ಕುಂವೀ ಕೇಳಿದ ಸ್ಯಾಕ್ಸೋಫೋನಿನ ಆಲಾಪನೆ!
ಆತ್ಮಕಥೆ ಬರೆಯಬೇಕೆಂಬ ತುಡಿತಕ್ಕಿಂತ, ಆ ಕಟಕಟೆಯಲ್ಲಿ ಬೆತ್ತಲೆಯಾಗಿ ಕೈಕಟ್ಟಿ ನಿಲ್ಲುವ ದಡ್ಡ ಮತ್ತು ಮೊಂಡು ಧೈರ್ಯ ಲೇಖಕನ ಆತ್ಮಕ್ಕೆ ಅಂಟಬೇಕು. ಈ ಪಾರದರ್ಶಕತೆಗೆ ಗಾಂಧೀಜಿ ಮೇಲ್ಪಂಕ್ತಿ ಹಾಕಿಕೊಟ್ಟರು. ತಂದೆ ಸಾವಿನೊಡನೆ ಗುದ್ದಾಡುತ್ತಿದ್ದಾಗ ಇವರು ಕಸ್ತೂರ ಬಾ ಜತೆ ಯಾವ ಲಹರಿಯಲ್ಲಿದ್ದರು? ಬ್ರಹ್ಮಚರ್ಯೆಗೂ ಪರೀಕ್ಷೆಗಳಿವೆಯೇ? ಅವರು ಕದ್ದಿದ್ದು, ಬೀಡಿ ಸೇದಿದ ಸನ್ನಿವೇಶಗಳೆಲ್ಲ 'ಮೈ ಎಕ್ಸ್ಪಿರಿಮೆಂಟ್ಸ್ ವಿತ್ ಟ್ರುಥ್'ಗೆ ಹಾಕಿದ ಒಗ್ಗರಣೆಗಳೇನಲ್ಲ. ವ್ಯಸನಗಳ ಅನಕ್ಷರಸ್ಥರಂತೆ ತೋರುವ ಭೈರಪ್ಪರಂಥವರಿಂದ 'ಭಿತ್ತಿ'ಯಲ್ಲಿ ಅಂಥ ಪ್ರಸಂಗಗಳನ್ನು ಎದಿರು ನೋಡುವುದು ಓದುಗನ ಮಹಾತಪ್ಪು.
ಯಾಕೆ ಹಾಗಾಯಿತೋ? ಕುವೆಂಪುರದ್ದು ಆತುರದ ಡೈರಿಯಾಯಿತು.
ಅನಂತಮೂರ್ತಿಯವರು ಜ.ನಾ. ತೇಜಶ್ರೀ ಎದುರು ಹೇಳದೇ ಉಳಿದಿದ್ದೇ ಸಾಕಷ್ಟಿದೆ. ಕಾರ್ನಾಡರ ಅಂಥ ಭಾಗಗಳು ಪಶ್ಚಿಮದಲ್ಲಿ ಮೊಳಗಿ ಲೈಫ್ಸ್ಟೈಲಾಗಿ ತೋರುತ್ತವೆ. ಪ್ರತಿಭಾ ಆ ಹೆಸರನ್ನೆಲ್ಲ ಹೇಳಿದ್ದಿದ್ದರೆ ಚೆನ್ನಾಗಿತ್ತು ಅಂತನ್ನಿಸುತ್ತದೆ. ಮಡಿವಂತರು ಸಹಿಸಿಕೊಳ್ಳದ ಭಾಗಗಳಿಗೆ ಝ್ಛ್ಝೀ, ಕುಂವೀ 'ಸ್ಲಂ ಏರಿಯಾ' ಅಂತ ಹೆಸರಿಟ್ಟು ಮುನ್ನುಡಿಯಲ್ಲೇ ಮನ್ಸೂಚನೆಯನ್ನೂ ಕೊಟ್ಟುಬಿಡುತ್ತಾರೆ. ಹಾಗೆ ನೋಡಿದರೆ ಕುಂವೀಯ 'ಗಾಂಧಿಕ್ಲಾಸು' ಹೇಳುವುದನ್ನೆಲ್ಲ ಹೇಳಿದೆ. ಹೇಳದೇ ಇರುವುದನ್ನೂ ಹೇಳಿದೆ. ರಂಜನೆಯ ಗುಣಗಳಿದ್ದರೂ ಅನ್ಯ ಆತ್ಮಗಳ ಎಕ್ಸರೇಯನ್ನೂ ಅಲ್ಪಸ್ವಲ್ಪ ತೆಗೆದಿದೆ.
'ಅನ್ಯ ಆತ್ಮಗಳು' ಎಂದು ಹೇಳಿದೆ. ಅಬಕಾರಿ ವಲಯದ ಪುರುಷೋತ್ತಮ ಅಂಥವರಲ್ಲಿ ಒಬ್ಬರು. ಕುಂವೀಗೆ 'ಯುವರ್ಸ್ ಮಂಥ್ಲಿ ಸ್ಯಾಲರಿ ಈಜ್ ತ್ರೀ ಹಂಡ್ರೆಡ್' ಎಂದು ಫಿಕ್ಸ್ ಮಾಡಿ ಅಬಕಾರಿ ಗುತ್ತಿಗೆದಾರರ ಬ್ಯಾಲೆನ್ಸ್ ಶೀಟುಗಳನ್ನು ಸಿದ್ಧಪಡಿಸುವ ಕೆಲಸ ಕೊಟ್ಟವರು. ಅವರಿಗೊಂದು ವ್ಯಸನವಿತ್ತು. ಅನಿವಾರ್ಯವಾಗಿ ಸಹಿಸಿಕೊಳ್ಳಿ, ಇಲ್ಲವಾದರೆ ಮೂಗು ಮುಚ್ಚಿಕೊಂಡು ಗ್ರಹಿಸಿಕೊಳ್ಳಿ... 'ಹೂಸು ಬಿಡುವುದು'! ಅದು ಕುಂವೀಗೆ ನರಸಿಂಹಲು ವಡವಾಟಿಯವರ ಸ್ಯಾಕ್ಸೋಫೋನಿನ ಆಲಾಪನೆಗಿಂತಲೂ ಆನಂದದಾಯಕವಾಗಿ ಕೇಳುತ್ತಿತ್ತಂತೆ.
ಉಸಿರಳತೆಯಲ್ಲಿ ಕೂತಿರುತ್ತಿದ್ದ ಇವರಲ್ಲಿ ಆ ಹೂಸು ನಗುವೊಂದನ್ನು ಆಸ್ಫೋಟಿಸುತ್ತಿತ್ತು. ಎಷ್ಟೋ ಸಲ ಅಂಥ ನಗುವನ್ನು ನಿಗ್ರಹಿಸಿಕೊಂಡು ಪಾರಾಗುತ್ತಿದ್ದರು ಇವರು. ಆದರೂ ಕೆಲವೊಮ್ಮೆ ಆ ನಗು ಸದ್ದನ್ನುಕ್ಕಿಸುತ್ತಿತ್ತು. ತನ್ನ ವೀಕ್ನೆಸು ಗೊತ್ತಾಯಿತೆಂದು ಪುರುಷೋತ್ತಮರು 'ಇನ್ನೊಮ್ಮೆ ನಕ್ಕೀ ಎಂದರೆ ಕೊಲೆ ಮಾಡ್ತೀನಿ' ಎಂದು ಧಮಕಿಯೂ ಹಾಕಿಬಿಟ್ಟರು. ಸಂಕಟಕ್ಕೆ ಸಿಲುಕಿದರು ಕುಂವೀ. ಲೆಕ್ಕಪತ್ರಗಳ ಮೇಲೆ ಗಮನ ಕೊಡುವುದಲ್ಲದೆ ಬಾಸ್ನ ತಿಕದ ಮೇಲೂ ಕಣ್ಣಿಡಬೇಕೆಂದರೆ... ಬಹುಶಃ ಅದು ಸಿಎ ಆಫೀಸರಿಗೂ ಕಷ್ಟ ಕಷ್ಟ.
ಬಾಸ್ ಪೃಷ್ಠ ಎತ್ತುವ ಸನ್ನಿವೇಶ ಕಂಡಾಗಲೆಲ್ಲ ಕುಂವೀ ಮುನ್ನೆಚ್ಚರಿಕೆ ವಹಿಸಿ, ಹೊರಗೆ ಓಡಿಬರತೊಡಗಿದರು. ಆದರೆ, ಆ ಸ್ವಾತಂತ್ರ್ಯಕ್ಕೂ ಕಡಿವಾಣ ಹಾಕಿಬಿಟ್ಟರು ಬಾಸ್. 'ಹೊರಗೆ ಹೋದರೆ ಹುಷಾರ್' ಎಂದು ಗದರಿಸಿ ತೆಪ್ಪಗೆ ಕೂರಿಸಿದರು. ಈಗೇನು ಮಾಡುವುದು? ಬರುವ ನಗುವಿಗೆ ಬ್ಯಾರಿಕೇಡ್ ಅನ್ನು ನಿರ್ಮಿಸುವುದೇ? ಇಬ್ಬರದ್ದೂ ನೈಸರ್ಗಿಕ ಕ್ರಿಯೆಯೇ. ತಡೆಯುವ ಪ್ರಜ್ಞೆಯನ್ನು ಹೇಗೆ ದಕ್ಕಿಸಿಕೊಳ್ಳುವುದು? ಅವರ ಹಿನ್ನೆಲೆ ಸಂಗೀತ ಹೊರಟಾಗಲೊಮ್ಮೆ ಕುಂವೀ ಗೊಳ್ಳೆಂದು ನಕ್ಕೇಬಿಟ್ಟರು. ಬಾಸ್ಗೆ ಸಿಟ್ಟೇರಿತು. ಇವರನ್ನು ಕೆಲಸದಿಂದಲೇ ಕಿತ್ತುಬಿಟ್ಟರು.
ಒಂದು ಜುಜುಬಿ ಹೂಸು ಇವರ ಅನ್ನವನ್ನು ಕಸಿದುಕೊಂಡಿತ್ತು! ಕುಂವೀ ಅವರ ಬದುಕಿನ ಯಾತ್ರೆಯಲ್ಲಿ ಅನೇಕ ಕಡೆ ಸೋತಿದ್ದಾರೆ. ಅದೇ ಸೋಲನ್ನೇ ಮತ್ತೆ ಮೆಟ್ಟಿ ಗೆಲುವಿನ 'ಅರಮನೆ' ಕಟ್ಟಿದ್ದಾರೆ. ಆ ಬಾಸಿನೆದುರು ಸೋತ ಹಾಗೆ ಕಂಡರೂ ಸೋಲುವುದಿಲ್ಲ. ಆ ಕೆಲಸವನ್ನು ಪುನಃ ಪಡೆದರು. ಕುಂವೀ ಸ್ವತಃ ಹೇಳಿಕೊಂಡ ಹಾಗೆ ಆರಂಭದಲ್ಲಿ ಅವರು ಸಾಹಿತ್ಯಿಕ ಕಳ್ಳಸಾಗಣೆಯಿಂದ ಕೈ ಪಳಗಿಸಿಕೊಂಡರಂತೆ. ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಕರ್ಕಿ, ಕಣವಿ, ಮರುಳಯ್ಯರಂಥ ಘಟಾನುಘಟಿಗಳನ್ನು ಮೊದಲೇ ಒಂದು ಕೈ ನೋಡಿಕೊಂಡಿದ್ದರು. ಇನ್ನು ಕಾಂಜಿಪಿಂಜಿ ಲೇಖಕರು ಅವರಿಗೆ ಯಾವ ಲೆಕ್ಕವೂ ಆಗಿರಲಿಲ್ಲ. ಆ ಕೈಚಳಕವೇ ಅಂದವರಿಗೆ ಮತ್ತೆ ಕೆಲಸ ಕೊಟ್ಟಿತ್ತು! ಕೆಲಸ ಹೋಯಿತಲ್ಲ ಎಂಬ ಬೇಜಾರಿನಲ್ಲಿ ಬಜಾರು ಸುತ್ತುವಾಗ 'ತುಷಾರ' ಮಾಸಪತ್ರಿಕೆ ಕಣ್ಣಿಗೆಬಿತ್ತು. ಇವರ ಬರಹಕ್ಕಾಗಿ ಹುಡುಕಾಡಿದರು. ಇರಲಿಲ್ಲ. ವೀರಭದ್ರಪ್ಪ ಎನ್ನುವವರ 'ಎಲೆ ಅದುರಿತು ಹನಿ ಉದುರಿತು' ಎಂಬ ಕಥೆ ಪ್ರಕಟವಾಗಿದ್ದು ಕಾಣಿಸಿತು. ಆ ವೀರಭದ್ರಪ್ಪ ಯಾರಾದರೇನು? ಒಂದೇ ವೃಷಭರಾಶಿ ಆಯಿತಲ್ಲ! 'ತುಷಾರ'ವನ್ನು ಕಂಕುಳಲ್ಲಿರಿಸಿಕೊಂಡು ಬಾಸ್ ಬಳಿ ಹೋದರು. ಅವರು ಮತ್ತೆ ಕುಪಿತರಾಗಿ, 'ನಿನಗೆ ಜೀವದ ಮೇಲೆ ಆಸೆ ಇಲ್ಲವೇನು?' ಎಂದಾಗ ಇವರು ತುಷಾರ ಹಿಡಿದು ತೋರಿಸಿದರು- 'ಇದರಲ್ಲಿ ನನ್ನ ಕಥೆ ಪ್ರಕಟವಾಗಿದೆ. ತೋರಿಸುವ ಸಲುವಾಗಿ ಬಂದೆ'. ಅವರದನ್ನು ಮೇಲೆ ಮೇಲಕ್ಕೆ ಓದಿ, 'ನೀನು ಕೆ. ವೀರಭದ್ರಪ್ಪ. ಇಲ್ಲಿ ಬರೀ ವೀರಭದ್ರಪ್ಪ ಅಂತಿದೆಯಲ್ಲ?' ಎಂಬ ಅನುಮಾನವನ್ನು ಸಹಜವಾಗಿ ತೆರೆದಿಟ್ಟರು. ಕುಂವೀ ಕೊಂಚ ವಯ್ಯಾರದಲ್ಲಿ, 'ಅದು ನನ್ನ ಪೆನ್ನೇಮು ಸಾ' ಎಂದಾಗ ಮತ್ತೆ ಆ ಬಾಸು ಇವರ ಕೈಯಲ್ಲಿ ಕೆಲಸ ಇಟ್ಟಿದ್ದರು! ಆದರೆ, ಬಾಸ್ ಹೂಸು ನಿಲ್ಲಿಸಲಿಲ್ಲ. ಇವರು ನಗು ನಿಲ್ಲಿಸಲಿಲ್ಲ. ಇನ್ನೆಲ್ಲಿಂದ ಆ ಕೆಲಸ ಇವರಲ್ಲಿ ನಿಲ್ಲಬೇಕು?
ಅಕ್ಕಾ ಸಮ್ಮೇಳನಕ್ಕೆ ಅಮೆರಿಕದ ವಿಮಾನವೇರಿದ್ದ ಕುಂವೀ, ಬೆಂಗಳೂರಿನಲ್ಲಿ ಖರೀದಿಸಿದ್ದ ಹತ್ತಾರು ಪಾನುಗಳಿಗೆ ಮಾರ್ಗ ಮಧ್ಯ ಮುಕ್ತಿ ಕಾಣಿಸಿದ್ದರು. ಹಾಗೆ ಉಗುಳಿದ್ದನ್ನೆಲ್ಲ ಚಿಕಾಗೋದ ಗಟಾರಕ್ಕೆ ಎಸೆಯಬೇಕೆಂದುಕೊಂಡು ಪ್ಲಾಸ್ಟಿಕ್ ಚೀಲದೊಳಗೆ ಶೇಖರಿಸಿಟ್ಟಿದ್ದರು. ಓಹೇರ್ ಏರ್ಪೋರ್ಟಿನ ಸೆಕ್ಯುರಿಟಿ ನಾಯಿಗಳು ಇವರ ಬ್ಯಾಗನ್ನು ಮೂಸಿ ಅನುಮಾನದ ಸಿಗ್ನಲ್ ಕೊಟ್ಟಿದ್ದೇ ತಡ, ಆ ನಾಯಿಯನ್ನು ಹಿಡಿದ ಆಫೀಸರು ಸುಮ್ಮನಿರುತ್ತಾನಾ? ಇವರ ಬ್ಯಾಗ್ ಚೆಕ್ ಮಾಡಿದ. ಪಾನ್ ಉಗುಳಿದ್ದ ಆ ಪ್ಲಾಸ್ಟಿಕ್ ಚೀಲ ಕಂಡು 'ವಾಜೀಸ್ದಿಸ್' ಎಂದು ಮೂಗಿನ ಇಂಗ್ಲಿಷಿನಲ್ಲಿ ಹೆದರಿಸಿ ಕೇಳಿದ.
ಇವರು ಸ್ವಲ್ಪವೂ ತಡವರಿಸದೆ 'ಸಿರಪ್' ಎಂದರು. 'ವಾತ್ ಫಾರ್?' ಮತ್ತೆ ಅವನ ಪ್ರಶ್ನೆ. 'ಕಾಫ್... ಕಾಫ್...' ಎನ್ನುತ್ತ ಕೆಮ್ಮಿ ಅಭಿನಯಿಸಿ ತೋರಿಸಿದರು. 'ವಾತ್ ಕೈಂದಾಫ್ ಸಿರಪ್?' ಅಂವ ಮತ್ತೆ ಕೇಳಿದ. 'ಹರ್ಬಲ್, ಹಿಮಾಲಯ, ಹರಿದ್ವಾರ್, ಹೃಷಿಕೇಶ್...'- ಇವರ ಇಂಗ್ಲಿಷ್ ಜೋಡಣೆಯಲ್ಲಿ ಒಂದಿಷ್ಟು ತೀರ್ಥಕ್ಷೇತ್ರಗಳ ಹೆಸರು ಬಂದುಹೋದವು. ಇದನ್ನು ಕಂಡು ಅವನಿಗೇನನ್ನಿಸಿತೋ ಏನೋ, ಅದನ್ನು ಡಸ್ಟ್ಬಿನ್ ಕಡೆಗೆ ಎಸೆಯಲು ಹೊರಟ. 'ಡೋಂಟ್ ಥ್ರೋ... ದಟೀಜ್ ವೆರ್ರಿ ವ್ಯಾಲ್ಯುಬಲ್ ಮೆಡಿಸಿನ್' ಎಂದು ಗಬಕ್ಕನೆ ಹಿಡಿದುಕೊಂಡರು ಕುಂವೀ.
'ತೊಲಗು ತೊಲಗು' ಎನ್ನುವ ಸನ್ನೆಯಲ್ಲಿ ಅವನು ಬೆರಳು ತೋರಿಸಿದಾಗ ಇವರು ರಾಯಲಸೀಮೆಯ ನೋಟದಲ್ಲಿ ಉತ್ತರಿಸಿ ಬಂದರು. ಬಹುಶಃ ಅಲ್ಲಿಂದಲೇ ಅವರಿಗೆ ಅಮೆರಿಕ ಎಂಬ ಬಾಲ್ಕನಿಗಿಂತ, ಇಂಡಿಯಾ ಎಂಬ 'ಗಾಂಧಿಕ್ಲಾಸು' ಲೇಸೆಂದು ತೋರಿರಬೇಕು. <
-ಕೀರ್ತಿ
kolgarkeerthi@gmail.com