಟಗಳ ಕನ್ನಡಿ ನೋಡಿಕೊಂಡು ಬೆಳೆದವರು. ಹುಟ್ಟಿದ್ದು(1944) ಕೇರಳದ ಕಾಸರಗೋಡು ತಾಲೂಕು ಮಂಜೇಶ್ವರ ಸಮೀಪದ ಕೋಳ್ಯೂರಿನ ಮೊಗಸಾಲೆ ಎಂಬ ಪ್ರದೇಶದಲ್ಲಿ. ಮುಖಶಾಲೆ ಇದ್ದ ಮನೆ ಆ ಊರಿನಲ್ಲಿ ಒಂದೇ ಇದ್ದುದರಿಂದ ಆ ಮನೆ ಮೊಗಸಾಲೆ ಮನೆ ಎಂದೇ ಪ್ರಸಿದ್ಧವಾಯಿತು. ಅದೇ ಇವರಿಗೆ ಕಾವ್ಯನಾಮವಾಯಿತು. (ನಿಜ ಹೆಸರು- ನಾರಾಯಣ ಭಟ್ಟ) ಯಕ್ಷಗಾನದ ದಟ್ಟ ಪ್ರಭಾವ ತುಂಬಿದ ಮನೆತನ. ರಾಮಾಯಣ, ಮಹಾಭಾರತ, ಭಾಗವತದ ಕತೆಗಳು ಬಾಲ್ಯದಲ್ಲೇ ಕರಗತ. ಪಾರ್ತಿಸುಬ್ಬನ ಪಂಚವಟಿ ಪ್ರಸಂಗದ ಪದ್ಯಗಳೆಲ್ಲ ಕಂಠಸ್ಥ. ಕಾರಂತರ ಪ್ರಕಾರ ಮೊಗಸಾಲೆಯ ಮನೆತನಕ್ಕೆ ಪಾರ್ತಿಸುಬ್ಬ ಬರುತ್ತಿದ್ದನಂತೆ. ಡಾ.ವೆಂಕಟರಾಜ ಪುಣಿಂಚತ್ತಾರು ಯಕ್ಷಗಾನ ತಾಳಮದ್ದಳೆ ಹುಟ್ಟಿದ್ದೇ ಮೊಗಸಾಲೆಯ ಮನೆಯಲ್ಲಿ ಎಂದು ಬರೆದಿದ್ದಾರೆ. ಇಂಥ ಪರಿಸರದಲ್ಲಿ ಹುಟ್ಟಿದ ಬಾಲಕ ಮೊಗಸಾಲೆಗೆ ಹೈಸ್ಕೂಲು ಓದುತ್ತಿರುವಾಗಲೇ ಭಾರತಿ ಪತ್ರಿಕೆಯ ಸಂಸರ್ಗವಾಯಿತು. ಚುರುಮುರಿಯವರ ಪದ್ಯಗಳನ್ನು ಹಾಡುವ ಸಂಭ್ರಮ ದೊರೆಯಿತು. ಇವುಗಳ ಪ್ರಭಾವದಿಂದಲೇ ಛಂದಸ್ಸನ್ನು ಇಟ್ಟುಕೊಂಡೇ ಕೆಲವು ಪದ್ಯಗಳ ರಚನೆ ಮಾಡಿದರು. ಎಸ್‌ಎಸ್‌ಎಲ್‌ಸಿ ಅನಂತರ ಉಡುಪಿಯಲ್ಲಿ ಅಯುರ್ವೇದ ಶಾಸ್ತ್ರದಲ್ಲಿ ಡಿಪ್ಲೊಮಾ ಮಾಡಿದರು. ಈ ಸಂದರ್ಭ ಹಿರಿಯ ವಿದ್ವಾಂಸರಾದ ಯು.ಕೆ.ಬಲ್ಲಾಳ್, ಈಶ್ವರಯ್ಯ, ಮತ್ತು ಬನ್ನಂಜೆಯವರ ಒಡನಾಟ ದೊರೆಯಿತು. ಬಳಿಕ ವೈದ್ಯಾಧಿಕಾರಿಯಾಗಿ ಉಡುಪಿ ಜಿಲ್ಲೆಯ ಕಾರ್ಕಳ ಸಮೀಪದ ಕಾಂತಾವರದಲ್ಲಿ 1965ರಲ್ಲಿ ವೃತ್ತಿ ಆರಂಭ ಮಾಡಿದರು.

ಕಾಂತವರದ ಮಣ್ಣಿನಲ್ಲಿ ಬೇರುಬಿಟ್ಟ ಮೊಗಸಾಲೆಯವರು, ಮಾರಣ್ಣ ಮಾಡ, ವಿಠಲ ಶೆಟ್ಟಿ ಬೇಲಾಡಿ, ದಿವಾಕರ್ ಮೊದಲಾದವರ ಜೊತೆ ಸೇರಿ 1926ರಲ್ಲಿ ಯುವಕ ಮಂಡಲದ ಸ್ಥಾಪನೆ ಮಾಡಿದರು. ಆಮೇಲೆ ಕಾಂತಾವರದ ಗಾಳಿ, ನೀರು, ಮಣ್ಣಿಗೆ ಸಾಹಿತ್ಯ ಸಂಸ್ಕೃತಿಯ ಗಂಧ ಸೇರಿಸಲು 1976ರಲ್ಲಿ ಕಾಂತಾವರ ಕನ್ನಡ ಸಂಘ ಸ್ಥಾಪಿಸಿದರು. ಇವುಗಳಲ್ಲದೆ ನಾಡಿನ ಬಹು ಪ್ರತಿಷ್ಠಿತ ಪ್ರಶಸ್ತಿಗಳಾದ ವರ್ಧಮಾನ ಪ್ರಶಸ್ತಿ ಮತ್ತು ಮುದ್ದಣ ಕಾವ್ಯ ಪ್ರಶಸ್ತಿಗಳನ್ನು ಸ್ಥಾಪಿಸಿ ಕಳೆದ ಮೂವತ್ತನಾಲ್ಕು ವರುಷಗಳಿಂದ ನೀಡುತ್ತಾ ಬರುತ್ತಿದ್ದಾರೆ. ನಾಡಿನ ಶ್ರೇಷ್ಠ ಕವಿಗಳು, ಲೇಖಕರು ಈ ಪ್ರಶಸ್ತಿಯನ್ನು ಪಡೆದಿದ್ದು, ಅವರ ಮುಂದಿನ ಸಾಧನೆಗೆ ಇದೊಂದು ಪ್ರವೇಶಪತ್ರದಂತೆ ಪ್ರಭಾವ ಬೀರುತ್ತಾ ಬಂದಿದೆ. ಇನ್ನೊಂದು ಅತ್ಯಂತದ ಮಹತ್ವದ ಯೋಜನೆ ಎಂದರೆ ಕಾಂತಾವರದ ಅಲ್ಲಮ ಪ್ರಭು ಪೀಠ. ಈ ಪೀಠವನ್ನು ಸ್ಥಾಪಿಸುವುದರ ಮೂಲಕ ಕಡಲಿನಂಥ ಅಲ್ಲಮನನ್ನು ಕಡಲತಡಿಗೆ ಕರೆತರುವ ಪ್ರಯತ್ನವನ್ನು ಮೊಗಸಾಲೆ ಮಾಡಿದ್ದಾರೆ. ಇದರ ಮೂಲಕ ಭಾರತೀಯ ತಾತ್ತ್ವಿಕ, ಸಾಂಸ್ಕೃತಿಕ ಅನನ್ಯತೆಯ ಸಂಶೋಧನಾ ಸಂಸ್ಥೆಯಾಗಿ ಇದನ್ನು ರೂಪಿಸಬೇಕೆಂಬುದು ಇವರ ಉದ್ದೇಶ. 2008ರಿಂದ ಮೊಗಸಾಲೆಯವರ ಮಕ್ಕಳು ಮೊಗಸಾಲೆ ಎಂಬ ಪ್ರತಿಷ್ಠಾನ ಸ್ಥಾಪಿಸಿ ಆ ಮೂಲಕ ಕಾಂತಾವರ ಪುರಸ್ಕಾರ ಎಂಬ ಎರಡು ಪ್ರಶಸ್ತಿಗಳನ್ನು ನೀಡುತ್ತಾ ಬರುತ್ತಿದ್ದಾರೆ. ಮಂಗಳೂರಿನ ಸುವರ್ಣ ಪ್ರತಿಷ್ಠಾನವು ಹಿರಿಯ ರಂಗಕರ್ಮಿ ಸದಾನಂದ ಸುವರ್ಣ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲು ದತ್ತಿ ನಿಧಿಯೊಂದನ್ನು ಕಾಂತಾವರ ಕನ್ನಡ ಸಂಘದಲ್ಲಿ ಸ್ಥಾಪಿಸಿದ್ದು ಆ ನಿಧಿಯಿಂದ 2008ರಿಂದ ಸುವರ್ಣರಂಗ ಸನ್ಮಾನ್ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಪ್ರತಿ ತಿಂಗಳು ಕಾಂತಾವರ ಕನ್ನಡ ಸಂಘ ಮತ್ತು ಅಲ್ಲಮ ಪ್ರಭು ಪೀಠದಿಂದ ಒಂದೊಂದು ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದೆ. ನಾಡಿಗೆ ಸೇವೆ ಸಲ್ಲಿಸಿದ ಹಿರಿಯರನ್ನು ಪರಿಚಯಿಸುವ 'ನಾಡಿಗೆ ನಮಸ್ಕಾರ' ಪುಸ್ತಕಗಳ ಸಂಖ್ಯೆ ನೂರರ ಹತ್ತಿರ ಬಂದಿದೆ. ಇದು ಒಂದು ಪ್ರದೇಶದ ಕನ್ನಡ ರತ್ನಗಳನ್ನು ಶೋಧಿಸುವ ಪ್ರಯತ್ನ. ಈ ಎಲ್ಲಾ ಕಾರ್ಯಕ್ರಮಗಳಿಗೆ ನಾಡಿನ ಖ್ಯಾತ ಸಾಹಿತಿಗಳು, ಕವಿಗಳು, ವಿಮರ್ಶಕರು, ಹಿರಿಯರು ಕಾಂತಾವರದ ಮಣ್ಣಿಗೆ ಬಂದು ಈ ನೆಲದ ಸಾಹಿತ್ಯ, ಸಂಸ್ಕೃತಿಗಳನ್ನು ಕಣ್ಮನ ತುಂಬಿಸಿ ಬೆರಗುಗೊಂಡಿದ್ದಾರೆ.

ಸಾಹಿತ್ಯ ಮತ್ತು ಸಂಘಟನೆಯ ಬೀಜಗಳನ್ನು ತನ್ನ ಹೃದಯದಲ್ಲಿ ಬಿತ್ತಿದ ತನ್ನ ಹೈಸ್ಕೂಲಿನ ಕನ್ನಡ ಅಧ್ಯಾಪಕರಾದ ಪಂಬಾಜೆ ಶಂಕರ ಭಟ್ಟರನ್ನು ಮತ್ತು ಕಾವ್ಯದ ಬಗ್ಗೆ ತನ್ನ ಕಣ್ಣು ತೆರೆಸಿದ ಬಿ.ಎಂ.ಇದಿನಬ್ಬರನ್ನು ಮೊಗಸಾಲೆ ಹೃದಯ ತುಂಬಿ ಸ್ಮರಿಸಿಕೊಳ್ಳುತ್ತಾರೆ.
ಹದಿನೈದು ಕಾದಂಬರಿ, ಹತ್ತು ಕವನ ಸಂಗ್ರಹ, ಐದು ಕಥಾಸಂಕಲನ, ಒಂದು ಆಯ್ದ ಲೇಖನ ಸಂಗ್ರಹ, ಒಂದು ಭಾಷಣಗಳ ಸಂಗ್ರಹ, ಹನ್ನೆರಡು ಸಂಪಾದನಾ ಕೃತಿಗಳು, ಜೂತೆಗೆ ಆರು ವೈದ್ಯಕೀಯ ಕೃತಿಗಳನ್ನು ಹೊರತಂದಿರುವ ಮೊಗಸಾಲೆಯವರ ಸಾಹಿತ್ಯದ ಗ್ರಹಿಕೆ ವಿಶಿಷ್ಟವಾದದ್ದು.

ಮತಧರ್ಮಕ್ಕಿಂತ ಮನೋಧರ್ಮಕ್ಕೆ ಬದ್ಧರಾಗಿರುವ ಮೊಗಸಾಲೆಯವರ ಇತ್ತೀಚಿನ ಚಿಂತನೆಗಳು ಅನುಭಾವದ ಕಡೆಗೆ ಹೋಗುತ್ತಿವೆ. ಶಬ್ದವ್ಯಾಪಾರದಿಂದ ಯಾವುದೇ ಸತ್ಯದ ದರ್ಶನ ಅಸಾಧ್ಯವೆನ್ನುವ ಅವರು  ಅಲ್ಲಮನ ಸೋಂಕಿನ ಸೋಜಿಗಕ್ಕೆ ಬೆರಗಾಗಿ ಅದನ್ನೇ ತನ್ನ ಕಾವ್ಯದಲ್ಲಿ ಬೆಳಗುತ್ತಾ ಬರುತ್ತಿದ್ದಾರೆ. ಕಾವ್ಯ ಉದ್ದೇಶ ರಹಿತವಾದದ್ದು. ಪ್ರಕೃತಿ ರಹಸ್ಯವನ್ನು ಕಾವ್ಯದ ಮೂಲಕ ಅರಿಯಬೇಕು. ಅದನ್ನೇ ತನ್ನ ಅರಿವಾಗಿ, ಅನುಭಾವವಾಗಿ ಪಡೆಯಬೇಕು. ಈಗ ಇರುವ ಯಾವ ಮತಧರ್ಮ ಸಿದ್ಧಾಂತಗಳಿಂದಲೂ ಸತ್ಯದ ಅರಿವು ಸಾಧ್ಯವಿಲ್ಲ ಎಂಬುದು ಮೊಗಸಾಲೆಯವರ ನಂಬಿಕೆ. ಅಡಿಗರು ಹೇಳುವಂತೆ ಪ್ರತಿಯೊಂದು ಹುಲ್ಲು ಕೂಡ ದ್ರಾವಣ ಸುಖವನ್ನು ಅನುಭವಿಸುವಂತೆ ಪ್ರತಿಯೊಬ್ಬ ಕವಿಯು ಒಂದು ಕೃತಿ ಹೊರಬಂದಾಗ ಅಂಥ ದ್ರಾವಣಸುಖವನ್ನು ಅನುಭವಿಸುತ್ತಾನೆ. ಒಂದೊಂದು ಸುಖವು ಒಂದೊಂದು ರೀತಿ, ಅನನ್ಯ, ಅವರ್ಣನೀಯ ಎಂಬುದು ಮೊಗಸಾಲೆಯವರ ಅಭಿಮತ.

ಉಲ್ಲಂಘನೆ ಕಾದಂಬರಿಯ ಮೂಲಕ ಜಡ್ಡು ಕಟ್ಟಿದ ಸಮಾಜದ ಕಂದಾಚಾರ ಮೂಢನಂಬಿಕೆಗಳನ್ನು ಮೀರಿನಿಂತು ಮನುಷ್ಯತ್ವವನ್ನು ಹುಡುಕಲು ಪ್ರಯತ್ನಿಸುವ ಮೊಗಸಾಲೆಯವರು ನಿಜಜೀವನದಲ್ಲೂ ಅದನ್ನು ಮಾಡಿ ತೋರಿಸಿದವರು. ಸಹಪಂಕ್ತಿ ಭೋಜನಕ್ಕೆ ನಿಷೇಧವಿದ್ದ ಬಿಲ್ಲವರನ್ನು ಮನೆಗೆ ಕರೆಸಿ ಸಹಪಂಕ್ತಿ ಭೋಜನ ಮಾಡಿಸಿದರು. ಆ ಕಾಲದಲ್ಲಿ ಇದಕ್ಕೆ ಬೆಂಬಲವಾಗಿ ನಿಂತ ತನ್ನ ಮಾವ ಕುಂಞೋಡಿ ರಾಮಕೃಷ್ಣಯ್ಯನವರ ಸುಧಾರಣವಾದಿ ನಿಲುವೇ ತನ್ನಲ್ಲಿ ಇಂಥ ಕೆಲಸಗಳನ್ನು ಮಾಡಿಸಿದೆ ಎಂದು ಮೊಗಸಾಲೆ ಹೇಳಿಕೊಳ್ಳುತ್ತಾರೆ.

ನವೋದಯ ಕಾಲದಲ್ಲಿ ಕನ್ನಡ ಸಾಹಿತ್ಯ ಪ್ರಿಯರಿಗೆ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಎರಡು ಪುಣ್ಯಕ್ಷೇತ್ರಗಳಿದ್ದುವಂತೆ. ಅವುಗಳಲ್ಲಿ ಒಂದು ಪುತ್ತೂರಿನ ಕಾರಂತರ ಬಾಲವನವಾದರೆ, ಇನ್ನೊಂದು ಮಂಜೇಶ್ವರ ಗೋವಿಂದ ಪೈ ಮನೆ. ಈಗ ಅದಕ್ಕೆ ಮತ್ತೊಂದು ಸೇರಿಕೊಂಡಿದೆ, ಅದು ಕಾಂತಾವರ ಕನ್ನಡ ಸಂಘ. ಕನ್ನಡನಾಡಿಗೆ ಮಾದರಿಯಾದ ಚಟುವಟಿಕೆಗಳನ್ನು ಮಾಡುತ್ತಿರುವ ಈ ಸಂಘದ ಇಚ್ಛಾಶಕ್ತಿ ಮತ್ತು ಕ್ರಿಯಾಶಕ್ತಿಯಾಗಿರುವ ಮೊಗಸಾಲೆ ಅಭಿನಂದನಾರ್ಹರು.

-ಟಿ.ಎ.ಎನ್. ಖಂಡಿಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement