ಹಾಗೆ ಶುರುವಾದ ಶೊಶಿಯ ಸಿತಾರ್ ಕ್ಲಾಸು ನಿರಂತರ ಒಂದು ತಿಂಗಳವರೆಗೆ ಶರ್ಮಾನ ಮಧ್ಯಸ್ಥಿಕೆಯಲ್ಲಿ ಸಾಂಗವಾಗಿ ನಡೆಯಿತು. ಆ ದಿನ ಸಿತಾರ್ ಕ್ಲಾಸಿನ ತಿಂಗಳ ಕೊನೆಯಾದ್ದರಿಂದ ಕ್ಲಾಸಿನ ಆರಂಭದಲ್ಲಿ ಶೊಶಿ ತುಸು ಊದಿಕೊಂಡಿದ್ದ ಬಿಳೀ ಬಣ್ಣದ ಕಾಗದದ ಎನ್ವೆಲಪ್ಪನ್ನು ಕ್ಲಾಸಿನ ಆರಂಭದಲ್ಲಿಯೇ ಪ್ರಣಾಮನ ಎದುರಿಟ್ಟು ಕುಳಿತಳು. ಪ್ರಣಾಮ ತನ್ನ ಫೀಸು ಇಷ್ಟೆಂದು ಮುಂಚೆಯೇ ನಿಗದಿಪಡಿಸಿರಲಿಲ್ಲ. ಅವರಿಗೆ ತೋಚಿದಷ್ಟು ಕೊಡಲಿ ಎಂದಿದ್ದ. ಹಾಗೆಯೇ ಇದು ತನ್ನ ತಿಂಗಳ ಫೀಸು ಎಂದು ಅರಿತು ಎಂದಿನಂತೆ ಕ್ಲಾಸ್ ತೆಗೆದುಕೊಂಡು ಇನ್ನು ತಾವು ಹೊರಡಬಹುದೆಂಬ ಸೂಚನೆಯಿತ್ತ. ಆಗ ಶೋಶಿ ಶರ್ಮಾನ ಬಳಿ ಅತ್ಯಂತ ವಿನಯದ ಭಾವದಲ್ಲಿ ಏನೋ ಹೇಳಿಕೊಂಡಳು. ಶರ್ಮಾ ನಗುತ್ತ ಪ್ರಣಾಮನತ್ತ ತಿರುಗಿ, 'ಆ ಕವರಿನಲ್ಲಿ ಮೇಡಂ ನಿಮಗೆ ಬರೆದ ಪತ್ರವಿದೆಯಂತೆ. ಆದರೆ ಆ ಪತ್ರವು ಜಪಾನೀ ಭಾಷೆಯಲ್ಲಿದೆಯಂತೆ. ನಾನು ಅದನ್ನು ಓದಿ ನಿಮಗೆ ಹೇಳಬೇಕಂತೆ' ಎಂದ. ಅವನಾಡುವ ಮಾತುಗಳು ನಿಜಕ್ಕೂ ತನ್ನವೇ ಎಂಬ ಭಾವದಲ್ಲಿ ಶೊಶಿ ಶಾಂತಿಯ ಹಾಲ್ಗಡಲು ತುಂಬಿಕೊಂಡಂಥ ತನ್ನ ಕಣ್ಣುಗಳಿಂದ ಪ್ರಣಾಮನನ್ನೇ ನೋಡುತ್ತಿದ್ದಳು. ಅಚ್ಚರಿಯಲ್ಲಿ ಸದ್ಯಕ್ಕೆ ಎನು ಉತ್ತರಿಸಬೇಕೆಂಬ ಗೊಂದಲದಲ್ಲಿದ್ದವನಂತೆ ಪ್ರಣಾಮ್ ತಡವರಿಸುತ್ತ 'ಒಹ್..' ಎಂದಷ್ಟೇ ಉದ್ಗರಿಸಿ ಎನ್ವೆಲಪ್ಪನ್ನು ತೆಗೆದ. ಸಾವಿರದ ಹತ್ತಾರು ಗರಿಗರಿ ನೋಟುಗಳ ಬದಿಯಲ್ಲಿ ಉದ್ದಕ್ಕೆ ನಡುವೆ ಮಾತ್ರ ಒಂದೇ ಮಡಿಕೆಯಿಂದ ಬೆಚ್ಚಗೆ ಮಲಗಿದ್ದ ಮಣ್ಣ ಬಣ್ಣದ ದಪ್ಪ ಕಾಗದವನ್ನು ತೆಗೆದು ಬಿಡಿಸಿ ನೋಡಿದ. ಅಸಂಖ್ಯಾತ ಕೈಕಾಲ್ಗಳನ್ನು ಹೊಂದಿದ್ದ ಪುಟ್ಟ ಪುಟ್ಟ ರೇಖಾಚಿತ್ರಗಳಂತಿದ್ದ ಅಕ್ಷರಗಳ ಸಾಲುಗಳು ನೋಡಲು ಬಹಳ ಸುಂದರವಾಗಿದ್ದವು. ಜೀವಮಾನದಲ್ಲಿ ಮೊದಲ ಬಾರಿಗೆ ಜಪಾನೀ ಭಾಷೆಯ ಅಕ್ಷರಗಳನ್ನು ಕೈಯಲ್ಲಿ ಹಿಡಿದು ನೋಡುತ್ತಿದ್ದ ಪ್ರಣಾಮನಿಗೆ ಮಣ್ಣಬಣ್ಣದ ಆ ದಪ್ಪ ಕಾಗದವೂ ಅದರ ಮೇಲೆ ಶೊಶಿ ಬಣ್ಣ ಬಣ್ಣದ ಹೊಳೆಯುವ ಅಕ್ಷರಗಳಲ್ಲಿ ಬರೆದಿದ್ದ ಅರ್ಥವಾಗದ ಸಾಲುಗಳೂ ಕೇವಲ ನುಡಿಸಾಣಿಕೆಯಿಂದ ಅರ್ಥವಾಗದ ತಬಲಾದ ಚಕ್ರಧಾರ್‌ಗಳ ಬೋಲಿನಂತೆ ಕಂಡವು. ಮನಸ್ಸನ್ನು ಕಟ್ಟಿದ ಅಚ್ಚರಿಯ ಅರ್ಥವಾಗದ ವಿಪರೀತ ಆಪ್ತತೆಯ ಗುಂಗನ್ನು ಆನಂದಿಸುತ್ತ ಪ್ರಣಾಮ್, ಈ ಬನಾರಸ್ಸಿನಲ್ಲಿ ಇಷ್ಟು ಚಂದದ ಕಾಗದವನ್ನು ಎಲ್ಲಿ ಹೊಂಚಿದಳೋ ಈ ಹುಡುಗಿ ಎಂದುಕೊಳ್ಳುತ್ತ ಆ ಕಾಗದವನ್ನು ಶರ್ಮಾನ ಕೈಗಿತ್ತ.
ಇವಳು ಹೇಳಿದ್ದನ್ನೆಲ್ಲ ತಾನು ಟ್ರಾನ್ಸ್‌ಲೇಟ್ ಮಾಡಿ ಹೇಳುತ್ತೇನಲ್ಲ, ಹಾಗಿದ್ದರೂ ಈಕೆಗೆ ಪತ್ರ ಬರೆಯುವ ಅಗತ್ಯವೇನಿತ್ತು ಎಂಬಂಥ ಅಚ್ಚರಿಯಲ್ಲಿ ಶರ್ಮಾ ಕೈಗೆ ಬಂದ ಪತ್ರವನ್ನು ಬಿಡಿಸಿ ಅಲ್ಲಿ ಬರೆದ ಸಾಲುಗಳನ್ನು ಒಮ್ಮೆ ಜಪಾನಿಯಲ್ಲೇ ಓದುತ್ತ ನಡುನಡುವೆ ನಿಲ್ಲಿಸಿ ಆ ಸಾಲುಗಳ ಭಾವವನ್ನು ಮುಖದಲ್ಲೂ ವ್ಯಕ್ತಪಡಿಸುತ್ತ ತಾನು ಓದಿದ್ದು ಸರಿಯೇ ಎಂಬರ್ಥದಲ್ಲಿ ಆಗಾಗ ಶೊಶಿಯತ್ತ ನೋಡುತ್ತಿದ್ದ. ಶೊಶಿ ತನ್ನ ಮನದ ಸಾಲುಗಳನ್ನು ಮತ್ತೊಬ್ಬರ ಬಾಯಿಯಿಂದ ಕೇಳುವ ಸುಯೋಗಕ್ಕೆ ಬೆರಗಾಗಿ ಖುಷಿಯಿಂದ ಕೇಳುತ್ತ ..ಮ್.. ಮ್.. ಎಂದು ತಲೆಯಾಡಿಸುತ್ತಿದ್ದಳು. ವಿಶಿಷ್ಟವಾದ ಭಾವವೊಂದರಲ್ಲಿ ಶರ್ಮಾ ಪತ್ರವನ್ನು ಹಿಡಿದು ಓದುತ್ತ ಅನುವಾದಿಸುತ್ತ ಪ್ರಣಾಮನಿಗೆ ಹೇಳತೊಡಗಿದ.
'ನನ್ನ ಜೀವನದ ಮೊಟ್ಟ ಮೊದಲ ನಿಜವಾದ ಗುರುವಿಗೆ ನಮಸ್ತೆ...' ಶರ್ಮಾ ಹುಬ್ಬೇರಿಸಿ, ಕ್ಷಣಕಾಲ ಮುಂದಿನವಾಕ್ಯವನ್ನು ಓದಿಕೊಂಡು ಮುಂದುವರಿಸಿದ. 'ನಾನು ವಿಲಾಯತ್‌ಖಾನರನ್ನು ಕೇಳಿದಾಗಲೆಲ್ಲ ಅಂಥ ಗುರುಗಳ ಬಳಿ ಸಿತಾರ್ ಕಲಿಯಬೇಕು ಎಂಬ ಹಂಬಲ ಸದಾ ಕಾಡುತ್ತಿತ್ತು. ನನ್ನ ತಂದೆಯವರೊಂದಿಗೆ ಮೊದಲ ಬಾರಿಗೆ ಜೊವನ್‌ಪುರಕ್ಕೆ ಬಂದಾಗ ತನ್ನ ಹೆಸರಿನ ರಾಗಮೊಂದನ್ನು ಸೃಷ್ಟಿಸಿದ ಆ ಊರಿನ ಮಹಿಮೆಗೆ ಬೆರಗುಗೊಂಡಿದ್ದೆ. ಸಾಯುವ ಮೊದಲು ನೆಮ್ಮದಿಯಾಗುವಷ್ಟು ಸಿತಾರ್ ನುಡಿಸಬೇಕು ಎಂಬ ಭಾವ ನನಗೆ ಹುಟ್ಟಿದ್ದು ಅಲ್ಲೇ. ಆಗ ನನಗೆ ಬರೀ ಹದಿನಾರು ವರ್ಷ. ನನ್ನ ಪುಟ್ಟ ಪೋರ್ಟೆಬಲ್ ಸಿಡಿ ಪ್ಲೇಯರಿನಲ್ಲಿ ವಿಲಾಯತ್‌ಖಾನರನ್ನು ಹಾಕಿಕೊಂಡು ಜೊವನ್‌ಪುರದ ಶಾಲೆಯ ಹಿಂದಿನ ಔಟ್‌ಹೌಸಿನಲ್ಲಿ ಕುಳಿತು ಕೇಳುತ್ತಿದ್ದ ನನಗೆ ಸಿತಾರ್ ಒಂದು ಅಚ್ಚರಿ! ಜಪಾನಿಗೆ ಮರಳಿ ವಿದ್ಯಾಭ್ಯಾಸ ಪೂರೈಸುವವರೆಗೆ ಇಲ್ಲಿಯೇ ಇದ್ದು ಕಲಿಯಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲವೆಂದು ಅಪ್ಪ ಹೇಳಿದಾಗ ದುಃಖವಾಗಿತ್ತು. ಆದರೆ ಈಗ ಅದು ಸಾಧ್ಯವಾಗಿದೆ. ನಿಮ್ಮಂಥ ಗುರುಗಳು ಸಿಕ್ಕಿದ್ದಾರೆ. ಭಾಷೆಯ ಸಮಸ್ಯೆಗೆ ಶರ್ಮಾ ಇಷ್ಟು ದಿನ ನನ್ನೊಂದಿಗಿದ್ದು ಸಹಕರಿಸಿದ್ದಾರೆ. ನನ್ನ ಮನಸ್ಸು ಮತ್ತು ನಿಮ್ಮ ಮನಸ್ಸನ್ನು ಅರಿತು ಕೇವಲ ಮಾತನ್ನಷ್ಟೆ ಅಲ್ಲದೆ ಭಾವವನ್ನು ಅನುವಾದಿಸಿದ್ದಾರೆ. ಅವರ ಕಾಂಟ್ರಾಕ್ಟ್ ನಾಳೆಗೆ ಮುಗಿಯುತ್ತದೆ ಮತ್ತು ಅವರು ತಮ್ಮ ಮುಂದಿನ ಕೆಲಸಕ್ಕೆ ಹೊರಡುತ್ತಾರೆ. ಅವರೂ ನಮ್ಮೊಂದಿಗಿದ್ದು ್ಣಸಂಗೀತದ ಮಹತ್ತನ್ನು ಆನಂದಿಸಿದ್ದಾರೆ ಎಂಬುದು ನನ್ನ ಭಾವನೆ... ನಿಮ್ಮೊಂದಿಗೆ ಕಳೆಯುವ ದಿನದ ಈ ಒಂದು ತಾಸು ನನ್ನ ಜೀವನದ ಅಮೂಲ್ಯ ಸಮಯ. ತಾವು ಕಲಿಸುವ ಪರಿಗೆ ನಾನು ನಿಜಕ್ಕೂ ಬೆರಗಾಗಿದ್ದೇನೆ. ಇನ್ನು ಮುಂದೆ ಭಾಷೆ ಬಾರದ ನಾನು ನಿಮ್ಮ ಮಾತುಗಳನ್ನು ಹೇಗೆ ಅರ್ಥೈಸಿಕೊಳ್ಳುವುದೋ ತಿಳಿಯದು. ಬಹುಶಃ ಸಂಗೀತವಲ್ಲದೆ ಮತ್ತೇನನ್ನೂ ನನಗೆ ಕಲಿಯಲಾಗುವುದಿಲ್ಲ ಎಂಬುದು ಹಿಂದಿಯನ್ನು ಕಲಿಯಲು ಇಷ್ಟು ದಿನ ಪ್ರಯತ್ನಪಟ್ಟು ಸೋಲುತ್ತಿರುವುದರಿಂದ ಅನ್ನಿಸುತ್ತಿದೆ. ಈ ಸಮಸ್ಯೆಗೆ ತಾವು ದಯಮಾಡಿ ಹೊಂದಿಕೊಂಡು ನನಗೆ ಹೀಗೆಯೇ ಕಲಿಸುತ್ತೀರಿ ಎಂದು ಆಶಿಸುತ್ತೇನೆ.'
ಪ್ರಣಾಮ್ ಶರ್ಮಾನ ಮಾತುಗಳನ್ನು ಗಮನವಿಟ್ಟು ಕೇಳುತ್ತ ಆಗಾಗ ಶೊಶಿಯತ್ತ ನೋಡುತ್ತಿದ್ದ. ಶರ್ಮಾನ ಅನುವಾದವು ಮುಗಿದಾಗ ತಾನು ಬರೆದ ಮಾತುಗಳು ತನ್ನ ಗುರುವಿಗೆ ಹೇಗೆ ಕಂಡಿರಬಹುದೆಂಬ ಮತ್ತು ಗುರುವಿನ ಉತ್ತರಕ್ಕಾಗಿ ಕಾಯುತ್ತಿದ್ದವಳಂತೆ ಶೊಶಿ ಪ್ರಣಾಮನ ಮುಖವನ್ನು ನೋಡುತ್ತಿದ್ದಳು. 'ನಾನು ಈ ಪತ್ರಕ್ಕ ಪತ್ರದ ಮೂಲಕವೇ ಉತ್ತರಿಸಲೋ ಅಥವಾ ಈಗಲೇ ಹೇಳಲೋ' ಪ್ರಣಾಮನ ಈ ಮಾತಿಗೆ ಶರ್ಮಾ ನಕ್ಕಿದ್ದನ್ನು ಕಂಡು ಅರ್ಥವಾಗದ ಶೊಶಿ ಶರ್ಮಾನತ್ತ ಪ್ರಶ್ನಾರ್ಥಕ ಚಹರೆಯಲ್ಲಿ ನೋಡತೊಡಗಿದಳು. ಶರ್ಮಾ ಪ್ರಣಾಮನ ಮಾತನ್ನು ಜಪಾನಿಯಲ್ಲಿ ಹೇಳಿದಾಗ ಅವಳೂ ನಕ್ಕಳು. ದುಗುಡ ತುಂಬಿದ ಮನಸ್ಸಿನ ಭಾರವಾದ ಕೊರಳ ನಗುವಾಗಿತ್ತದು. ಅವಳು ಪ್ರಣಾಮನೆದುರು ಹಾಗೆ ಖುಲ್ಲಾ ನಕ್ಕಿದ್ದು ಅದೇ ಮೊದಲಾಗಿತ್ತು. ಹಾಗೆ ನಗುತ್ತಿದ್ದ ಅವಳು ಪ್ರಣಾಮನಿಗೆ ಬಹಳ ಸುಂದರವಾಗಿ ಕಂಡಳು. ಸುಂದರ ಹೆಣ್ಣಿನ ಪ್ರಾಮಾಣಿಕ ನಗುವಿನಲ್ಲಿ ಒಂದು ಅಚ್ಚರಿಯ ಹಿತವಾದ ನಾದವಿದೆ ಎಂದುಕೊಳ್ಳುತ್ತ ಪ್ರಣಾಮ್ ಹೇಳಿದ. 'ವಾಸ್ತವದಲ್ಲಿ ಸಂಗೀತಕ್ಕೆ ಭಾಷೆಯ ಅಗತ್ಯವಿಲ್ಲ. ಅಗತ್ಯವಿದ್ದಿದ್ದರೆ ಈ ಸಾಜ್‌ಗಳು ಸ್ವತಂತ್ರವಾಗಿ ಸಂಗೀತ ಪ್ರಕಾರವೊಂದರ ಶಿಖರಪ್ರಾಯವಾಗುತ್ತಿರಲಿಲ್ಲ. ಸಂಗೀತದ ಸ್ವರಗಳನ್ನು ಯಾವ ಭಾಷೆಯಲ್ಲಿ ಹೇಳ್ತೀರಿ ನೀವು?' ಪ್ರಣಾಮನ ಮುಂದುವರಿಯುತ್ತಿದ್ದ ಮಾತನ್ನು ಶರ್ಮಾ ತಡೆದು ಮತ್ತೆ ಮರೆತುಹೋದರೆ ಎಂಬ ಗಾಬರಿಯಲ್ಲಿ ಒಂದೇ ಉಸುರಿಗೆ ಅನುವಾದಿಸಿ ಶೊಶಿಗೆ ಜಪಾನಿಯಲ್ಲಿ ಹೇಳಿದ. ಶೊಶಿ ತಲೆಯಾಡಿಸುತ್ತ ತನ್ನ ಗುರುವನ್ನು ನೋಡಿದಳು. ತನ್ನ ಮಾತಿನ ಓಘಕ್ಕೆ ಹೀಗೆ ಬಂದ ತಡೆಯಿಂದ ಪ್ರಣಾಮ್ ಒಂದರ್ಥದಲ್ಲಿ ವಿಚಲಿತನಾದವನಂತೆ ಶೊಶಿಯತ್ತ ನೋಡುತ್ತ, 'ನಾನು ಹೇಳಿದ್ದನ್ನು ಅವರು ನಿಮಗೆ ಅನುವಾದಿಸಿ ಹೇಳ್ತಾರೆ. ಅವರ ಜಪಾನೀ ಜ್ಞಾನ ಎಷ್ಟಿದೆಯೋ ನನಗೆ ತಿಳಿಯದು. ಅನುವಾದ ಅನುವಾದವಷ್ಟೆ. ಅದು ಅವರ ಕೆಲಸ.' ಶೊಶಿ ಅರ್ಥಕ್ಕಾಗಿ ಕಾಯುವವಳಂತಿದ್ದಳು. 'ಶರ್ಮಾ ಜೀ ತಪ್ಪು ತಿಳಿಯಬೇಡಿ. ನಾನು ಮಾತನಾಡುವ ಹತ್ತೋ ಹದಿನೈದೋ ವಾಕ್ಯಗಳನ್ನು ನಡುವೆ ನಿಮ್ಮ ಅನುವಾದಕ್ಕಾಗಿ ಹತ್ತು ಬಾರಿ ನಿಲ್ಲಿಸಬೇಕು. ನೀವು ನಿಮ್ಮ ಕೆಲಸ ಮಾಡುತ್ತೀರಿ ಸರಿ, ಆದರೆ ನಡುವೆ ಆಗುವ ತಡೆಯಿಂದ ನನ್ನ ಭಾವನೆಯ ಓಟಕ್ಕೆ ಒಂದಿಷ್ಟಾದರೂ ಅಡ್ಡಿಯಾಗಿಯೇ ತೀರುತ್ತದೆ' ತನ್ನ ಮಾತಿನಲ್ಲಿ ಅನಗತ್ಯವಾಗಿ ದನಿಯ ಏರಿಕೆಯಾದದ್ದನ್ನು ಅರಿತ ಪ್ರಣಾಮ್ ದನಿಯಿಳಿಸಿ 'ಹೈ ನಾ ಶರ್ಮಾ ಜೀ?' ಎಂದ. ಶರ್ಮಾ ತಲೆಯಾಡಿಸಿದ. 'ಆದರೆ ಸಂಗೀತಕ್ಕೆ ಯಾವ ಭಾಷೆ ಬೇಕು ಹೇಳಿ? ವಿಲಾಯತ್‌ಖಾನರ ಯಾವ ಭಾಷೆಯಿಂದ ಶೊಶಿ ಆಕರ್ಷಿತರಾಗಿದ್ದಾರೆ? ಶುದ್ಧನಾದದ ಅನುಭೂತಿಯನ್ನು ತಾನೆ? ತಮ್ಮಿಂದಾದ ಸಹಕಾರ ನಿಜಕ್ಕೂ ದೊಡ್ಡದು. ಆದರೆ, ನನಗೆ ಈ ಪ್ರಕ್ರಿಯೆಯಿಂದ ಆಗುವ ಸಮಸ್ಯೆಯನ್ನು ನಿಮಗೆ ಹೇಳಿಕೊಂಡೆ ಅಷ್ಟೆ, ಬುರಾ ಮತ್ ಮಾನಿಯೆ' ಎಂದ ಪ್ರಣಾಮ್, 'ಶೊಶಿಗೆ ಹೇಳಿಬಿಡಿ, ಇನ್ನು ಭಾಷೆಯ ಅಗತ್ಯವಿಲ್ಲ ಅವರಿಗೆ' ಎಂದು ಕೈಯಲ್ಲಿದ್ದ ಸಿತಾರಿನ ತಂತಿಗಳ ಮೇಲೆ ಕೈಯಾಡಿಸತೊಡಗಿದ. ಇದುವರೆಗೆ ಪ್ರಣಾಮ್ ಆಡಿದ ಮಾತುಗಳಲ್ಲಿ ಯಾವುದನ್ನು ಟ್ರಾನ್ಸ್‌ಲೇಟ್ ಮಾಡಿ ಶೊಶಿಗೆ ಹೇಳಲಿ ಎಂಬ ಗೊಂದಲದಲ್ಲಿ ಬಿದ್ದವನಂತೆ, ಶೊಶಿಯ ಮುಖವನ್ನು ನೋಡುತ್ತ ಬಹುಶಃ ಇನ್ನು ಮುಂದೆ ಭಾಷೆಯ ಅಗತ್ಯವಿಲ್ಲ ಎಂಬುದನ್ನಷ್ಟೆ ಬಗೆಬಗೆಯಾಗಿ ಹೇಳಿದ.
ತಾನು ಅನುವಾದಕನ ಹೊರತಾಗಿಯೂ ಹೇಗೆ ಕ್ಲಾಸ್ ತೆಗೆದುಕೊಳ್ಲಬಲ್ಲೆ ಎಂಬುದನ್ನು ತೋರಿಸಲಿಕ್ಕಾಗಿ ಪ್ರಣಾಮ್ ಆ ದಿನ ಕ್ಲಾಸು ಮುಗಿದಿದ್ದರೂ ಮತ್ತಷ್ಟು ಹೊತ್ತು ಕೇವಲ ಸನ್ನೆ ಮತ್ತು ಕ್ರಿಯೆಯ ಮೂಲಕ ಶೊಶಿಗೆ ಪಾಠ ಹೇಳಿದ. ಆ ಕ್ಲಾಸ್ ಮುಗಿಯುವ ಹೊತ್ತಿಗೆ ಶೊಶಿಯ ಮುಖದಲ್ಲಿ ಸಂತೃಪ್ತಿಯೂ ಶರ್ಮಾನ ಮುಖದಲ್ಲಿ ಒಂದು ಬಗೆಯ ಮಿಶ್ರಭಾವವೂ ವ್ಯಕ್ತವಾಗುತ್ತಿತ್ತು.
=
ಭಾಷೆಯ ಬಳಕೆಯಿಲ್ಲದೆ ಸಿತಾರ್ ಕಲಿಸುವುದು ಪ್ರಣಾಮನಿಗೇನೂ ತೊಂದರೆಯಾಗಲಿಲ್ಲ. ಮೆಲ್ಲನೆ ಶೊಶಿಯ ಪ್ರತಿಕ್ರಿಯೆಗಳಿಗೆ ತಕ್ಕಂತೆ ತನ್ನ ಸನ್ನೆಯ ಶೈಲಿಗಳಲ್ಲಿ ಸುಧಾರಿಸಿಕೊಳ್ಳತೊಡಗಿದ. ನಡುವೆ ಆಗಾಗ ಸಮಯಕ್ಕೆ ತಕ್ಕಂತೆ ಸಣ್ಣ ಸಣ್ಣ ಇಂಗ್ಲಿಷ್ ಶಬ್ದಗಳು ಅವನ ಬಾಯಿಯಿಂದ ಉದುರುತ್ತಿದ್ದವು. ಶೊಶಿಗೆ ಹಾಗೆ ಇಂಗ್ಲಿಷ್ ಏನೂ ಬರುವುದಿಲ್ಲವೆಂದೇನಿರಲಿಲ್ಲ. ಯೆಸ್, ನೊ, ರೈಟ್, ರಾಂಗ್, ಹ್ಯಾಂಡ್, ಫಿಂಗರ್ಸ್.... ಮೊದಲಾದ ಶಬ್ದಗಳನ್ನು ಅವಳು ಪ್ರಣಾಮನ ಬಾಯಿಯಿಂದ ಮತ್ತೆ ಮತ್ತೆ ಕೇಳಿ ಅರಿತಿದ್ದಳು. ಇನ್ನು ಅವನು ಹೇಳಿಕೊಡುವ ಸ್ವರಾಲಂಕಾರಗಳನ್ನು ಅವಳು ಥಟ್ಟನೆ ತನ್ನ ಸಿತಾರಿನಲ್ಲಿ ನುಡಿಸುತ್ತಿದ್ದಳು. ಮತ್ತು ಇಡೀ ಕ್ಲಾಸನ್ನು ಅವಳು ತನ್ನ ಐಫೋನಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಳು. ಬರಬರುತ್ತ ಅವಳ ನುಡಿಸಾಣಿಕೆ ಹದವಾಗಿ ಮೆಲ್ಲನೆ ಪಕ್ವವಾಗುತ್ತಿತ್ತು.
ಆ ಒಂದು ರಾತ್ರಿ ಅವಳಿಗೆ ಹಾಗೇಕನ್ನಿಸಿತೋ ಅಥವಾ ಅಂಥ ವಿಪರೀತ ರಿಯಾಜಿನ ಹುಚ್ಚು ಯಾಕೆ ಬಂತೋ ಮಧ್ಯ ರಾತ್ರಿ ಕಳೆಯುವವರೆಗೆ ಶುದ್ಧಸ್ವರಗಳ ಬಗೆಬಗೆಯ ಅಲಂಕಾರಗಳ ರಿಯಾಜಿನಲ್ಲಿ ಒಂದೊಂದನ್ನೂ ಗಂಟೆಗಳವರೆಗೆ ರಿಯಾಜ್ ಮಾಡಿದಳು, ಎಡಗೈಯ ತೋರು ಬೆರಳು ಮತ್ತು ನಡುವಿನ ಬೆರಳುಗಳ ತುದಿಯಲ್ಲಿ ಬೀಳುತ್ತಿದ್ದ ತಂತಿಯ ಕೊರೆತವನ್ನು ನಿರ್ಲಕ್ಷಿಸಿ, ಬಲಗೈಯ ತೋರುಬೆರಳ ತುದಿಗೆ ಸಿಕ್ಕಿಸಿಕೊಳ್ಳುವ ಮಿಜರಾಬಿನಿಂದಾಗುವ ತೀವ್ರ ಯಾತನೆಯನ್ನು ಕಡೆಗಣಿಸಿ. ರಿಯಾಜ್ ಮುಗಿಸಿ ತನ್ನ ಬಲಗೈಯನ್ನು ನೋಡಿಕೊಂಡರೆ ಮಿಜರಾಬ್ ಸಿಕ್ಕಿಸುವ ಜಾಗದಲ್ಲಿ ಗಾಯವಾಗಿ ರಕ್ತ ಸೋರುತ್ತಿತ್ತು. ಎಡಗಿಯ ತೋರುಬೆರಳು ಮತ್ತು ನಡುಬೆರಳುಗಳ ಮೇಲೆ ತಂತಿಯ ಅಚ್ಚು ನೇರವಾಗಿ ಪಕ್ಕಾ ಬಿದ್ದು, ಆ ಜಾಗ ಅಸಾಧ್ಯವಾಗಿ ಉರಿಯುತ್ತಿತ್ತು.
ನಡುರಾತ್ರಿಯ ನಂತರ ಮಲಗಿಯೂ ಬೆಳಗ್ಗೆಯ ಎಂಟು ಗಂಟೆಯ ಕ್ಲಾಸಿಗೆ ಮಿಜರಾಬಿನ ಬೆರಳಿಗೆ ಪ್ಲಾಸ್ಟರ್ ಸುತ್ತಿಕೊಂಡು ಬಂದಿದ್ದ ಶೊಶಿಯ ಬೆರಳನ್ನು ಪ್ರಣಾಮ್ ತೀವ್ರ ಆಸ್ಥೆಯಿಂದ ನೋಡಿದ. ತಾನು ಬನಾರಸ್ಸಿಗೆ ಬಂದ ಆರಂಭದಲ್ಲಿ ತಾರಕ್ ಬಾಬಾನ ಬಳಿಯಿದ್ದ ನಲವತ್ತು ವರ್ಷ ಹಳೆಯ ಸಿತಾರನ್ನು ಕಡಿಮೆ ದರದಲ್ಲಿ ಸಿಗತ್ತದೆಯೆಂಬ ಒಂದೇ ಕಾರಣಕ್ಕೆ ರಿಪೇರಿ ಮಾಡಿಸಿಕೊಂಡು ಹಿಡಿದು ಹುಚ್ಚನಂತೆ ರಿಯಾಜ್ ಮಾಡುತ್ತ ಹೀಗೆ ಬೆರಳುಗಳನ್ನು ಕೊರೆದುಕೊಂಡು ನೋವನ್ನನುಭವಿಸುತ್ತಿದ್ದುದರ ನೆನಪಾಯಿತು ಅವನಿಗೆ. ಆಗೆಲ್ಲ ತನ್ನ ಬೆರಳುಗಳ ಮೇಲೆ ತಂತಿಯ ಕಪ್ಪಾದ ಅಚ್ಚು ಹೆಚ್ಚುತ್ತ ಹೋದಂತೆಲ್ಲ ಆಗುತ್ತಿದ್ದ ಒಂದು ಬಗೆಯ ಹೆಮ್ಮೆ, ಮತ್ತು ಮತ್ತೆ ಮತ್ತೆ ಆ ಅಚ್ಚನ್ನು ನೋಡಿಕೊಳ್ಳುತ್ತ ಆ ಭಾಗ ನೀಡುತ್ತಿದ್ದ ನೋವಿನ ಹಿತವು ನೆನಪಾಯಿತು ಅವನಿಗೆ. ಶೊಶಿಯ ಬೆರಳುಗಳನ್ನು ಆಪ್ಯಾಯಮಾನ ಭಾವದಲ್ಲಿ ತನ್ನ ಒರಟು ಕೈಗಳಲ್ಲಿ ಹಿಡಿದು ನೋಡಿದ. ಕಾಲಕಾಲಕ್ಕೆ ಮೆನಿಕ್ಯುರ್ ಮಾಡಿಸಿದ ಸಾಕ್ಷಿಗೆಂಬಂತೆ ಬಿದಿಗೆಯ ಚಂದ್ರನ ಹೋಲುವ ಉಗುರುಗಳ ಬಿಳುಪುಹೊಳೆಯುತ್ತಿದ್ದ ಮುದ್ದಾದ ನವಿರುಬೆರಳಗಳು! ಅಂಥ ದಿವ್ಯ ಬೆರಳುಗಳ ಮಿದುವಾದ ತುದಿಗಳಲ್ಲಿ ಅಚ್ಚೊತ್ತಿದ್ದ ಸಿತಾರಿನ ತಂತಿಗಳ ರೂಕ್ಷತೆ. ಅಂಥ ಮಿದುವಾದ ನಾದವನ್ನು ಹೊಮ್ಮುವ ಸಿತಾರಿನ ಮೇಲೆ ಹರಿಯುವ ಬೆರಳುಗಳಲ್ಲಿ ಎಂಥ ರೂಕ್ಷತೆಯಿರಬೇಕು... ಕೈಯಲ್ಲಿ ಹಿಡಿದಿದ್ದ ಶೊಶಿಯ ಬೆರಳುಗಳು ಪ್ರಣಾಮನ ಮನಸ್ಸನ್ನು ಹೀಗೆಲ್ಲ ವಿಕ್ಷಿಪ್ತಗೊಳಿಸಿಬಿಟ್ಟವು. 'ಟುಡೇ... ಯು... ಪ್ರಾಕ್ಟಿಸ್?' ಅವನ ಶಬ್ದ ಸಹಿತ ಸನ್ನೆಗಳನ್ನು ಅರಿತವಳಂತೆ ಶೊಶಿ, ತನ್ನ ನಯಕಲು ಕುತ್ತಿಗೆಯನ್ನು ಹಿಂದೆ ಮುಂದೆ ಆಡಿಸುತ್ತ 'ಮ್..ಮ್.. ಯೆಸ್' ಎಂದಳು.
'ನೋ.. ಯು.. ಸುನೋ.. ಐ.. ಪ್ಲೇ.. ನೋ ಪ್ರಾಕ್ಟಿಸ್' ಪ್ರಣಾಮ್ ತರಾಫಿನ ತಂತಿಗಳನ್ನು ನಟ್ ಭೈರವ ರಾಗಕ್ಕೆ ಜೋಡಿಸಿ ತೀವ್ರವಾದ ಮಂದ್ರಾಲಾಪದಲ್ಲಿ ತೊಡಗಿದ. ಶೊಶಿ ಸಿತಾರನ್ನು ತನ್ನ ಕಾಲುಗಳ ಮೇಲಿಟ್ಟುಕೊಂಡು ತನ್ನ ಗುರುವಿನ ಧ್ಯಾನಸ್ಥ ಆಲಾಪವನ್ನು ಆವಾಹಿಸಿಕೊಳ್ಳತೊಡಗಿದಳು. ತನ್ನ ಬೆರಳುಗಳನ್ನು ತುಸು ಹೊತ್ತಿನ ಮುಂಚೆ ಗುರುವು ಪ್ರೀತಿಯಿಂದ ಹಿಡಿದ ಆಪ್ಯಾಯತೆಯು ಅವಳನ್ನು ಪದೇ ಪದೇ ಕಾಡತೊಡಗಿತು. ಕೈಯಲ್ಲಿ ಸಿತಾರ್ ಹಿಡಿದು ನುಡಿಸ ಹೊರಟ ರಾಗದ ಒಡಲನ್ನು ಬಗೆದು ರಾಗದ ರಸವನ್ನು ಕೈತುಂಬ ಚೆಲ್ಲುತ್ತ ನಾದಲೋಕದ ವಿಸ್ಮಯವನ್ನು ಸೃಷ್ಟಿಸುವ ತನ್ನ ಗುರುವಿನ ಒರಟು ಕೈಗಳ ಆ ಮೃದುವಾದ ಸ್ಪರ್ಶಕ್ಕೆ ಶೊಶಿ ಬೆರಗಾಗಿದ್ದಳು. ಎದುರು ಅದೇ ಒರಟು ಬೆರಳುಗಳಿಂದ ಹೊಮ್ಮಿ ಆಲಾಪಗಳ ನಡುವೆ ಚಿಮ್ಮುವ ನಟ್ ಭೈರವದ ಭಕ್ತಿ ಹಾಗೆ ಶೊಶಿ ತನ್ನ ಗುರುವಿನ ಸಿತಾರ್ ಕೇಳುತ್ತ ಪರವಶಳಾಗಿಹೋದಳು.
=
ಆ ರಾತ್ರಿ ಶೊಶಿಗೆ ಸುಲಭಕ್ಕೆ ನಿದ್ದೆ ಬರಲಿಲ್ಲ. ಹೊರಗೆ ಆಗಿನ್ನೂ ನಿಂತ ಮಳೆಯು ಕಲ್ಪಿಸಿದ್ದ ತೀರಾ ಆಪ್ತ ಎನ್ನಿಸುವಂಥ ವಾತಾವರಣವು ಕತ್ತಲೆಯ ನಿತ್ಯದ ಕನವರಿಕೆಯನ್ನು ತುಸು ಹೆಚ್ಚಿಸಿದಂತಿತ್ತು. ತುಸು ಹೊತ್ತಿನ ಮುಂಚೆ ಬಂದಿದ್ದ ಶಾಲೆಯ ದೈನಂದಿನ ರಿಪೋರ್ಟಿನ ಈಮೇಲ್ ಅನ್ನು ಜಪಾನಿಗೆ ಟ್ರಾನ್ಸ್ಲೇಟರ್‌ನ ಸಹಾಯದಿಂದ ಅನುವಾದಿಸಿಕೊಂಡು ನೋಡಿದಂತೆ ಮಾಡಿ ಹಾಸಿಗೆಯಲ್ಲಿ ಮೈಚಾಚಿದ್ದಳು ಶೊಶಿ. ಮಲಗಿದಲ್ಲೆಯೇ ಇನ್ನೂ ಉರಿಯುತ್ತಿದ್ದ ಹಾಸುದೀಪದ ಬೆಳಕಿನಲ್ಲಿ ಕೋಣೆಯ ಒಂದು ಮೂಲೆಯಲ್ಲಿ ನಿಂತಿದ್ದ ಸಿತಾರು ನಿಚ್ಚಳವಾಗಿ ತೋರುತ್ತಿತ್ತು. ತನ್ನ ಕೈಬೆರಳ ತುದಿಯನ್ನು ಅದುಮಿಕೊಂಡಳು ಒಮ್ಮೆ. ನೋವು ಹಿತವಾಗಿತ್ತು. ಆ ದಿನ ಬೆಳಗ್ಗೆ ತನ್ನು ಗುರುವಿನ ಕೈಗಳ ಸ್ಪರ್ಶವು ಅವಳನ್ನು ಮತ್ತೆ ಮತ್ತೆ ಕಾಡತೊಡಗಿತು. ಎಂಥ ಆಪ್ಯತೆಯಿತ್ತು ಆ ಸ್ಪರ್ಶದಲ್ಲಿ! ಶೊಶಿಯ ಮನೋಮಂಡಲದಲ್ಲಿ ತನ್ನ ಮನೆಯ ಎದುರಿನ ಶಾಲೆಯೂ ಅದರಾಚೆಯಿದ್ದ ಮೈದಾನವೂ ಮತ್ತು ಮನೆಯ ಹಿಂದಿದ್ದ ಶಾಲೆಯ ಇಪ್ಪತ್ತು ಎಕರೆ ಫಲವತ್ತಾದ ಕೃಷಿಭೂಮಿಯ ಹಾಸೂ ಹಾದುಹೋಯಿತು. ತನ್ನ ತಂದೆ ಮಾಡಿದ ಈ ಕೆಲಸದ ಬಗ್ಗೆ ಅವಳಲ್ಲಿ ತಂದೆಯ ಬಗ್ಗೆ ಹೆಮ್ಮೆ ಮೂಡಿತು. ಇನ್ನು ತನಗೆ ಇದೇ ಜೀವನ, ಇಲ್ಲೇ ತನ್ನ ಮುಂದಿನ ಬದುಕು ಎಂಬ ಭವಿಷ್ಯದ ಕಲ್ಪನೆಯು ಅಪೂರ್ಣವಾಗಿ ಸ್ಪಷ್ಟವಾಗತೊಡಗಿತು ಶೊಶಿಗೆ. ಅದರ ಬೆನ್ನಿಗೇ ವಾರಕ್ಕೊಮ್ಮೆ ಸ್ಕೈನಲ್ಲಿ ಸಿಗುವ ಅಮ್ಮ ಮತ್ತು ಅಣ್ಣ ತನ್ನ ಯೋಜನೆಗಳಿಗೆ ಸರಿಯಾದ ವರನನ್ನು ಹುಡುಕುವ ಪ್ರಯತ್ನದಲ್ಲಿ ತೊಡಗಿರುವ ಬಗ್ಗೆ ಆಡುವ ಮಾತುಗಳು ಕೂಡ ನೆನಪಾದವು. ತನ್ನನ್ನು ಮದುವೆಯಾಗಿ ಒಸಾಕಾ ಪಟ್ಟಣದ ರಂಗನ್ನು ಬಿಟ್ಟು ಅದ್ಯಾವ ಗಂಡಸು ಈ ಜಗತ್ತಿಗೆ ಬಂದು ಸೇರುತ್ತಾನೆ, ಇದೆಲ್ಲ ಕೇವಲ ಭ್ರಮೆಯಷ್ಟೆ ಎನ್ನಿಸಿತು ಶೊಶಿಗೆ.
ಯೋಜನೆಗಳನ್ನು ಮೀರಿ ನಿಲ್ಲುವ ಆಲೋಚನೆಗಳಿಗೆ ಸಾಪೇಕ್ಷ ಬಳಲುವ ಕಣ್ಣುಗಳ ಪಾತ್ರದ ಮೇಲ್ಪದರವು ಹಾಗೆ ರಾತ್ರಿಯಿಡೀ ಕನವರಿಕೆಯ ಕನಸುಗಳ ಕೆನೆಯಾಗಿ ಹೆಪ್ಪುಗಟ್ಟಿ ನಿಲ್ಲುವ ಹೊತ್ತಿಗೆ ಹುಟ್ಟಿದ ಮಾರನೆಯ ಬೆಳಗಿನಲ್ಲಿ ಹದವಾಗಿ ಬೆಳೆದ ರೆಪ್ಪೆಗಳನ್ನು ಒಂದುಗೂಡಿಸಿದ್ದ ಪಿಸಿರನ್ನುಜ್ಜಿಕೊಳ್ಳುತ್ತ ಶೊಶಿ ಎದ್ದಳು. ಕಣ್ಣೆದುರು ಮೂಲೆಯಲ್ಲಿ ಗೋಡೆಗೊರಗಿ ನಿಂತಿದ್ದ ಸಿತಾರು!
ತನ್ನ ಗುರುವಿಗೊಮ್ಮೆ ಫೋನ್ ಮಾಡಿ ಮಾತನಾಡಬೇಕೆಂಬ ಹಂಬಲವು ಹುಟ್ಟಿತು ಅವಳಲ್ಲಿ. ಇಷ್ಟು ಹೊತ್ತಿಗೆ ರಿಯಾಜ್ ಮಾಡುತ್ತಿರುತ್ತಾರೆ. ತೊಂದರೆಯಾಗಬಹುದು ಎನ್ನಿಸಿತು. ಇಷ್ಟಾಗಿ ತಾನು ಫೋನ್ ಮಾಡಿ ಏನು ಮಾತನಾಡಲಿ ಅವರಲ್ಲಿ ಎಂಬ ಭಾಷಾ ಸಮಸ್ಯೆಯೂ ಅರಿವಾಗಿ ಸುಮ್ಮನೆ ತನ್ನಷ್ಟಕ್ಕೆ ನಕ್ಕು ಸುಮ್ಮನಾದಳು.
ಆ ದಿನದ ಕ್ಲಾಸಿನಲ್ಲಿ ಒಂದು ನವಿರಾದ ನಾದವಿತ್ತು. ಸದಾ ಶೊಶಿಯ ಕಣ್ಣುಗಳಲ್ಲಿ ದೃಷ್ಟಿಯನ್ನಿಟ್ಟು ಹೇಳಿಕೊಡುತ್ತಿದ್ದ ಪ್ರಣಾಮನ ಕಣ್ಣುಗಳು ಇಂದು ಆಕೆಯ ಕಣ್ಣುಗಳನ್ನು ಸಂಧಿಸಲು ಹಿತವಾಗಿ ಅಂಜುತ್ತಿದ್ದವು, ನಾದವೇ ಪ್ರಧಾನವಾದ ಸಂವಾದದಲ್ಲಿ ಪ್ರತೀ ಸ್ವರಗಳೂ ಇಂದು ಮಾತ್ರ ವಿಭಿನ್ನವಾಗಿ ಅಗತ್ಯಕ್ಕಿಂತ ಹೆಚ್ಚು ಕೋಮಲವಾಗಿ ನುಡಿಯುತ್ತಿದ್ದಾವೇನೋ ಎಂಬಂತೆ, ಎದುರಿಗೆ ತನ್ನ ಗುರು ನುಡಿಸುತ್ತಿದ್ದ ಸಿತಾರಿನ ಪ್ರತಿ ಸ್ವರಗಳ ಹಿಂದೆ ಮಿಡಿಯುವ ತಂತಿಗಳ ಹರಿತವಾದ ಅಲುಗಿನ ಅಲುಗು ತನಗಾಗಿಯೇ ಎಂಬ ಭಾವದಲ್ಲಿ ಶೊಶಿ ಅಂದು ವಿಚಿತ್ರವಾದ ಚಳಿಯೊಂದನ್ನು ಅನುಭವಿಸತೊಡಗಿದ್ದಳು. ತಾನು ಮಾರು ಹೋಗುತ್ತಿರುವುದು ಆಕೆಯ ಮುದ್ದಾದ ಬೆರಳುಗಳಿಗೋ, ಅವಳ ಪ್ರಾಮಾಣಿಕ ಕಲಿಕೆಯ ಶ್ರಮಕ್ಕೋ, ಭಾಷೆ ಬಾರದ ವಿನಯವು ಅವಳ ಹಾಲ್ಗಡಲ ಕಣ್ಣುಗಳಲ್ಲಿ ಹುಟ್ಟಿಸಿದ ಅನಿವಾರ್ಯ ಮುಗ್ಧತೆಗೋ, ಆಗಾಗ ಅವಳ ಕಂಠದಿಂದ ಹೊರಬೀಳುವ ಲಯಬದ್ಧ ನಾದದ ನಗುವಿಗೋ, ಅಥವಾ ವಯೋಸಹಜ ಹಾರ್ಮೋನುಗಳ ಬದಲಾವಣೆಗಳಿಂದಾದ ಭಾವಾಂತರವೋ, ಒಟ್ಟಿನಲ್ಲಿ ಆಗಾಗ ಕಲಿಸುವಿಕೆಯ ಓಘವನ್ನು ತಟ್ಟುತ್ತಿದ್ದ ಈ ಎಲ್ಲ ನವಿರಾದ ಪ್ರಶ್ನೆಗಳ ಆಘಾತದಲ್ಲಿ ಪ್ರಣಾಮನೂ ಒಂದು ಬಗೆಯ ಚಳಿಯನ್ನು ಅನುಭವಿಸುತ್ತಿದ್ದ.
ಎಲ್ಲಿ ನೋಡಿ ಕಲಿತಿದ್ದಳೋ ಶೊಶಿ, ಅಥವಾ ಎಲ್ಲಿಂದ ಆ ಭಾವ ಬಂತೋ ಮೊದಲ ಬಾರಿಗೆ ಎಂದಿನಂತೆ ಎದ್ದು ನಿಂತು ತೊಂಭತ್ತು ಡಿಗ್ರೀ ಕೋನದಲ್ಲಿ ಬಗ್ಗಿ ನಮಸ್ಕರಿಸುವುದರ ಬದಲು ಅಂದು ಕುಳಿತಲ್ಲಿಯೇ ಬಗ್ಗಿ ಪ್ರಣಾಮನ ಪಾದಗಳನ್ನು ಸ್ಪರ್ಶಿಸಿ ನಮಸ್ಕರಿಸಿದ್ದಳು. ಯಾವ ಬಗೆಯಲ್ಲಿ ಈ ಪ್ರಕ್ರಿಯೆಗೆ ರಿಯಾಕ್ಷಿಸುವುದೆಂಬ ಗೊಂದಲದಲ್ಲಿ ಪ್ರಣಾಮ್ ಕಕ್ಕಾಬಿಕ್ಕಿಯಾಗಿಹೋಗಿದ್ದ!
=
ಆ ಮಧ್ಯಾಹ್ನ ಥಿಯರಿ ಕ್ಲಾಸಿನ ಕೊನೆಯ ಬೆಂಚಿನಲ್ಲಿ ಕುಳಿತಿದ್ದ ಪ್ರಣಾಮ್ ಶೊಶಿಗೆ ಮೆಸೇಜ್ ಕಳಿಸಿದ್ದ. 'ಕೆನ್ ಯು ಕಮ್ ಇನ್ ದ ಈವನಿಂಗ್ ಸಿಕ್ಸ್ ಒ ಕ್ಲಾಕ್. ವಿ ಗೊ ಫಾರ್ ಡಿನ್ನರ್' ಪದೇ ಪದೇ ಆ ಮೆಸೇಜನ್ನು ಓದಿಕೊಂಡು ಸಂಭ್ರಮಿಸಿದ್ದಳು ಶೊಶಿ. ಆ ಮೆಸೇಜಿನ ಕಮ್, ಸಿಕ್ಸ್ ಒ ಕ್ಲಾಕ್, ಮತ್ತು ಡಿನ್ನರ್ ಎಂಬ ಪದಗಳು ಅವಳನ್ನು ಮತ್ತೆ ಮತ್ತೆ ಓದಿಸಿಕೊಂಡವು.
'ಯೆಸ್' ಪ್ರಣಾಮನ ಮೊಬೈಲು ಗುಂಯ್ ಗುಟ್ಟಿತ್ತು.
ಆ ಸಂಜೆ ಅವನ ರೂಮಿಗೆ ಬಂದ ಶೊಶಿ ಎಂದಿನಂತೆ ಸೆಲ್ವಾರ್ ಧರಿಸುವ ಬದಲಾಗಿ ಮೊದಲ ಕ್ಲಾಸಿನಲ್ಲಿ ಉಟ್ಟಿದ್ದ ಸೀರೆಯನ್ನು ಉಟ್ಟಿದ್ದಳು. ಒಂಥರದ ನಾಚಿಕೆಯಲ್ಲಿ ಪ್ರಣಾಮ್ ನಾಲ್ಕೈದು ಹೋಟೆಲುಗಳ ಹೆಸರು ಹೇಳುತ್ತ ಹೋದ, ಶೊಶಿ ನಾಚುತ್ತಲೇ 'ಐ, ಗೊ' ಎಂದಳು. ಪ್ರಣಾಮ್ ಅವಳನ್ನನುಸರಿಸಿದ. ಮೊದಲ ಬಾರಿಗೆ ಇಬ್ಬರೂ ಒಂದೇ ರಿಕ್ಷಾದಲ್ಲಿ ಕುಳಿತಿದ್ದರು. ಇಂದು ಮೊದಲ ಬಾರಿಗೆ ಪ್ರಣಾಮನಿಗೆ ರಿಕ್ಷಾವಾಲಾ ಬಹಳ ಉತ್ಸಾಹದಲ್ಲಿದ್ದಂತೆ ಕಂಡಿತು ಮತ್ತು ಬನಾರಸ್ಸಿನ ಗಲಾಟೆಯ ಸಂಜೆಯೂ ಸುಂದರವಾಗಿರುತ್ತದೆಯೆನ್ನಿಸಿತು.
ಆ ರಾತ್ರಿ ಬನಾರಸ್ಸಿನ ಏಕಮೇವಾದ್ವಿತೀಯ ತಾಜ್ ಹೋಟೆಲ್ಲಿನ ಗಾರ್ಡನ್ ರೆಸ್ಟೋರೆಂಟಿನ ನಡುವಿನಲ್ಲಿದ್ದ ಆ ಟೆಬಲ್ಲಿನಲ್ಲಿ ಮುಖಾಮುಖಿಯಾಗಿ ಅವರಿಬ್ಬರೂ ಕುಳಿತಿದ್ದರು. ಒಳಗೆ ತುಂಬಿಕೊಂಡಿದ್ದ ಸುಲಾ ರೆಡ್ ವೈನಿನ ಬಣ್ಣವನ್ನು ಆವಾಹಿಸಿಕೊಂಡಿದ್ದ ಎರಡು ಗಾಜಬಟ್ಟಲುಗಳು ಆ ಮೆಲುವಾದ ನಶೆಯ ಬೆಳಕಿನಲ್ಲಿ ಇಂಚಿಂಚೇ ಖಾಲಿಯಾಗುತ್ತಿದ್ದವು. ಪ್ರಣಾಮ್ ಮೊದಲ ಬಾರಿಗೆ ಅವಳೊಂದಿಗೆ ಮಲಯಾಳದಲ್ಲಿ ಮನತುಂಬಿ ಮಾತನಾಡಿದ. ಶೊಶಿ ಜಪಾನಿಯಲ್ಲಿ ಹರಟಿದಳು. ಇಬ್ಬರೂ ಪರಸ್ಪರ ಹಾಗೆ ತಮ್ಮ ಭಾಷೆಗಳಲ್ಲಿ ಗಂಟೆಗಳವರೆಗೆ ಹರಟಿದರು. ವೈನಿನ ಎರಡನೆಯ ಬಾಟಲಿಯು ಖಾಲಿಯಾಗುವ ಹೊತ್ತಿಗೆ ಪ್ರಣಾಮ್ ಶೊಶಿಯ ಕೈ ಹಿಡಿದು ಆ ಮಿದುವಾದ ಬೆರಳುಗಳ ತುದಿಯ ತಂತಿಯ ಅಚ್ಚನ್ನು ಸವರುತ್ತ ಹೇಳಿದ. 'ಮನಸಿಲಾಯೊ?' ವೈನಿನ ಬಿಸುಪನ್ನು ಮರೆಸುವಂಥ ಆ ಸ್ಪರ್ಶದ ನವಿರಿಗೆ ಬಿಸಿಯಾದ ದನಿಯಲ್ಲಿ ಶೊಶಿ ಹೇಳಿದಳು, 'ವಾಕಾರಿಮಶಿತ'!
= -ಡಾ. ಕಣಾದ ರಾಘವ
dr.kanada@gmail.com