ಸಾಪ್ತಾಹಿಕಪ್ರಭ

ಕೋಟಿ ಕೋಟಿ ರಾಮಶಕ್ತಿ (ಮಾಯಾಜಿಂಕೆ)



ಇಲ್ಲಿ ಮಹಾಮೇಧಾವಿಯಾದ ಲಕ್ಷ್ಮಣನು ಜಿಂಕೆಯನ್ನು ನೋಡಿದ ಕೂಡಲೆ ಇದು ಮಾಯಾಮೃಗ ಎಂದು ಗುರುತಿಸುತ್ತಾನೆ. ಅಲ್ಲದೆ ತನ್ನತ್ತಿಗೆಯ ಕೋರಿಕೆಯನ್ನು ಕೇಳಿ ಅದು ಮಾರೀಚ ಮಾಯೆಯೆಂದೂ, ಅದರಿಂದಲೇ ನಿಜವಾದ ಮೃಗಗಳು ಈ ಕಪಟ ಜಿಂಕೆಯ ಬಳಿಗೆ ಬರಲು ಅಂಜಿ ಬೇರೆ ನಿಂತಿರುವುದಾಗಿ ಹೇಳುತ್ತಾನೆ. ಆದರೆ ವಿನಾಶ ಕಾಲದಲ್ಲಿ ಒಳ್ಳೆಯ ಮಾತುಗಳು ರುಚಿಸುವುದಿಲ್ಲ. ಒಂದು ವೇಳೆ ರುಚಿಸಿದ್ದೇ ಆಗಿದ್ದರೆ ಮುಂದಿನ ಭವ್ಯವಾದ ರಾಮಾಯಣಕಥೆಯು ನಡೆಯುವುದಾದರೂ ಹೇಗೆ? ಕವಿಗೆ ಕಥೆ ಮುಖ್ಯವಾದರೆ ಹೇಗಾದರೂ ಅದನ್ನು ಸಾಗಿಸಿಯಾನು; ಆದರೆ ವಿಧಿನಿಯಮಿತ ಕೇವಲ ಪಾತ್ರಧಾರಿ ಮಾತ್ರಳಾದ ಸೀತೆ ಆ ಭಗವತ್ ದಿಗ್ದರ್ಶನವನ್ನೆಂತು ಮೀರಿ ನಡೆದಾಳು? ಹಾಗೆ ನಡೆದರೆ ಲೋಕ ಕಲ್ಯಾಣವಾಗುವುದಾದರೂ ಹೇಗೆ? ಕವಿ ಲೌಕಿಕದ ಬೃಹತ್ ಕಾವ್ಯ ಸೌಧದಲ್ಲಿ ತುಂಬಿರುವುದು ಅಲೌಕಿಕ ನಿತ್ಯಸತ್ಯಗಳನ್ನೆಂಬುದನ್ನು ಮರೆಯಲಾಗದು. ಇನ್ನೊಂದು ವಿಷಯ, ಇಲ್ಲಿ ಸದ್ದಿಲ್ಲದೆ ಬಿದ್ದಿರುವ ಮತ್ತೊಂದು ಅಂಶವನ್ನು ನಮ್ಮ ಬುದ್ಧಿಯ ಕೋಲಿನಿಂದ ತಿವಿದು ನೋಡಿದರೆ ಗೊತ್ತಾಗುತ್ತದೆ. ಸೀತೆ ಹೇಗೆ ಪಾತ್ರಧಾರಿಣಿಯೋ ಹಾಗೆಯೇ ಆ ಸುವರ್ಣ ಮೃಗವೂ ಒಂದು ಪಾತ್ರ. ಅದು ನಮ್ಮ ದೃಷ್ಟಿಗೆ ಮಾರೀಚ ಮಾಯೆಯಾದರೂ ನಿಜದಲ್ಲಿ ವಿಧಿ ಸೃಷ್ಟಿ. ಸಾಕ್ಷಾತ್ ಶ್ರೀರಾಮಚಂದ್ರನ ಸತಿಯ ಮನಸ್ಸನ್ನು ಸೆಳೆಯುವಷ್ಟರ ಮಟ್ಟಿನ ಅದರ ದಿವ್ಯ ಸೌಂದರ್ಯದ ಗಳಿಕೆಗೆ ವಿಧಿಯ ವಜ್ರರಕ್ಷೆಯಿದೆ. ಒಂದುವೇಳೆ ಸೀತೆ ಆ ಜಿಂಕೆಯ ಲಾವಣ್ಯಕ್ಕೆ ಮಾರುಹೋಗದೆ ಹೋದರೂ ವಿಧಿಲೀಲೆಯ ಜಾಲಕ್ಕೆ ಖಂಡಿತ ಬೀಳಲೇಬೇಕಷ್ಟೆ. ಅಲ್ಲದೆ ಇಲ್ಲಿ ಲೋಕಮಾತೆಯೇ ಪಾತ್ರವಹಿಸಿ ನಿಂತಿರುವಾಗ ಅವಳ ನಟನೆಯನ್ನು ಗುರುತಿಸಲು ಸಾಧ್ಯವೆ?!
ಇಲ್ಲವಾಗಿದ್ದರೆ, ಸಾಕೇತನಗರದುಪ್ಪರಿಗೆಯ ಸುಖದ ಸಂಪತ್ತಿನಲ್ಲಿ ತೇಲಾಡುವುದನ್ನುಳಿದು ರಾಜ್ಯ ಸಂಪದವ ತೊರೆದು, ಯಾವ ಲೌಕಿಕ ಮೋಹಭಾಗ್ಯಗಳಿಗೂ ಕಟ್ಟುಬೀಳದೆ ರಾಘವನ ಪಾದವನ್ನೇ ನಂಬಿ ಹದಿನಾಲ್ಕು ವರ್ಷಗಳ ವರೆಗಿನ ವನವಾಸವನ್ನು ಕೈಗೊಂಡು ಭೀಕರ ಘೋರಾರಣ್ಯದಲ್ಲಿ ತಿರುಗಿ- ಇದುವರೆಗೂ ಏನನ್ನೂ
ಬಯಸದೆ, ಏನನ್ನೂ ಕೇಳದೆ ಈಗ ಮಾತ್ರ ಜಿಂಕೆಯೊಂದರ ರೂಪಿಗೆ ಮಾರುಹೋದಳೆಂದರೆ ಅದು ವಿಧಿಜಾಲವಲ್ಲದೆ ಮತ್ತೇನು? ಇಲ್ಲಿ ಕವಿ ಲೋಕದೃಷ್ಟಿಯಿಂದಲೂ ಅಲೌಕಿಕ ದೃಷ್ಟಿಯಿಂದಲೂ ನೋಡಿರುವುದನ್ನು ಗಮನಿಸಬೇಕು. ಇಲ್ಲಿ ಮಾತ್ರವಲ್ಲ ಶ್ರೀ ರಾಮಾಯಣ ದರ್ಶನದ ಉದ್ದಕ್ಕೂ ಲೌಕಿಕ ಮತ್ತು ಅಲೌಕಿಕ ದೃಷ್ಟಿಗಳೆರಡೂ ಹೆಣೆದುಕೊಂಡೇ ಸಾಗಿವೆ; ಒಂದೆಡೆ ತೀರಾ ಸಾಮಾನ್ಯ ಮಾನವನಾಗಿ ಕಾಣುವ ರಾಮ ಮತ್ತೊಂದೆಡೆ ಜಗದ್ಭವ್ಯ ಮೂರ್ತಿಯಾಗಿ ಕಂಗೊಳಿಸುತ್ತಾನೆ. ಸೀತೆಯನ್ನು ಕಳೆದುಕೊಂಡಾಗ ಅತ್ಯಲ್ಪ ಹುಲು ಮಾನವನಂತೆ ಗೋಳಿಡುವ ರಾಮ, ಯುದ್ಧ ಭೂಮಿಯಲ್ಲಿ ಸ್ಫಾರಗೊಂಡ ಕೋಟಿ ಕೋಟಿ ರಾವಣ ಶರೀರಗಳೊಡನೆ ಕೋಟಿ ಕೋಟಿ ರಾಮ ಶಕ್ತಿಯಾಗಿ ಚದುರಿ ಎದುರಿಸಿ ಭೀಕರಾಕಾರನಾಗಿ,- ತ್ರಿಮೂರ್ತಿಗಳಾದಿಯಾಗಿ ಸಕಲ ದೇವ ದಾನವರೂ ಸೈವೆರಗನೈದುವಂತೆ ಹೋರಾಡುತ್ತಾನೆ.
=
-ಡಾ. ಮಳಲಿ ವಸಂತಕುಮಾರ್
(ಮಹಾಕವಿ ಕುವೆಂಪು-ಜೀವನ ಸಾಹಿತ್ಯ)


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್

ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಅಖಿಲೇಶ್ ಯಾದವ್'ಗೆ ಬಿಗ್ ಶಾಕ್; BJP ಸೇರಲಿದ್ದಾರೆ SPಯ ಮೂವರು ಶಾಸಕರು!

ಜಿಎಸ್‌ಟಿ ಮಂಡಳಿಯಿಂದ ಪ್ರಕ್ರಿಯೆ ಸುಧಾರಣೆಗಳಿಗೆ ಅನುಮೋದನೆ; ಬಂಧನದ ಅಧಿಕಾರಕ್ಕೆ ಕಡಿವಾಣ!

ಶಿಕಾರಿಪುರದ ಈ ಗ್ರಾಮದಲ್ಲಿ ಬೀಗರೂಟ ಹಾಕಿದ್ರೆ ₹1 ಲಕ್ಷ, ಉಂಡು ಬಂದ್ರೆ ₹50 ಸಾವಿರ ದಂಡ! ಇಲ್ಲಿದೆ ಸ್ಫೋಟಕ ಕಾರಣ...