ಪರಿಪೂರ್ಣತೆಯ ಪ್ರತಿಬಿಂಬ
ಹೀಗೆ ಮುಬಾರಕ್ ಅಲಿಯವರ ದಟ್ಟ ಪ್ರಭಾವದಿಂದ ಉಸ್ತಾದ್ ಅಲ್ಲಾದಿಯಾ ಖಾನ್ ತಮ್ಮ ವಿಶಿಷ್ಟ ಶೈಲಿಯ ಗಾಯನವನ್ನು ಬೆಳೆಸಿಕೊಂಡು ಅವರ ನೆನಪಿಗಾಗಿಯೇ ಅದನ್ನು 'ಜೈಪುರ ಶೈಲಿ' - 'ಜೈಪುರ ಘರಾಣಾ' ಎಂದು ಹೆಸರಿಸಿದರು. ಒಂದು ಗಾಯನ ಶೈಲಿ 'ಘರಾಣಾ' ಎಂದು ಗುರುತಿಸಿಕೊಳ್ಳಬೇಕಾದರೆ 3-4 ತಲೆಮಾರಾದರೂ ಆ ಶೈಲಿ ಹರಿದುಬರಬೇಕು. ಆದರೆ 'ಜೈಪುರ ಶೈಲಿ' ಮಾತ್ರ ಕೇವಲ ಒಬ್ಬ ಕಲಾವಿದ - ಉಸ್ತಾದ್ ಅಲ್ಲಾದಿಯಾ ಖಾನರ ಕಾಲದಲ್ಲಿಯೇ ಒಂದು ಪ್ರತ್ಯೇಕ ಘರಾಣೆಯ ಪಟ್ಟಕ್ಕೆ ಏರಿದ್ದನ್ನು ನೋಡಿದರೆ, ಅಲ್ಲಾದಿಯಾ ಖಾನರು ಎಂಥ ಬುದ್ಧಿವಂತ, ಚಾಣಾಕ್ಷ ಹಾಗೂ ಚತುರ ಕಲಾವಿದರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.
ಸ್ಪಷ್ಟವಾದ 'ಆ'ಕಾರದ ಉಚ್ಚಾರಣೆ, ಪಾದರಸದಂತೆ ಸದಾ ಲವಲವಿಕೆಯ ಶೈಲಿಯಲ್ಲಿ ಒಂದು ಸ್ವರಸಮೂಹಕ್ಕೆ ಇನ್ನೊಂದನ್ನು ಜೋಡಿಸುತ್ತ ಬಳ್ಳಿಯ ಹಾಗೆ ಬೆಳೆಸುತ್ತ ಹೊರಟರೆ ಕೇಳುಗನ ಮನಸ್ಸು ನಿರಾತಂಕವಾಗಿ ಅದರಲ್ಲಿ ಲೀನವಾಗಿಬಿಡುತ್ತದೆ. 'ಲಯ' ಎನ್ನುವ ಹಗ್ಗವನ್ನು ಹಿಡಿದು ಅದರ ಗುಂಟ ಗಾಯನವನ್ನು ಬೆಳೆಸುವ ಅವರ ವಿಧಾನವೇ ಬಹು ಆಕರ್ಷಕ. ಅವರ ಗಾಯನಕ್ಕೂ ಹಾಗೂ ಅವರು ಬಳಸುವ 'ಲಯ'ಕ್ಕೂ ಅವಿನಾಭಾವ ಸಂಬಂಧವಿದೆ. ಹೀಗಾಗಿ ಜೈಪುರ ಘರಾಣೆಯ ಕಲಾವಿದರು ತಬಲಾ ಸಾಥ್ ಸಂಗತ್ ಆಯ್ದುಕೊಳ್ಳುವಾಗ ಬಹಳ ಎಚ್ಚರಿಕೆಯಲ್ಲಿರುತ್ತಾರೆ. ಅವರ ಜೊತೆ ನುಡಿಸಿ ಅಭ್ಯಾಸವಿರುವವರನ್ನೇ ಸಾಥಿಗೆ ಬಳಸಿಕೊಳ್ಳುತ್ತಾರೆ. ಅವರ ನಿಷ್ಠೆ, ತಯಾರಿ, ರಿಯಾಜ್, ವ್ಯವಸ್ಥಿತವಾದ ಪೂರ್ವತಯಾರಿ ಯಾರಾದರೂ ಅಳವಡಿಸಿಕೊಳ್ಳುವಂಥದ್ದು. ಸಂಗೀತದ ವಿಷಯದಲ್ಲಿ ಹೇಗಾದರೂ ಸರಿ, ಏನಾದರೂ ಸರಿ, ಅವರಾದರೂ ಸರಿ - ಎಂಬಂತಹ ಪದಗಳು ಅವರ ನಿಘಂಟಿನಲ್ಲೇ ಇಲ್ಲವೇನೋ. ಉಸ್ತಾದ್ ಅಲ್ಲಾದಿಯಾ ಖಾನರ ರಿಯಾಜ್ ಹೇಗಿರುತ್ತಿತ್ತು ಎನ್ನುವ ಒಂದು ಘಟನೆಯನ್ನು ಪ್ರಸಿದ್ಧ ಸಂಗೀತ ವಿದ್ವಾಂಸ ಗೋವಿಂದರಾವ್ ಟೇಂಬೆ ಅವರು ತಮ್ಮ ಪುಸ್ತಕದಲ್ಲಿ ಹೀಗೆ ಉಲ್ಲೇಖಿಸಿದ್ದಾರೆ.
ಉಸ್ತಾದರು ಕೊಲ್ಹಾಪುರದಲ್ಲಿ ಇರುತ್ತಿದಾಗಿನ ವಿಷಯ. ಟೇಂಬೆಯವರೊಮ್ಮೆ ಯಾವುದೋ ಸಂಗೀತ ನಾಟಕವನ್ನು ನೋಡಲೆಂದು ರಾತ್ರಿ ಹೊರಟಿದ್ದರು. ಅವರು ಉಸ್ತಾದ್ ಅಲ್ಲಾದಿಯಾ ಖಾನರ ಮನೆಯ ಮುಂದೆಯೇ ಹಾದು ಹೋಗಬೇಕಾಗಿತ್ತು. ಹಾಗೆ ಹೋಗುತ್ತಿರುವಾಗ ಟೇಂಬೆಯವರಿಗೆ ಉಸ್ತಾದರು ರಿಯಾಜ್ ಮಾಡುತ್ತಿರುವದು ಕೇಳಿಬಂತು. ಸಹಜವಾಗಿ ಅವರು ಕ್ಷಣಕಾಲ ಅವರ ರಿಯಾಜ್ ಕೇಳಲೆಂದು ಅಲ್ಲೇ ನಿಂತುಕೊಂಡರು. ಖಾನ್ ಸಾಹೇಬರು ಒಂದು ಉದ್ದವಾದ ತಾನನ್ನು ಹಿಡಿದುಕೊಂಡು ಅದನ್ನೇ ಹಾಡುತ್ತಿದ್ದರು. ಐದು ನಿಮಿಷ, ಹತ್ತು ನಿಮಿಷ, ಹದಿನೈದು ನಿಮಿಷಗಳಾದರೂ ಅದನ್ನೇ ಹಾಡುತ್ತಿದ್ದರು. ಅದೊಂದನ್ನೇ ಕೇಳಿಕೇಳಿ ಸುಸ್ತಾಗಿ ಟೇಂಬೆಯವರು ನಾಟಕ ನೋಡಲು ಹೊರಟು ಹೋದರು. ಆಗಿನ ಕಾಲದ ನಾಟಕ - ಕನಿಷ್ಠ ಐದಾರು ಗಂಟೆಗಳಾದರೂ ಆಗಿದ್ದಿತು. ಆ ನಾಟಕ ಮುಗಿಸಿ ಟೇಂಬೆಯವರು ಮರಳಿ ಮನೆಗೆ ಹೊರಟು ಮತ್ತೆ ಖಾನ್ ಸಾಹೇಬರ ಮನೆಯ ಮುಂದೆ ಬಂದರೆ ಆಗಲೂ ಖಾನ್ ಸಾಹೇಬರ ರಿಯಾಜ್ ನಡೆಯುತ್ತಲೇ ಇತ್ತು ಮತ್ತು ಮಹತ್ವದ ವಿಷಯವೆಂದರೆ 'ಖಾನ್ ಸಾಹೇಬರು ಅದೇ ತಾನನ್ನು ರಿಯಾಜ್ ಮಾಡುತ್ತಿದ್ದರು'! ಇಂತಹ ಮಹಾನ್ ಪರಿಪೂರ್ಣತಾವಾದಿ ಅವರು.
ಅವರ ಶಿಷ್ಯರಲ್ಲಿ ಅಗ್ರಮಾನ್ಯರಾದ ಸುರಶ್ರೀ ಕೇಸರಬಾಯಿ ಕೇರ್ಕರ, ಶ್ರೀಮತಿ ಮೂಗುಬಾಯಿ ಕುರುಡೀಕರ್ ಕೂಡ ಹೀಗೆಯೇ. ಇದೇ ಹಠ, ಮಾನಸಿಕ ಸ್ಥೈರ್ಯ, ಶ್ರದ್ಧೆ, ಸದಾ ಪರಿಪೂರ್ಣತೆಯೆಡೆಗೆ ಲಕ್ಷ್ಯ , ಸಾಧನೆ , ಸಾಧನೆ, ಸಾಧನೆ....
ಸುರಶ್ರೀ ಕೇಸರಬಾಯಿಯವರಂತೂ - ಅವರ ಆಲಾಪನೆಗಳು ಹಾಗೂ ತಾನು ಪಲಟಾಗಳು ಎಷ್ಟು ದೀರ್ಘ್ಘವಾಗಿರುತ್ತಿದ್ದವು ಎಂದರೆ, ಕೇಳುತ್ತ ಕೇಳುತ್ತ ಕುಳಿತವರಿಗೇ ನಡುಕ ಬರುತ್ತಿತ್ತು. ಒಮ್ಮೆ ಸಮ್ನಿಂದ ಉಸಿರು ತೆಗೆದುಕೊಂಡು ಹಾಡಲು ಪ್ರಾರಂಭಿಸಿದರೆಂದರೆ ಮೂರು ಸಪ್ತಕದಲ್ಲಿ ಲೀಲಾಜಾಲವಾಗಿ ಹಾಡುತ್ತ ಹಾಡುತ್ತ ಆವರ್ತನವಿಡೀ ಹಾಡಿ ಮತ್ತೆ ಮುಖಡಾವನ್ನೆತ್ತಿ ಸಮ್ಗೆ ಬಂದಾಗಲೇ ಹೊಸ ಉಸಿರಿನ ಬಗ್ಗೆ ಯೋಚನೆ ಅಂಥ ಅಪೂರ್ವ ದಂಸಾಸ್ ಅವರದ್ದು. (ಮುಂದುವರಿಯುವುದು)
= ಶ್ರುತಿ ಭಟ್
shrutikbhat@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.