ಸಾಪ್ತಾಹಿಕಪ್ರಭ

ರವಿಯ ಕೊನೆಯ ಕಿರಣ (ಬೆಟ್ಟಬುದ್ಧಹಿಮ 14)

ವಿಹಾರದ ಬುಡದವರೆಗೆ ಗಾಡಿ ಹೋಗಲಿಲ್ಲ. ಫರ್ಲಾಂಗು ದೂರದಲ್ಲಿ ನಿಂತಿತು. ಮುಂದೆ ಮಾರ್ಗಕ್ಕೆ ಬಿದ್ದ ಮಣ್ಣನ್ನು ಸರಿಸುವ ಕೆಲಸ ನಡೆದಿತ್ತು. ಇಲ್ಲಿ ನೀವು ಯಾವ ದಾರಿಯಲ್ಲಿ ಹೋದರೂ ರೋಡ್ ರಿಪೇರಿ ಮುಗಿಯುವವರೆಗೆ ಕಾಯುವುದು ಅನಿವಾರ್ಯ. ಮೊನಾಸ್ಟ್ರಿ ಬೆಟ್ಟದ ತುದಿಯಲ್ಲಿತ್ತು. ಅಂಚಿನಲ್ಲಿ ಹರಿದ ದಾರಿಯ ಪಕ್ಕದಲ್ಲಿ, ನೂರಾರು ಅಡಿ ಆಳದಲ್ಲಿ ಧಂಕರ್ ಹಳ್ಳಿ ಹಬ್ಬಿತ್ತು. ಹುಲ್ಲು ಹೊದೆಸಿದ ಮನೆಗಳ ಮೇಲ್ಛಾವಣಿಗಳು ಕಾಣುತ್ತಿದ್ದವು. ಅವುಗಳ ಮೇಲೆ ಗಂಡಸರು ಸಂಜೆಸೂರ್ಯನ ಬೆಳಕಿಗೆ ಮೈ ಒಡ್ಡಿಕೊಂಡು ಸುಖಿಸುತ್ತಿದ್ದರು. ಹೊಲಗಳಿಗೆ ಹೋದ ಹೆಂಗಸರು ಗುಂಪುಗುಂಪಾಗಿ ಮರಳುತ್ತಿದ್ದರು. ಹಳ್ಳಿಯ ಬಯಲಲ್ಲಿ ಪುಟ್ಟ ಪುಟ್ಟ ಮಕ್ಕಳು ಕೋಲಾಹಲ ಎಬ್ಬಿಸಿದ್ದರು. ಅಲ್ಲಲ್ಲಿ ದನಗಳ, ಯಾಕ್‌ಗಳ ಹಿಂಡು. ಭಾರತ ಎಲ್ಲ ಹಳ್ಳಿಗಳ ಸಂಜೆಯೂ ಹೀಗೇ ಇರುತ್ತದೋ ಏನೋ.
ಮೊನಾಸ್ಟ್ರಿ ಒಳಗೆ ಇಕ್ಕಟ್ಟಾಗಿತ್ತು. ಇಲ್ಲಿನ ಎಲ್ಲ ಕೋಣೆಗಳನ್ನೂ ತೆರೆದಿಟ್ಟಿಲ್ಲ. ಪ್ರಪಾತದ ಅಂಚಿಗೆ ಇರುವ ಕೆಲವು ಕೋಣೆಗಳಿಗೆ ಬೀಗಮುದ್ರೆ. ಬಿಕ್ಕುಗಳ ಧ್ಯಾನಕ್ಕೆ ಮೀಸಲಾಗಿರುವ ಕೋಣೆಯಂತೂ, ಪ್ರಪಂಚದ ಮೌನ, ಏಕಾಂತವೆಲ್ಲವೂ ಅಲ್ಲಿಯೇ ಗೂಡು ಕಟ್ಟಿದೆಯೇನೋ ಅನ್ನಿಸುವ ಹಾಗೆ ಕಾಣಿಸುತ್ತದೆ. ನಾಲ್ಕು ದಿಕ್ಕುಗಳಿಗೆ ಮುಖ ಮಾಡಿ ಕುಳಿತಿರುವ ಧ್ಯಾನಮುದ್ರೆಯ ಬುದ್ಧ (ವೈರೋಚನ) ಇಲ್ಲಿನ ದೇವತೆ. ಬೋಟಿ ಭಾಷೆಯ ಕೆತ್ತನೆಗಳು, ಬಣ್ಣದ ಚಿತ್ರಗಳು ಗೋಡೆಗಳ ತುಂಬ ಇವೆ. ಮೂರು ಮಜಲುಗಳ ಈ ಕಟ್ಟಡದ ಮೂರನೆ ಮಹಡಿಗೆ ಹೋದರೆ, ಪ್ರಪಾತದಂಚಿನ ಗಾಳಿ ಕಟ್ಟಡದ ಸಂದುಗೊಂದುಗಳಲ್ಲಿ ಹೊಕ್ಕು ಸಿಳ್ಳು ಹಾಕುವುದು ಕೇಳಿಸುತ್ತದೆ. ಮಾಡಿನ ಮೇಲೆ ಹತ್ತಿದರೆ, ಇಡೀ ಸ್ಪಿಟಿ ಕಣಿವೆ ರುದ್ರಗಂಭೀರವಾಗಿ ಮೈದೋರುತ್ತದೆ. ಧರ್ಮಾಚರಣೆಯ ಸಂಕೇತವಾದ ಬಣ್ಣಬಣ್ಣದ ಬಾವುಟಗಳೂ, ಲೌಕಿಕದ ಪ್ರತೀಕವಾದ ಡಿಶ್ ಆಂಟೆನಾವೂ ವಿಹಾರದ ಮಾಡಿನ ಮೇಲೆ ಅಕ್ಕಪಕ್ಕದಲ್ಲೇ ಕಾಣಿಸುತ್ತದೆ.
ಮೊನಾಸ್ಟ್ರಿಯ ಒಳಗೆ ಲಾಮಾ ಒಬ್ಬನಿದ್ದ. ಆತನ ಹೆಸರು ಉಗ್ಯೆನ್. ಕೆಲ ವರ್ಷಗಳ ಹಿಂದೆ ಇಲ್ಲಿಗೆ ದಲಾಯಿ ಲಾಮಾ ಭೇಟಿ ಕೊಟ್ಟಿದ್ದರಂತೆ. ಅವರು ಕುಳಿತಿದ್ದ ಆಸನವನ್ನು, ಧ್ಯಾನ ಮಾಡಿದ್ದ ಜಾಗವನ್ನು ತೋರಿಸಿದ. ಹಾಗೆ ತೋರಿಸುವಾಗ ಆತನ ಮುಖ ಉತ್ಕಟತೆಯಿಂದ ಬೆಳಗುತ್ತಿತ್ತು. ಆ ಜಾಗವನ್ನು ಗರ್ಭಗುಡಿಯಂತೆ ಕಟಕಟೆ ಹಾಕಿ ಜೋಪಾನ ಮಾಡಲಾಗಿತ್ತು.
ಈ ವಿಹಾರ 1200 ವರ್ಷಗಳ ಹಿಂದಿನದು. ರಿಂಚೆನ್ ಝಾಂಗ್‌ಪೋ ಕಟ್ಟಿದ ಮೊದಮೊದಲ ವಿಹಾರಗಳಲ್ಲೊಂದು. ಕಟ್ಟಿದಾಗ ಇದು ಸುರಕ್ಷಿತವಾದ ಸ್ಥಳದಲ್ಲೇ ಇದ್ದಿರಬೇಕು. ಕಾಲಚಕ್ರ, ಸಹಸ್ರಮಾನದ ಹೊತ್ತಿಗೆ ಅದನ್ನು ನೂಕುತ್ತಾ ತಂದು ಅಳಿವಿನಂಚಿನಲ್ಲಿ ನಿಲ್ಲಿಸಿದೆ. ಅದನ್ನು ಉಳಿಸಲು ಅಭಿಯಾನ ನಡೆಯುತ್ತಿದೆ.ದೇಶವಿದೇಶಗಳಲ್ಲಿ ನಿಧಿ ಸಂಗ್ರಹಿಸಲಾಗುತ್ತಿದೆ. ವಿಶ್ವಸಂಸ್ಥೆ ಪಟ್ಟಿ ಮಾಡಿರುವ ಅಳಿವಿನಂಚಿನ ಸ್ಮಾರಕಗಳಲ್ಲಿ ಇದೂ ಒಂದು. ಆದರೆ ಹೇಗೆ ರಕ್ಷಿಸುವುದು? ಇದರ ನಾಶದಲ್ಲಿ ಮಾನವನ ಪಾತ್ರ ಏನೂ ಇಲ್ಲ. ನಿಸರ್ಗವೇ ಇಲ್ಲಿ ಲಯಕಾರಿಣಿ. ಹಿಮಾಚಲದ ಮಳೆ ಮತ್ತು ಹಿಮಪಾತ ತಮ್ಮ ಎಲ್ಲ ರೌದ್ರಗಳೊಂದಿಗೆ ಜಪ್ಪಿದರೆ ಈ ಭವನ ಈ ವರ್ಷವೇ ಪಾತಾಳ ಸೇರಿ ಹೇಳಹೆಸರಿಲ್ಲದಂತಾಗಬಹುದು. 'ಬೆಟ್ಟಕ್ಕೆ ಚಳಿಯಾದರೆ' ಎಂಬ ಅಲ್ಲಮನ ವಚನ ನೆನಪಾಯಿತು.
ತಶಿಯ ಬಳಿ ಕೇಳಿದೆ: ಇದನ್ನು ಉಳಿಸಿಕೊಳ್ಳೋದು ಕಷ್ಟ ಅಲ್ವೆ?
ಆತ ದೃಢವಾಗಿ ಉತ್ತರಿಸಿದ: ಇಲ್ಲ, ಏನೂ ಕಷ್ಟವಿಲ್ಲ.
ಈ ಟಿಬೆಟಿಯನ್ ಬೌದ್ಧರು ಅತಿಧೀರರಂತೆಯೂ, ಶತಮೂರ್ಖರಂತೆಯೂ ಏಕಕಾಲಕ್ಕೆ ನನಗೆ ಕಾಣಿಸಿದ ಗಳಿಗೆಯದು. 'ಈ ಘಳಿಗೆಯ ನಿನ್ನ ಬದುಕು ಮುಂದಿನ ಘಳಿಗೆಗೆ ಶೂನ್ಯವೆಂದು ಅರಿತುಕೋ' ಎನ್ನುವ, ಎಲ್ಲದರ ಕ್ಷಣಿಕತೆಯನ್ನು ಅರಿತ ಬುದ್ಧನ ಧರ್ಮದವರು, ಮಣ್ಣಿನ ಭವನವೊಂದನ್ನು ರಕ್ಷಿಸಲು ಶತಾಯಗತಾಯ ಟೊಂಕ ಕಟ್ಟಿರುವುದು ಅಚ್ಚರಿ. ಅದು ನಮ್ಮ ಎಲ್ಲ ಧರ್ಮಗಳೂ ಕಾಲಾಂತರದಲ್ಲಿ ಬದಲಾಗುವ ರೀತಿಗೂ ರೂಪಕ.
ಹೊರಬಿದ್ದೆವು. ನಾವು ಇಂಗ್ಲಿಷಿನ 'ಯು' ಆಕಾರದ ದಾರಿಯ ಈಚೆ ತುದಿಯಲ್ಲಿದ್ದೆವು. ನಮ್ಮ ವಾಹನ ಇನ್ನೊಂದು ತುದಿಯಲ್ಲಿತ್ತು. ನಡುವೆ ಹಳ್ಳಿ. ಇಳಿದು ಹೋಗಿ ಆಚೆಕಡೆ ಸೇರೋಣ ಎಂದು ತಶಿ ಶಾರ್ಟ್‌ಕಟ್ ತೋರಿಸಿದ. ಈತ ನಮ್ಮನ್ನು ಮುಗಿಸಲು ಪ್ಲಾನ್ ಮಾಡುತ್ತಿದ್ದಾನೆ ಎಂಬ ಗುಮಾನಿ ಬಂತು. ಇಲ್ಲಪ್ಪ, ನೀನು ಹೋಗು, ನಾವು ಈ ದಾರಿಯಲ್ಲೇ ಬರುತ್ತೇವೆ ಎಂದು ನಡೆಯತೊಡಗಿದೆವು. ಅರ್ಧಗಂಟೆ ನಡೆದು ವಾಹನ ಸೇರಿದಾಗ ಮಹೇಶನಿಗೆ ಫಕ್ಕನೆ ನೆನಪಾಯಿತು: ಆತನ ಜರ್ಕಿನ್ ಮೊನಾಸ್ಚ್ರಿಯಲ್ಲೇ ಬಾಕಿಯಾಗಿತ್ತು!
ಅದು ನ್ಯೂಜಿಲೆಂಡ್‌ನಲ್ಲಿ ಆತನ ಗೆಳೆಯ ಕೊಟ್ಟ ಜರ್ಕಿನ್. ಬೆಲೆಬಾಳುವ ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲದ ಮಹೇಶ ಮತ್ತೆ ಅದನ್ನು ತರಲು ಬಂದ ದಾರಿಯಲ್ಲೇ ದೌಡಾಯಿಸಿದ. ಅದು ಅರ್ಧ ಇಂಚು ಕೂಡ ಅತ್ತಿತ್ತ ಹೋಗಿರುವುದಿಲ್ಲ ಎಂದು ಧೈರ್ಯವಿತ್ತು. ಯಾಕೆಂದರೆ ಹಿಮಾಚಲದ ಮಂದಿಗೆ ಕಳ್ಳತನ ಎಂದರೇನೆಂದೇ ಗೊತ್ತಿಲ್ಲ. ಇಲ್ಲಿನ ಕ್ರೈಮ್ ರೇಟ್ ತುಂಬಾ ತುಂಬಾ ಕಡಿಮೆ. ಪೊಲೀಸರಿಗೆ ಕೆಲಸವೇ ಇಲ್ಲ ಎನ್ನಬಹುದು.
ನಾವು ದಾರಿಯಂಚಿನಲ್ಲಿ ಕುಳಿತು ಕಾದೆವು. ಸೂರ್ಯ ಬೆಟ್ಟಗಳ ಹಿಂದೆ ಹೋಗಿದ್ದ. ಅಗಾಧವಾದ ಕತ್ತಲೆಯ ಪರದೆಯೊಂದು ಅತ್ತಲಿಂದ ಹೊಂಚು ಹಾಕುತ್ತಾ ಬರತೊಡಗಿತ್ತು. ರವಿಯ ಕೊನೆಯ ಕಿರಣಗಳು, ಪತನದಂಚಿನ ಮೊನಾಸ್ಟ್ರಿ ಮೇಲೆ ಚೆಲ್ಲಿದ್ದವು.
(ಮುಂದಿನ ವಾರ: ಓಂ ಮಣಿ ಪದ್ಮೇ ಹಂ)


= -ಹರೀಶ್ ಕೇರ
harishkhera@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!