ಅವನದ್ದು ಒಂಥರಾ ಹುಚ್ಚು ಪ್ರೀತಿ. ಅತಿಯೆಂದರೆ ಅತಿಯೇ. ಎಲ್ಲದರಲ್ಲೂ ಅವನು ಹಾಗೆಯೇ. ಕೆಲಸಕ್ಕೆ ಬಿದ್ದರೆ ಜಗತ್ತೆ ಮುಳುಗಿ ಹೋದರೂ ಎಚ್ಚರವಿರುವುದಿಲ್ಲ. ಮುನಿಸಿಕೊಂಡರೆ ಜಪ್ಪಯ್ಯ ಅಂದರೂ ಮಾತನಾಡುವುದಿಲ್ಲ, ಅದೂ ದಿನಗಟ್ಟಲೆ. ಅಷ್ಟೇ ಕ್ರೇಜಿ, ನಗುವಿನ ಸರದಾರ. ತೀರಾ ಎಮೋಷನಲ್. ಪ್ರೀತಿಯ ವಿಚಾರದಲ್ಲೂ ಅವನದ್ದು ಇದೇ ವರ್ತನೆ. ಹುಚ್ಚಿಗೆ ಬಿದ್ದವನ ಹಾಗೆ ಪ್ರೀತಿಸುತ್ತಾನೆ. ಕೆಲವೊಮ್ಮೆ ನಾವೇ ಕಳೆದುಹೋಗುವಷ್ಟು. ಉಸಿರಾಡಲೂ ಬಿಡದಂತೆ ಕಾಡುತ್ತಾನೆ ಹಿಂದೆ ಮುಂದೆ. ಒಂದೇ ಒಂದು ಕಾಲ್ ರಿಸೀವ್ ಮಾಡದೇ ಇದ್ದರೂ ಏನೆಲ್ಲ ರಾದ್ಧಾಂತ ಮಾಡುತ್ತಾನೆ. ಎಸ್ಸೆಮ್ಮೆಸ್ ಕಳಿಸುವುದು ಒಂದು ಗಳಿಗೆ ಲೇಟಾದರೂ ತಳಮಳಿಸಿ ಹೋಗಿ ಬಿಡುತ್ತಾನೆ. ಅಪ್ಪಿ ತಪ್ಪಿಯೂ ಬೇರೆಯವರೊಂದಿಗೆ ವ್ಯಾವಹಾರಿಕ ಸಲುಗೆಯನ್ನೂ ತೋರಬಾರದು. ಹಾಗೇನಾದರೂ ಅವನೆದುರು ವರ್ತಿಸಿಬಿಟ್ಟರೆ ಹುಬ್ಬುಗಳು ಗಂಟಿಕ್ಕಿಕೊಂಡು ಬಿಡುತ್ತವೆ. ಹಾಗೆಂದು ನನ್ನ ಮೇಲೆ ಅವನಿಗೆ ಸಂಶಯವೆಂತಲ್ಲ. ನನ್ನ ವಿಚಾರದಲ್ಲಿ ಅವನ ಪೊಸ್ಸೆಸೀವ್‌ನೆಸ್‌ನದ್ದೂ ಪರಾಕಾಷ್ಠೆ.
ಎಷ್ಟೋ ಸಲ ಅಂದುಕೊಂಡಿದ್ದಿದೆ; ಥೂ ಈ ಗಂಡಸರೇ ಹೀಗಿರಬೇಕು, ಒಂದು ಸ್ವಲ್ಪ ಸಲುಗೆ ಕೊಟ್ಟಾಕ್ಷಣ ಕಮಾಂಡ್ ಮಾಡಲೇ ಹೊರಟು ಬಿಡುತ್ತಾರೆ. ತಮ್ಮನ್ನು ಪ್ರೀತಿಸುವವರು ತಮ್ಮ ಅಡಿಯಾಳಾಗೇ ಇರಬೇಕು ಅಂತ ಬಯಸ್ತಾರೆ, ನಾವೆಂದರೆ ನೀವು ಹೇಳಿದಂತೆಲ್ಲ ಕೇಳಿಕೊಂಡು ಬಿದ್ದಿರುವ ಕತ್ತೆಗಳಲ್ಲ ಎಂದು ಹೇಳಿಬಿಡಬೇಕು ಅಂತ. ಆದರೆ ಮರುಕ್ಷಣ ಅವನು ತೋರಿಸುವ ಪ್ರೀತಿ, ನಾನು ಬಯಸಿದ್ದನ್ನು ಈಡೇರಿಸಲು ಅವನು ಹೆಣಗಾಡುವ ರೀತಿ, ನನ್ನ ಬಗ್ಗೆ ಆತ ಇಟ್ಟುಕೊಂಡಿರುವ ಕಾಳಜಿ, ಅವನ ಕಮಿಟ್ಮೆಂಟ್ ಎಲ್ಲವನ್ನೂ ನೋಡಿದಾಗ ಅವನಿಗೆ ಅಷ್ಟೂ ಅಧಿಕಾರ ಇಲ್ಲವೇ ಎನಿಸುತ್ತದೆ.
ಹಾಗಿದ್ದರೆ ಅಂಥ ಅಧಿಕಾರ ಅವನಿಗೆ ಬಂದದ್ದಾದರೂ ಹೇಗೆ? ಅದು ತನ್ನಿಂದ ತಾನೇ ಬಂದದ್ದೇ? ನಾನು ಕೊಟ್ಟದ್ದೆ? ಅವನೇ ಕಿತ್ತುಕೊಂಡದ್ದೇ? ಅವನು ಹೇಳಿದ್ದನ್ನೆಲ್ಲ ಚಾಚೂ ತಪ್ಪದೇ ಪಾಲಿಸುತ್ತೇನೆ. ಅಂಥದ್ದಕ್ಕೆಲ್ಲ ಮರು ಮಾತಿಲ್ಲದೇ ತಲೆಯಾಡಿಸುತ್ತೇನೆ. ಅದಕ್ಕೆಲ್ಲ ನನ್ನ ಸಮ್ಮತಿ ಇದೆ ಅಂತೇನೂ ಅಲ್ಲ. ಅವನು ಹೇಳಿದಂತೆ ಕೇಳಲೇಬೇಕು ಅಂತಲೂ ಅಲ್ಲ. ಅದು ಅವನ ಪ್ರೀತಿಯೆದುರು ನನ್ನ ಸೋಲು. ಛೇ, ಪ್ರೀತಿಯಲ್ಲಿ ಸೋಲು ಗೆಲುವುಗಳ ಪ್ರಶ್ನೆ ಎಲ್ಲಿಯದು? ಅವನಿಗಿಷ್ಟವಾದಂತೆ ನಾನಿರಬೇಕಾದುದು ನನ್ನ ಧರ್ಮ ಅಲ್ಲವೇ? ಅದಕ್ಕಾಗಿ ನಾನು ಹಾಗೆ ವರ್ತಿಸುತ್ತೇನೆ. ಮತ್ತೆ ಈ ಧರ್ಮ ಎಲ್ಲಿಂದ ಬಂತು? ನಾನಿನ್ನೂ ಅವನಿಂದ ತಾಳಿಕಟ್ಟಿಸಿಕೊಂಡಿಲ್ಲ. ನಮ್ಮಿಬ್ಬರದು ಎಂಥಾ ಸಂಬಂಧ ಎಂಬುದು ನಮ್ಮಿಬ್ಬರಿಗೆ ಗೊತ್ತು. ನಾವು ಎಂದಿಗೂ ಬೇರೆಬೇರೆ ಅಲ್ಲವೇ ಅಲ್ಲ. ಆದರೂ ಸಮಾಜದ ಕಣ್ಣಿಗೆ ನಾವಿನ್ನೂ ಏನೂ ಅಲ್ಲವಲ್ಲ. ಹಾಗಿದ್ದ ಮೇಲೆ ಯಾರಿಗೆ, ಯಾವುದು ಧರ್ಮ? ಅಧರ್ಮ? ಅವನು ಹೇಳಿದಂತೆಲ್ಲ ನಾನು ಕೇಳಲೇಬೇಕಾದದ್ದು ಧರ್ಮವೇ? ಒಂದೊಮ್ಮೆ ತಾಳಿ ಕಟ್ಟಿ ಆಗಿದ್ದರೂ ಅವನು ಹೇಳಿದಂತೆಲ್ಲ ಕೇಳಲೇಬೇಕೆ? ನನ್ನದು ಅಂತ ತೀರಾ ವ್ಯಕ್ತಿಗತ ಸ್ವಾತಂತ್ರ್ಯವೂ ನನಗಿಲ್ಲವೇ? ನಾವಿಬ್ಬರು ಇಷ್ಟು ಹತ್ತಿರವಾಗುವುದಕ್ಕಿಂತ ಮುಂಚೆ ಅವನೇ ಹೇಳಿದ್ದಿದೆ, 'ಹುಡುಗಿಯರಿಗೆ ಸ್ವಲ್ಪನಾದರೂ ಡ್ರೆಸ್ ಸೆನ್ಸ್ ಬೇಕಪ್ಪಾ. ತೀರಾ ಅಜ್ಜಿಯರಂತೆ ಅದೇ ಚೂಡಿ, ಎಣ್ಣೆ ಮೆತ್ತಿದ ತಲೆ. ಗೌರಮ್ಮಂದಿರ ಹಾಗೆ ಇರುವುದೇಕೊ ಜಗತ್ತು ಬದಲಾಗಿದ್ದು ಗಮನಕ್ಕೇ ಬರುವುದಿಲ್ಲವೇ?'. ನನ್ನನ್ನೇ ಕುರಿತು ಅವನು ಹೇಳಿದಂತಿತ್ತು. ನಿಧಾನಕ್ಕೆ ಜೀನ್ಸ್ ತೊಡಲಾರಂಭಿಸಿದೆ. ಉದ್ದುದ್ದ ದೊಗಳೆ ಟಾಪ್‌ಗಳ ಜಾಗವನ್ನು ಆಗಾಗ ಟೀಶರ್ಟ್‌ಗಳು ಆಕ್ರಮಿಸಿಕೊಂಡವು. ಫೆದರ್ ಕಟ್ ಫೆವರಿಟ್ ಎನಿಸಿತು. ನನಗೇ ಗೊತ್ತಿಲ್ಲದಂತೆ ನಾನು ಅವನು ಹೇಳಿದ ರೀತಿಯ ಮಾಡ್ ಆಗಿದ್ದೆ. ಆದರೆ ಅವನೀಗೀಗ ಅದು ಸರಿ ಬರುತ್ತಿಲ್ಲ. ಟೀಶರ್ಟ್ ಹಾಕಿದ್ದರೂ 'ಸ್ಟಾಲ್ ಹಾಕ್ಕೋಬಾರದಾ?' ಅಂತ ಕೇಳ್ತಾನೆ. ನಗು ಬರುತ್ತದೆ ಕೆಲವೊಮ್ಮೆ. ಜತೆಗಿರುವಾಗ ಒಂದೆರಡು ಎಸ್ಸೆಮ್ಮೆಸ್‌ಗಳು ನನ್ನ ಮೊಬೈಲ್‌ಗೆ ಹೆಚ್ಚಿಗೆ ಬಂದರೆ ವಿಚಿತ್ರವಾಗಿ ಮೂತಿ ಮಾಡ್ತಾನೆ. ಅವನು ಕಾಲ್ ಮಾಡ್ದಾಗ ಎಂಗೇಜ್ ಬಂದರಂತೂ ರಣಾರಂಪಾಟ ಇದ್ದದ್ದೇ. ತಕ್ಷಣ ಕಟ್ ಮಾಡಿ ಅವನಿಗೆ ಮಾಡಿದೆನೋ ಬಚಾವ್. ಎರಡು ಮೂರು ಸಾರಿ ಟ್ರೈ ಮಾಡಿದಾಗಲೂ ನನ್ನ ಮೊಬೈಲ್‌ನಿಂದ ಅದೇ ಎಂಗೇಜ್ ಸೌಂಡ್ ಬರ್ತಿದ್ದರೆ ಮುಗಿದೇ ಹೋಯಿತು. ನನ್ನ ಮಾತು, ನನ್ನ ಪರ್ಚೆಸಿಂಗ್, ಕೆಲಸ, ಓಡಾಟ, ಕೊನೆಗೆ ನಾನು ಹೇಗೆ ಕುಳಿತುಕೊಳ್ಳಬೇಕು, ಹೇಗೆ ನಿಲ್ಲಬೇಕು, ಹೇಗೆ ನಡೆಯಬೇಕು ಎಂಬುದೆಲ್ಲವನ್ನೂ ನಿರ್ದೇಶಿಸುವುದೂ ಅವನೇ ಆಗಿದೆ. ಇಂಥವೇ ಸಿಲ್ಲಿ ವಿಚಾರಗಳಿಗೆ ನಮ್ಮ ನಡುವೆ ಈಗೀಗ ದೊಡ್ಡ ಕದನಗಳು ಶುರುವಿಟ್ಟುಕೊಂಡಿವೆ. ಮುನಿಸಿಕೊಳ್ಳುವುದು, ಟೂ ಬಿಟ್ಟುಕೊಳ್ಳುವುದು ಮಾಮೂಲಿಯಾಗಿದೆ. ಕೊನೆಗೆ ಅವನೇ ಸಾರಿ ಕೇಳಿ ಮಾತನಾಡಿಸಿಕೊಂಡು ಬರುತ್ತಾನೆ. ಒಮ್ಮೊಮ್ಮೆ ನಾವು ಪ್ರೀತಿಸುತ್ತಿದ್ದೇವೋ ದ್ವೇಷಿಸುತ್ತಿದ್ದೇವೋ ಎಂಬುದೇ ಅರ್ಥವಾಗದ ಸ್ಥಿತಿ ತಲುಪಿಬಿಟ್ಟಿದ್ದೇವೆ.
ಆದರೆ ಅವನ ನೋಟ, ನಗು, ಮುಗ್ಧತೆ, ಬುದ್ಧಿವಂತಿಕೆ, ತಾಳ್ಮೆ, ಅವನು ಹರಿಸುವ ಪ್ರೀತಿಯ ಗಾಢತೆ ಇವೆಲ್ಲಕ್ಕೆ ಮತ್ತೊಂದು ಸಾಟಿಯೇ ಇಲ್ಲ. ಇಷ್ಟೆಲ್ಲದರ ನಡುವೆಯೂ ನಿಷ್ಕಲ್ಮಶವಾಗಿ ಅವನು ನನ್ನನ್ನು ಪ್ರೀತಿಸುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರೀತಿಯೆಂದರೆ ಬರೀ ನಿರೀಕ್ಷೆಗಳೇ ಅಲ್ಲವಲ್ಲ. ಅದು ತ್ಯಾಗ ಮತ್ತು ರಾಜಿಯೊಂದಿಗೇ ಬಲಿಯಬೇಕಾದದ್ದು. ಅವನೂ ನನಗಾಗಿ ಸಿಗರೇಟ್ ಬಿಟ್ಟಿದ್ದಾನೆ. ಯಾರು ಹೇಳಿದರೂ ತೆಗೆಯದ ಗಡ್ಡ ಬೋಳಿಸಿದ್ದಾನೆ. ನನ್ನಂಥ ಹಠಮಾರಿಯನ್ನು ಸಹಿಸಿಕೊಂಡಿದ್ದಾನೆ. ಬಹುಶಃ ಅವನ ಬೇಲಿ ಇರದಿದ್ದರೆ ನನ್ನ ಚಂಚಲ ಮನಸ್ಸು ಏನೆಲ್ಲ ಹುಡುಗಾಡಿಕೆ ಮಾಡಿಕೊಂಡು ಬದುಕನ್ನು ಎಲ್ಲಿಗೆ ಕೊಂಡೊಯ್ದುಕೊಳ್ಳುತ್ತಿತ್ತೋ? ಹುಡುಗಾಟಿಕೆಯಲ್ಲಿ ಏನೆಲ್ಲ ಮಾಡಿಬಿಟ್ಟಿದ್ದೆ ಎಂಬುದು ಗೊತ್ತಿದ್ದೂ ಅವನು ನನ್ನನ್ನು ಸ್ವೀಕರಿಸಿದ್ದಾನೆ ಶುದ್ಧ ಚಿನ್ನವಾಗಿಯೇ. ಮತ್ತೆ ಹಠಮಾಡಬಾರದು, ಅವನು ಹೇಳಿದಂತೆಲ್ಲ ಕೇಳಿಕೊಂಡು ಬೆಚ್ಚಗೆ ಅವನ ಮಡಿಲಲ್ಲಿ ಇದ್ದುಬಿಡಬೇಕು. ಈ ಬಾರಿ ನಾನೇ ಸಾರಿ ಕೇಳಿ ಎಸ್ಸೆಮ್ಮೆಸ್ ಮಾಡಿ ಬಿಡೋಣ ಎಂದುಕೊಳ್ಳುವಾಗಲೇ ಮೊಬೈಲ್ ವೈಬ್ರೇಟ್ ಆಗಿತ್ತು. ಅವನದ್ದೇ ಮೆಸೇಜ್ 'ಸಾರಿ ಚಿನ್ನಮ್ಮಾ, ಐ ಮೀನ್ ಇಟ್....'
ಸಂಬಂಧದ ಗಾಢತೆಯ ನಡುವೆ ಸುಳಿದಾಡತೊಡಗಿದ್ದ ಶೀತಲಗಾಳಿ ದಿಕ್ಕು ಬದಲಿಸಿ ಹೋಗಿತ್ತು. ಮತ್ತೆ ಬೆಚ್ಚಗಿನ ಅನುಭವ.
= -ರಾಧಾ ಸೋಚನಿ
abhyagatha@yahoo.co.in