ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಯಶಸ್ಸಿನ ಹೆಜ್ಜೆ

Lingaraj Badiger
Updated On : 24 Aug 2013, 4:05 am

ಯಶವಂತ ಸರದೇಶ ಪಾಂಡೆ ಅವರನ್ನು ರಂಗದ ಮೇಲೆ ನೋಡುವುದೇ ಒಂದು ಮೋಜು. 'ಆಲ್ ದಿ ಬೆಸ್ಟ್‌', 'ರಾಶಿಚಕ್ರ'ದಂಥ ಜನಪ್ರಿಯ ಹಾಸ್ಯ ರಂಗಪ್ರಯೋಗಗಳನ್ನು ಕೊಟ್ಟು, ನಂತರ 'ಸಹಿ ರೀ ಸಹಿ' ಎಂಬ ಅದ್ಭುತ ನಾಟಕ ತಯಾರಿಸಿ ಕನ್ನಡ ರಂಗಪ್ರಿಯರನ್ನು ರಂಜಿಸಿದವರು. ಇನ್ನೂ ವಿಶೇಷವೆಂದರೆ, 'ದಿಲ್ ಮಾಂಗೆ ಮೋರ್‌'ನಲ್ಲಿ ಯಶವಂತ ಆರು ಪಾತ್ರಗಳಲ್ಲಿ ರಂಗಕ್ಕೆ ಬರುತ್ತಾರೆ. ಮೇಲಿಂದ ಮೇಲೆ ಇವರ ಪ್ರಯೋಗದ ಮಳೆ ಇದ್ದಿದ್ದೇ.
ಈಗಿವರು ಸಂತೋಷ ಪವಾರ ರಚನೆಯ ಮರಾಠಿ ಮೂಲದ 'ಯದಾಕದಾಚಿತ್‌' ನಾಟಕದ ಕನ್ನಡ ರೂಪ 'ಹಿಂಗಾದ್ರ ಡಾಟ್ ಕಾಮಿಡಿ'ಯನ್ನು ನಿರ್ದೇಶಿಸುತ್ತಿದ್ದಾರೆ. ಹತ್ತು ಹಲವು ರಂಗ ಪ್ರಕಾರದೊಳಗೆ 'ನಾಟ್ಯನಮನ'ವೂ ಒಂದು. ಮಹಾರಾಷ್ಟ್ರದ ಹಳ್ಳಿಗಳಲ್ಲಿ ಪ್ರಸಿದ್ಧವಾಗಿರುವ ಈ ಪ್ರಕಾರವನ್ನಿಟ್ಟುಕೊಂಡು ನಟ- ನಾಟಕಕಾರ- ನಿರ್ದೇಶಕ ಸಂತೋಷ ಪವಾರ 'ಯದಾಕದಾಚಿತ್‌' ಎಂಬ ರಂಗಪ್ರಯೋಗವನ್ನು ರಚಿಸಿ ನಿರ್ದೇಶಿಸಿ ಸಾವಿರಾರು ಯಶಸ್ವಿ ಪ್ರದರ್ಶನಗಳನ್ನು ನೀಡಿದ್ದಾರೆ. ಆ ಪಾತ್ರಗಳ ಮುಗ್ಧತೆ, ಮಾತುಗಾರಿಕೆ ಮತ್ತು ಸಂದರ್ಭಾನುಸಾರ ಪ್ರತಿಕ್ರಿಯಿಸುವ ರೀತಿ ಯಶವಂತ ಅವರಿಗೆ ಮೆಚ್ಚುಗೆಯಾಗಿ ಅದನ್ನು ಕನ್ನಡದಲ್ಲಿ 'ಹಿಂಗಾದ್ರ ಡಾಟ್ ಕಾಮಿಡಿ'ಯಾಗಿ ರಂಗರೂಪಕ್ಕೆ ಇಳಿಸುತ್ತಿದ್ದಾರೆ.
ಕಲಿಯುಗದಲ್ಲಿ 'ಮಹಾಭಾರತ' ಏನಾಗಬಹುದು ಎಂಬ ಕಲ್ಪನೆಯೇ 'ಹಿಂಗಾದ್ರ ಡಾಟ್ ಕಾಮಿಡಿ'. ನಾಟಕದ ಆರಂಭದಲ್ಲಿಯೇ ಹೇಳುವಂತೆ ಆ ಪವಿತ್ರ ಮಹಾಭಾರತಕ್ಕೂ ಮತ್ತು 'ಹಿಂಗಾದ್ರ ಡಾಟ್ ಕಾಮಿಡಿ'ಗೂ ಯಾವುದೇ ಸಂಬಂಧವಿಲ್ಲ. ಇದ್ದರೆ ಅದು ಹೆಸರಿಗಷ್ಟೇ. ಮಹಾರಾಷ್ಟ್ರದಲ್ಲಿ ಈ ಮೂಲ ನಾಟಕ 5 ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ರಂಗತಜ್ಞರ ಮೆಚ್ಚುಗೆಯನ್ನೂ ಪಡೆದಿದೆ.

'ಹಿಂಗಾದ್ರ ಡಾಟ್ ಕಾಮಿಡಿ'ಯ ಸಹನಿರ್ದೇಶಕರು ರಾಮನಾಥ ಎಸ್., ರಂಗ ನಿರ್ವಹಣೆ ಎಂ.ಎಸ್. ಗೀತಾ. ಬೇಂದ್ರೆಯವರ ಎಲ್ಲ ನಾಟಕಗಳನ್ನು ರಂಗದ ಮೇಲೆ ತಂದ ಏಕೈಕ ನಿರ್ದೇಶಕ ಯಶವಂತ ಸರದೇಶಪಾಂಡೆ. 'ಹಿಂಗಾದ್ರ ಡಾಟ್ ಕಾಮಿಡಿ' ಕೂಡ ಯಶಸ್ಸಿನತ್ತ ಸಾಗುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ, ಈಗಾಗಲೇ, ಯಶವಂತರನ್ನು ಕನ್ನಡ ರಂಗಪ್ರಿಯರು ಮೆಚ್ಚಿಕೊಂಡಿದ್ದಾರೆ.

ಯಾರು ಸಂತೋಷ ಪವಾರ?
ಸುಪ್ರಸಿದ್ಧ ಮರಾಠಿ ಕಲಾವಿದ ಶಾಹಿರ ಸಾಬಳೆಯವರ ಸಂಪರ್ಕದಲ್ಲಿ ಬೆಳೆದವರು ಸಂತೋಷ ಪವಾರ. ಮರಾಠಿ ರಂಗಲೋಕದ ಯಶಸ್ವಿ ನಟ, ನಿರ್ದೇಶಕ ಮತ್ತು ನಾಟಕಕಾರ. ಪವಾರರ ಬರವಣಿಗೆ ಈಗಾಗಲೇ ಅಲ್ಲಿ ರಂಗಾಸಕ್ತರ ಗಮನ ಸೆಳೆದಿದೆ. ಇವರು ಬರೆದ 35 ನಾಟಕಗಳು ಅಲ್ಲಿ ಜನಜನಿತ. ಇವರ ಸಂಭಾಷಣೆಯ ಮೋಡಿಯನ್ನರಿತು ಸಿನಿಮಾ ನಿರ್ಮಾಪಕರೂ ಇವರನ್ನು ಸಂಪರ್ಕಿಸಿದರು. ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ.

ಮೈಸೂರಿನ ರಂಗಾಯಣದ 'ಭೂಮಿಗೀತ' ರಂಗಮಂದಿರದಲ್ಲಿ ಆ.25ರ ಸಂಜೆ 6.30ಕ್ಕೆ ಯಶವಂತ ಸರದೇಶಪಾಂಡೆಯವರ ನಿರ್ದೇಶನದ 'ಹಿಂಗಾದ್ರ ಡಾಟ್ ಕಾಮಿಡಿ' ಪ್ರದರ್ಶನವಿರುತ್ತದೆ. ನೀವೂ ಬನ್ನಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement