ಸುಮಾರು 1950ರ ವೇಳೆಗೆ ಕನ್ನಡದಲ್ಲಿ ನವ್ಯ ಪಂಥವೆಂಬ ಆಂದೋಲನ ರೂಪುಗೊಂಡಿತು. ಇದಕ್ಕೂ ಇಂಗ್ಲೆಂಡಿನ ಗ್ರಂಥರಾಶಿಯ ಪ್ರಭಾವವೇ ಕಾರಣ. ಎರಡನೆಯ ಮಹಾಯುದ್ಧವಾದ ಮೇಲೆ ಮಾರ್ಕ್ಸ್‌ನ 'ದಿ ಕ್ಯಾಪಿಟಲ್' ಎಂಬ ಗ್ರಂಥ ಭಾರತೀಯರ ಮೇಲೆ ಭಾರಿ ಪ್ರಭಾವವನ್ನು ಬೀರಿತು. ಅಲ್ಲದೇ ವೈಜ್ಞಾನಿಕರು ರಚಿಸಿದ ಗ್ರಂಥಗಳಲ್ಲಿ ಕಾಣುವ ಆಲೋಚನೆಯ ಪ್ರಣಾಳಿಗಳು ಬಹುವಿಧವಾಗಿದ್ದವು. ಸಮಾಜ ಶಾಸ್ತ್ರದಲ್ಲಿ ಪಾಶ್ಚಾತ್ಯರಲ್ಲಿ ಆಗಿದ್ದ ಸಂಶೋಧನೆಗಳ ಪರಿಣಾಮ ನಮ್ಮ ಜನತೆಯ ಮೇಲೆ ಪ್ರಭಾವವನ್ನು ಬೀರಿತು. ನನಗೆ ಚೆನ್ನಾಗಿ ನೆನಪಿರುವ ಹಾಗೆ ಫ್ರೇಜರ್‌ನ 'ದಿ ಗೋಲ್ಡನ್ ಬೋ' ಎಂಬ ಗ್ರಂಥ ಯುವ ಲೇಖಕರಿಗೆ ಪಾರಾಯಣ ಗ್ರಂಥವಾಯಿತು. ಈ ಬಗೆಯ ಗ್ರಂಥಗಳ ಪರಿಣಾಮವಾಗಿ ನವ್ಯ ಪಂಥದಲ್ಲಿ ಭಾಷೆ ಸರಳತೆಯನ್ನು ಕಳೆದುಕೊಂಡು ಗೂಢವಾಯಿತು. ಓದುಗರಿಗೆ ಕಾವ್ಯರಚನೆಯ ಅರ್ಥ ಕೂಡಲೇ ಹೊಳೆಯುವ ಹಾಗಿರಲಿಲ್ಲ. ಅದರಲ್ಲಿ ಅನುಭವದ ಪುನರ್ ನಿರ್ಮಾಣದ ಅವಶ್ಯಕತೆ ಬೇಕಾಯಿತು. ಗೋಕಾಕರೂ ನವ್ಯಕಾವ್ಯದ ಆರಾಧಕರಾದರೂ ಅವರ ಕಾವ್ಯದಲ್ಲಿ ಅಷ್ಟು ನವ್ಯತೆ ಇಲ್ಲ. ಗೋಪಾಲಕೃಷ್ಣ ಅಡಿಗ ಮತ್ತು ಬಿ.ಸಿ. ರಾಮಚಂದ್ರ ಶರ್ಮ ಇವರು ನವ್ಯಪಂಥದ ಪ್ರಮುಖ ಕವಿಗಳು. ಶರ್ಮರು ನಾಟಕ, ಸಣ್ಣ ಕತೆಗಳನ್ನು ರಚಿಸಿದರೂ, ಅವುಗಳಲ್ಲಿಯೂ ನವ್ಯದ ಪ್ರಭಾವ ದಟ್ಟವಾಗಿಯೇ ಇವೆ. ಯಶವಂತ ಚಿತ್ತಾಲರೂ ನವ್ಯಕತೆಗಳಿಗೆ ಪ್ರಸಿದ್ಧರು. ಎ.ಕೆ. ರಾಮಾನುಜನ್ ನವ್ಯಕಾವ್ಯ ರಚನೆಗೆ ಹೆಸರಾದವರು. ಅವರು ಇಂಗ್ಲಿಷಿನಲ್ಲಿಯೂ, ಕನ್ನಡದಲ್ಲಿಯೂ ಕಾವ್ಯರಚನೆ ಮಾಡಿದ್ದಾರೆ. ಆಶ್ಚರ್ಯವೆಂದರೆ ಅಮೆರಿಕನ್ನರೇ ಅವರ ಇಂಗ್ಲಿಷ್ ಕಾವ್ಯಗಳನ್ನು ಮೆಚ್ಚಿಕೊಂಡದ್ದು. ಅವು ಅಷ್ಟು ದಟ್ಟವಾಗಿ ಇಂಗ್ಲಿಷ್ ಪ್ರಭಾವವನ್ನು ಅರಗಿಸಿಕೊಂಡಿವೆ.
ನವ್ಯ ರಚನೆಯಲ್ಲಿ ವಿಡಂಬನೆ ಪ್ರಧಾನವಾಯಿತೆಂದು ವಿದ್ವಾಂಸರು ನಂಬಿದ್ದಾರೆ. ಇದರಲ್ಲಿ ಸತ್ಯವಿಲ್ಲದೆ ಇಲ್ಲ. ಈ ಶತಮಾನದ ಪ್ರಾರಂಭದಲ್ಲಿರುವ ನಾವು ನವ್ಯದ ಬಿಸಿಯಿಂದ ದೂರ ಬಂದಿದ್ದೇವೆ. ಈಗ ಪ್ರಚಾರದಲ್ಲಿರುವುದು ದಲಿತ ಪರವಾದ ಆಂದೋಲನ. ಬಳಿಕ ಬಂಡಾಯದ ಸತ್ವವುಳ್ಳ ರಚನೆಗಳು. ಸಾಹಿತ್ಯವು ಬೆಳೆಯುವಾಗ ಕಾಲದಿಂದ ಕಾಲಕ್ಕೆ ಹೀಗೆ ಬದಲಾವಣೆಗಳು ಆಗುತ್ತಲೇ ಇರುತ್ತವೆ. ಇದು ಎಲ್ಲ ಸಾಹಿತ್ಯದ ಸ್ವಭಾವ. ಆದರೆ ನಾವು ನೆನಪಿಡಬೇಕು- ಈ ಎಲ್ಲ ಸಾಹಿತ್ಯ ರಚನೆಯ ಹಿಂದೆ ಇರುವುದು ಒಂದೇ ಉದ್ದೇಶ ಜನತೆಗೆ ಸೌಖ್ಯವನ್ನು ನೀಡುವುದು. ಸೌಖ್ಯ ಸಾಧನೆ.
= ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಮುಖ್ಯ ಭಾಷಣಗಳು, ವಿಮರ್ಶೆಗಳು, ಹಲವು ಮುನ್ನುಡಿಗಳು, ಲೇಖನಗಳು ಹಾಗೂ ಕವಿತೆಗಳ ಸಂಕಲನ (ಜಿ.ವಿ. ವಿಚಾರ ವಿಹಾರ)