ಗುರುಗಳಿಂದ ವಿದ್ಯೆ ಬುದ್ಧಿ
ಕಲಿಯಬೇಕು
ತರುಗಳಿಂದ ಫಲವ ಸವಿದು
ನಲಿಯಬೇಕು.
ಮೀನಿನಿಂದ ನದಿಯಲೀಜು
ಕಲಿಯಬೇಕು
ಜೇನಿನಿಂದ ತುಪ್ಪ ಸವಿದು
ನಲಿಯಬೇಕು.
ಶುಕದಿ ನಿತ್ಯ ಮಧುರ ಮಾತು
ಕಲಿಯಬೇಕು
ಪಿಕದ ಕೂಗು ಕೇಳಿ ಕೇಳಿ
ನಲಿಯಬೇಕು.
ಶುನಕದಿಂದ ಸ್ವಾಮಿನಿಷ್ಠೆ
ಕಲಿಯಬೇಕು
ಜನಕನಿಂದ ಜಾಣನಾಗಿ
ನಲಿಯಬೇಕು.
ಕಾಕದಿಂದ ಹಂಚಿ ತಿನಲು
ಕಲಿಯಬೇಕು
ಪೋಕನಿಂದ ದೂರವಿದ್ದು
ನಲಿಯಬೇಕು.
ದಾದಿಯಿಂದ ರೋಗಿಸೇವೆ
ಕಲಿಯಬೇಕು
ತಾಯಿಯಿಂದ ಪ್ರೀತಿ ಪಡೆದು
ನಲಿಯಬೇಕು.
-ಎಂ.ಎಂ. ಸಂಗಣ್ಣವರ