ಶಬ್ದತೀರದ ಬಾಲಕ
ಚಿತ್ರ: ದಿ ಸೈಲೆನ್ಸ್ (1998), ಭಾಷೆ: ಪರ್ಷಿಯನ್
ನಿರ್ದೇಶನ: ಮೊಹ್ಸೆನ್ ಮಕ್ಮಲ್ಬಫ್, ಅವಧಿ: 76 ನಿಮಿಷ
ತಾರಾಗಣ: ತಹ್ಮಿನೆ ನರ್ಮಾತೊವ, ನದೀರೆ ಅಬ್ದಲೇವ, ಅರಝ್ ಎಂ. ಶಿರ್ಮೊಹಮದಿ, ಗೊಬಿಬಿ ಝಿಯಾದೊಲಾಹೈವಾ.
"O God, may the bee find his way back home safe and sound...' ಆ ಹುಡುಗನ ಮೊದಲ ಮಾತೇ ಅದು. ಒಂದು ರೀತಿಯಲ್ಲಿ ಚಿತ್ರದ ಆರಂಭ ಕೂಡ ಇದೆ. 'ದೇವರೆ ಮತ್ತೆ ಸುರಕ್ಷಿತವಾಗಿ ಮನೆಗೆ ಬರಲು ಧ್ವನಿ ನನಗೆ ನೆರವಾಗಲಿ' ಎನ್ನುವ ಆ ಹುಡುಗನಿಗೆ ಎರಡೂ ಕಣ್ಣುಗಳು ಕಾಣಲ್ಲ. ಆದರೆ ಅವನು ಜಗತ್ತನ್ನು ತುಂಬಾ ಸುಂದರವಾಗಿ ಅನುಭವಿಸಬಲ್ಲ. ಕಾಣದ ಕಣ್ಣುಗಳನ್ನು ಮುಚ್ಚಿಕೊಂಡೇ ಪುಟ್ಟ ಪುಟ್ಟ ಹೆಜ್ಜೆ ಹಾಕುವ ಆತನ ಬಾಳ ಪಯಣಕ್ಕೆ ರಿಧಂ ಉರುಗೋಲು! ಹೌದು, ಕಿವಿಗೆ ಇಂಪಾಗಿ ಕೇಳಿಸುವ ದನಿ ಎಂದರೆ ಈತನಿಗೆ ಎಲ್ಲಿಲ್ಲದ ಪ್ರೀತಿ. ಸಣ್ಣದೊಂದು ನಾದ ಕೇಳಿದರೂ ಸಾಕು, ಅದರ ಜಾಡು ಹಿಡಿದು ಸಾಗುವ ಈ ಹುಡುಗನ ಬದುಕೇ ಒಂದು ಸಂಗೀತ.
ಎಲ್ಲವೂ ಸರಿ ಇದ್ದು ಸುತ್ತಲಿನ ಪ್ರಪಂಚವನ್ನು ಅನುಭವಿಸದವರ ನಡುವೆ, ಅದೇ ಜಗತ್ತನ್ನು ಅನುಭವಿಸುವ ಅಂಧ ಬಾಲಕನೊಬ್ಬ ನಮ್ಮ ನಡುವೆಯೇ ಇದ್ದಾನೆ ಎನ್ನುವಷ್ಟರ ಮಟ್ಟಿಗೆ ಪ್ರಭಾವಿಸುವ ಈ ಚಿತ್ರ 'ದಿ ಸೈಲೆನ್ಸ್'. ಮೊಹ್ಸೆನ್ ಮಕ್ಮಲ್ಬಫ್ ನಿರ್ದೇಶನದ ಇದರ ಪ್ರತಿ ದೃಶ್ಯ ಮತ್ತು ಅಲ್ಲಿನ ಸಂಗೀತ ನೆನಪಿನಲ್ಲಿ ಉಳಿಯುತ್ತದೆ. ಇರಾನಿ ಚಿತ್ರಜಗತ್ತಿನ ಮಕ್ಮಲ್ಬಫ್ ಕುಟುಂಬದ್ದು ದೊಡ್ಡ ಹೆಸರು. ಸಮಿರಾ ಮಕ್ಮಲ್ಬಫ್, ಮರ್ಜಾಯ್ ಮಕ್ಮಲ್ಬಫ್, ಮಾಯಾಸಂ ಮಕ್ಮಲ್ಬಫ್ ಹಾಗೂ ಹನಾ ಹೀಗೆ ಮನೆ ಸದಸ್ಯರೆಲ್ಲ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಕೌಟಂಬಿಕ ಚಿತ್ರ 'ಕೃಷಿ'ಯನ್ನೇ ಅನುಸರಿಸಿದ ಮೊಹ್ಸೆನ್ ಮಕ್ಮಲ್ಬಫ್, ಇಲ್ಲಿವರೆಗೂ 20ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾನೆ. ಇರಾನಿನ ಟೆಹರಾನ್ ನಗರದಲ್ಲಿ ಬೆಳೆದ ಮೊಹ್ಸೆನ್, ಚಿಕ್ಕಂದಿನಲ್ಲೇ ಶಾಲೆ ತೊರೆದವನು. ಮುಸ್ಲಿಂ ಸಂಘಟನೆಯೊಂದಕ್ಕೆ ಸೇರ್ಪಡೆಗೊಂಡು, ಮುಂದೆ ಆತ ಜೈಲಿಗೂ ಹೋಗಿ ಬಂದ. ಇಸ್ಲಾಮಿಕ್ ಸರ್ಕಾರ ಆಧಿಕಾರಕ್ಕೆ ಬಂದ ನಂತರ ಬಿಡುಗಡೆಗೊಂಡ ಮೊಹ್ಸೆನ್, ಬರವಣಿಗೆ, ನಾಟಕ, ರಂಗಭೂಮಿಯಲ್ಲಿ ತೊಡಗಿಸಿಕೊಂಡ. ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾನೆ. 1982ರ ನಂತರ ಸಿನಿಮಾ ಕೃಷಿ ಶುರುಮಾಡಿದ. ಅಂತಾರಾಷ್ಟ್ರೀಯ ಚಿತ್ರಜಗತ್ತಿನಲ್ಲಿ ಸಾಕಷ್ಟು ಹೆಸರು ಮಾಡಿರುವ ಈತನಿಗೆ ಪ್ರತಿಯೊಂದನ್ನು ಮೌನದಲ್ಲೇ ತೀರಾ ಆಪ್ತವಾಗಿ ಹೇಳುವ ಕಲೆ ಸಿದ್ಧಿಸಿದೆ. ಹೀಗಾಗಿಯೇ 'ದಿ ಸೈಲೆನ್ಸ್' ಚಿತ್ರದಲ್ಲಿ ಮಾತುಗಳಿಲ್ಲದಿದ್ದರೂ ಅದರ ಪ್ರತಿ ಚಿತ್ರಿಕೆಯೂ ನೋಡುಗನ ಮನಸ್ಸಿಗೆ ನಾಟುವಂತೆ ಮಾಡಿದ್ದಾನೆ. 'ಬದುಕಿನಿಂದ ನೇರವಾಗಿ ಹೆಕ್ಕಿ ತೆಗೆದ ಒಂದು ದೃಶ್ಯ ಮಾಧ್ಯಮ ಸಿನಿಮಾ' ಎನ್ನುವ ಮಾತಿಗೆ ಈತನ ಬಹುತೇಕ ಸಿನಿಮಾಗಳು ಅರ್ಥ ನೀಡುತ್ತವೆ.
ಸೀಮಿತ ಪರಿಸರ, ಅದಕ್ಕೆ ತಕ್ಕಂತೆ ಪಾತ್ರಗಳು, ಅಬ್ಬರವಿಲ್ಲದ ಮಾತು, ಸಂಗೀತ ಮತ್ತು ಅದರಲ್ಲಿ ಅಡಗಿರುವ ಸೌಂದರ್ಯವನ್ನು ಮೇಳೈಸಿಕೊಂಡ 'ದಿ ಸೈಲೆನ್ಸ್' ಚಿತ್ರದಲ್ಲಿ ಖೊರ್ಷಿದ್ ಹಾಗೂ ನದೀರಾ ಮುಖ್ಯ ಪಾತ್ರಗಳು. ಚಿತ್ರ ನೋಡುವವರಿಗೆ 'ಇದು ಮಧುರ ಸ್ವರಗಳಲ್ಲಿ ಕಳೆದು ಹೋಗುವ ಖೊರ್ಷಿದ್ನ ಕಥೆ ಮಾತ್ರವಲ್ಲ. ಅವನ ಶ್ರುತಿ ಕೂಡಿಸುವಿಕೆ ಕುಸರಿ ಕೆಲಸಕ್ಕೆ ಮಾರುಹೋಗುವ ನಮ್ಮ ಅಭಿರುಚಿ ಮತ್ತು ಆಸಕ್ತಿಯ ಚಿತ್ರವೂ ಹೌದು' ಎನಿಸುತ್ತದೆ. ಕಥೆ ನಡೆಯುವುದು ತಜಿಕಿಸ್ತಾನದಲ್ಲಿ. ಬಾಲ್ಯ ಸಹಜ ಆಟಗಳಿಂದ ಇನ್ನೂ ಹೊರಬರದ ಪುಟ್ಟ ಬಾಲಕ ಖೊರ್ಷಿದ್ಗೆ ತಂದೆ ಇಲ್ಲ. ಅಮ್ಮನೊಟ್ಟಿಗೆ ಬಾಡಿಗೆ ಮನೆಯಲ್ಲಿ ವಾಸ. ಐದು ದಿನಗಳಲ್ಲಿ ಮನೆ ಬಾಡಿಗೆ ಕಟ್ಟದಿದ್ದರೆ ಅದರ ಮಾಲೀಕ ಖೊರ್ಷಿದ್ ಮತ್ತವನ ತಾಯಿಯನ್ನು ಹೊರ ಹಾಕುತ್ತಾನೆ. ಒಂದೇ ಒಂದು ರವೆ ಕಾಳಿನಷ್ಟು ಸದ್ದಿಲ್ಲದ ರೂಮಿನಲ್ಲಿ ಕೂತಿರುತ್ತಾನೆ. 'ಖೊರ್ಷಿದ್, ಮನೆ ಬಾಡಿಗೆ ಕಟ್ಟಲು ಎಷ್ಟು ದಿನ ಬಾಕಿ ಇದೆ?' ಎನ್ನುವ ತಾಯಿಯ ಪ್ರಶ್ನೆಗೆ 'ಐದು ದಿನ ಮಾತ್ರ' ಎಂದು ಉತ್ತರಿಸಿ ನಿಧಾನವಾಗಿ ಕಣ್ಣು ಬಿಡುತ್ತಾನೆ. ಆತನ ಬದುಕಿನ ಪಯಣ ಇಲ್ಲಿಂದ ಆರಂಭಗೊಳ್ಳುತ್ತದೆ. ಚಿತ್ರದ ಆರಂಭದಲ್ಲೇ ಖೊರ್ಷಿದ್ನ ಮನೆಯ ಸ್ಥಿತಿಯನ್ನು ತೆರೆದಿಡುವ ನಿರ್ದೇಶಕ, ಆತನನ್ನು ನಗರಕ್ಕೆ ಕರೆದೊಯ್ಯುತ್ತಾನೆ. ಸಂಗೀತೋಪಕರಣಗಳ ಅಂಗಡಿಯಲ್ಲಿ ವಾದ್ಯಗಳಿಗೆ ಲಯಬದ್ಧವಾಗಿ ಶ್ರುತಿ ಸೇರಿಸುವ ಕೆಲಸ ಈತನದ್ದು.
ಖೊರ್ಷಿದ್ನ ಶ್ರುತಿ ಸೇರಿಸುವ ಕೆಲಸಕ್ಕೆ ಸಹಾಯ ಮಾಡುವ ಹುಡುಗಿ ನದೀರಾ. ಇನ್ನೂ ಪ್ರಾಯಕ್ಕೆ ಮಾರು ದೂರ ಇರುವ ನದೀರಾಳ ಮುಖದ ಬಳಿ ಎರಡ್ಮೂರು ಬಾರಿ ಕ್ಯಾಮೆರಾ ತನ್ನ ಜಾಣತನ ತೋರುತ್ತದೆ. ನೋಡಿದಾಕ್ಷಣ ಮೆಚ್ಚುಗೆಯಾಗಿಬಿಡುವ ಈಕೆ, ಆ ಸಂಗೀತ ಅಂಗಡಿಯಲ್ಲಿರುವವರಿಗೆ ಟೀ, ನೀರು ಇತ್ಯಾದಿಗಳನ್ನು ಪೂರೈಸುವವಳು. ಖೊರ್ಷಿದ್ ಕೈಯಲ್ಲಿ ಸಂಗೀತ ವಾದ್ಯ ಹಿಡಿದು ಕೂತಾಗ ನದೀರಾ ಅವನ ಮುಂದೆ ನಿಂತು ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಲೇ ಶ್ರುತಿ ಸರಿಯಾಗಿದೆಯೋ, ಇಲ್ಲವೋ ಎಂದು ತಿಳಿಸುತ್ತಾಳೆ. ತನ್ನ ಕಿವಿಗಳಿಗೆ ಎರಡೆರಡು ಚೆರ್ರಿ ಹಣ್ಣುಗಳನ್ನು ಜೋತು ಬಿಟ್ಟುಕೊಂಡು, ಹಿಂದೆರಡು, ಮುಂದೆರಡು ಉದ್ದದ ಜಡೆ ಹಾಕಿಕೊಂಡು, ಬೆರಳಿನ ಉಗುರುಗಳಿಗೆ ಹೂವಿನ ರೇಖೆಗಳನ್ನು ಅಂಟಿಸಿಕೊಂಡು ಅತ್ತಿತ್ತ ತಲೆ ಆಡಿಸುವ ನದೀರಾಳ ಆಂಗಿಕ ಅಭಿನಯ ನೋಡುವುದೇ ಒಂದು ಚೆಂದ. ಗುಬ್ಬಚ್ಚಿಯಂತೆ ಕಾಣುವ ಆಕೆಯೇ ಚಿತ್ರದ ಡಾಲ್.
ಸಂಗೀತ ಶಾಲೆಯೊಂದರ ಮಾಸ್ತರು 'ಈ ಸಂಗೀತ ವಾದ್ಯ ಸರಿ ಇಲ್ಲ. ವಾಪಸು ನಿನ್ನ ಮಾಲೀಕನಿಗೆ ಕೊಡು' ಎಂದಾಗ ಅದನ್ನು ಎತ್ತಿಕೊಂಡು ಮಳೆಯಲ್ಲಿ ನೆನೆಯುತ್ತ ಬರುವ, ಅಸರೆಗಾಗಿ ಅತ್ತಿತ್ತ ಓಡುವಾಗ, ವಾದ್ಯ ಸರಿ ಇಲ್ಲ ಎಂದ ಶಿಕ್ಷಕನ ಕೈ ಚಲನೆಯನ್ನು ಮುಟ್ಟಿ ನೋಡುವ, ಕಣ್ಮುಚ್ಚಿಕೊಂಡು ಎರಡೂ ಕೈಗಳನ್ನು ಮುಂದೆ ಮಾಡಿ, ಯಾವುದಾದರೂ ನಾದದ ದನಿಯನ್ನು ಹಿಂಬಾಲಿಸಿ ಹೋಗುವ ಖೊರ್ಷಿದ್... ಈ ದೃಶ್ಯಗಳನ್ನು ಮತ್ತು ನಮ್ಮ ಕದಡುವ ಪರಿಸರವನ್ನು ಚಿತ್ರದಲ್ಲೇ ನೋಡಬೇಕು. ಅದಕ್ಕೆ ಇಲ್ಲಿ ಎಷ್ಟೇ ವಿವರಣೆ ಕೊಟ್ಟರೂ ಸಪ್ಪೆಯಾಗುತ್ತದೆ. ಅದ್ಭುತವಾಗಿ ವಾದ್ಯಗಳಿಗೆ ಸಂಗೀತ ಜೋಡಿಸುವ ಖೊರ್ಷಿದ್ಗೆ ಕೊನೆತನಕ ಕಾಡುವ ದನಿ 'ಬೊ... ಬೊ... ಬೊ... ಬೊಮ್'. ಚಿತ್ರದ ಕೊನೆವರೆಗೂ ಈ ಶಬ್ದದ ಲಯ ಹುಡುಕುವ ಖೊರ್ಷಿದ್ನ ಮೂಲಕ ಸ್ವತಃ ನಿರ್ದೇಶಕನೇ ಸಂಗೀತದ ಬೇರುಗಳನ್ನು ತಡಕಾಡಿದಂತೆ ಕಾಣುತ್ತದೆ.
ಆದರೆ, ಕಣ್ಣು ಕಾಣದ ಹುಡುಗನೊಬ್ಬ ಕಾಣದ ಜಗತ್ತನ್ನು ಪ್ರಕೃತಿಯ ಸಹಜ ಸಂಗೀತ ಅಥವಾ ಶಬ್ದದ ಮೂಲಕವೇ ಹೇಗೆ ಗುರುತಿಸಿ, ಗ್ರಹಿಸುತ್ತಾನೆ ಎಂದು ಹೇಳುವ ನಿರ್ದೇಶಕ, ಬೇಡದಿದ್ದ ಶಬ್ದಗಳೇ ತುಂಬಿರುವ ದೃಶ್ಯ ಮಾಧ್ಯಮದಲ್ಲಿ ಅದೇ ಶಬ್ದವನ್ನು ಬಳಸಿಕೊಂಡು ಅದಕ್ಕೆ ಮೌನದ ಸ್ಪರ್ಶ ಕೊಡುತ್ತಾರೆ. ಮುಖ್ಯ ಇಲ್ಲಿ ನಿರ್ದೇಶಕ ಅಂಧ ಬಾಲಕನ ಮೂಲಕ ರಿಧಂ ಅಥವಾ ಲಯದ ನೆಲೆಯನ್ನು ಹುಡುಕುತ್ತ ಹೋಗುತ್ತಾರೆ. ಹೀಗಾಗಿ ಚಿತ್ರ ನೋಡುವ ಪ್ರೇಕ್ಷಕ ಮತ್ತು ಆ ಚಿತ್ರವನ್ನು ಕಟ್ಟಿಕೊಡುವ ನಿರ್ದೇಶಕ ಇಬ್ಬರೂ ಇಲ್ಲಿ ಕಾಣದ ಜಗತ್ತಿನ ಸೌಂದರ್ಯ ಲಯಕ್ಕೆ ದೃಶ್ಯಗಳ ಮೂಲಕ ಹೊಸ ಭಾಷ್ಯ ಬರೆಯುತ್ತಾರೆ.
- ಆರ್. ಕೇಶವಮೂರ್ತಿ
keshavarkm1@gmail.com