ಸುಮಧುರ ದಾಂಪತ್ಯದ ಗುಟ್ಟೇನು? ದಂಪತಿ ಸಂಶಯ, ಅಹಂ, ಕೋಪ, ತಿರಸ್ಕಾರಗಳನ್ನು ಮೀರಿನಿಂತು ಹೊಂದಾಣಿಕೆ ಮನೋಭಾವ ಬೆಳೆಸಿಕೊಂಡಾಗ ಮಾತ್ರ ಸಂತೋಷ ಮತ್ತು ತೃಪ್ತಿ ಜೀವನ ಸಾಧ್ಯ. ಸಂತಕವಿ ಜಯದೇವ ತಮ್ಮ 'ಗೀತ ಗೋವಿಂದ'ದಲ್ಲಿ ನೀಡಿರುವ ಸಂದೇಶವೂ ಇದೇ ಆಗಿದೆ.
ವೆಂಕಟೇಶ್ವರ ನಾಟ್ಯ ಮಂದಿರದ ನೃತ್ಯ ಕಲಾವಿದರು ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಇತ್ತೀಚೆಗೆ 'ಗೀತ ಗೋವಿಂದ' ನೃತ್ಯ ರೂಪಕ ಪ್ರದರ್ಶಿಸಿದರು. ಕವಿಯ ಉದ್ದೇಶವನ್ನು ಪ್ರೇಕ್ಷಕರಿಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾಯಿತು.
ವಸಂತ ರಾಗದ ಲಲಿತ ಲವಂಗ, ಉನ್ಮಾದ ಮದನ ಮತ್ತು ಮಾದವಿಕ ಪರಿಮಳ ವಿಲಸೆ ಕೃತಿಗಳನ್ನು ಬಳಸಿಕೊಂಡು, ಪ್ರಕೃತಿಯ ಸೊಬಗು, ಹೂವು ದುಂಬಿಗಳ ಸರಸ, ಯಮುನಾ ನದಿ ಜುಳುಜುಳು ಹರಿಯುವ ರೀತಿಗಳನ್ನು ಕಟ್ಟಿಕೊಟ್ಟಿದ್ದು ಸಮಂಜಸವಾಗಿತ್ತು. ಗೋಪಿಯರ ಜತೆ ಆಟವಾಡುತ್ತಿರುವ ಕೃಷ್ಣನನ್ನು ಕಂಡು ಕೋಪಿಸಿಕೊಳ್ಳುವುದು, ರಾಧೆಯನ್ನು ಕಾಣದೇ ಕೃಷ್ಣ ಪರಿತಪಿಸುವ ಸನ್ನಿವೇಶಗಳು ಅತ್ಯಂತ ಸಹಜವಾಗಿ ಮೂಡಿಬಂದವು.
ರಾಧೆ ಯಮುನಾ ತೀರದಲ್ಲಿ ಕೃಷ್ಣನ ರೂಪಲಾವಣ್ಯ ಕಲ್ಪನೆಯಿಂದ ದುಃಖ ಮತ್ತು ಸಂತೋಷ ಅನುಭವಿಸುವ ದೃಶ್ಯ ರಂಜನೀಯವಾಗಿತ್ತು. ಪಂತುವರಾಲಿ ರಾಗದ ಚಂದನ ಚರ್ಚಿತ, ಕೇಳಿ ಕಲಕುತ ಮತ್ತು ಕರತಲತಲಾ; ಮೋಹನ ರಾಗದ ಸಂಚಲದದರ, ಚಂದ್ರಿಕಾ ಚಾರು ಮತ್ತು ವಿಷದ ಕದಂಬ ತಲೆ ಕೃತಿಗಳನ್ನು ಬಳಸಿಕೊಂಡು, ರಾಧೆಯ ವಿರಹ ವೇದನೆ, ಕೋಪ ತಾಪಗಳ ಪ್ರಖರತೆ ಮತ್ತು ಹಮೀರ್ ಕಲ್ಯಾಣಿ ರಾಗದ ಮಮಿಯಂ ಚರಿತ ವಿಲೆಕ್ಕ್ಯ ಮತ್ತು ಯಾಹಿ ಮಾದವ (ಹಂಸಾನಂದಿ) ಕೃಷ್ಣನನ್ನು ತಿರಸ್ಕರಿಸುವುದು ರಸಿಕರ ಮನವನ್ನು ಮುಟ್ಟುವಲ್ಲಿ ಸಫಲವಾಯಿತು.
ದರ್ಬಾರಿ ಕಾನಡಾ ರಾಗದ ನಿನ್ದತೆ ಚಂದನ್, ವಾಸಂತ್ ರಾಗದ ಸ್ತನ ವಿನಿಹತಿಮಪಿ, ಆಹಿರಬ್ಯರವಿ ರಾಗದ ವಹತಿ ಮಲಯಾ ಸಮಿರೆ, ತವ ವಿರಹೆ ವನಮಾಲೆ, ಕೃತಿಗಳ ಮೂಲಕ ಸಖಿ ಕೃಷ್ಣನಿಗೆ ರಾಧೆಯ ಪರಿತಾಪವನ್ನು ತಿಳಿಸುವ ದೃಶ್ಯ ಸಮಂಜಸವಾಗಿತ್ತು. ಕಂಬೋಜಿ ರಾಗದ ಹರಿ ರಬಿ ಸರತಿ, ಕಿಮತಿ ವಿಖರತಿ ಕೃತಿಗಳ ಮೂಲಕ ಸಖಿಯು ರಾಧೆಯ ತಪ್ಪುಗಳನ್ನು ಮನವರಿಕೆ ಮಾಡಿಕೊಡುವುದು, ರಾಧೆ ಮತ್ತು ಕೃಷ್ಣ ತಮ್ಮತಮ್ಮ ತಪ್ಪುಗಳನ್ನು ತಿದ್ದಿಕೊಂಡು ಒಂದಾಗುವದನ್ನು, ಮುಖಾರಿ ರಾಗದ ವದಸಿ ಯದಿ ಕಿಂಚದಪಿ, ಪ್ರಿಯೆ ಚಾರು ಶೀಲೆ ಸಮರ ಘರಳ ಖಂಡನಮ್ ಶೃಂಗಾರಮಯವಾಗಿ ಮೂಡಿಬಂತು.
-ಡಾ.ಎ.ವಿ. ಸತ್ಯನಾರಾಯಣ