ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಕಾವ್ಯಪ್ರೇಮಿ

ಲಕ್ಕೂರು ಸಿ. ಆನಂದ
Mainashree
Updated On : 2 Sept 2013, 1:51 am

ಲಕ್ಕೂರು ಸಿ. ಆನಂದರ ಒಂದು ಕವಿತೆಯಲ್ಲೊಂದು ಚಿತ್ರವಿದೆ: ಸಾಯುವ ಮೊದಲು ಗಂಡ ಹೆಂಡತಿಗೆ ಏನೋ ಹೇಳಬೇಕೆಂದುಕೊಳ್ಳುತ್ತಾನೆ. ಇಷ್ಟು ದಿನ ಹೇಳಿದ್ದಕ್ಕಿಂತ ಈಗ ಏನು ತಾನೆ ಹೇಳಲಾದೀತೆಂದು ಸುಮ್ಮನಾಗುತ್ತಾನೆ. ಹೆಂಡತಿ ಕೂಡ ಹಾಗೇ ಭಾವಿಸುತ್ತಾಳೆ. ಇಬ್ಬರೂ ಮಾತನಾಡುವುದೇ ಇಲ್ಲ.
ಆದರೆ ಇಲ್ಲೊಂದು ವಿಚಿತ್ರವಿದೆ. ಗಂಡ- ಹೆಂಡತಿ ಕೂಡ ಪರಸ್ಪರ ಹೇಳಲಾಗದ್ದನ್ನು, ಹೇಳಬೇಕೆಂದುಕೊಂಡದ್ದನ್ನು ಕಾವ್ಯ ಹೇಳಿಬಿಟ್ಟಿದೆ. ಅವರು ಹೇಳಬೇಕೆಂದುಕೊಂಡ ಕ್ಷಣದ ಚಿತ್ರಣದಲ್ಲೇ ಎಲ್ಲ ಹೇಳಿದಂತಾಗಿದೆ. ಏನನ್ನೂ ಹೇಳದೆಯೂ ಕವಿತೆ ಕೇಳುಗರಿಗೆ ಏನನ್ನೋ ದಾಟಿಸಿದೆ.
ಲಕ್ಕೂರು ಆನಂದರ ಕಾವ್ಯ ಕೂಡ ಹೇಳಬೇಕೆಂದುಕೊಂಡದ್ದು, ಹೇಳಲಾಗದೆ ಇದ್ದದ್ದು, ಹೇಳಿಯೇ ತೀರಬೇಕಾದದ್ದು ಎಲ್ಲದರ ಸಮ್ಮಿಶ್ರಣ. ಬಡತನದ ಹಿನ್ನೆಲೆಯಿಂದ ಬಂದ ಆನಂದರ ಕಾವ್ಯದಲ್ಲಿ ಯಾತನೆ ಹೆಪ್ಪುಗಟ್ಟಿದೆ. ಹೆಪ್ಪುಗಟ್ಟಿದೆಯೆಂದು ಮುಟ್ಟದೆ ಹೋದಿರೋ, ಪ್ರೇಮವೆಂಬ ಕೆನೆಮೊಸರಿನಿಂದ ನೀವು ವಂಚಿತರಾಗಬೇಕಾಗುತ್ತದೆ!
ಊರಿಂದ ಊರಿಗೆ, ಇಪ್ಪತ್ತರ ಕಲ್ಲಿನ ಮೇಲೆ, ಬಟವಾಡೆಯಾಗದ ರಸೀತಿ, ಇತಿ ನಿನ್ನ ವಿಧೇಯನು, ಉರಿವ ಏಕಾಂತ ದೀಪ ಎಂಬ ಐದು ಕವನ ಸಂಕಲನಗಳನ್ನು ಪ್ರಕಟಿಸಿರುವ ಆನಂದರ 'ರಸೀತಿ'ಗೆ  ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಸಿಕ್ಕಿದೆ. ಈ ಪುರಸ್ಕಾರವನ್ನು ಆನಂದ 'ಎಲ್ಲ ದಮನಿತ ಸಮುದಾಯಗಳಿಗೆ' ಅರ್ಪಿಸಿದ್ದಾರೆ.

'ಇಷ್ಟವಾದ ಕವಿತೆಯನ್ನು
ಏಕಾಂತದಲ್ಲಿ ಓದಿಕೊಳ್ಳುವಂತೆ
ತೇವವಾರದ ಮೋಡದಂತಹ ಅವಳನ್ನು
ಸಾಧ್ಯವಾದರೆ ಒಂಟಿಯಾಗೋ
ಇಲ್ಲ ಗುಂಪಿನಲ್ಲೋ ಭೇಟಿಯಾಗಬೇಕು
ಕವಿತೆ ಓದಿದಂತೆ ಮತ್ತೆ ಮತ್ತೆ ಅವಳನ್ನು ಮಾತನಾಡಿಸಬೇಕು'

ಎಂದು ಬರೆಯುವ ಆನಂದ, ಮತ್ತೆ ಮತ್ತೆ ಹೊರಳಬಯಸುವುದು ಯಾವ ರೂಪಕದತ್ತ ಗೊತ್ತೆ? ಬೇರ್ಪಟ್ಟ ಪ್ರೇಮಿಗಳು ಮತ್ತೆ ಭೇಟಿಯಾಗುವುದು!
ತೆಲುಗು ಗಡಿಯ ಕೋಲಾರದ ಗ್ರಾಮದಿಂದ ಬಂದಿರುವ ಆನಂದರಲ್ಲಿ ಕವಿ ಮೂಡಿದ್ದು ಅಜ್ಜಿ ಹಾಡುತ್ತಿದ್ದ ತೆಲುಗು ಜನಪದ ಹಾಡುಗಳನ್ನು ಕೇಳುತ್ತ. ಆಕೆ ಕತೆ ಹೇಳಿದ್ದರೆ ತಾನೂ ಕತೆಗಾರನಾಗುತ್ತಿದ್ದೆನೋ ಏನೋ. ಆದರೆ ಅಜ್ಜಿಯೇ ಜೀವಂತ ಕಾವ್ಯ ಆಗಿದ್ದಳು. ಬೆಳೆಯುತ್ತ ನನ್ನ ಮನಸ್ಸಿನಲ್ಲಿ ಕೆ.ಎಸ್.ನರಸಿಂಹಸ್ವಾಮಿ, ಎಚ್.ಎಸ್.ಶಿವಪ್ರಕಾಶ್ ಮುಂತಾದವರ ಕವಿತೆಗಳು ನೆಟ್ಟು ನಿಂತವು ಎನ್ನುತ್ತಾರೆ ಆನಂದ.
ಆನಂದರಲ್ಲಿ ಒಬ್ಬ ಶೋಷಿತ ವರ್ಗದ ಚಿಂತಕನಿದ್ದಾನೆ; ಜತೆಗೇ ಪ್ರೇಮತಪ್ತ ಹುಡುಗನೂ ಇದ್ದಾನೆ. ಇವೆರಡೂ ಅವರ ಕಾವ್ಯದಲ್ಲಿ ಸಮಸಮವಾಗಿ ಅಭಿವ್ಯಕ್ತಿಗೊಂಡಿವೆ. ಇದೇನೂ ಬ್ಯಾಲೆನ್ಸ್‌ಗಾಗಿ ಅವರು ಮಾಡಿಕೊಂಡದ್ದಲ್ಲ. ಅವರು ಹೇಳುವಂತೆ, ಅವರ ಕಾವ್ಯದಲ್ಲಿ ಮೂರು ಹಂತಗಳಿವೆ. ನಾನು ಏನು ಬೇಕಾದರೂ ಪಡೆಯಬಲ್ಲೆ ಎಂಬ ಪೊಗರಿನ 16ರಿಂದ 25ರ ಹರೆಯದ ಹಂತ, ನಾನು ಯಾವುದನ್ನೋ ಪಡೆಯಬೇಕು ಎಂಬ ಹುಡುಕಾಟದ 25ರಿಂದ 35ರ ಹಂತ, ಯಾವುದಾದರೂ ಸರಿ ಎಂಬ 35ರ ನಂತರದ ಆಯ್ಕೆಯೇ ಇಲ್ಲದ ಹಂತ. ಅವಮಾನ, ಹಸಿವುಗಳನ್ನು ಮೀರಿ ನಿಲ್ಲಲಿಕ್ಕೆ ಅವರು ಆಧರಿಸಿದ್ದು ಪ್ರೇಮವನ್ನು.
ಪ್ರಸ್ತುತ ಕನ್ನಡದಲ್ಲಿ ಹೊಗೆಯಾಡುತ್ತಿರುವ 'ನವಿರು ಕಾವ್ಯ- ಬೆವರು ಕಾವ್ಯ' ಎಂಬ ಎರಡು ವಿರುದ್ಧಮುಖಿ ವಿಭಾಗೀಕರಣದ ಬಗ್ಗೆ ಆನಂದ ಅಷ್ಟೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕವಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ಅನುಭವಗಳು ವ್ಯಕ್ತಿಗಳನ್ನು ವಿಭಿನ್ನ ನೆಲೆಗಳತ್ತ ಒಯ್ಯುತ್ತವೆ ಎನ್ನುತ್ತಾರೆ. ಅದಕ್ಕೆ ಅವರು ಕೊಡುವ ರೂಪಕ- 'ನನಗೆ ಅನಂತಮೂರ್ತಿ, ಮಹಾದೇವ ಇಬ್ಬರೂ ಮುಖ್ಯ. ತಮ್ಮ ಕೃತಿಗಳಲ್ಲಿ ಅನಂತಮೂರ್ತಿ ಹೊಲೆಯರನ್ನೂ, ಮಹಾದೇವ ಬ್ರಾಹ್ಮಣರನ್ನೂ ಚಿತ್ರಿಸಿದ್ದಾರೆ. ಅವರಿಗೆ ಅದರ ಅನುಭವವೇ ಇಲ್ಲ ಎಂದು ಅಲ್ಲಗಳೆಯಬಾರದು. ಇಬ್ಬರೂ ತಮ್ಮ ಅನುಭವಕ್ಕೆ ಹತ್ತಿರವಾಗಿದ್ದಾರೆ'.
ಮೌಖಿಕ ಕಾವ್ಯಗಳು, ಅನುಭಾವ ತತ್ವಗಳು ಆನಂದರ ಕಾವ್ಯದ ತಾತ್ವಿಕ ನೆಲೆಗಳು. ತಾನು ಕಂಡ ಕೆಲವು ಸಾವುಗಳು, ಕಾಡಿದ ಪ್ರೇಮಗಳು, ಕಾರಣವಿಲ್ಲದೆ ದೂರವಾದ ಕೆಲವು ವ್ಯಕ್ತಿತ್ವಗಳು, ಹೊಸ ಆಗಮನಗಳು ಅವರ ಕಾವ್ಯದ ಧಾತುಗಳು. 'ನಾನು ಬದುಕಿನ ಅಂತಿಮ ಘಟ್ಟಕ್ಕೆ, ಸಾವಿನ ಹತ್ತಿರಕ್ಕೆ ಹೋಗಿ ಮರಳಿ ಬಂದವನು. ಕಾವ್ಯ ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ಕಾವ್ಯವನ್ನು ಎಷ್ಟು ಪ್ರೀತಿಸುತ್ತೇನೆಂದರೆ, ಬೇರ್ಯಾರನ್ನೂ ದ್ವೇಷಿಸಲು ಎದೆಯಲ್ಲಿ ಜಾಗವಿಲ್ಲದಷ್ಟು' ಎಂಬ ಭರತವಾಕ್ಯ ಅವರದು.
ಸ್ಮೃತಿ ಕಿಣಾಂತಂ, ಕೊನೆ ಬ್ರಾಹ್ಮಣ, ಆಕಾಶ ದೇವರು, ನಗ್ನಮುನಿಯ ಸಮಗ್ರ ಕತೆಗಳು ಎಂಬ ಕೃತಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರ ಅಧ್ಯಯನದ ವಿಷಯ'ಮಾತಂಗ ಮಾದಿಗರ ಸಂಸ್ಕೃತಿ' ಎಂಬುದಿಲ್ಲಿ ಗಮನಾರ್ಹ. ಆಂಧ್ರದ ಶ್ರೀಶ್ರೀ ಕಾವ್ಯ ಪುರಸ್ಕಾರ, ದೆಹಲಿಯ ದಲಿತ ಸಾಹಿತ್ಯ ಪರಿಷತ್ ಪ್ರಶಸ್ತಿ, ದು.ನಿಂ. ಬೆಳಗಲಿ ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಪ್ರಶಸ್ತಿಗಳು ಈಗಾಗಲೇ ಅವರಿಗೆ ಸಂದಿವೆ.ಅವರಿಗೆ ಶುಭಾಶಯ ಹೇಳೋಣ.

- ಹರೀಶ್ ಕೇರ
harishkera@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments