ಸಾಪ್ತಾಹಿಕಪ್ರಭ

ಮೆಕ್ಕಾ ದಾರಿ

ಹೆಲೆನ್ ಹಳ್ಳಿಗಾಡಿನ ಒಂಟಿ ಮುದುಕಿ, ವಿಧವೆ ಹಾಗೂ ಕಲಾವಿದೆ. ಇವಳ ಕಲಾಜೀವನ ತೀರ ತಡವಾಗಿ, ಅಂದರೆ ವಯಸ್ಸು ಕಳೆದ ನಂತರ, ವೈಧವ್ಯ ಬಂದನಂತರ ಆರಂಭವಾದದ್ದು. ಇತ್ತ ಜರಾಮೃತ್ಯುಗಳನ್ನೆದುರಿಸಲಾರದೆ, ಅತ್ತ ಒಂಟಿತನದ ಬಾಳುವೆ ಸಹಿಸಲಾರದೆ ಕಲಾಸೃಷ್ಟಿಯಲ್ಲಿ ತನ್ನ ಬಿಡುಗಡೆಯ ಹಾದಿ ಕಂಡುಕೊಳ್ಳುತ್ತಾಳೆ. ಹಳೆಯ ಕಬ್ಬಿಣ, ಗಾಜಿನ ಚೂರು, ಒಡೆದ ಪಿಂಗಾಣಿ, ಸಿಮೆಂಟು ಮರಳು ಇತ್ಯಾದಿ ಮರುಬಳಕೆ ಸಾಮಗ್ರಿ ಬಳಸಿ ಆಕೆ ಅಸಾಧಾರಣ ಶಿಲ್ಪಗಳನ್ನು ತನ್ನ ಸುತ್ತಲೂ ಸೃಷ್ಟಿಸಿಕೊಂಡು ಅವುಗಳ ನಡುವೆ ಬದುಕುತ್ತಿದ್ದಾಳೆ. ಅವಳ ಶಿಲ್ಪಗಳ ವೈಶಿಷ್ಟ್ಯವೆಂದರೆ, ದೀಪದ ಬೆಳಕು ಬಿದ್ದಾಗ ಅವು ಹೊಳೆಯುತ್ತವೆ ಹಾಗೂ ಪರಸ್ಪರ ಪ್ರತಿಫಲಿಸುತ್ತ ಅದ್ಭುತರಮ್ಯ ಲೋಕ ಸೃಷ್ಟಿಸುತ್ತವೆ.
ಅವಳ ಶಿಲ್ಪಗಳಿಗೊಂದು ಘನವಾದ ಉದ್ದೇಶವಿದೆ. ಅವು ಕತ್ತಲೆಯನ್ನು ಹೊಡೆದುಹಾಕುವ ಪ್ರಯತ್ನ ಮಾಡುತ್ತವೆ ಹಾಗೂ ಬೆಳಕನ್ನು ಹುಡುಕಿಕೊಂಡು ಹೊರಡುತ್ತವೆ. ಅವಳ ಪ್ರಕಾರ ಅವಳ ಪಾತ್ರಗಳು, ಮೆಕ್ಕಾದತ್ತ ಪಯಣ ಬೆಳೆಸುವ ಅರಬರ ಕ್ಯಾರವಾನ್‌ಗಳ ಮಾದರಿಯಲ್ಲಿ ಪೂರ್ವದ ಬೆಳಕಿನತ್ತ ಹೊರಟಿವೆ. ಅವಳ ಶಿಲ್ಪಸಮೂಹದ ಕ್ಯಾರವಾನಿನಲ್ಲಿ, ಚಿತ್ರವಿಚಿತ್ರ ಮಾನವರು, ಒಂಟೆಗಳು, ಗೂಬೆಗಳು, ನವಿಲುಗಳು ಇತ್ಯಾದಿ ಪುರಾಣಸದೃಶವಾಗಿ ನೆರೆದಿವೆ.
ಈ ನಾಟಕದ ಕತೆ ನಿಜ ಘಟನೆಯೂ ಹೌದು. ಕತೆ ನಡೆಯುವುದು ದಕ್ಷಿಣ ಆಫ್ರಿಕೆಯಲ್ಲಿ. ಅಲ್ಲಿನ ಉತ್ತರಭಾಗದ ಗ್ರಾಮೀಣ ಪ್ರದೇಶವೊಂದರಲ್ಲಿ ಆಗಿಹೋದ ಒಬ್ಬ ಮಹಾನ್ ಕಲಾವಿದೆ ಇವಳು. ದಕ್ಷಿಣ ಆಫ್ರಿಕೆಯ ನೊಬೆಲ್ ವಿಜೇತ ನಾಟಕಕಾರ ಅಥೋಲ್ ಫುಗಾರ್ಡ್ ಬರೆದ ರೋಡ್ ಟು ಮೆಕ್ಕ ಎಂಬ ನಾಟಕದ ಭಾವಾನುವಾದ ಮೆಕ್ಕಾ ದಾರಿ. ಈಕೆ ಸೃಷ್ಟಿಸಿದ ಶಿಲ್ಪಗಳು, ಈಕೆ ಬದುಕಿದ್ದ ಮನೆಯನ್ನು ಸರ್ಕಾರ ಕಲಾವಸ್ತು ಸಂಗ್ರಹಾಲಯವನ್ನಾಗಿ ಕಾಯ್ದುಕೊಂಡು ಬಂದಿದೆ.
ಹೆಲೆನ್ನಳ ದುರಂತವೆಂದರೆ, ತನ್ನ ಮರುಬಳಕೆ ಶಿಲ್ಪಗಳಿಂದಾಗಿ, ತನಗೇ ಅರಿವಿಲ್ಲದೆ ಅವಳು ಸುತ್ತಲ ಸಮುದಾಯದ ಅನುಮಾನಕ್ಕೆ ಗುರಿಯಾಗಿದ್ದಾಳೆ. ಅವಳಿದ್ದ ಗ್ರಾಮವು ರೂಢಿಗತ ಕ್ರೈಸ್ತ ಸಮಾಜಕ್ಕೆ ಸೇರಿದ್ದು. ನಮ್ಮದೇ ಭಾರತೀಯ ಮಾದರಿಯ ಒಂದು ಗ್ರಾಮ ವ್ಯವಸ್ಥೆ ಅದು. ಆ ಊರವರಿಗೆ ಇವಳ ಮೆಕ್ಕ, ಗೂಬೆ, ಒಂಟೆ, ಬೆಳಕು ಇತ್ಯಾದಿಗಳು ಕಲಾಕೃತಿಗಳಾಗಿ ಕಾಣುವ ಬದಲು ಕ್ರೈಸ್ತವಿರೋಧಿ ಪಾಖಂಡಿತನದ ಅಭಿವ್ಯಕ್ತಿಯಾಗಿ ಕಾಣಿಸುತ್ತದೆ. ಹೆಲೆನ್ ಧರ್ಮಭ್ರಷ್ಟಳಾದ ಹಾಗೂ ಅರೆಹುಚ್ಚಿ ಮುದುಕಿಯಂತೆ ಕಾಣತೊಡಗುತ್ತಾಳೆ. ಹೆಲೆನ್ನಳಿಗೆ ಏಕಾಂಗಿತನ ದುಸ್ಸಹವಾಗುತ್ತದೆ, ಅವಳ ಅಸಾಧಾರಣ ಕಲಾಸೃಷ್ಟಿ ಅವಳಿಗೇ ಮುಳುವಾಗತೊಡಗುತ್ತದೆ. ಇದು ನಾಟಕದ ಹಿನ್ನೆಲೆ.
ಮೆಕ್ಕಾ ದಾರಿ ನಾಟಕದ ಮಹತ್ವವಿರುವುದು ಇದರ ಎರಡು ಸ್ತ್ರೀ ಪಾತ್ರಗಳಲ್ಲಿ. ಸ್ತ್ರೀವಾದಿ ಚಿಂತನೆಯನ್ನು ಹಲವು ಮಜಲುಗಳತ್ತ ಕೊಂಡೊಯ್ಯಬಲ್ಲ ಅಸಾಧಾರಣ ನಾಟಕವಿದು, ಜೊತೆಗೆ ಶ್ರಮಜೀವನದ ಚಿತ್ರಣವೂ ಹೌದು. ಹೆಲೆನ್‌ಳ ಅರೆಸುಟ್ಟ ಜರ್ಝರಿತ ಕೈಗಳು ಆಧುನಿಕ ಕಲಾವಂತಿಕೆಯ ಪರಿಕಲ್ಪನೆಗೇ ಸವಾಲು ಒಡ್ಡಬಲ್ಲ ಮಹಾನ್ ಉಪಮೆಯಾಗಿ ನಮಗೆ ಕಾಣುತ್ತವೆ. ಇದು ಜಾಗತೀಕರಣದ ಹಣದುಬ್ಬರದ ಯುಗ, ಸೊಕ್ಕಿನ ಯುಗ. ಕಲಾವಂತಿಕೆಯ ಹಿರಿಮೆಯನ್ನೆ ಅದು ಹೊಸಕಿಹಾಕಿದೆ, ಕಲೆ ಎಂಬುದನ್ನು ಮಾರುಕಟ್ಟೆಯ ಯಕಶ್ಚಿತ್ ಸರಕನ್ನಾಗಿಸಿಬಿಟ್ಟಿದೆ. ಕಲಾವಂತಿಕೆಯ ಇಂದಿನ ಒಟ್ಟು ಪರಿಸ್ಥಿತಿಗೇ ಸವಾಲಾಗಿ ನಿಲ್ಲುತ್ತಾಳೆ ಹೆಲೆನ್.

ಅನಾವರಣ
ಎ.ಎನ್.ರಮೇಶ್ ಅವರ ನೆನಪಿನಲ್ಲಿ ಸ್ಥಾಪನೆಯಾಗುತ್ತಿರುವ ಅನಾವರಣ ಟ್ರಸ್ಟ್, ನಾಟಕವನ್ನು ಅರ್ಪಿಸುತ್ತಿದೆ. ಇದು ಒಂದು ಸಾಂಸ್ಕೃತಿಕ ಸಂಘಟನೆ. ಕನ್ನಡದ ಪಾರಂಪರಿಕ ರಂಗಕಲೆಗಳ ಕೌಶಲ್ಯಗಳ ಸಂಗೋಪನೆ ಮತ್ತು ದರ್ಶನಗಳ ಮೂಲಕ ಅರಿವನ್ನು ವಿಸ್ತರಿಸುವ ಆಶಯ ಹೊಂದಿದೆ. ಕನ್ನಡ ನಾಟಕಗಳ ಅಪರೂಪದ ಪ್ರಯೋಗಗಳನ್ನು ಆಯೋಜಿಸುವುದು ಸೇರಿದಂತೆ ರಾಷ್ಟ್ರಮಟ್ಟದ ಉತ್ಸವಗಳನ್ನು ನಡೆಸುವ ಉದ್ದೇಶ. ತರಿಕಿಟ ಕಲಾ ಕಮ್ಮಟ ಜ್ಯೋತಿಗುಡ್ಡೆ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ವೇದಿಕೆ. ಊರಿನವರು ವಿಶೇಷವಾಗಿ ಮಕ್ಕಳು ಸೃಜನಶೀಲವಾಗಿ ಚಿಂತನೆಗೆ ಒಡ್ಡಿಕೊಳ್ಳುವಂತಹ ಅವಕಾಶ ತೆರೆದುಕೊಳ್ಳುವಂತೆ ಮಾಡುವುದು ಇದರ ಮೂಲ ಉದ್ದೇಶ. ತಿಂಗಳ ಇರುಳು ಎಂಬ ಸಾಂಸ್ಕೃತಿಕ ಕಾರ್ಯಕ್ರಮದಡಿ 82 ಕಾರ್ಯಕ್ರಮ ಆಯೋಜಿಸಿದೆ.

= ಪ್ರಸನ್ನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!