ಬದುಕೊಂದು ಬಂದೀಖಾನೆ
ಚಿತ್ರ: ದಿ ಗ್ರೇಟ್ ಎಸ್ಕೇಪ್ (1963)
ಭಾಷೆ: ಜರ್ಮನ್, ಇಂಗ್ಲಿಷ್
ನಿರ್ದೇಶನ: ಜಾನ್ ಸ್ಟರ್ಜಸ್
ಅವಧಿ: 172 ನಿಮಿಷ
ತಾರಾಗಣ: ಸ್ಟೀವ್ ಮೆಕ್ಕ್ವೀನ್, ಜೇಮ್ಸ್ ಗಾರ್ನರ್, ರಿಚರ್ಡ್ ಅಟೆನ್ಬರೋ, ಜೇಮ್ಸ್ ಡೊನಾಲ್ಡ್, ಚಾರ್ಲ್ಸ್ ಬ್ರಾನ್ಸನ್.
ಮನುಷ್ಯ ಮೂಲತಃ ಸ್ವತಂತ್ರಜೀವಿ. ತನಗೆ ಸಂಬಂಧವಿಲ್ಲದ ವ್ಯಕ್ತಿ, ಶಕ್ತಿ ಅಥವಾ ವ್ಯವಸ್ಥೆಯ ಬಂಧನ, ನಿಯಂತ್ರಣದಿಂದ ಮುಕ್ತಿಯಾಗಿರಬೇಕೆಂದು ಬಯಸುವ ಗುಣ ಆತನದ್ದು. 'ಬಂಧಿಸಿದಷ್ಟು ಬಂಡಾಯ ತೀವ್ರಗೊಳ್ಳುತ್ತದೆ' ಎಂಬುದು ಸುಳ್ಳಲ್ಲ. ವ್ಯಕ್ತಿಯನ್ನು ಬಂಧಿಸಬಹುದು. ಆದರೆ, ಆತನ ಪ್ರಜ್ಞೆ ಮತ್ತು ಆಲೋಚನೆಗಳನ್ನು ಬಂಧಿಸಲು ಸಾಧ್ಯವೇ? 'ಸಾಧ್ಯವಿಲ್ಲ' ಎನ್ನಲು ಸಾಕಷ್ಟು ದಾಖಲೆಗಳಿವೆ ಹಾಗೂ ಚಾರಿತ್ರಿಕ ಸಾಹಸಗಾಥೆಗಳು ನಮ್ಮ ಓದಿನ ಕಪಾಟಿನಲ್ಲಿವೆ. ತೇಜಸ್ವಿ ಅವರ 'ಪ್ಯಾಪಿಲಾನ್' ಕೃತಿ ನೆಪಿಸಿಕೊಳ್ಳಿ. ಅದರ ನಾಯಕ ಪ್ಯಾಪಿಯನ್ನು ಬಂಧಿಖಾನೆ ಎಂಬ ಕಂಡರಿಯದ ನರಕ ಕೂಪಕ್ಕೆ ತಳ್ಳಿದರೂ 'ಪ್ಯಾಪಿ, ಹೇಗಾದರೂ ಮಾಡಿ ಇಲ್ಲಿಂದ ತಪ್ಪಿಸಿಕೊಳ್ಳೋ' ಎನ್ನುವ ಬಿಡುಗಡೆಯ ಆಲೋಚನೆ ಮಾತ್ರ ಆತನನ್ನು ಬಿಡದೆ ಹಿಂಬಾಲಿಸುತ್ತದೆ. ಆತನ ಮಾಡುವ ಸಾಹಸ ಓದುತ್ತಿದ್ದರೆ ಮೈ ರೋಮಾಂಚನಗೊಳ್ಳುತ್ತದೆ. ಕಡಲಾಚೆಗಿನ ಪ್ಯಾಪಿಯ ಈ ಬಿಡುಗಡೆಯ ಸಾಹಸವನ್ನು ಅಕ್ಷರ ಮತ್ತು ದೃಶ್ಯರೂಪದಲ್ಲಿ ನೋಡಿದವರಿಗೆ ಅಂಥದೇ ಹತ್ತಾರು 'ಎಸ್ಕೇಪ್' ಕಥೆ ಮತ್ತು ಚಿತ್ರಗಳು ನೆನಪಾಗುತ್ತವೆ.
ಬೆಳಗಾವಿಯ ಹಿಂಡಲಗಾ ಜೈಲಿನ ಖೈದಿಗಳ ಕಥೆ ಹೇಳುವ 'ಮಿಂಚಿನ ಓಟ', ಬ್ರಿಟಿಷರ ಬಂಧನದಿಂದ ತಪ್ಪಿಸಿಕೊಳ್ಳುವ 'ಕಾಲಾಪಾನಿ' ಸೇರಿದಂತೆ 'ಜೈಲ್ ಬ್ರೇಕ್' ಚಿತ್ರಗಳು ನಮ್ಮಲ್ಲಿ ಬಂದಿವೆ. 'ಎಸ್ಕೇಪ್' ದಾರಿಗಳ ಬಗ್ಗೆಯೇ ದಾರಿ ತೋರಿಸುವ ಇಂಥ ವಿದೇಶಿ ಚಿತ್ರಗಳ ಪಟ್ಟಿ ದೊಡ್ಡದು. 'ಶಾಶಂಕ್ ರಿಡಂಪ್ಷನ್', 'ಬ್ರೂಟ್ ಫೋರ್ಸ್', 'ದಿ ಎಸ್ಕೇಪಿಸ್ಟ್', 'ಟೂ ಹಾಫ್ಟೈಮ್ಸ್ ಇನ್ ವೆಲ್', 'ಗ್ರೀನ್ಮೈಲ್', 'ಸೈಲೆನ್ಸ್ ಆಫ್ ದಿ ಲ್ಯಾಂಪ್ಸ್', 'ಓ ಬ್ರದರ್ ವೇರ್ ಆರ್ಟ್ ಥೋ?' ಮುಂತಾದ ಹಲವು ಚಿತ್ರಗಳನ್ನು 'ಎಸ್ಕೇಪ್' ಕಥೆಗಳ ಪಟ್ಟಿಗೆ ಸೇರಿಸಬಹುದು. ಇವುಗಳ ನಡುವೆ ಎಸ್ಕೇಪ್ ಕಥೆ ಎಂದಾಕ್ಷಣ ಹೊಸ ತಲೆಮಾರಿನ ಪ್ರೇಕ್ಷಕರಿಗೂ ನೆನಪಾಗುವ ಚಿತ್ರ 'ದಿ ಗ್ರೇಟ್ ಎಸ್ಕೇಪ್'. 'ಬಿಡುಗಡೆ'ಯ ಕಥೆ ಒಳಗೊಂಡಿರುವ ಚಿತ್ರಗಳ ಪೈಕಿ ಅತ್ಯಂತ ಕ್ಲಾಸಿಕ್ ಮತ್ತು ರೋಚಕ ಎನಿಸುವ 'ದಿ ಗ್ರೇಟ್ ಎಸ್ಕೇಪ್' ಚಿತ್ರವನ್ನು ನೋಡದವರು ವಿರಳ.
ಎರಡನೇ ವಿಶ್ವಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯ ಕೇಂದ್ರಬಿಂದು ಜರ್ಮನಿ. ಇಲ್ಲಿ ಬಂಧಿಸಲ್ಪಟ್ಟ ಯುದ್ಧಖೈದಿಗಳು ಜೈಲಿನಿಂದ ಪಾರಾಗುವ ಕಥಾನಕವನ್ನು ಬಿಚ್ಚಿಡುತ್ತದೆ. ಅಲ್ಲದೆ ಬಿಡುಗಡೆಗಾಗಿ ಹಾತೊರೆಯುವ ಮನುಷ್ಯನ ಮೂಲಭೂತ ಸ್ವಭಾವಕ್ಕೆ ಮಾನವೀತೆಯ ಸ್ಪರ್ಶ ನೀಡುತ್ತದೆ. ಹೀಗಾಗಿ 'ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದೆ ನೋಡಿ' ಎನ್ನುತ್ತಲೇ ನೋಡುಗರ ಪ್ರೀತಿ ಗಳಿಸುವ ಪಾತ್ರಗಳು ಮಾತ್ರ 'ತಪ್ಪಿಸಿಕೊಳ್ಳುವುದು ಹೇಗೆ?' ಎಂದು ಯೋಚಿಸುವ ಮಹಾನ್ 'ಎಸ್ಕೇಪಿಸ್ಟ್'ಗಳ ಕಥೆ ಇಲ್ಲಿದೆ. ಈ ಚಿತ್ರದ್ದು 1944ರ ಕಾಲಘಟ್ಟದ ಕಥೆ. ಮಹಾಯುದ್ಧದ ಸಂದರ್ಭದಲ್ಲಿ ಜರ್ಮನ್ನರಿಂದ ಬಂಧಿಸಲ್ಪಟ್ಟ ಅಲೈಡ್ ವಿಮಾನ ಯೋಧರು ಅವರು. ನಾಲ್ಕೈದು ವಾಹನಗಳಲ್ಲಿ ಬಂಧಿತರನ್ನು ಯುದ್ಧ ಶಿಬಿರಕ್ಕೆ ತಂದು ಬಿಡುವುದರೊಂದಿಗೆ ಆರಂಭವಾಗುವ ಈ ಚಿತ್ರ, ಕೊನೆಗೆ ಅಲ್ಲಿಗೆ ಬಂದು ಮುಕ್ತಾಯವಾಗುತ್ತದೆ. ಆದರೆ, ಈ ನಡುವೆ ಯುದ್ಧ ಖೈದಿಗಳು 'ಬಿಡುಗಡೆಗಾಗಿ' ಮಾಡುವ ಸಾಹಸ ಚಿತ್ರ ನೋಡುಗರಲ್ಲಿ ರೋಚಕತೆ ಹುಟ್ಟಿಸುತ್ತದೆ. ಪಾಲ್ ಬ್ರೇಕ್ಹಿಲ್ ಬರೆದ ಕಾದಂಬರಿ ಆಧರಿಸಿದ ಚಿತ್ರ ಇದಾಗಿದೆ. ಬಂಧನದಲ್ಲಿದ್ದಾಗಲೇ ಯುದ್ಧ ಶಿಬಿರದ ಒಳಗಿನಿಂದ ಹೊರಗೆ ಸುರಂಗ ಕೊರೆಯುವುದು ಹಾಗೂ ತಪ್ಪಿಸಿಕೊಂಡ ಮೇಲೆ ನಡೆಯುವ ಘಟನೆಗಳು ಚಿತ್ರದ ಮುಖ್ಯ ವಸ್ತು. ಸೈನಿಕರ ಸರ್ಪಗಾವಲಿನ ನಡುವೆಯೇ ಲಭ್ಯವಿರುವ ಸಲಕರಣೆಗಳನ್ನು ಬಳಸಿಕೊಂಡು ದಿನಕ್ಕಿಷ್ಟು ಅಂತ ಒಳಗಿನಿಂದ ಸುರಂಗ ಮಾಡಲು ಪ್ರಯೋಗಿಸುವ ಜಾಣ್ಮೆಯನ್ನು ನೋಡಿದಾಗ 'ಆಲೋಚನೆ ಮತ್ತು ಪ್ರಜ್ಞೆ'ಯನ್ನು ಯಾರಿಂದಲೂ ಬಂಧಿಸಲಾಗದು ಎನ್ನುವ ಮಾತು ನಿಜವಾಗುತ್ತದೆ. ತಾವೇ ತಿಂಗಳಾನುಗಟ್ಟಲೆ ಕೊರೆದ ಸುರಂಗದಿಂದ ಇನ್ನೇನು ಎಲ್ಲರೂ ತಪ್ಪಿಸಿಕೊಂಡರು ಎನ್ನುಷ್ಟರಲ್ಲಿ ಸೈನಿಕರ ಕಣ್ಣಿಗೆ ಬೀಳುತ್ತಾರೆ. ಅಷ್ಟರೊಳಗೆ ಬಚಾವ್ ಆದವರು ದಿಕ್ಕಿಗೊಬ್ಬರಂತೆ ಪರಾರಿಯಾಗುತ್ತಾರೆ. ಇಲ್ಲಿಂದ ಎಸ್ಕೇಪ್ ವೀರರ ಕಥೆ ಮತ್ತೊಂದು ದಾರಿಯಲ್ಲಿ ಪಯಣಿಸುತ್ತದೆ. ಅನುಮಾನಸ್ಪದವಾಗಿ ಕಂಡವರನ್ನು ಅಟ್ಟಿಸಿಕೊಂಡು ಹೋಗುವ ರೀತಿಯನ್ನು ಚಿತ್ರದಲ್ಲೇ ನೋಡಿ ಅನುಭವಿಸಬೇಕು. ಆದರೆ, ತಪ್ಪಿಸಿಕೊಂಡು ಮತ್ತೆ ಸೆರೆ ಸಿಕ್ಕವರ ಪೈಕಿ 50 ಮಂದಿಯನ್ನು ನಿರ್ದಾಕ್ಷಿಣ್ಯವಾಗಿ ಜರ್ಮನ್ ಸೈನಿಕರು ಕೊಲ್ಲುತ್ತಾರೆ.
ಇಲ್ಲಿ ಮುಖ್ಯ ಪಾತ್ರಧಾರಿ ಸ್ಟೀವ್ ಮೆಕ್ಕ್ವೀನ್. ಸೈನಿಕನ ಬೈಕ್ ತೆಗೆದುಕೊಂಡು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಆತ ಎದುರಿಸುವ ಅಡೆತಡೆಗಳನ್ನು ವಿಶೇಷವಾಗಿ ನಿರೂಪಿಸಲಾಗಿದೆ. ಇದೇ ಚಿತ್ರಕ್ಕೆ ರೋಚಕತೆಯನ್ನು ತಂದುಕೊಡುತ್ತದೆ. ಕೊರೆದ ಸುರಂಗದ ಮಣ್ಣನ್ನು ಗೌಪ್ಯವಾಗಿ ತಂದು ಹೊರಚೆಲ್ಲುವುದು, ಕಸ ತುಂಬುವ ಟ್ರಕ್ಗಳಲ್ಲಿ ಅವಿತುಕೊಂಡು ಪಾರಾಗಲು ಹೋಗಿ ಸಿಕ್ಕಿಬೀಳುವುದು, ಶಿಬಿರದಿಂದ ಪಾರಾದವರು ಜರ್ಮನಿಯ ಬೀದಿಗಳಲ್ಲಿ ಓಡಾಡುವಂಥ ಸಣ್ಣ ಸಣ್ಣ ದೃಶ್ಯಗಳನ್ನೂ ಅತ್ಯಂತ ನಾಜೂಕಾಗಿ ಸಂಯೋಜಿಸಲಾಗಿದೆ. 'ದಿ ಗ್ರೇಟ್ ಎಸ್ಕೇಪ್' ಬಗ್ಗೆ ಹೀಗೆ ಏನೇ ಹೇಳಿದರೂ ಅದು ಕಡಿಮೆಯಾಗುತ್ತದೆ. ಹಾಗಾಗಿ ಚಿತ್ರವನ್ನು ಒಮ್ಮೆ ನೋಡಬೇಕು. ನಿರ್ದೇಶಕ ಯುದ್ಧ ಖೈದಿಗಳಲ್ಲಿ ಬಿಡುಗಡೆಯ ಕನಸು ಮೂಡಿಸುವುದರ ಜೊತೆಗೆ ಮತ್ತೆ ಬಂಧನಕ್ಕೆ ಆದೇಶಿಸುತ್ತಾರೆ. ಹಾಗಾದರೆ ಮನುಷ್ಯ ಸ್ವತಂತ್ರಬಯಸಿದಷ್ಟು ಬಂಧಿಯಾಗುತ್ತಾನೆಯೇ? ಗೊತ್ತಿಲ್ಲ. ಆದರೆ ಯುದ್ಧ ಶಿಬಿರದಿಂದ ಹೊರ ಹೋದವರು ಮತ್ತೆ ಅಲ್ಲಿಗೆ ಬರುತ್ತಾರೆ. ಆ ಮೂಲಕ ಬದುಕೇ ಒಂದು ಬಂಧೀಖಾನೆ ಎನ್ನುವ ವ್ಯವಸ್ಥೆಯ ಕ್ರೂರ ವಾಸ್ತವಕ್ಕೆ ಈ ಚಿತ್ರ ಸಾಕ್ಷಿಯಾಗುತ್ತದೆ.
= ಆರ್. ಕೇಶವಮೂರ್ತಿ
keshavarkm1@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.