ಸರಸ ಸಾಹಿತ್ಯ ಸಾರ
ಬಿ.ಎಸ್. ಕೇಶವರಾವ್ ಅವರ 'ಸರಸ ಸಾಹಿತ್ಯ ಸಾರಾಮೃತ'ವೆಂಬ ಈ ಕೃತಿ ಕನ್ನಡದಲ್ಲಿ ಹೊಸ ರೀತಿಯದು. ಕನ್ನಡದ ಪ್ರಮುಖ ಸಾಹಿತಿಗಳ ಅದರಲ್ಲೂ ವ್ಯಂಗ್ಯ ವಿಡಂಬನೆಗಳಿಗೆ ಹೆಸರಾದ 35ಕ್ಕೂ ಅಧಿಕ ಸಾಹಿತಿಗಳನ್ನು ಕಿರಿದಾಗಿ ಪರಿಚಯಿಸಿ ಅವರ ಒಂದು ಲೇಖನವನ್ನು ಅದರ ಜೊತೆಗೆ ಇಲ್ಲಿ ಸಂಪಾದಿಸಿಕೊಟ್ಟಿದ್ದಾರೆ. ಇದು ಅಪರೂಪದ ನುಡಿಚಿತ್ರವೂ ಹೌದು ನಗೆಬರೆಹಗಳ ಸಂಕಲನವೂ ಹೌದು. ಸ್ವತಃ ಕೇಶವರಾಯರು ಹಾಸ್ಯಲೇಖನಗಳ ಬರೆಹಗಾರರು. ಇಲ್ಲಿಯ ಬರೆಹಗಳನ್ನು ಬೇರೆಬೇರೆ ಪತ್ರಿಕೆ, ಸಂಕಲನಗಳಿಂದ ಶ್ರಮಪಟ್ಟು ಸಂಗ್ರಹಿಸಿದ್ದಾರೆ. ಈ ನುಡಿಚಿತ್ರ ಮತ್ತು ಅವರ ಬರೆಹಗಳಿಂದ ಸಾಹಿತಿಗಳ ಅಂತರಂಗದ ದರ್ಶನ ಸಾಧ್ಯವಾಗಿದೆ. ಎಂಬತ್ತರ ದಶಕದಲ್ಲಿ 'ಲಂಕೇಶ ಪತ್ರಿಕೆ'ಯ ಪ್ರಭಾವ ಹೇಗಿತ್ತು ಎನ್ನುವುದಕ್ಕೆ ಡಿ. ಸಿದ್ದಲಿಂಗಯ್ಯನವರು ವಿವರಿಸಿರುವ ಒಂದು ಪ್ರಸಂಗ ಇಲ್ಲಿದೆ. ಅನಕೃ ಅವರ ಬಗ್ಗೆ ಅವರ ಪತ್ನಿ ಬರೆದ ಬರೆಹ ಇಲ್ಲಿದೆ. ವೈಎನ್ಕೆ ಬಗ್ಗೆ ಆತ್ಮೀಯವಾಗಿ ಬರೆದಿದ್ದಾರೆ.
ಕೃತಿ: ಸರಸ ಸಾಹಿತ್ಯ ಸಾರಾಮೃತ, ಪ್ರಕಾರ: ನುಡಿಚಿತ್ರ- ಲೇಖನ, ಏಕೆ ಓದಬೇಕು?: ಸಾಹಿತಿಗಳನ್ನು ಅರಿಯಲು, ಪ್ರ: ಅಂಕಿತ ಪುಸ್ತಕ, ಬೆಂಗಳೂರು,, ಪುಟಗಳು 224, ಬೆಲೆ ರು. 195
ಮಧ್ಯಬಿಂದು
ಸಾಮಾನ್ಯವಾಗಿ ಕೃತಿಯೊಂದರ ಪ್ರತಿಗಳೆಲ್ಲ ಬೇಗನೆ ಖಾಲಿಯಾದಾಗ ಅದರ ಮರುಮುದ್ರಣವಾಗುತ್ತದೆ. ತುಂಬ ವರ್ಷಗಳ ಬಳಿಕ ಮರುಮುದ್ರಣವಾದಾಗ ಅದರ ಪ್ರತಿಗಳೆಲ್ಲ ಖಾಲಿಯಾಗಿರುವ ಕಾರಣದ ಜೊತೆಯಲ್ಲಿ ಅದಕ್ಕೊಂದು ಚಾರಿತ್ರಿಕ ಮಹತ್ವವಿರುತ್ತದೆ. ಚಂಪಾ ಎಂದೇ ಖ್ಯಾತರಾಗಿರುವ ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲರ ಎರಡನೇ ಕವನ ಸಂಕಲನ 'ಮಧ್ಯಬಿಂದು' ಇದೀಗ ಮರುಮುದ್ರಣ ಕಂಡಿದೆ. ಇದು ಮೊದಲ ಬಾರಿಗೆ ಮುದ್ರಣವಾಗಿದ್ದು 1964ರಲ್ಲಿ. ಸುಮಾರು 48 ವರ್ಷಗಳ ಬಳಿಕ ಇದು ಮರುಮುದ್ರಣವಾಗಿರುವುದಕ್ಕೆ ಚಾರಿತ್ರಿಕ ಕಾರಣಗಳು ಇವೆ. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ನವ್ಯದ ವ್ಯಕ್ತಿನಿಷ್ಠ ಬರೆಹದಿಂದ ಬಂಡಾಯದ ಸಮಾಜನಿಷ್ಠ ಬರೆವಣಿಗೆಯ ಕಡೆಗೆ ಒಂದು ತಲೆಮಾರನ್ನು ಹೊರಳಿಸುವ ಕೆಲಸವನ್ನು ಚಂಪಾ ಮಾಡಿದರು. ಅದಕ್ಕಾಗಿಯೇ ಅವರು 'ಸಂಕ್ರಮಣ' ಎಂಬ ಸಾಹಿತ್ಕ ಪತ್ರಿಕೆಯನ್ನು ನಡೆಸಿದರು. 'ಸಂಕ್ರಮಣ'ದ ಹುಟ್ಟು ಮತ್ತು 'ಮಧ್ಯಬಿಂದು' ಜನ್ಮತಳೆದ್ದು ಸರಿಸುಮಾರು ಒಂದೇ ಕಾಲದಲ್ಲಿ. ಸಾಮಾಜಿಕ ಮತ್ತು ಸಾಹಿತ್ಯ ಚಳವಳಿಗಳು ಬೇರೆಬೇರೆಯಲ್ಲ ಎಂಬ ನಂಬಿಕೆಯಿಂದ ಬದುಕಿದವರು ಚಂಪಾ. ಅರ್ಧಶತಮಾನದ ಬಳಿಕ ಅವರು ಸಾಗಿಬಂದ ದಾರಿಯನ್ನು ಗುರುತಿಸಲಿಕ್ಕೆ ಇದರಲ್ಲಿ ಸಾಕಷ್ಟು ಸರಕುಗಳು ಇವೆ. ಈ ಮರುಮುದ್ರಣದಲ್ಲಿ ಈ ಕೃತಿಯ ಬಗ್ಗೆ ಇದುವರೆಗೆ ಬಂದ ವಿಮರ್ಶೆಗಳನ್ನು ಅನುಬಂಧದ ರೂಪದಲ್ಲಿ ನೀಡಲಾಗಿದೆ. ಚಂಪಾ ಅವರ ಸಾಹಿತ್ಯದ ಅಭ್ಯಾಸಿಗಳಿಗೆ ಈ ಕೃತಿ ಉಪಯುಕ್ತ ಆಕರವಾಗಿದೆ.
ಕೃತಿ: ಮಧ್ಯಬಿಂದು, ಪ್ರಕಾರ: ಕವನಗಳು, ಏಕೆ ಓದಬೇಕು?: ಚಂಪಾ ಅವರನ್ನು ಅರಿಯಲು
ಪ್ರ: ಸಂಕ್ರಮಣ ಪ್ರಕಾಶನ, ಬೆಂಗಳೂರು,, ಪುಟಗಳು 114, ಬೆಲೆ ರು. 80
ಸ್ವಾತಂತ್ರ್ಯ ಸಮರದಲ್ಲಿ ಮುಸ್ಲಿಂ ಮಹಿಳೆ
ದೇಶಪ್ರೇಮ, ರಾಷ್ಟ್ರಭಕ್ತಿ ಇತ್ಯಾದಿಯನ್ನೆಲ್ಲ ಕೋಮು ಆಧಾರದಲ್ಲಿ ವರ್ಗೀಕರಿಸಿ ನೋಡುವ ಒಂದು ವಾತಾವರಣದಲ್ಲಿ ಡಾ.ಅಬಿದಾ ಸಮೀಉದ್ದೀನ್ ಅವರ 'ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಂ ಮಹಿಳೆಯರ ಕೊಡುಗೆ' ಮಹತ್ವದ್ದಾಗಿ ಕಂಡುಬರುತ್ತಿದೆ. ಡಾ.ಷಾಕಿರಾ ಖಾನಂ ಅವರು ಇದನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯರ ಸ್ವಾತಂತ್ರ್ಯದ ಹೋರಾಟ ಧರ್ಮಾತೀತವಾಗಿತ್ತು. ಎಲ್ಲ ಧರ್ಮದವರು ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸಿದ್ದರು. ಹೀಗಿರುವಾಗ ಧರ್ಮದ ಆಧಾರದ ಮೇಲೆ ಈ ದೇಶ ವಿಭಜನೆಯಾಗಿದ್ದು ಮಾತ್ರ ವಿಪರ್ಯಾಸ. 'ಭಾರತೀಯ ಮಹಿಳೆಯರನ್ನು ಹೊರತು ಪಡಿಸಿ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಬಣ್ಣಿಸಲು ಸಾಧ್ಯವಿಲ್ಲ' ಎಂಬ ಮಾತನ್ನು ಮಹಾತ್ಮ ಗಾಂಧೀಜಿ ಹೇಳಿದ್ದರು. ಈ ಮಹಿಳಾಮಣಿಗಳಲ್ಲಿ ಮುಸ್ಲಿಂ ಮಹಿಳೆಯರ ಪಾತ್ರವು ಯಾರಿಗೂ ಕಡಿಮೆಯಾದುದಲ್ಲ. ಅವರ ಶ್ರಮವನ್ನು ಗುರುತಿಸಿ ಅವರಿಗೆ ನಮನ ಸಲ್ಲಿಸುವುದು ಭಾರತೀಯರ ಕರ್ತವ್ಯ. ನಮ್ಮ ಯುವ ಜನತೆಗೆ ಇವರ ಪರಿಚಯವಾಗಬೇಕಾಗಿದೆ. ಇದನ್ನು ಓದಿದಾಗ ದೇಶಪ್ರೇಮ ಜಾಗೃತವಾಗದೆ ಇರದು.
ಕೃತಿ: ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮುಸ್ಲಿಂ ಮಹಿಳೆಯರ ಕೊಡುಗೆ , ಪ್ರಕಾರ: ಇತಿಹಾಸ
ಏಕೆ ಓದಬೇಕು?: ಇತಿಹಾಸ ಅರಿಯಲು, ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು,, ಪುಟಗಳು 232, ಬೆಲೆ ರು. 140
ಬೀನಾದಾಸ್ ಆತ್ಮಕಥನ
ಬಂಗಾಳದ ಪ್ರಖ್ಯಾತ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ್ತಿ ಬೀನಾ ದಾಸ್ ಭೌಮಿಕ್ ಅವರ ಆತ್ಮಕಥನ ಇದು. ಇದನ್ನು ಅವರು ಬಂಗಾಲಿಯಲ್ಲಿ ಬರೆದಿದ್ದರು. ಅದನ್ನು ಧೀರಾ ಧಾರ್ ಅವರು ಇಂಗ್ಲಿಷಿಗೆ ಅನುವಾದಿಸಿದ್ದರು. ಅದನ್ನು ಡಾ. ಎನ್.ಗಾಯತ್ರಿಯವರು 'ಶೃಂಖಲೆಯ ಝೇಂಕಾರ' ಹೆಸರಿನಲ್ಲಿ ಕನ್ನಡಿಸಿದ್ದಾರೆ. ಬೀನಾ ದಾಸ್ ಅವರು ಕಲ್ಕತ್ತಾದಲ್ಲಿ 1911ರಲ್ಲಿ ಜನಿಸಿದರು. ತನ್ನ ಸಮಕಾಲೀನರಿಂದ ಅಗ್ನಿಕನ್ಯೆ ಎಂದು ಕರೆಸಿಕೊಂಡಿದ್ದ ಅವರು ಸುಭಾಷ್ಚಂದ್ರ ಬೋಸ್ ಅವರ ಗುರುವಾಗಿದ್ದ ಮಾಧವ ದಾಸ್ ಅವರ ಪುತ್ರಿ. 1932ರಲ್ಲಿ ಬಂಗಾಲದ ಗವರ್ನರ್ ಸ್ಟಾನ್ಲೇ ಜಾಕ್ಸನ್ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಘಟಿಕೋತ್ಸವದ ಭಾಷಣ ಮಾಡಲು ಬಂದಾಗ ಅವರ ಕಡೆ ಐದು ಗುಂಡುಗಳನ್ನು ಹಾರಿಸುತ್ತಾರೆ. ಅದರಲ್ಲಿ ಯಾರೂ ಸಾಯಲಿಲ್ಲ. ಆದರೆ ಬೀನಾ ದಾಸ್ಗೆ ಏಳು ವರ್ಷ ಸೆರೆಮನೆ ವಾಸದ ಶಿಕ್ಷೆಯಾಗುತ್ತದೆ. ಜೈಲುವಾಸ ಮುಗಿಸಿ ಹೊರ ಬಂದು ಮತ್ತೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದರು. ಮತ್ತೆ ಜೈಲು. ಹೀಗೆ ನಿರಂತರ ಹೋರಾಟ ಮಾಡಿದ ಅವರನ್ನು ಬ್ರಿಟಿಷ್ ಪತ್ರಿಕೆಗಳು 'ಜೋನ್ ಆಫ್ ಆರ್ಕ್' ಎಂದು ಕರೆದಿದ್ದವು. ಯುವ ಪೀಳಿಗೆಗೆ ಈ ಕೃತಿ ಸ್ಫೂರ್ತಿದಾಯಕವಾಗಿದೆ.
ಕೃತಿ: ಶೃಂಖಲೆಯ ಝೇಂಕಾರ, ಪ್ರಕಾರ: ಆತ್ಮಕಥನ, ಏಕೆ ಓದಬೇಕು?: ಬೀನಾ ದಾಸ್ ಬಗ್ಗೆ ಅರಿಯಲು
ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು,, ಪುಟಗಳು 128, ಬೆಲೆ ರು. 75
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.