ಎಂದಿನಂತೆ ಅದೊಂದು ಚುಮುಚುಮು ಚಳಿಯ ಆಹ್ಲಾದಕರ ಮುಸ್ಸಂಜೆ. ಮಗಳು ಐಶ್ವರ್ಯಾಳೊಂದಿಗೆ ವಾಯುವಿಹಾರಕ್ಕೆ ಹೋದವನಿಗೆ ಅಚ್ಚರಿ. 'ಅಕ್ಷರ ಕಾಶಿ' ಧಾರವಾಡದ ಬಾನಂಗಳದಲ್ಲಿ ಮನಮೋಹಕ ದೃಶ್ಯ. ಸಾವಿರಾರು ಯೋಧರಿಂದ ಆಗಸವನ್ನೇ ಮರೆಮಾಚುವ ಸಾಹಸ. ಅದಕ್ಕೆ ಬೆದರಿಯೋ ಎಂಬಂತೆ ಭಾನು ಕೂಡ ಬಾನಂಚಿನಲ್ಲಿ ಮರೆಯಾಗುವ ಪ್ರಯತ್ನ ಮಾಡುತ್ತಿದ್ದ.
'ಅಪ್ಪಾ, ನಾವು ನೋಡಿದ ಸಾವಿರಾರು ಹಕ್ಕಿಗಳು ವಲಸೆ ಪಕ್ಷಿಗಳೇ ಇರಬೇಕು' ಎಂದು ಮಗಳು ಹೇಳಿದಾಗ ಸಂಶೋಧನೆ ಶುರುವಾಯಿತು. ಚಳಿಗಾಲ ಬಂತೆಂದರೆ ದೇಶೀ, ವಿದೇಶಿ ಹಕ್ಕಿಗಳ ಚಿಲಿಪಿಲಿ ಶುರು. ಧಾರವಾಡವೂ ಪಕ್ಷಿಗಳ ಆತಿಥ್ಯದಲ್ಲಿ ಹಿಂದಿಲ್ಲ.
ನಮ್ಮೂರಿಗೆ ಬಂದಿರುವುದು ರೋಸಿಸ್ಟಾರ್ಲಿಂಗ್ ಹಕ್ಕಿಗಳು. ಮೂಲತಃ ಯುರೋಪ್‌ನವು. ಅವು ಒಂದು ಜಾತಿಯ ಮೈನಾ ಪಕ್ಷಿಗಳು. ಜಂಗಲ್ ಮೈನಾ ಎಂದೂ ಕರೆಯುತ್ತಾರೆ. ಜುಲೈನಿಂದ ವಲಸೆ ಶುರು. ಭಾರತ, ಪಾಕಿಸ್ತಾನ ಮೊದಲಾದ ಸಮಶೀತೋಷ್ಣ ಪ್ರದೇಶಗಳ ಕಡೆ ಹಿಂಡುಹಿಂಡಾಗಿ ಬರುತ್ತವೆ. ಮಾರ್ಚ್, ಏಪ್ರಿಲ್‌ನಲ್ಲಿ ಸ್ವದೇಶದತ್ತ ಪ್ರಯಾಣ ಬೆಳೆಸುತ್ತವೆ.
ಇವುಗಳ ವಿಶೇಷ ಎಂದರೆ ಸಾಂಘಿಕತೆ. ಆಹಾರ, ವಿಹಾರ ಎಲ್ಲವೂ ಗುಂಪಿನಲ್ಲೇ. ಸಾವಿರಾರು ರೋಸಿಸ್ಟಾರ್ಲಿಂಗ್‌ಗಳು ಗುಂಪುಗಳಲ್ಲಿ ವಿಂಗಡಿಸಿಕೊಂಡು, ಒಂದೊಂದು ಗುಂಪು ಒಂದೊಂದು ದಿಕ್ಕಿನತ್ತ ಸಾಗುತ್ತದೆ. ಸಾಯಂಕಾಲ ಮತ್ತೆ ಒಂದೆಡೆ ಸೇರಿಕೊಂಡು ಸಂಗ್ರಹಿಸಿದ ಆಹಾರ ಹಂಚಿಕೊಳ್ಳುತ್ತವೆ. ಒಂದೇ ಗಿಡದಲ್ಲಿ ಮಲಗಿ ನಿದ್ರೆ ಹೋಗುತ್ತವೆ. ಅವುಗಳ ಕೀ.. ಕೀ.. ಕೀ.. ಕಲರವವೂ ಕಿವಿಗಿಂಪು. <
ಬಣ್ಣದಿಂದಲೇ ಬಂತು ಹೆಸರು!
ರೋಸಿಸ್ಟಾರ್ಲಿಂಗ್‌ಗಳಿಗೆ ರೋಸ್ ಕಲರ್ಡ್ ಸ್ಟಾರ್ಲಿಂಗ್ ಅಥವಾ ರೋಸ್ ಕಲರ್ಡ್ ಪಾಸ್ಟರ್ಡ್ ಎಂದೂ ಹೇಳುವುದುಂಟು. ವೈಜ್ಞಾನಿಕವಾಗಿ ಹೇಳುವುದಿದ್ದರೆ ಸ್ಟುಮಿಯೇಡ್ ಕುಟುಂಬದ, ಸ್ಟುಮಸ್ ಸಂತತಿಯ, ಸ್ಟುಮಸ್ ರೋಸಸ್ ತಳಿಗೆ ಸೇರಿದವು. ರೋಸಿಸ್ಟಾರ್ಲಿಂಗ್‌ಗಳ ಮೈಬಣ್ಣ ತಿಳಿ ಹಳದಿ ಮತ್ತು ಗುಲಾಬಿ. ಈ ಕಾರಣದಿಂದಲೇ ಅವುಗಳ ಹೆಸರಿನಲ್ಲಿ 'ರೋಸಿ' ಸೇರಿಕೊಂಡಿರುವುದು. ತೆಳ್ಳಗಿನ ಎರಡು ರೆಕ್ಕೆಗಳು ಮಂಕಾದ ಕಪ್ಪು ವರ್ಣ. ಉದ್ದ ಉಗುರುಗಳು. ಚುಂಚು ಹಳದಿ. ತಲೆ ಕಪ್ಪಾಗಿದ್ದು ಬಿರುಸಾದ ಕೂದಲಿನ ಜುಟ್ಟು ಇರುತ್ತದೆ. ಹೆಣ್ಣು ರೋಸಿಸ್ಟಾರ್ಲಿಂಗ್‌ಗೆ ಜುಟ್ಟು ಇರುವುದಿಲ್ಲ. ಗೊರಲೆ, ರೆಕ್ಕೆ ಹುಳು, ಕೊರೆಹುಳು ಮೊದಲಾದ ಕ್ರಿಮಿಕೀಟಗಳೇ ಆಹಾರ. ಸುಗ್ಗಿಯ ಕಾಲದಲ್ಲಿ ಕಾಳು ಮಾಗಿದ ಹಣ್ಣು, ಹೂವಿನಲ್ಲಿರುವ ಮಕರಂದವನ್ನೂ ಸೇವಿಸುತ್ತವೆ.
ಮೇದಿಂದ ಜುಲೈ ಸಂತಾನಾಭಿವೃದ್ಧಿ ಸಮಯ. ಆಗ ಗಂಡು ಮತ್ತು ಹೆಣ್ಣು ರೋಸಿಸ್ಟಾರ್ಲಿಂಗ್‌ಗಳು ಹುಲ್ಲು, ಕಡ್ಡಿ, ಕಸ, ಇತ್ಯಾದಿಗಳಿಂದ ಮರದ ಪೊಟರೆ, ಕಲ್ಲಿನ ಬಿರುಕುಗಳಲ್ಲಿ ಗೂಡು ಕಟ್ಟಿಕೊಂಡು ಮಿಲನದಲ್ಲಿ ತೊಡಗುತ್ತವೆ. ಹೆಣ್ಣು ತಿಳಿ ನೀಲಿ ಬಣ್ಣದ 2 ರಿಂದ 6 ಮೊಟ್ಟೆ ಇಟ್ಟು ಅವುಗಳಿಗೆ ಕಾವು ನೀಡುತ್ತಿದ್ದರೆ, ಗಂಡು ವೈರಿಗಳು ಒಳ ನುಗ್ಗದಂತೆ ಕಾವಲು ಕಾಯುತ್ತದೆ. ಒಂದರಿಂದ ಎರಡು ವಾರದಲ್ಲಿ ಕಾವು ನೀಡುತ್ತವೆ. ಆರು ವಾರದವರೆಗೆ ಅವುಗಳಿಗೆ ಆಹಾರ ನೀಡಿ, 2-3 ತಿಂಗಳು ಹಾರಾಟದ ತರಬೇತಿ ನೀಡಿ ಸ್ವಾವಲಂಬಿಗಳನ್ನಾಗಿ ಮಾಡುತ್ತವೆ.
-ಚಿತ್ರ-ಲೇಖನ: ಮಧು ಕದಂ