ಪಾತಾಳ ಗರಡಿ
ಕೆಲವು ಕಟುಮಧುರ ನೆನಪುಗಳನ್ನು, ಬಹುಮಂದಿ ಮಾಡುವಂತೆ, ಮನಸ್ಸಿನ ಹಗೇವಿನಲ್ಲಿ ಹುಗಿದಿಡುವುದೇ ಲೇಸೇನೊ. ಸಾರ್ವಜನಿಕವಾಗಿ ಬಿಚ್ಚಿಟ್ಟರೆ, ಅವುಗಳ ಖಾಸಗೀತನ, ಮಾಧುರ್ಯ, ಪಾವಿತ್ರ್ಯ ಮುಕ್ಕಾಗಬಹುದು. ಆದರೆ ಸಾಹಿತಿಗೆ ಆ ಸೌಲಭ್ಯವೆಲ್ಲಿ? ಅವನ ಬರವಣಿಗೆಯ ಮೂಲದ್ರವ್ಯ ಅವನ ಸ್ವಾನುಭವ ಮತ್ತು ಅವನ ಅಂತರಂಗವೇ ತಾನೆ? ಒಮ್ಮೊಮ್ಮೆ ಇಕ್ಕಟ್ಟಿಗೆ, ಪೇಚಿಗೆ ಸಿಕ್ಕಿಬೀಳುವ ಸಂದರ್ಭ ಇದ್ದದ್ದೇ. ನನ್ನ ಮಟ್ಟಿಗೆ ಆದದ್ದೂ ಇದೇ. ಮದುವೆಯಾಗಿ ಒಂದೆರಡು ತಿಂಗಳಷ್ಟೇ ಆಗಿದ್ದವು. ಶಿವಮೊಗ್ಗದ ತನ್ನ ತುಂಬು ತವರುಮನೆ ಬಿಟ್ಟು, ದೂರದ ನನ್ನೂರಿಗೆ, ನನ್ನ ತುಂಬಿದ ಮನೆಗೆ ಬಂದು, ಗಿರಿಜ ಎಲ್ಲರೊಂದಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದಳು. ನನ್ನ ತಂದೆ ತಾಯಿಗೆ, ತಂಗಿಯರಿಗೆ ಅಚ್ಚುಮೆಚ್ಚಾಗಿದ್ದಳು. ನನಗಂತೂ ಬಿಡಿ, ನಾನು ಮೆಚ್ಚಿ ಕೈಹಿಡಿದ ಹೆಣ್ಣು.
ಸದಾ ಲವಲವಿಕೆಯಿಂದಿರುತ್ತಿದ್ದ ಗಿರಿಜ ಒಂದು ದಿನ ಯಾಕೋ ಮಂಕಾದಳು. ತವರಿನ ನೆನಪಾಗಿರಬಹುದು ಅಂದುಕೊಂಡೆ. ಆದರೆ ಮನೆಯಲ್ಲಿ ಎಲ್ಲರೊಂದಿಗೆ ನಗುನಗುತ್ತ ಮಾತಾಡುತ್ತಿದ್ದಳು. ನನ್ನೊಂದಿಗೆ ಮಾತ್ರ ಮೌನ. ಏಕಾಂತದಲ್ಲಿ ಬಿರುನೋಟ, ನಿಟ್ಟುಸಿರು. ರಾತ್ರಿ ಹಾಸಿಗೆಯಲ್ಲಿ ಕೊಸರಾಡಿದರೆ ನನಗೆ ಬೆನ್ನು. ಇದೇಕೆ ಹಟಾತ್ತನೆ ಹೀಗೆ? ಕಂಗಾಲಾದೆ. ಈ ನಿಷ್ಕಾರಣ ಶಿಕ್ಷೆಗೆ ಮನ ಮುದುಡಿತು. ಒಂದೆರಡು ದಿನ ಗಿರಿಜಳ ಮೌನ ಸತ್ಯಾಗ್ರಹ ಮುಂದುವರಿದಿತ್ತು. ತಾಳಲಾರದೆ, ಒಂದು ಸಂಜೆ ಒತ್ತಾಯಿಸಿ ವಾಯುವಿಹಾರಕ್ಕೆಂದು ಊರಾಚೆಯ ಗುಡ್ಡಕ್ಕೆ ಕರೆದೊಯ್ದೆ. ಏಕಾಂತ ಸ್ಥಳ. ಒಂದು ಬಂಡೆಯ ಮೇಲೆ ಕೂತೆವು. ಮುಖ ಊದಿಸಿಕೊಂಡು, ದಿಗಂತದಲ್ಲಿ ದೃಷ್ಟಿ ನೆಟ್ಟು, ಗಿರಿಜ ಮೌನ ವಹಿಸಿದ್ದಳು. ನಾನೇ ಮೌನ ಒಡೆದೆ.
'ಇದ್ಯಾಕೆ ಇದ್ದಕ್ಕಿದ್ದ ಹಾಗೆ ಹೀಗಾಡ್ತಿದ್ದೀಯ? ನಾನೇನು ಮಾಡಿದೆ ಅಂಥಾ ಅಪರಾಧ?'
ಗಿರಿಜಳ ಮೌನ...
'ಅದೇನೂಂತ ಬಾಯಿ ಬಿಟ್ಟು ಹೇಳಬಾರದ? ನನಗೆ ತಿಳಿಯೋದಾದರೂ ಹೇಗೆ?'
ಗಿರಿಜಳ ಕಣ್ಣಂಚಿನಲ್ಲಿ ನೀರು.
'ಸರಿ ಬಿಡು, ಹೇಳ್ಬೇಡ. ಹೀಗೇ ಸಂಕಟ ಅನುಭವಿಸುತ್ತಾನೇ ಇರೋಣ ಇಬ್ಬರೂನೂ'
ಸರಕ್ಕನೆ ನನ್ನತ್ತ ಮುಖ ಹೊರಳಿಸಿ, ಕಣ್ಣಲ್ಲಿ ಕಣ್ಣು ನೆಟ್ಟು, ದುರುಗುಟ್ಟುತ್ತ, ಗಿರಿಜ ಸಿಡಿದಳು, 'ನೀವು ಇಂಥವರೂಂತ ನನಗೆ ಗೊತ್ತಿರಲಿಲ್ಲ'
ನಾನು ತಬ್ಬಿಬ್ಬು.
'ಇಂಥವನೂಂದರೆ...?'
'ನಾಟಕ ಆಡಬೇಡಿ, ನೀವು ಬರೆದಿಟ್ಟೀದ್ದೀರಲ್ಲ ಕಂತೆಗಟ್ಟಲೆ ನಿಮ್ಮ ಪ್ರೇಮ ಪ್ರಕರಣಗಳನ್ನು, ರಾಸಲೀಲೆಗಳನ್ನು, ಅದನ್ನೆಲ್ಲ ನಾನು ಓದಿಬಿಟ್ಟೆ..'
'ಓ ಅದಾ?'
'ಅದೇ..'
ನಾನು ಪೆಚ್ಚಾದೆ. ನನ್ನ ಡೈರಿ ಇವಳ ಕೈಗೆ ಸಿಕ್ಕಿ ಆಯಿತಲ್ಲ ಪರಮವೈರಿ ಅಂದುಕೊಂಡು ಕೈಕೈ ಹಿಸುಕಿಕೊಂಡೆ.
ಡೈರಿಯಲ್ಲಿದ್ದದ್ದು ನನ್ನವಳ ಮಟ್ಟಿಗೆ ಭಾರೀ ಸ್ಫೋಟಕ. ಆದರೆ ನನ್ನ ಪುಸ್ತಕಗಳ ರಾಶಿಯಲ್ಲಿ ಅವಳು ಅದನ್ನು ಹುಡುಕಿ ತೆಗೆದ್ದಾದರೂ ಹೇಗೆ? ಯಾವಾಗ? ಇಂಥ ಪತ್ತೇದಾರಿ ವಿಚಾರಗಳಲ್ಲಿ ಹೆಣ್ಣು ಎಂಥ ನಿಶಿತಮತಿ ಎಂದು ಮೂಕವಿಸ್ಮಿತನಾದೆ.
ಡೈರಿಯಲ್ಲಿದ್ದದ್ದು ನನ್ನ ಪೂರ್ವಾಶ್ರಮದ ಎರಡು ಪ್ರಣಯ ಪ್ರಸಂಗಗಳು. ಸವಿವರವಾಗಿ, ಸಾದ್ಯಂತವಾಗಿ ದಾಖಲಾಗಿದ್ದ ಆ ರಸಘಟ್ಟಗಳ ಸಾರಾಂಶ ಇಷ್ಟು:
ಮದುವೆಗೆ ಮುಂಚೆ ಇಬ್ಬರು ಹುಡುಗಿಯರನ್ನು ನಾನು ಗಾಢವಾಗಿ ಪ್ರೀತಿಸಿದ್ದೆ, ಒಟ್ಟಿಗೆ ಅಲ್ಲ, ಕಾಲಾನುಕ್ರಮದಲ್ಲಿ. ಆ ಇಬ್ಬರೂ ನಾನು ಇಂಗ್ಲಿಷ್ ಮೇಸ್ಟರಾಗಿದ್ದ ಖಾಸಗಿ ಪ್ರೌಢಶಾಲೆಯಲ್ಲಿ ನನ್ನ ವಿದ್ಯಾರ್ಥಿನಿಯರಾಗಿದ್ದರು. ಹದಿಹರೆಯದ ಭಾವತೀವ್ರತೆಯ ರೊಮ್ಯಾಂಟಿಕ್ ವಯಸ್ಸಿನಲ್ಲಿದ್ದ ಅವರಿಗೆ ಕವಿಯೂ, ಗಾಯಕನೂ, ಆಧುನಿಕ ಕ್ರಾಂತಿಕಾರಿ ಮನೋಧರ್ಮದವನೂ, ನವತರುಣನೂ ಆಗಿದ್ದ ನಾನು ಆದರ್ಶಪ್ರಾಯನಾಗಿ ಕಂಡಿದ್ದರೆ ಆಶ್ಚರ್ಯವೇನೂ ಇಲ್ಲ. ಒಟ್ಟಾರೆ ಅವರು ನನ್ನಲ್ಲಿ ಅನುರಕ್ತರಾಗಿದ್ದದ್ದು ನಿಜ.
ಮೊದಲನೆಯವಳ ಹೆಸರು.. ಬೇಡ ಬಿಡಿ, ಇಂದಿಗೂ ಅವರ ಹೆಸರು ಎತ್ತಿದರೆ ನನ್ನಾಕೆ ಕಾದ ಬಾಂಡಲೆಯ ಸಾಸಿವೆಯಾಗುತ್ತಾಳೆ. ಬೇಕಿದ್ದರೆ ಶಕು ಎಂದಿಟ್ಟುಕೊಳ್ಳೋಣ. ಆ ಹೆಸರಲ್ಲೇ ಅವಳು ನನ್ನ ಹಲವು ಪ್ರಾರಂಭಿಕ ಪ್ರೇಮಕವಿತೆಗಳ ನಾಯಕಿ. ನಮ್ಮಿಬ್ಬರ ನಡುವಿನ ಪ್ರೀತಿ ಎಷ್ಟು ತೀವ್ರವಾಗಿತ್ತೆಂದರೆ, ನಾನು ಶತಾಯ ಗತಾಯ ಅವಳನ್ನು ಮದುವೆಯಾಗಬೇಕೆಂದು ಹರಸಾಹಸ ಮಾಡಿದೆ. ಅವಳ ತಂದೆ ತಾಯಿಗೆ ನಾನು ಇಷ್ಟವಾಗಿದ್ದೆನಾದಾರೂ ನನ್ನ ತಂದೆಗೆ ಅವಳ ಮನೆತನ ಇಷ್ಟವಿರಲಿಲ್ಲ. ಹಲವು ಕುಟಿಲೋಪಾಯಗಳ ಮೂಲಕ ಅವರು ನಮ್ಮ ಮದುವೆಗೆ ಕಲ್ಲು ಹಾಕಿದರು. ಅಸಹಾಯಕಳಾದ ಶಕು ತನ್ನ ತಂದೆ ತಾಯಿ ನಿಷ್ಕರ್ಷಿಸಿದ ಗಂಡೊಂದನ್ನು ಮದುವೆಯಾಗಿ, ನನ್ನಿಂದ ದೂರವಾದಳು. ಹಲವು ವಿರಹ, ವಿಷಾದ ಗೀತೆಗಳಿಗೆ ಕಾರಣಳಾದಳು.
ಇನ್ನೊಬ್ಬ ಹುಡುಗಿ ಲೊಲೀಟ. ಅವಳಿನ್ನೂ ಹದಿನಾರರ ದೋರೆಗಾಯಾಗಿದ್ದ ಕಾಲಕ್ಕೆ ನನಗಾಗಲೇ ಇಪ್ಪತ್ತೇಳು. ಆದರೂ ನನ್ನನ್ನು ಗಾಢವಾಗಿ ಹಚ್ಚಿಕೊಂಡಿದ್ದಳು. ಕ್ರಮೇಣ ನಾನೂ ಅವಳ ಪ್ರೀತಿಯ ಹುಚ್ಚಿಗೆ ಬಿದ್ದೆ. ಊರಿನ ಗೋಡೆಗಳ ಮೇಲೆಲ್ಲ ನಮ್ಮಿಬ್ಬರ ಹೆಸರು ಪ್ಲಸ್ ಮಾರ್ಕಿನೊಂದಿಗೆ ರಾರಾಜಿಸಿ, ನಾನು ಶಾಲೆಯ ನೌಕರಿಗೆ ರಾಜೀನಾಮೆ ಕೊಡಬೇಕಾಗಿ ಬಂತು. ಸ್ವಂತ ಟ್ಯುಟೋರಿಯಲ್ ಪ್ರಾರಂಭಿಸಿದೆ. ಅವಳು ತನ್ನ ಮನೆಯವರ ಒತ್ತಡಗಳನ್ನು ತಾಳಲಾರದೆ ಬೇರೊಬ್ಬನನ್ನು ಮದುವೆಯಾಗಿ, ನನ್ನಿಂದ ದೂರ ಸರಿದಳು. ಅನತಿ ಕಾಲದಲ್ಲೇ ಗಿರಿಜಳೊಂದಿಗೆ ನನ್ನ ಮದುವೆಯಾಯಿತು.
ಆ ಹುಡುಗಿಯರೊಂದಿಗೆ ನನಗಿದ್ದದ್ದು ಪರಿಶುದ್ಧ ಪ್ರೇಮ ಸಂಬಂಧ ಮಾತ್ರ. ಒಂದಷ್ಟು ನಿರಪಾಯಕಾರಿ ಬಿಸಿಯಪ್ಪುಗೆ, ಸವಿಮುತ್ತುಗಳ ಹೊರತಾಗಿ, ಅಲ್ಲಿ ಕಾಮದ ಕಿಲುಬು ಲವಲೇಶವೂ ಇರಲಿಲ್ಲ. ಅಂಥ ಉದ್ದೇಶವೇ ನಮಗಿರಲಿಲ್ಲ. ನಾನು ಆ ಪ್ರಕರಣಗಳನ್ನು ಯಾವುದೇ ಅಪರಾಧಿ ಭಾವನೆ, ಪಶ್ಚಾತ್ತಾಪಗಳಿಲ್ಲದೆ ನಿಸ್ಸಂಕೋಚವಾಗಿ ಸಾದ್ಯಂತ ಬರೆದಿಟ್ಟಿದ್ದೆ, ಆ ಗಳಿಗೆಗಳು ನೆನಪಿನಿಂದ ಮಾಸಿ ಹೋಗದಂತೆ ಕಾಪಾಡಲು. ಇದೀಗ ಆ ನನ್ನ ಗುಪ್ತನಿಧಿ ನನ್ನವಳ ಕೈಗೆ ಸಿಕ್ಕಿ ರಾದ್ಧಾಂತಕ್ಕೆ ಕಾರಣವಾಗಿತ್ತು.
'ಹಾಗ್ಯಾಕೆ ಪೆಚ್ಚಾಗಿ ಕೂತುಬಿಟ್ರಿ, ಗುಟ್ಟುಗಳೆಲ್ಲ ರಟ್ಟಾದ್ದಕ್ಕೆ ಆಘಾತವಾಯ್ತ?'
'ಇದರಲ್ಲಿ ಗುಟ್ಟೇನು ಬಂತು. ನಾನೇ ಅದನ್ನೆಲ್ಲ ಸಂದರ್ಭ ನೋಡಿ ನಿನಗೆ ಹೇಳಬೇಕು ಅಂದ್ಕೊಂಡಿದ್ದೆ'
'ಯಾಕೆ, ಮದುವೆಗೆ ಮುಂಚೇನೇ ಹೇಳಬಹುದಿತ್ತಲ್ಲ? ಹೇಳಿದ್ದರೆ ಇಷ್ಟೆಲ್ಲ ರಾದ್ಧಾಂತವೇ ಇರ್ತಿರಲಿಲ್ಲ. ನಾನು ನಿಮ್ಮನ್ನು ಮದುವೇನೇ ಆಗ್ತಿರಲಿಲ್ಲ'
'ಅಂಥಾದ್ದೇನು ಆಗಿರೋದು, ಯಾಕಷ್ಟು ತಲೆ ಕೆಡಿಸಿಕೊಂಡಿದ್ದೀಯ?'
'ಇನ್ನೂ ಏನಾಗಬೇಕಿತ್ತು? ನಾನು ಮೋಸ ಹೋದೆ. ನೀವು ಇಂಥವರೂಂತ ಗೊತ್ತಿರಲಿಲ್ಲ'
'ಅಯ್ಯೋ ರಾಮಚಂದ್ರ..'
'ರಾಮಚಂದ್ರನ ಹೆಸರೇಕೆ ಎತ್ತುತ್ತೀರಿ? ಕೃಷ್ಣಾ..ಗೋವಿಂದಾ.. ಅನ್ನಿ'
ಅಂಥ ಸನ್ನಿವೇಶದಲ್ಲೂ ನನ್ನಲ್ಲಿ ನಸುನಗು ಮೂಡಿ, ಮನಸ್ಸು ಕೊಂಚ ಸಡಿಲಾಯಿತು.
'ಗಿರಿಜಾ, ನೀನು ಶಿವಮೊಗ್ಗದಂಥ ದೊಡ್ಡ ನಗರದಲ್ಲಿ ಹುಟ್ಟಿ ಬೆಳೆದೋಳು, ಕಾಲೇಜು ಓದಿದೋಳು. ಇಷ್ಟು ಸಣ್ಣ ವಿಷಯಕ್ಕೆ ಹೀಗೆಲ್ಲ ಹಾರಾಡ್ತೀಯಾಂತ ಅಂದುಕೊಂಡಿರಲಿಲ್ಲ'
'ಇದು ಸಣ್ಣ ವಿಷಯಾನಾ? ಛೀ, ಹೇಳಲಿಕ್ಕೇ ಅಸಹ್ಯವಾಗುತ್ತೆ. ಆ ನಾಚಿಕೆಗೆಟ್ಟ ಹುಡುಗಿಯರನ್ನು ನೀವು ಅಪ್ಪಿಕೊಂಡಿದ್ದೀರಿ.. ಮುತ್ತು ಕೊಟ್ಟಿದ್ದೀರಿ..ಇನ್ನೂ ಏನೇನು ಮಾಡಿದ್ದೀರೋ ಆ ದೇವರೇ ಬಲ್ಲ'
'ಹಾಗೇನಾದರೂ ಮಾಡಿದ್ದರೆ ಅದೂ ಡೈರೀಲಿ ಇರ್ತಾ ಇತ್ತಲ್ಲ'
'ಹ್ಯಾಗೆ ನಂಬೋದು? ಯಾರನ್ನು ನಂಬಿದರೂ ಕವಿಗಳನ್ನು ನಂಬಬಾರದೂಂತ ನನ್ನ ಫ್ರೆಂಡ್ ಹೇಳ್ತಿದ್ದದ್ದು ನಿಜವಾಯಿತು. ನಿಮ್ಮದು ನಿಷ್ಕಲ್ಮಶ ಹೃದಯ ಅಂತ ತಿಳಿದು ಮೋಸ ಹೋದೆ'
'ಅದೆಲ್ಲಾ ಹಳೇಕತೆ. ಅವರಿಬ್ಬರೂ ಮದುವೆಯಾಗಿ ಸುಖವಾಗಿದ್ದಾರೆ. ನಾನು ಅವರನ್ನು ಮರೆತುಬಿಟ್ಟಿದ್ದೀನಿ'
'ಮರೆಯುವ ಮನಸ್ಸಿದ್ದಿದ್ದರೆ ಅದನ್ನೆಲ್ಲ ಬರೆದು ಯಾಕೆ ಇಡುತ್ತಿದ್ದಿರಿ?'
'ಮುಂದೆ ನನ್ನ ಕತೆ, ಕವನಕ್ಕೆ ವಸ್ತುವಾಗಬಹುದೂಂತ ಅಷ್ಟೆ'
'ನಾನು ನಿಮ್ಮ ಆ ಡೈರೀನ ಮೊನ್ನೇನೇ ನೀರೊಲೆಗೆ ಹಾಕಿ ಸುಟ್ಟುಬಿಟ್ಟೆ'
ಹೃದಯಕ್ಕೆ ಛಕ್ಕಂತ ಇರಿದ ಹಾಗಾಯಿತು. ಆದರೂ ತೋರಿಸಿಕೊಳ್ಳದೆ ಸಾವರಿಸಿಕೊಂಡು ಹೇಳಿದೆ, 'ಹೌದಾ? ಒಳ್ಳೇದೇ ಆಯಿತು'
ಈ ಪ್ರತಿಕ್ರಿಯೆ ನನ್ನಾಕೆಗೆ ಅನಿರೀಕ್ಷಿತವಾಗಿತ್ತೂಂತ ಕಾಣುತ್ತೆ. 'ಏನು, ಡೈರೀನ ನಾನು ಸುಟ್ಟಿದ್ದಕ್ಕೆ ನಿಮಗೆ ಕೋಪಾನೇ ಇಲ್ಲವ? ಬೇಜಾರೇ ಆಗಲಿಲ್ಲವ?'
'ಬೇಜಾರೇಕೆ? ನಿನ್ನ ಮನಸ್ಸಿಗೆ ಸಮಾಧಾನವಾಗಿದ್ದರೆ ನನಗಷ್ಟೇ ಸಾಕು'
ಗಿರಿಜ ಮೆತ್ತಗಾದಳು. 'ನಿಜ ಹೇಳಿ, ನೀವು ಅವರಿಬ್ಬರನ್ನೂ ನಿಜವಾಗಿಯೂ ಮರೆತುಬಿಟ್ಟಿದ್ದೀರಾ?'
'ನಿನ್ನಾಣೆಗೂ. ಈಗ ನನ್ನ ಹೃದಯ ಸಿಂಹಾಸನದಲ್ಲಿ ಸ್ಥಾನ ನಿನಗೊಬ್ಬಳಿಗೆ ಮಾತ್ರ'
'ಸದ್ಯಕ್ಕೆ..'
'ಸದ್ಯಕ್ಕಲ್ಲ, ಸದಾ ಕಾಲಕ್ಕೆ'
ಚಂಡಮಾರುತ ಸ್ತಬ್ಧವಾದಂತಾಗಿ ಹೃದಯೇಶ್ವರಿ ಪ್ರಸನ್ನವದನಳಾದಳು. ಹತ್ತಿರ ಸರಿದು ಕೇಳಿದೆ, 'ಈಗಲಾದರೂ ಸಮಾಧಾನವಾಯಿತಾ? ಕೋಪ ಹೋಯಿತು, ತಾನೆ?'
'ನಿಜವಾಗಲೂ ಕೋಪ ಬಂದಿತ್ತು, ಕಣ್ರೀ. ಜೀವನವೇ ಜಿಗುಪ್ಸೆಯಾಗಿತ್ತು. ಶಿವಮೊಗ್ಗಕ್ಕೆ ವಾಪಸ್ಸು ಹೋಗಿಬಿಡಬೇಕೂಂತಿದ್ದೆ'
'ಹೌದಾ?'
'ಹೋಗಿ, ಅಲ್ಲಿ ನಾನು ಓದುತ್ತಿದ್ದೆನಲ್ಲ ಕ್ರಿಶ್ಚಿಯನ್ ಕಾನ್ವೆಂಟು, ಅಲ್ಲಿ ಸನ್ಯಾಸಿನಿ ಆಗಿಬಿಡಬೇಕು ಅಂತಿದ್ದೆ'
'ಮಾರಾಯ್ತಿ, ಹಾಗೇನಾದ್ರೂ ಮಾಡಿದ್ದಿದ್ರೆ ನನ್ನ ಗತಿ? ನಿನ್ನ ಹೊಟ್ಟೇಲಿ ಬೆಳೀತಿದೆಯಲ್ಲ ನಮ್ಮ ದಾಂಪತ್ಯದ ಫಲ...ಅದರ ಗತಿ?'
'ಅದಕ್ಕೇ ಸುಮ್ಮನಾದೆ' ಎಂದು ನಾಚಿ, ಕೆಂಪೇರಿ, ತಲೆ ತಗ್ಗಿಸಿದಳು. ಕೆನ್ನೆಗೆ ಹೂಮುತ್ತು ಕೊಟ್ಟೆ. ರಾಜಿಯಾಯಿತು.
ಮನೆಗೆ ಹಿಂತಿರುಗುತ್ತ, ಗಿರಿಜಳನ್ನು ಕಿಚಾಯಿಸಲೆಂದು ಕೇಳಿದೆ, 'ಅಂದ ಹಾಗೆ, ಗಿರಿಜಾ, ಕೋಪ ಮಾಡ್ಕೋಬೇಡ, ನಿಜ ಹೇಳು. ನಮ್ಮ ಮದುವೆಗೆ ಮುಂಚೆ ನೀನು ಯಾರನ್ನೂ ಪ್ರೀತಿಸಿರಲಿಲ್ಲವಾ?'
ಥಟ್ಟನೆ ನಿಂತು, ತುಟಿ ಕೊಂಕಿಸಿ, ಅವಳೆಂದಳು, 'ನನ್ನದು ಅಂಥ ಮನೆತನವಲ್ಲ'
'ಮನೆತನಕ್ಕೂ ಇದಕ್ಕೂ ಏನು ಸಂಬಂಧ?'
'ಸಂಬಂಧವಿದೆ. ಇತ್ತೀಚೆಗಷ್ಟೇ ಗೊತ್ತಾಯಿತು, ನಿಮ್ಮ ತಂದೆಗೆ ಇಬ್ಬರು ಹೆಂಡತಿಯರಂತೆ, ಹೌದಾ?'
ಓ, ಇವಳು ಸಾಮಾನ್ಯಳಲ್ಲ, ಪಾತಾಳ ಗರಡಿ ಅನ್ನಿಸಿ ತೆಪ್ಪಗಾದೆ.
ಬಿ.ಆರ್ ಲಕ್ಷಣ್ ರಾವ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.