ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಗಿದ್ಧ್‌ನ ಸುಡುವ ಕಣ್ಣೀರು

Parashurama
Updated On : 9 Feb 2013, 4:20 am

ಚಿತ್ರದ ಕಥೆ ಈಗಿನದ್ದಲ್ಲ. 1984ರದ್ದು. ಆದರೆ ಕಥೆಯನ್ನು ಸೃಷ್ಟಿಸಿದ ವ್ಯವಸ್ಥೆ ಮಾತ್ರ ಈಗಿನದ್ದು ಮತ್ತು ಎಲ್ಲ ಕಾಲಕ್ಕೂ ಸಲ್ಲುವಂಥದ್ದು. ಅದು ಆಗಲೂ ಇತ್ತು, ಈಗಲೂ ಇದೆ. ನಮ್ಮದೇ ವ್ಯವಸ್ಥೆ. ಇಲ್ಲಿನ ಪಾತ್ರಧಾರಿಗಳು ನಮ್ಮ ನಡುವಿನವರೇ. ಹನುಮಕ್ಕ, ವಿರುಪಾಕ್ಷಿ, ಬಸ್ಯಾ, ಕರಿಯಣ್ಣ, ಲಕ್ಷ್ಮಿ, ಸುಂದರಕ್ಕ, ದೇಸಾಯಿ, ಪಾಟೀಲ್, ಗಂಗವ್ವ, ನಂಜವ್ವ, ಚಿನ್ನಿ... ಅರೆ! ಸಾಮಾಜಿಕ ಸವಲತ್ತುಗಳಿಂದ ವಂಚಿಸಲ್ಪಟ್ಟ ಹಳ್ಳಿಗರಲ್ಲವೇ ಇವರು? ಈ ಪಾತ್ರಧಾರಿಗಳ ಹೆಸರು ಕೇಳಿದರೆ ರಾಜ್ಯದ ಗಡಿಪ್ರದೇಶದ ಹಿಂದುಳಿದ ಹಳ್ಳಿಗಳ ಜನಜೀವನ ನೆನಪಾಗುತ್ತದೆ. ಭಾಷೆಯ ಹೊರತಾಗಿ ಈ ಸಿನಿಮಾದ ಬದುಕು ಮತ್ತು ಚಿತ್ರಣ ನಮ್ಮ ಸುತ್ತಲಿನದ್ದೇ. 'ಅಬ್ಬಾ! ಬದುಕು ಇಷ್ಟು ಕ್ರೂರವಾಗಿರುತ್ತದೆಯೇ? ಇಲ್ಲಿ ಹೆಣ್ಣಿನ ಮಾನ, ಪ್ರಾಣವನ್ನು ಕಸಿದುಕೊಳ್ಳಲು ಹದ್ದುಗಳು ಮನುಷ್ಯ ರೂಪದಲ್ಲಿ ತಾಳಿವೆಯಲ್ಲ' ಎಂಬ ಭಾವನೆ ಈ ಚಿತ್ರ ನೋಡಿದ ಮೇಲೆ ಹುಟ್ಟಿಕೊಳ್ಳುತ್ತದೆ.
ಅದು ಟಿ.ಎಸ್. ರಂಗ ನಿರ್ದೇಶಿಸಿದ 'ಗಿದ್ಧ್‌'. ಚಿತ್ರದ ಕಥೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿಪ್ರದೇಶಕ್ಕೆ ಅಂಟಿಕೊಂಡು ನಿರ್ಜೀವ ಕೆರೆಗಳಂತೆ ಕಂಡುಬರುವ ಗ್ರಾಮಗಳಲ್ಲಿ. ಕೆಂಪು ಮಣ್ಣಿನಿಂದ ಶೃಂಗಾರಗೊಂಡಿರುವ ಜೋಪಡಿಗಳು. ಸೀಮೆಎಣ್ಣೆ ಕಾಣದೆ ತೂಕಡಿಸುತ್ತಿರುವ ದೀಪದ ಬುಡ್ಡಿಗಳಿಂದ ಕತ್ತಲನ್ನು ಅಪ್ಪಿಕೊಂಡಿರುವ ಗುಡಿಸಲುಗಳು, ನೆತ್ತಿ ಸುಡುವ ಬಿಸಿಲು. ದಿನಪೂರ್ತಿ ದುಡಿದು ಅರೆಹೊಟ್ಟೆಯಲ್ಲೇ ಮಲಗಿದರೆ ನಡುರಾತ್ರಿ ಬಾಗಿಲು ತಟ್ಟುವ ಕಾಮುಕರು, ಬದುಕಿನ ಅನಿವಾರ್ಯತೆಗೆ ತಮ್ಮ ಮೂಳೆ ದೇಹ ಮಾರಿಕೊಳ್ಳುವ ಅಸಹಾಯಕ ಮಹಿಳೆಯರು... ಎಷ್ಟೊಂದು ಚಿತ್ರಗಳು, ಬದುಕಿನ ಅಗಾಧಗಳು, ಕಣ್ಣೀರಿನ ಕಥೆಗಳು!
ಅದು ಸಣ್ಣ ಹಳ್ಳಿ. ಚಿಕ್ಕವರು, ದೊಡ್ಡವರು ಎನ್ನದೆ ಎಲ್ಲರೂ ಊರಿನ ಭೂಮಾಲೀಕನ ಹೊಲದಲ್ಲಿ ಕೆಲಸ ಮಾಡಲು ಹೋಗುವ ದೃಶ್ಯದೊಂದಿಗೆ ಈ ಚಿತ್ರ ಶುರು. ಮುಂದೆ ಈ ಹಳ್ಳಿ ತಣ್ಣನೆಯ ಕ್ರೌರ್ಯಕ್ಕೆ ಮೂಕ ಸಾಕ್ಷಿ. ಈ ಊರಿನ ಬಡ ಹೆಣ್ಣುಮಕ್ಕಳ ಕಣ್ಣೀರಿಗೆ ಕಾರಣ ಯಲ್ಲಮ್ಮ. ಈಕೆ ಮನುಷ್ಯಳಲ್ಲ, ದೇವರು. ಹಿಂದುಳಿದ ವರ್ಗದ ಈ 'ದೇವತೆ'ಯನ್ನು ಬಳಸಿಕೊಳ್ಳುವುದು ಮಾತ್ರ ಉಳ್ಳವರು. ಯಲ್ಲಮ್ಮ ದೇವತೆಯ ಹೆಸರಿನಲ್ಲಿ ವಯಸ್ಸಿಗೆ ಬಂದ ಊರಿನ ಯುವತಿಯರನ್ನು ದೇವದಾಸಿಯರನ್ನಾಗಿಸುವ ವ್ಯವಸ್ಥೆಯ ಹಿಂದೆ ಯಾರೆಲ್ಲ ಕೆಲಸ ಮಾಡುತ್ತಾರೆ, ಇವರಿಗೆ ದೇವರು- ಆಚರಣೆ ಎಂಬಿತ್ಯಾದಿಗಳು ಹೇಗೆ ನೆಪವಾಗುತ್ತವೆ ಎಂಬ ವಿವರವನ್ನು ಚಿತ್ರ ಕೊಡುತ್ತಾ ಹೋಗುತ್ತದೆ. ಯಲ್ಲಮ್ಮ ದೇವಿಯ ಹೆಸರಿನಲ್ಲಿ ನಡೆಯುವ ಮುಗ್ಧ ಹೆಣ್ಣುಮಕ್ಕಳ ಮಾರಾಟಕ್ಕೆ ಭೂಮಾಲೀಕರು, ವ್ಯಾಪಾರಿಗಳು, ಕೊನೆಗೂ ದೇವಸ್ಥಾನದ ಪೂಜಾರಿಗಳೇ ಸೂತ್ರಧಾರಿಗಳು. ಈ ಅನಾದಿ ಕಾಲದ ಯಲ್ಲಮ್ಮನ ರೂಪ ಈಗ ಬದಲಾಗಿದೆ. ಊರಿನ ಭೂಮಾಲೀಕರು ಆಕೆಯ ಬದುಕನ್ನು ತಿಂದು ಮುಗಿಸಿದ ಮೇಲೆ ಹೈವೇಗಳಲ್ಲೋ, ತಲೆ ಹಿಡುಕರ ಮೂಲಕವೋ ಮುಂಬೈನಲ್ಲಿ ದೇಹ ಮಾರಿಕೊಂಡು ಕುಟುಂಬವನ್ನು ಸಾಕುವ ಹೊಣೆ ಇಂಥ ನಿಷ್ಪಾಪಿ ಹೆಣ್ಣು ಮಕ್ಕಳದ್ದು.
ಪುಟ್ಟ ಬಾಲಕಿ ಲಕ್ಷ್ಮಿಯನ್ನು ಯಲ್ಲಮ್ಮನನ್ನಾಗಿಸುವ ಊರಿನ ಭೂಮಾಲೀಕರ ಹಠಮಾರಿತನ, ಲಕ್ಷ್ಮಿಯನ್ನು ಯಲ್ಲಮ್ಮನಾಗಲು ವಿರೋಧಿಸುವ ವೇಶ್ಯೆ ಹನುಮಕ್ಕ, ಈ ಅನಾಚಾರಗಳನ್ನು ಕಂಡು ಸಿಟ್ಟಾಗುವ ಶಾಲೆಯ ಶಿಕ್ಷಕ, ಲಕ್ಷ್ಮಿಗಾಗಿ ನಡೆಯುವ ಗುದ್ದಾಟ, ಹನುಮಕ್ಕ ಹಾಗೂ ಬಸ್ಯಾನ ಸಹಾಯದಿಂದ ಊರಿನಿಂದ ತಪ್ಪಿಸಿಕೊಂಡು ಮುಂಬೈ ಬಸ್ ಹತ್ತಿ ಅಲ್ಲಿ ಮಾವನೊಂದಿಗೆ ಬದುಕಲು ಕನಸು ಕಾಣುವ ಲಕ್ಷ್ಮಿ... ಇಲ್ಲಿಗೆ ಚಿತ್ರ ಸಾಂಕೇತಿಕವಾಗಿ ಮುಗಿದರೂ ಕಥೆ ಅಂತ್ಯವಲ್ಲ. ಲಕ್ಷ್ಮಿ ಹತ್ತುವ ಬಸ್‌ನಲ್ಲೇ ಹುಡುಗಿಯರನ್ನು ಜೊತೆ ಮಾಡಿಕೊಂಡು ಪಿಂಪ್ ವಿರುಪಾಕ್ಷಿ ಮುಂಬೈಗೆ ಹೊರಟಿರುತ್ತಾನೆ. ಆತ ಬಸ್‌ನಲ್ಲಿ ಲಕ್ಷ್ಮಿಯನ್ನು ನೋಡಿ ವಿಚಿತ್ರವಾಗಿ ನಗುತ್ತಾನೆ. ಬಸ್ ಹೊರಡುತ್ತದೆ. ಅದರ ಹಿಂದೆ ಎರಡು ಕೆಂಪು ದೀಪಗಳು ಉರಿಯುತ್ತವೆ. ಈ ಚಿತ್ರ ಬೆಂಗಳೂರಿನ ಜಾಯಿಂಟ್ ವುಮೆನ್ಸ್ ಪ್ರೋಗ್ರಾಮ್ಸ್ ಸಂಸ್ಥೆ ಅಧ್ಯಯನ ನಡೆಸಿ ನೀಡಿರುವ ಅಂಶಗಳ ಆಧಾರ ಮೇಲೆ ತಯಾರಾದ ವಾಸ್ತವದ ಕನ್ನಡಿ. ಹನುಮಕ್ಕನಾಗಿ ಸ್ಮಿತಾ ಪಾಟೀಲ್, ಬಸ್ಯಾನ ಪಾತ್ರದಲ್ಲಿ ಓಂಪುರಿ, ಪಿಂಪ್ ವಿರುಪಾಕ್ಷಿಯಾಗಿ ನಾನಾ ಪಾಟೇಕರ್‌ರದ್ದು ಅದ್ಭುತ ಅಭಿನಯ. ಚಿತ್ರಕ್ಕೆ ಸಂಗೀತ ನೀಡಿರುವವರು ಬಿ.ವಿ. ಕಾರಂತ್ ಅವರು.
ಕೆಲ ವರ್ಷಗಳ ಹಿಂದೆ ಹನುಮಂತ ದೇವರ ಹೆಸರಿನಲ್ಲಿ ಹೆಣ್ಣಿನ ದೇಹ ಮಾರಾಟ ರಾಜ್ಯದಲ್ಲಿ ದೊಡ್ಡ ಸುದ್ದಿ ಮಾಡಿತು. ಆಗೆಲ್ಲೋ ಆಲಿಸಿದ ಚಂದ್ರಗುತ್ತಿಯಲ್ಲಿನ ಬೆತ್ತಲೆ ಸೇವೆ, ಹೈದ್ರಾಬಾದ್ ಕರ್ನಾಟಕದಲ್ಲಿ ಹಸಿ ಹಸಿಯಾಗಿರುವ ದೇವದಾಸಿ ಪದ್ಧತಿ... ಇವೆಲ್ಲ ಈ ಚಿತ್ರದ ಪ್ರಸ್ತುತತೆಯನ್ನು ಸಾರುವಂಥವು ಅಂತನ್ನಿಸುತ್ತದೆ. ಇಂಥದೇ ಕಥೆಯನ್ನು ಆಧರಿಸಿ ನಿರ್ದೇಶಕ ಎಂ.ಎಸ್. ಸತ್ಯು 'ಇಜ್ಜೋಡು' ಚಿತ್ರಿಸಿದ್ದಾರೆ. ಹೆಣ್ಣಿನ ಮಾನ, ಪ್ರಾಣವನ್ನು ಆಟದ ವಸ್ತುವಾಗಿ ಬಳಸಿ ಬಿಸಾಕುವ ಕೃತ್ಯಗಳು ನಡೆಯುತ್ತಲೇ ಇವೆ. ಆದರೆ, ಕಾಲಕಾಲಕ್ಕೆ ಅದರ ರೂಪ ಬದಲಾಗುತ್ತಿದೆ ಅಷ್ಟೇ. 'ಗಿದ್ಧ್‌' ಚಿತ್ರ ಅಂಥ ರೂಪಗಳಲ್ಲೊಂದು.

- ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments