ದವ್ವೂರಿ ಅರ್ಥಶಾಸ್ತ್ರ
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವಲೂರು ಮೂಲದ ದುವ್ವೂರಿ ಸುಬ್ಬರಾವ್, ಕಾನ್ಪುರದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರತಿಭಾವಂತ ಪದವೀಧರ. ಅಲ್ಲೇ ಎಂಎಸ್‌ಸಿ ಮುಗಿಸಿದರು. ಮುಂದೆ ಓಹಿಯೋ- ಮೆಸಾಚುಸೆಟ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಲಿತದ್ದು ಅರ್ಥಶಾಸ್ತ್ರ. 1972ರಲ್ಲಿ ಐಎಎಸ್‌ನಲ್ಲಿ ಆಯ್ಕೆಯಾಗಿ ಆರ್ಥಿಕ ಮಂತ್ರಾಲಯ ಪ್ರವೇಶಿಸಿದರು.
ವಿಶ್ವಬ್ಯಾಂಕ್‌ನಲ್ಲಿ ಅರ್ಥಶಾಸ್ತ್ರ ಸಲಹೆಗಾರರಾಗಿ ಕೆಲಸ ಮಾಡಿದ ಅನಂತರ ಭಾರತಕ್ಕೆ ಹಿಂದಿರುಗಿ ವಿತ್ತ ಮಂತ್ರಾಲಯದ ಕಾರ್ಯದರ್ಶಿ. ಅಲ್ಲಿಂದ 2008ರಲ್ಲಿ ರಿಸರ್ವ್ ಬ್ಯಾಂಕ್‌ನ ಗವರ್ನರ್. ಅವರಿಗೆ ಮುಂಚೆ ಆ ಸ್ಥಾನದಲ್ಲಿದ್ದ ವೈ. ವೇಣುಗೋಪಾಲ ರೆಡ್ಡಿ ಅವರದ್ದೂ ಮೂಲ ಆಂಧ್ರವೇ. ವೇಣುಗೋಪಾಲ ರೆಡ್ಡಿ ರಿಸರ್ವ್ ಬ್ಯಾಂಕ್‌ಗೆ ವಿದಾಯ ಹೇಳಿದಾಗ ಸರ್ಕಾರದ ಜತೆ ಸಾಕಷ್ಟು ಜಗಳವಾಡಿದ್ದರು. ಅವರ ಉತ್ತರಾಧಿಕಾರಿ ದುವ್ವೂರಿ ಸುಬ್ಬರಾಯರೂ, ಆ ಸ್ಥಾನ ಬಿಡುವ ವೇಳೆಗೆ ಸರ್ಕಾರದ ಜತೆ, ವಿತ್ತಮಂತ್ರಿ ಚಿದಂಬರಂ ಜತೆ ಸಾಕಷ್ಟು ಜಗಳವಾಡಿದ್ದಾರೆ.
ಸುಬ್ಬರಾಯರು ಇನ್ನು ಹದಿಮೂರೇ ದಿನಗಳಲ್ಲಿ ರಿಸರ್ವ್ ಬ್ಯಾಂಕಿನ ಸ್ಥಾನ ಬಿಡುತ್ತಾರೆ. ಮುಂದಿನ ಗವರ್ನರ್ ರಘುರಾಮ ರಾಜನ್ ಆಗಲೇ ರಿಸರ್ವ್ ಬ್ಯಾಂಕಿಗೆ ಬಂದು ಅಲ್ಲಿನ ವಿಷಯ ಸಂಗ್ರಹದಲ್ಲಿ ತೊಡಗಿದ್ದಾರೆ.
5 ವರ್ಷ ದೇಶದ ನಾಣ್ಯ ನೀತಿಯ ನಿರೂಪಣೆ, ನಿಯಂತ್ರಣ ವ್ಯವಸ್ಥೆಯ ಹೊಣೆ ಹೊತ್ತಿದ್ದ ಸುಬ್ಬರಾಯರು ಸಂವಿಧಾನದ ವಿಧಿ ನಿಯಮಗಳಂತೆ ಅಸ್ತಿತ್ವಕ್ಕೆ ಬಂದಿರುವ ಹಲವಾರು ಸಂಸ್ಥೆಗಳನ್ನು ಕಾರ್ಯಾಂಗ ನಿರ್ವೀರ್ಯಗೊಳಿಸುತ್ತಿರುವ ಸನ್ನಿವೇಶದಲ್ಲಿ ನಾಣ್ಯ ನೀತಿ, ಬಡ್ಡಿ ನಿಗದಿ, ಇಂಥ ವಿಚಾರಗಳಲ್ಲಿ ರಿಸರ್ವ್ ಬ್ಯಾಂಕಿನ ಪಾರಮ್ಯ ಮೆರೆದವರು. ಆ ಹುದ್ದೆಗೆ ಗಾಂಭೀರ್ಯ ತಂದುಕೊಟ್ಟವರು. ಅವರಿಗೆ ಆದರ್ಶವಾಗಿದ್ದು, ಸರ್ಕಾರದ ಜತೆ ಭಿನ್ನಾಭಿಪ್ರಾಯ ಪ್ರಕಟಿಸಿ, ಬ್ಯಾಂಕಿನ ಪ್ರಮುಖ ಪೀಠದಿಂದ, 1956ರಲ್ಲಿ ಹೊರಬಿದ್ದಿದ್ದ ಧೀಮಂತ ಆಡಳಿತಗಾರ ಬೆನಗಲ್ ರಾಮರಾವ್.
ನಿಜ. ಸುಬ್ಬರಾಯರು ರಿಸರ್ವ್ ಬ್ಯಾಂಕ್ ಪ್ರವೇಶಿಸಿದಾಗ, ಅಂದರೆ 2008ರಲ್ಲಿ, ಆರ್ಥಿಕ ಪರಿಸ್ಥಿತಿ ಚೆನ್ನಾಗಿತ್ತು. ಹಣದ ಅತಿಪ್ರಸರಣದ ಹೆಚ್ಚಳದ ವೇಗ, ಕಡಿಮೆ ಮಟ್ಟದಲ್ಲೇ ಇತ್ತು. ಆದರೆ ಇದ್ದಕ್ಕಿದ್ದಂತೆ ಪ್ರಗತಿಯ ವೇಗ ಇಳಿಮುಖವಾಯಿತು. ವಿದೇಶಿ ಹಣ ಸಂಗ್ರಹದ ಬೆಟ್ಟ ಕರಗಿತ್ತು, ಜಗತ್ತೇ ತಲ್ಲಣಿಸಿದ ಲೆಹಮಾನ್ ಬ್ರದರ್ಸ್ ಬಿಕ್ಕಟ್ಟಿನ ಕಾಲ ಅದು. ಭಾರತವೂ ತತ್ತರಿಸಿತ್ತು. ಅಲ್ಲಿಂದ ಮುಂದೆ 5 ವರ್ಷ ಸುಬ್ಬರಾಯರು ಒಂದಲ್ಲ ಒಂದು ಬಿಕ್ಕಟ್ಟಿನ ಸುಳಿಯಲ್ಲಿ ಸಿಕ್ಕಿಬಿದ್ದೇ ತಮ್ಮ ವೃತ್ತಿನಿಷ್ಠೆಯನ್ನು ಮೆರೆದರು. ಅಲ್ಲಿ ಜನಪ್ರಿಯತೆಯ ಚಿಂತೆ ಇರಲಿಲ್ಲ, ಸರ್ಕಾರದ ವಿರೋಧಿ ಎನ್ನುವ ಹಣೆಪಟ್ಟಿ ಇತ್ತು. ರಿಸರ್ವ್ ಬ್ಯಾಂಕಿನ ಮೂಲ ಕರ್ತವ್ಯ ಹಣದ ಅತಿಪ್ರಸರಣದ ವೇಗ ಹೆಚ್ಚದಂತೆ ನೋಡಿಕೊಂಡು, ಬೆಲೆಗಳನ್ನು ಸ್ಥಿರವಾಗಿರುವಂತೆ ನೋಡಿಕೊಳ್ಳುವುದು. ಆ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸಿದ ಅವರು ಸರ್ಕಾರದ ಕೆಂಗಣ್ಣಿಗೆ ಪಾತ್ರವಾಗಿದ್ದೂ ನಿಜ.
2008ರಲ್ಲಿ ಆರ್ಥಿಕ ಪ್ರಗತಿಯ ವೇಗ ಪ್ರತಿಶತ 9ರ ಆಜೂಬಾಜೂ ಇದ್ದಿದ್ದು ಈಗ ಪ್ರತಿಶತ 5ರ ಹಂತ ಮುಟ್ಟಿದ್ದೇಕೆ? ಸಾಮಾಜಿಕ ವಲಯದ ಮೇಲೆ ಹೆಚ್ಚು ಹಣವನ್ನು ಖರ್ಚು ಮಾಡುವ ನೆಪದಲ್ಲಿ ಸರ್ಕಾರ ಪ್ರದರ್ಶಿಸಿದ ಸರಿಸಾಟಿ ಇಲ್ಲದ ಧಾರಾಳತನ. ಸರ್ಕಾರ ಬಜೆಟ್ ವೆಚ್ಚ ವಿಪರೀತವಾಗಿ ಹೆಚ್ಚಿತ್ತು. ಆಹಾರ ಧಾನ್ಯಗಳ ಬೆಲೆ ಏರಿಕೆಯ ಪ್ರವೃತ್ತಿ ನಿಯಂತ್ರಿಸುವುದು ಕಷ್ಟವಾಗಿತ್ತು.
ರಿಸರ್ವ್ ಬ್ಯಾಂಕಿನ ನೀತಿ ನಿರೂಪಣೆಯ ಮುನ್ನ ಸರ್ಕಾರದ ಜತೆ ವಿಚಾರ ವಿನಿಮಯ ನಡೆದಾಗ, ಎಷ್ಟೇ ಒತ್ತಾಯ ಬಂದರೂ ಸುಬ್ಬರಾಯರು ತಮ್ಮ ವೃತ್ತಿ ನಿಷ್ಠೆಯನ್ನು ಮರೆಯಲಿಲ್ಲ. 3-4 ವರ್ಷ ಅದನ್ನು ಪ್ರಧಾನಿ ಒಪ್ಪಿದ್ದರು. ಆದರೆ ಕೊನೆಯ ವರ್ಷದಲ್ಲಿ ಮನಮೋಹನ ಸಿಂಗ್ ಅವರೂ ಸಡಿಲ ವಿತ್ತೀಯ ನೀತಿಗಾಗಿ ಒತ್ತಾಯಪಡಿಸಿದ್ದೂ ಉಂಟು. ಅದನ್ನು ಮಾಜಿ ವಿತ್ತ ಮಂತ್ರಿ ಯಶವಂತ ಸಿನ್ಹಾ ಒಂದು ದುರಂತ ಎಂದೇ ಬಣ್ಣಿಸಿದ್ದಾರೆ. ರಿಸರ್ವ್ ಬ್ಯಾಂಕಿನ ಇನ್ನೊಂದು ಕರ್ತವ್ಯ ಎಂದರೆ ದೇಶಕ್ಕೆ ಅಗತ್ಯವಾದ ವಿದೇಶಿ ಹಣವನ್ನು ಸಂಗ್ರಹಿಸುವುದು. ಆರ್ಥಿಕ ವ್ಯವಸ್ಥೆಯೇ ಸೊರಗುತ್ತಿರುವಾಗಲೂ ವಿದೇಶಿ ಹಣದ ಸಂಗ್ರಹಕ್ಕೆ ಅಗತ್ಯವಾದ ರಾಷ್ಟ್ರೀಯ ಮಿತವ್ಯಯ ಸಿದ್ಧಾಂತಕ್ಕೆ ಸರ್ಕಾರ ತಿಲಾಂಜಲಿ ನೀಡಿತ್ತು. ವಿದೇಶಿ ಹಣ ದೇಶದ ಒಳಗೆ ಬರಲೇ ಇಲ್ಲ. ಇನ್ನು ಅದರ ಸಂಗ್ರಹದ ಮಾತೆಲ್ಲಿ ಬಂತು? ಪಾರದರ್ಶಕತೆ, ಸಂವಹನ ಸಂಸ್ಕೃತಿಯ ವೃದ್ಧಿಯಲ್ಲಿ ರಿಸರ್ವ್ ಬ್ಯಾಂಕ್ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಸುಬ್ಬರಾವ್ ವಿಜೃಂಭಿಸಿದರು.
ರಿಸರ್ವ್ ಬ್ಯಾಂಕ್ ಗವರ್ನರ್ ಆಗುವುದಕ್ಕೆ ಮುಂಚೆ, ಸರ್ಕಾರದ ವಿತ್ತಮಂತ್ರಾಲಯದಲ್ಲಿ ಇದ್ದಾಗಲೇ ಸುಬ್ಬರಾಯರು ಪುಂಖಾನುಪುಂಖವಾಗಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದರು. ಅರ್ಥಶಾಸ್ತ್ರ, ಪೇಟೆ ಪ್ರಪಂಚದಂಥ ಸಂಕೀರ್ಣ ವ್ಯವಸ್ಥೆ ಸಂಸ್ಥೆಗಳ ಸ್ವರೂಪ ಹಾಗೂ ಒಳತೋಟಗಳನ್ನು ಜನಸಾಮಾನ್ಯರಿಗೂ ತಿಳಿಯುವಂತೆ ಬರೆಯುವುದು ಅವರ ಸಾಧನೆ. ಹಿಂದೆ ವಿತ್ತ ಮಂತ್ರಾಲಯದ ಹಿರಿಯ ಅಧಿಕಾರಿಯಾಗಿ, ಸುಬ್ಬರಾಯರು ರಿಸರ್ವ್ ಬ್ಯಾಂಕಿಗೆ ಹಲವಾರು ಪತ್ರಗಳನ್ನು ಬರೆದಿದ್ದು ಉಂಟು. ಆದರೆ ಅಲ್ಲಿ ತೋಳು ತಿರುಚುವ ತಂತ್ರವಿರಲಿಲ್ಲ. ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿ ಅವರು ಆ ಸಂಸ್ಥೆ ಸರ್ಕಾರದ ಕೈಗೊಂಬೆಯಲ್ಲ ಎನ್ನುವುದನ್ನು ಸ್ಪಷ್ಟವಾಗಿ ನಿರೂಪಿಸಿದರು.
ಬೆಲೆಗಳ ಸ್ಥಿರತೆಯ ಜತೆಯಲ್ಲೇ ಪ್ರಗತಿ ಸಾಧನೆಯೂ ಸಾಧ್ಯವೆಂದು ನಂಬಿದ್ದವರು ಸುಬ್ಬರಾವ್. ಆದರೆ ಆ ಕಾಲದಲ್ಲಿ ಸರ್ಕಾರ ಪಾಲಿಸಬೇಕಾದ ವಿತ್ತೀಯ ಶಿಸ್ತನ್ನು ಪಾಲಿಸದೇ ಇದ್ದಿದ್ದರಿಂದ ಯೋಜನೆಗಳ ವೆಚ್ಚ ವಿಪರೀತವಾಗಿ ಹೆಚ್ಚಿ, ಅವುಗಳಿಂದ ಬಂದ ಪ್ರತಿಫಲ ನಿಜ ಮೌಲ್ಯದ ಲೆಕ್ಕದಲ್ಲಿ ಕಡಿಮೆಯಾದಾಗ ಪ್ರಗತಿಗೆ ರಿಸರ್ವ್ ಬ್ಯಾಂಕಿನ ಬಿಗಿ ಹಣದ ನೀತಿ ಅಡ್ಡಿಯಾಗಿದೆ ಎನ್ನುವ ಬೊಬ್ಬೆ ಎದ್ದಿದ್ದು ನಿಜ.
ಸುಬ್ಬರಾಯರು ಕೈಗೊಂಡ ಎಲ್ಲ ಕ್ರಮಗಳೂ ಸರಿ. ಅವರು ತಪ್ಪುಗಳನ್ನೇ ಮಾಡಲಿಲ್ಲ ಎಂದೇನೂ ಅಲ್ಲ. ಹಿಂದಿನ 21 ಗವರ್ನರ್‌ಗಳ ಕಾಲದಲ್ಲಿ ಆಗಿರುವಂತೆ ಈಗಲೂ ಹಲವಾರು ತಪ್ಪುಗಳಾಗಿರುವುದು ನಿಜ. ಆದರೆ ಯಾವ ಕಾಲಕ್ಕೂ, ಯಾವ ಕಾರಣಕ್ಕೂ ಸುಬ್ಬರಾಯರು ಅಗ್ಗದ ಜನಪ್ರಿಯತೆಗೆ (ಇಲ್ಲಿ ವ್ಯಾಪಾರ - ವ್ಯವಹಾರ - ಕಾರ್ಪೊರೇಟ್ ವಲಯ) ಬಲಿಯಾಗಲಿಲ್ಲ. ರಿಸರ್ವ್ ಬ್ಯಾಂಕಿನ ಸ್ವಾಯತ್ತತೆಯ, ಅಂದರೆ ಸ್ವತಂತ್ರ ಸಂಸ್ಥೆಯ ಗುಣವನ್ನು ರಕ್ಷಿಸುವುದರಲ್ಲಿ ಹಿಂದೆ ಬೀಳಲಿಲ್ಲ. ಇದೇನಿದು. ಸುಬ್ಬರಾಯರೇನು ದೈವಾಂಶ ಸಂಭೂತರೇ? ಸಕಲ ಸದ್ಗುಣಗಳ ಮೂರ್ತಿಯೇ ಅವರು? ಎಂದು ಪ್ರಶ್ನಿಸುವುದು ತೀರಾ ಸಹಜ. ಖಂಡಿತ ಅಲ್ಲ. ಸಮಿತಿಗಳಲ್ಲಿ ಬಹುಮತದ ಅಭಿಪ್ರಾಯ ಏನೇ ಇದ್ದರೂ, ಅದನ್ನು ಒಪ್ಪುವುದು ಅಸಾಧ್ಯ ಎನಿಸಿದಾಗ, ಅಂಥ ಅಭಿಪ್ರಾಯವನ್ನು ನಿಷ್ಠುರವಾಗಿ ತಿರಸ್ಕರಿಸಿದ್ದಾರೆ. ಆ ಅಧಿಕಾರ ರಿಸರ್ವ್ ಬ್ಯಾಂಕಿನ ಗವರ್ನರ್‌ಗೆ ಇದೆ. ಆದರೆ ಅವರು ತಮ್ಮ ಅಭಿಪ್ರಾಯಕ್ಕೇ ಜೋತು ಬೀಳುತ್ತಿದ್ದದ್ದೂ ನಿಜ. ಬೆಲೆಗಳ ಸ್ಥಿರತೆ, ಆರ್ಥಿಕ ಭದ್ರತೆ ಹಾಗೂ ಸಾರ್ವಭೌಮ ಸರ್ಕಾರದ ಸಾಲದ ಇತಿಮಿತಿಯ ಚೌಕಟ್ಟಿಗೆ ಅವರ ಬದ್ಧತೆ ಖಂಡಿತವಾಗಲೂ ಪ್ರಶ್ನಾತೀತ.
ಸುಬ್ಬರಾಯರ ಇಬ್ಬರು ಪುತ್ರರೂ ಅವರದ್ದೇ ಆದ ರೀತಿಯಲ್ಲಿ ಬೆಳೆದಿದ್ದಾರೆ. ವಿಶ್ವ ಬ್ಯಾಂಕಿನಲ್ಲೂ ಹೆಸರು ಗಳಿಸಿದ್ದಾರೆ. ಸುಬ್ಬರಾಯರು ನಿವೃತ್ತರಾದ ಅನಂತರ ಅವರ ಮೂಲ ಪ್ರವೃತ್ತಿಯಾದ ಆರ್ಥಿಕ ಚಿಂತನೆಗೆ ಶರಣಾಗುವ ನಂಬಿಕೆ ಅನೇಕರಲ್ಲಿದೆ.
ಇಪ್ಪತ್ತನೇ ಶತಮಾನದ ಕೊನೆಯ ಎರಡು ದಶಕಗಳ ಆರ್ಥಿಕ ಕ್ರಾಂತಿ ಕುರಿತು ಒಂದು ಮೌಲಿಕ ಗ್ರಂಥ ಅವರಿಂದ ಹೊರಬಿದ್ದೀತು ಎನ್ನುವುದು ಅನೇಕರ ಆಸೆ ಹಾಗೂ ನಂಬಿಕೆ. <
-ಸತ್ಯ