ಸಾವಿರ ರೂಪದ ರೂಪಕ
ಹಾಗೊಂದು ಕ್ಷಣ ಅವನು ಕಣ್ಣು ಮಿಟುಕಿಸಿದ್ದೇ ತಡ ನನ್ನೆದೆಯ ಆಳದಲ್ಲಿ ವಿಚಿತ್ರವಾದೊಂದು ಕಂಪನ ಉಮ್ಮಳಿಸಿ ತರಂಗಗಳು ಮೇಲಕ್ಕೆದ್ದು ಬಂದವು. ಅಂತರ್ಗತವಾದ ಶಕ್ತಿಯೆಲ್ಲವೂ ಒಮ್ಮೆಲೆ ಮುಖದತ್ತ ಚಿಮ್ಮಿ ಬಂದು ಬಿಸಿಬಿಸಿಯಾದಂತೆನಿಸಿತು. ಅದೇನೋ ಕಾಸ್ಮಾಲಾಜಿಕಲ್ ಎವಲ್ಯೂಷನ್ ಅನ್ನುತ್ತಾರಲ್ಲ, ಹಾಗೊಂದು ಶಕ್ತಿ ಸಂಚಯ ನನ್ನಲ್ಲಿ. ಈ ಭೂಮಿ ಸೃಷ್ಟಿಯಾದದ್ದೂ ಹಾಗೆಯೇ ಅಂತೆ. ನಕ್ಷತ್ರಗಳೆಲ್ಲ ಒಟ್ಟುಗೂಡಿ ಗ್ರಹಗಳಾಗಿದ್ದಂತೆ. ಆ ಮೇಲೆ ಮತ್ತೆ ವಿಭಜನೆ, ಜೀವ ರಚನೆ. ಅವುಗಳ ನಡುವೆ ಪೈಪೋಟಿ, ಸಂಘರ್ಷ. ಬಲಾಢ್ಯನ ಉಳಿವು. ಬಹುಶಃ ನನ್ನೊಳಗೆ ಇದು ಬಹುಕಾಲದಿಂದಲೂ ನಡೆಯುತ್ತಲೇ ಇದೆಯಿರಬೇಕು. ಅವೆಷ್ಟೋ ಹೊಳಪಿನ ನಕ್ಷತ್ರಗಳು ನನ್ನೆದುರು ಬಂದು ನಿಲ್ಲುತ್ತವೆ. ಒಂದೊಮ್ಮೆ ಅವೆಲ್ಲವೂ ಒಟ್ಟುಗೂಡಿದ್ದರೆ ಇಷ್ಟರಲ್ಲಾಗಲೇ ನನ್ನೊಳಗೆ ನೂರಾರು- ಸಾವಿರಾರು ಗ್ರಹಗಳ ರಚನೆಯಾಗಿ ನನ್ನ ಸುತ್ತ ಪರಿಭ್ರಮಣ ನಡೆಯುತ್ತಿರುತ್ತಿತ್ತು. ಈಗಲೂ ಇಲ್ಲವೆಂತಲ್ಲ, ಅದೊಂದು ರೀತಿಯಲ್ಲಿ ರ್ಯಾಂಪ್ವಾಕ್ನಂತೆ. ಒನಪು ವಯ್ಯಾರದಿಂದಲೇ ಬರುವ ಚೆಲುವಿನ ರಾಶಿ. ಅಷ್ಟೇ ಒಲವಿನೊಂದಿಗೇ ಬರುವ ಚೆಲುವರು ನನ್ನೆದುರು ನಿಂತ ಮರುಕ್ಷಣವೇ ನಾನು ಕನಸಿನ ಲೋಕಕ್ಕೆ ತೆರೆದುಕೊಳ್ಳುತ್ತೇನೆ. ಮುಖಕ್ಕೆ ಮುಖ ಒಡ್ಡಿ, ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲಾರಂಭಿಸುತ್ತಾರೆ. 'ಹೇಗಿದ್ದೇನೆ ಹುಡುಗಿ' ಎಂಬ ಜವ್ವನಿಗರ ಪ್ರಶ್ನೆಗೆ ನಾಚಿದ್ದೇನು ಕಡಿಮೆಯೇ! ನನ್ನೊಳಗೆ ಅವನು, ಅವನೊಳಗೆ ನಾನು, ನಾನೇ ಅವನು, ಅವನೇ ನಾನು ಎಂಬಷ್ಟು ಬೆಸೆದು ಹೋಗುತ್ತೇವೆ. ಅಲ್ಲಿ ಭೇದವೆಂಬುದೇ ಇಲ್ಲ. ಬಂದವರೆಲ್ಲರೂ ನನ್ನೊಳಗೇ ಅವರನ್ನು ಕಾಣುತ್ತಾರೆ. ಇದರ ಹಿಂದಿನ ತತ್ವವಾದರೂ ಏನೆಂದು ಎಷ್ಟೋ ಬಾರಿ ತರ್ಕಿಸಿದ್ದಿದೆ. ಎಷ್ಟು ಯೋಚಿಸಿದರೂ ಉತ್ತರ ಮಾತ್ರ ಶೂನ್ಯ. ಇಂಥ ಸನ್ನಿವೇಶದಲ್ಲಿ ತರ್ಕಕ್ಕೆಲ್ಲಿಯ ಸಮಯ? ಎಲ್ಲವನ್ನು ಬಿಟ್ಟೊಗೆದು ಕಣ್ಣೊಳಗಿನ ಹೊಳಪನ್ನು ಚೆಲ್ಲಿ ಅವರನ್ನು ನಾನು ಆಹ್ವಾನಿಸಿಕೊಳ್ಳುತ್ತೇನೆ. ಇಡಿಯಾಗಿ ಅವರನ್ನು ನನ್ನೊಳಗೆ ಸ್ವೀಕರಿಸಿಕೊಳ್ಳುತ್ತೇನೆ. ಇನ್ನೂ ವಿಚಿತ್ರ ಗೊತ್ತೇ? ಆಗ ನಾನು ನಾನಾಗೇ ಉಳಿದಿರುವುದಿಲ್ಲ. ಅವರ ದೇಹದ ಇಂಚಿಂಚೂ ನನ್ನೊಳಗೆ ಹಾಸು ಹೊಕ್ಕಾಗಿ ಹೋಗಿರುತ್ತದೆ. ಆಗ ನೋಡಬೇಕು ನನ್ನ ಸಂಭ್ರಮವನ್ನು. ಅವನಿಗಾಗಿಯೇ ನಾನು ಹುಟ್ಟಿದ್ದೇನೋ ಎನ್ನುವಂಥ ಅಹಮಿಕೆಯಲ್ಲಿ ಪ್ರಕಾಶಿಸುತ್ತಿರುತ್ತೇನೆ. ಒಂದೆರಡು ಕ್ಷಣಗಳಷ್ಟೇ, ಮೆಲ್ಲಗೆ ಒಂದೊಂದೇ ಕುಚೇಷ್ಟೆಗಳು ನನ್ನೆದುರು ಆರಂಭವಾಗುತ್ತವೆ. ಅದೇಕೋ ಏನೋ, ಘನ ಗಂಭೀರವಾಗಿ ಬಂದು ನಿಲ್ಲುವ ಪ್ರತಿಯೊಬ್ಬರದ್ದೂ ಒಂದಲ್ಲಾ ಒಂದು ಬಗೆ. ಇದ್ದಕ್ಕಿದ್ದಂತೆಯೇ ನಗುವವರೆಷ್ಟು ಮಂದಿ? ತಮ್ಮ ಸೌಂದರ್ಯಕ್ಕೆ ತಾವೇ ಹೆಮ್ಮೆಯ ತೋರುವವರೆಷ್ಟು ಜನ? ಕಣ್ಣಂಚಿನಲ್ಲಿ ಹನಿದುಂಬಿಕೊಂಡು ತುಟಿಕಚ್ಚಿ ನಿಲ್ಲುವವರಿಗೂ ಕಡಿಮೆಯೇನಿಲ್ಲ. ಹಲ್ಕಿರಿದು, ಮೂತಿ ತಿವಿದು, ಕಣ್ಣಗಲಿಸಿ, ತುಟಿ ಬಿಗಿದು, ಮೂಗು ಹೊರಳಿಸಿ... ಒಂದೇ ಎರಡೇ ಎಲ್ಲವೂ ಪೂರ್ವಜನ್ಮದ ನೆನಪುಗಳಂತೆಯೇ. ಅದೇಕೆ ಅವರು ಹಾಗೆ ನನ್ನೆದುರು ವರ್ತಿಸುತ್ತಾರೋ? ಬಹುಶಃ ನನ್ನೊಂದಿಗಿನ ಏಕಾಂತ ಅವರ ವಿಕೃತಿಗಳನ್ನೆಲ್ಲ ಹೊರಗೆಡವಲು ಪ್ರೇರಣೆಯೊದಗಿಸುತ್ತದೋ ಏನೋ? ಏಕಾಏಕಿ ಬೆತ್ತಲಾಗಿ ನಿಂತುಬಿಡುವ ಅಪಾಯಗಳೂ ಇವೆ. ಆಗೆಲ್ಲ ನನಗೆ ಏನು ಮಾಡಬೇಕೆಂಬುದೇ ತೋಚದ ಸ್ಥಿತಿ. ಅದು ಆಘಾತವೋ, ಸಂಕೋಚವೋ, ಆಸೆಯೋ, ಆತುರವೋ...ಬಿಟ್ಟ ಕಣ್ಣನ್ನು ಬಿಟ್ಟ ಹಾಗೆಯೇ ನೋಡುತ್ತಾ ನಿಂತಿರುತ್ತೇನೆ. ಇಷ್ಟಾದರೂ ನಾನು ಒಂದಿನಿತೂ ಆಕ್ಷೇಪ ತೋರಿದ್ದಿಲ್ಲ. ಏಕೆಂದರೆ ಅಲ್ಲಿ ನಾನೇ ಅವನು, ನನ್ನೊಳಗೇ ಅವನು. ಈ ಕ್ಷಣದ ಈ ಅವಿಭಕ್ತ ಸ್ಥಿತಿಯೇ ಶಾಶ್ವತ ಎಂಬ ಭ್ರಮೆ ನನ್ನದಾಗಿರುತ್ತದೆ. ಅದು ಭ್ರಮೆ ಎಂಬುದು ಅರಿವಾಗುವುದು ನನ್ನ ಎದುರಿನಿಂದ ಅವರು ಪಕ್ಕಕ್ಕೆ ಸರಿದಾಗಲೇ. ಆ ಕ್ಷಣದಲ್ಲೇ ನನ್ನೊಳಗಿದ್ದ ಬಂಧನವೂ ಕಳಚಿ ನಿಲ್ಲುತ್ತದೆ. ಒಬ್ಬೊಬ್ಬರು ಬಂದು ನಿಂತಾಗಲೂ ಅವರ ಬಲಾವಾದ ನೀಳ ತೋಳು, ಹರವಾದ ಎದೆ, ಕೆಣಕುವ ಚಿಗುರು ಮೀಸೆ, ಅಗಲ ಹಣೆಯ ಮೇಲಾಡುವ ಹೆರಳು, ಕೊಂಕು ತೋರುವ ತುಟಿ, ಆಸೆ ಹುಟ್ಟಿಸುವ ಕಣ್ಣುಗಳು... ಇತ್ಯಾದಿ ಇತ್ಯಾದಿಗಳನ್ನು ವೀಕ್ಷಿಸುತ್ತಾ ನನ್ನನ್ನೇ ನಾನು ಮರೆಯುತ್ತೇನೆ. ಇವನಾದರೂ ನನ್ನವನಾಗಿ, ಶಾಶ್ವತವಾಗಿ ನನ್ನೊಳಗೆ ನಿಂತಾನು ಎಂದು ನಿರಕಿಸುತ್ತೇನೆ. ಎಲ್ಲವನ್ನೂ ಸಹಿಸಿಕೊಳ್ಳುವ ದಿನಗಳಲ್ಲೇ ನನ್ನನ್ನು ಮುಪ್ಪಾವರಿಸಿಬಿಟ್ಟಿದೆಯಿರಬೇಕು. ಹೊಳೆಹೊಳೆಯುತ್ತಿದ್ದ ತೀಕ್ಷ್ಣ ಕಣ್ಣುಗಳೀಗ ಮಂಜುಮಂಜಾಗತೊಡಗಿವೆ. ಮೊದಲಿನ ನಿಖರತೆ ನನ್ನ ಕಣ್ಣುಗಳಲ್ಲಿ ಉಳಿದಿಲ್ಲ. ಅಲ್ಲಲ್ಲಿ ಅಳಿಸಲಾಗದ ಕಲೆಗಳು ನನ್ನ ಮುಖದ ತುಂಬ. ಅದನ್ನು ಜವ್ವನಿಗರು ಗುರುತಿಸಿಬಿಟ್ಟಿರಬೇಕು. ಇತ್ತೀಚೆಗೆ ನನ್ನೆದುರು ಬಂದು ನಿಲ್ಲುವ ಚೆಲುವಾಂತ ಚೆನ್ನಿಗರ ಸಂಖ್ಯೆಯೂ ಕುಸಿದಿದೆ. ಯಾವಾಗಲೂ ಒಮ್ಮೊಮ್ಮೆ ಅಸಡ್ಡೆಯೊಂದಿಗೇ ಬಂದು ನಿಂತರೂ, ಕೆಲವೇ ಕ್ಷಣಗಳಲ್ಲಿ ನನ್ನಿಂದ ದೂರ ಹೋಗಿಬಿಡುತ್ತಾರೆ. ಮೊದಲೆಲ್ಲ ತಾಸುಗಟ್ಟಲೆ ನನ್ನೆದುರು ಬಂದು ನಿಲ್ಲುತ್ತಿದ್ದವರಿಗೀಗ ನನ್ನ ಸಾಂಗತ್ಯವೇ ಬೇಸರವಾದಂತಿದೆ. ನಿಜವಾಗಿಯೂ ಇದೇ ನನ್ನ ಸಾವೆಂದು ಅನ್ನಿಸಲಾರಂಭಿಸಿದೆ. ಕೆಲವೊಮ್ಮೆ ವಿಷಾದ ಇನ್ನಿಲ್ಲದಂತೆ ಆವರಿಸಿಕೊಳ್ಳುತ್ತದೆ. ಸದಾ ಮನಸ್ಸಿನಲ್ಲಿ ಏನಾದರೊಂದು ಹುಳು ಸರಿದಾಡಿದಂತೆ ಸುಳಿಯತ್ತಲೇ ಇರುತ್ತದೆ. ಆಂತರ್ಯದ ಇಂಥ ಚಟುವಟಿಕೆ ನನ್ನನ್ನು ಇನ್ನಷ್ಟು ಮಂಕಾಗಿಸಿದೆ ಎಂಬುದನ್ನು ಗ್ರಹಿಸಿದೇ ಇಲ್ಲ. ಆದರೆ ಅಂಥ ಸರಿದಾಟವನ್ನು ದೂರ ತಳ್ಳುವ ಸ್ವಯಂ ಶಕ್ತಿಯನ್ನು ನಾನು ಕಳೆದುಕೊಂಡಿದ್ದೇನೆ. ಬಹುಶಃ ಇನ್ನೇನು ಬಹಳಷ್ಟು ದಿನ ಉಳಿದಿಲ್ಲ ಎಂದುಕೊಳ್ಳುವಾಗಲೇ ಆ ತುಂಟ ಒಮ್ಮೆ ಅದೇನನ್ನೋ ನನ್ನತ್ತ ಬೀಸಿ ಒಗೆದಿದ್ದ. ಅಷ್ಟೇ ಬುಡಕಳಚಿ ಬಿದ್ದಂತೆ ಆಗಿದ್ದೆ ನಾನು. ಒಂದು ಹತ್ತಾಗಿ, ಹತ್ತು ನೂರಾಗಿ, ನೂರು ಸಾವಿರಾರಾಗಿ ಇಡೀ ಬದುಕೇ ನುಚ್ಚು ನೂರಾಗಿತ್ತು. ಮನಸ್ಸು ಒಡೆದು ಹೋಗಿ ಎಷ್ಟೋ ಕಾಲವಾಗಿತ್ತು...
ಹೋಗಲಿ ಬಿಡು, ಕನ್ನಡಿ ಹಳೆಯದಾಗಿತ್ತು... ಎಂಬ ಮಾತು ಯಾರೋ ಹೇಳಿದಂತೆನಿಸಿತು. ಚೂರು ಚೂರಾಗಿ ಬಿದ್ದಿದ್ದ ಪ್ರತಿ ಕಣದಲ್ಲೂ ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ, ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ... ವಿಷಾದ ಗೀತೆ ಪ್ರತಿಫಲಿಸುತ್ತಿತ್ತು... ಅಲ್ಲಲ್ಲ, ಪ್ರತಿಧ್ವನಿಸುತ್ತಿತ್ತು.
= ರಾಧಾ ಸೋಚನಿ
abhyagatha@yahoo.co.in
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.