ರಾಗ ಎಂದರೆ ಸಹಜ ಅರ್ಥ ಪ್ರೀತಿ, ವಿಶ್ವಾಸ, ಅನುರಾಗ. ಮಾತ್ಸರ್ಯ ಎಂಬ ಅರ್ಥವೂ ಇದೆ. ಮರಾಠಿಯಲ್ಲಂತೂ ರಾಗ ಎಂದರೆ ಕೋಪ. ಒಟ್ಟಿನಲ್ಲಿ ರಾಗ, ನಮ್ಮ ಆಳವಾದ ಭಾವನೆಗಳಿಗೆ ಸಂಬಂಧಿಸಿದ್ದು. ಸಂಗೀತದಲ್ಲಿ ರಾಗ ಎಂದರೆ ಸ್ಥೂಲವಾಗಿ ಸ್ವರಗಳ ಸಮೂಹ. ಶಾಸ್ತ್ರದಲ್ಲಿ 'ರಂಜಯತಿ ಇತಿ ರಾಗ', ಎಂದರೆ ಯಾವುದು ಆನಂದ ನೀಡುವುದೋ ಅಂತಹ ಸ್ವರ ಸಮೂಹವೇ ರಾಗ ಎಂದಿದ್ದಾರೆ.
ಏಳು ಶುದ್ಧ ಹಾಗೂ ಐದು ಕೋಮಲ - ಒಟ್ಟೂ ಹನ್ನೆರಡು ಸ್ವರಗಳಲ್ಲಿ ಬೇರೆಬೇರೆ ಸ್ವರಗಳ ಸಂಯೋಗದಿಂದ ರಾಗ ಉಂಟಾಗುತ್ತದೆ. ಭೈರವಿ, ಕೌಶಿಕಿ, ಹಿಂದೋಳ, ದೀಪಕ, ಶ್ರೀ, ಮೇಘ ಇವನ್ನು ಸಂಗೀತದ ಮೂಲ ರಾಗಗಳು ಎನ್ನಲಾಗುತ್ತದೆ. ಸ್ವರಗಳು ಬೇರೆ ಬೇರೆ ಆದ ಹಾಗೆ ಅದಕ್ಕೆ ತಕ್ಕ ಭಾವಗಳೂ ಬೇರೆ ಬೇರೆ ಆಗಿ , ವಿವಿಧ ರಾಗಗಳು ಎನ್ನಿಸಿಕೊಂಡಿವೆ.
ಒಂದು ರಾಗ ಎಂದರೆ ಅದೊಂದು ಸಿದ್ಧಿ. ಒಂದೊಂದು ರಾಗವೂ ಒಂದೊಂದು ವ್ಯಕ್ತಿ ಇದ್ದಂತೆ. ಎಲ್ಲರಿಗೂ ಎರಡು ಕೈ, ಎರಡು ಕಾಲು, ಎರಡು ಕಣ್ಣು, ಮೂಗು, ಎಲ್ಲ ಇರುತ್ತದೆ...ಆದರೆ ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಎತ್ತರ, ದಪ್ಪ, ಬಣ್ಣ, ಕೂದಲು, ನೋಟ , ಲಿಂಗ, ನಡಿಗೆ - ಇಷ್ಟೇ ಅಲ್ಲ, ಸ್ವಭಾವ, ಬುದ್ಧಿ, ಧ್ವನಿ, ಶಕ್ತಿ, ವಿಚಾರ, ಹಾವಭಾವ, ನಂಬಿಕೆ, ನಡತೆ ಯಾವುದೂ ಒಬ್ಬರದ್ದಿದ್ದಂತೆ ಇನ್ನೊಬ್ಬರದಿರುವುದಿಲ್ಲ. ಹಾಗೇ ರಾಗಗಳೂ. ಒಂದು ತೆಳುವಾಗಿರಬಹುದು, ಇನ್ನೊಂದು ದಪ್ಪವಾಗಿರಬಹುದು. ಗಂಭೀರವಾಗಿರಬಹುದು. ಚಂಚಲವಾಗಿರಬಹುದು. ಆಕರ್ಷಕವಾಗಿರಬಹುದು. ಫಕ್ಕನೆ ಬೆರೆಯದಂತಹ ಸ್ವಭಾವದ್ದಿರಬಹುದು. ಹೆಣ್ಣಿನ ಕೋಮಲತೆಯಿರಬಹುದು. ಗಂಡಿನ ಪೌರುಷವಿರಬಹುದು. ಧ್ಯಾನಿಯಾಗಿರಬಹುದು. ವಿರಹಿಯಾಗಿರಬಹುದು. ಅರ್ಥವೇ ಆಗದಂಥದ್ದಿರಬಹುದು - ಹೀಗೆ ಎಲ್ಲ ರಾಗಗಳೂ ಸ್ವರ ಸಮೂಹಗಳೇ ಆಗಿದ್ದರೂ ತಮ್ಮ ಸ್ವಭಾವದಿಂದ (ಇದನ್ನೇ ಶಾಸ್ತ್ರದಲ್ಲಿ ರಾಗಾಂಗ ಎನ್ನುತ್ತಾರೆ) ಎಣೆ ಇಲ್ಲದಷ್ಟು ವೈವಿಧ್ಯಗಳನ್ನು ಸೃಷ್ಟಿಸುತ್ತವೆ.
ಒಂದು ರಾಗವನ್ನು ಕಲಿಯುವುದೆಂದರೆ ಅದರ ಜತೆ ಗೆಳೆತನ ಬೆಳೆಸಿದಂತೆ. ಮೊದಮೊದಲು ಮಾತನಾಡಲು ಸ್ವಲ್ಪ ಹಿಂಜರಿಕೆಯಿರುತ್ತದೆ. ಹೀಗೆ ಮಾಡಿದರೆ ಏನೆಂದುಕೊಳ್ಳುತ್ತಾರೊ ಎಂಬ ಚಿಂತೆ ಇರುತ್ತದೆ. ದಿನಗಳೆದಂತೆ ಸ್ವಭಾವದ ಅರಿವಾಗುತ್ತದೆ. ಮುಜುಗರ ದೂರವಾಗಿ ಅಭಿಮಾನ ಬೆಳೆಯುತ್ತದೆ. ಯಾವಾಗಲೆಂದರಾವಾಗ ಮನೆಗೆ ಹೋಗುತ್ತೇವೆ, ಹರಟುತ್ತೇವೆ ...ಮತ್ತೂ ದಿನ ಕಳೆದಂತೆ ಮುನಿಸಿಕೊಳ್ಳುತ್ತೇವೆ. ರಮಿಸುತ್ತೇವೆ. ಸುಖದುಃಖದಲ್ಲಿ ಒಂದಾಗುತ್ತೇವೆ. ಯಾವ ಕೃತ್ರಿಮತೆಯೂ ಇಲ್ಲದಂತೆ ಬೆರೆತು ಬಿಡುತ್ತೇವೆ. ಬಿಡಲಾರದಷ್ಟು ಅಂಟಿಕೊಳ್ಳುತ್ತೇವೆ. ಹಾಗೆಯೇ ರಾಗಗಳೂ. ಮೊದಮೊದಲು ಯಾರೋ ಏನೋ ಎಂಬಂತಿರುತ್ತವೆ. ಹೀಗೆ ಹಾಡಿದರೆ ತಪ್ಪೇನೋ... ಎಳೆದಾಡಿದರೆ ಮುನಿಸುಂಟಾದರೆ... ಎಂಬಂತಿರುತ್ತದೆ. ಹಾಡಿ, ಹಾಡಿ, ಹಾಡಿ, ಬೆರೆಯುತ್ತ, ಬೆರೆಯುತ್ತ ನಮ್ಮವರಾಗುತ್ತ ಹೋಗುತ್ತವೆ. ಬಿಡಲಾರದಷ್ಟು ಒಂದಾಗುತ್ತವೆ.
ಕೆಲವು ರಾಗಗಳು ಇನ್ನೂ ವಿಚಿತ್ರ. ಹತ್ತಾರು ವರ್ಷಗಳಾದರೂ ಅರ್ಥವೇ ಆಗದಂತಿರುತ್ತಾರಲ್ಲ, ಹಾಗೆ. ಹತ್ತಿರವಿದ್ದೂ ದೂರವಿರುತ್ತಾರೆ; ಏನು ಮಾಡಿದರೂ ಕೈಗೇ ಸಿಗುವುದಿಲ್ಲ. ತಮ್ಮ ಸುತ್ತ ಬಿಡಿಸಲಾರದ ಕೋಟೆ ಕಟ್ಟಿರುತ್ತಾರೆ. ಹಾಗೇ ಕೆಲವು ರಾಗಗಳೂ! ಎಷ್ಟಾದರೂ ಸಲಿಗೆಗೆ ಸಿಗುವುದಿಲ್ಲ; ಮತ್ತೆಮತ್ತೆ ಹೊಸದಾಗಿ ಪ್ರೀತಿಸಬೇಕಾಗುತ್ತದೆ, ಕೈಗೇ ಸಿಗುವುದಿಲ್ಲ.
- ಶ್ರುತಿ ಭಟ್