ಸಾಪ್ತಾಹಿಕಪ್ರಭ

ನುಡಿಗುಟ್ಟು

ಸಾಲು ಸಾಲು ದಾಪುಗಾಲು

ಕಾಲ ಯಾವ ಅಲೆ ಎಬ್ಬಿಸುತ್ತದೋ ಯಾರಿಗೆ ಗೊತ್ತು? ಇಲ್ಲಿ ಏನೂ ಅಲ್ಲದ ಸಣ್ಣ ಸುಂಟರಗಾಳಿಯೂ ಮನಸ್ಸನ್ನು ಛಿದ್ರಮಾಡಿ ಕಾಣದಂತೆ ಮಾಯವಾಗಬಹುದು. ದಿಕ್ಕಾಪಾಲಾದಂತೆ ತೂರಿ ಹೋಗುವ ಈ ವೇಳೆ ಯಾರೋ ಕೈ ಹಿಡಿದು ಆಸರೆಯಾದರೆ ನಮ್ಮ ಪಾಲಿಗೆ ಅವನೇ ಭಗವಂತ. ಯಾರೋ ವ್ಯಕ್ತಿ ಯಾಕೆ, ಕೆಲವೊಮ್ಮೆ ನುಡಿಮುತ್ತುಗಳೇ ಅಂಥ ಅಂಬಿಗನ ಕೆಲಸ ಮಾಡುತ್ತವೆ. ಜ್ಞಾನದ ಸಾಲುಗಳಿಂದಲೇ ಹಲವರ ಜೀವನದೀಪ ಬೆಳಗಿದ್ದಿದೆ. ಇದು ಸವಾಲುಗಳಿಗೆ ಸಾಲುಗಳ ಮೂಲಕ ಸಾಂತ್ವನ ಹೇಳುವ ಕಾಯಕ.
ಅಂಥ ಅಪರೂಪದ ಕೆಲಸ ನ್ಯಾ. ಶಿವರಾಜ ವಿ. ಪಾಟೀಲರ ಕಡೆಯಿಂದ ಆಗಿದೆ. ಅವರ 'ಮುಂಜಾವಿಗೊಂದು ನುಡಿಕಿರಣ' ಹೊತ್ತಗೆ ಹೊತ್ತು ತಂದ 365 ನುಡಿಗಟ್ಟುಗಳು ಈಗ ಮನಸ್ಸನ್ನು ಗಟ್ಟಿಗೊಳಿಸಲು ಸಜ್ಜುಗೊಂಡಿವೆ. ಅಧ್ಯಾತ್ಮ ಚಿಂತನೆಯ ಸೆಲೆಯಾಗಿ, ಸಮಾಜ ಚಿಂತನೆಯ ಮುಖವಾಗಿ, ವೈಚಾರಿಕತೆಯ ಮೊನಚಾಗಿ, ವಿಡಂಬನೆ ಮತ್ತು ವಿನೋದದ ಲಹರಿಯಾಗಿ ನಿಷ್ಕಳಂಕ ವ್ಯಕ್ತಿತ್ವದ ನಿರ್ಮಾಣಕ್ಕೆ ನಾಂದಿ ಹಾಡುತ್ತವೆ. ಲೇಖಕರ ಜೀವನಾನುಭವದಲ್ಲಿ ಬೆಂದು ಪರಿಪಕ್ವಗೊಂಡ ಅನೇಕ ಅಪರೂಪದ ವಿಚಾರಗಳು ಇಲ್ಲಿ ಹರಳುಗಟ್ಟಿವೆ.
'ಕೆಲವರು ಆಹಾರಕ್ಕಾಗಿ ಮೈಲುಗಟ್ಟಲೆ ನಡೆಯುತ್ತಾರೆ, ಇನ್ನು ಕೆಲವರು ಆಹಾರದ ಪಚನಕ್ಕಾಗಿ ಮೈಲುಗಟ್ಟಲೆ ಓಡುತ್ತಾರೆ'... ಒಳಗಣ್ಣುಗಳ ಹುಬ್ಬೇರಿಸುವಂಥ ಇಂಥ ನೂರಾರು ನುಡಿಗಟ್ಟುಗಳ ಬುತ್ತಿ 'ಮುಂಜಾವಿಗೊಂದು ನುಡಿಕಿರಣ'.
'ಇಂದು' ಎನ್ನುವುದು ಎಲ್ಲರ ಜೀವಿಗೂ ಹೊಸ ಕ್ಷಣದ ಆರಂಭ. ಪ್ರಕೃತಿಯ ಬದುಕು ಕೂಡ ಇಬ್ಬನಿ ಮೂಲಕವೇ ಆರಂಭವಾಗುವಂಥದ್ದು. ಇನ್ನು ನಮ್ಮ ಬದುಕು ಅಂಥ ಲವಲವಿಕೆಯಿಂದ ಆರಂಭವಾಗದಿದ್ದರೆ ಹೇಗೆ? ನಮ್ಮ ಮುಂಜಾನೆಯ ಆರಂಭಕ್ಕೊಂದು ಆಶಾಭಾವ, ಹೊಸ ಕನಸು ತೆರೆಸಲು ಇಂಥ ನುಡಿಗಟ್ಟುಗಳೇ ಸಾಕಲ್ಲವೇ? ಮುಂಜಾವು ಒಂದು ಪ್ರಫುಲ್ಲತೆಯ ಸಮಯ. ಈ ಸಮಯದಲ್ಲಿ ನಾವು ಮನಸ್ಸಿಗೆ ಕೊಡುವ ವಿಚಾರಗಳು ಬಹುಬೇಗ ಹಿಡಿಯುತ್ತವೆ. ಅಲ್ಲದೆ, ಆ ಗ್ರಹಿಕೆ ಪರಿಣಾಮಕಾರಿಯೂ ಆಗಿರುತ್ತದೆ.
ಗೊಂದಲದ ಧಾವಂತದಲ್ಲಿ ದಾಂಗುಡಿಯಿಡುವ ಮನವು ಶಾಂತವಾಗಿರುವ ಸಮಯಕ್ಕಾಗಿ ಹಾತೊರೆಯುತ್ತದೆ. ಬಹುಶಃ ಆ ಸಮಯವನ್ನು ಲೇಖಕಕರು ಈ ಕೃತಿ ಮೂಲಕ ಸಾಕಾರಗೊಳಿಸಲು ಯತ್ನಿಸಿದ್ದಾರೆ. ಬೆಂಗಳೂರಿನ ಸ್ಪರ್ಶ್ ಫೌಂಡೇಶನ್ ಹೊರತಂದಿರುವ ಈ ಕೃತಿಯ ಬೆಲೆ 125 ರುಪಾಯಿ (ಕೇಸ್ ಬೈಂಡಿಂಗ್). ಸಾದಾ ಕಾಪಿ ಬೆಲೆ 75 ರುಪಾಯಿ, ಸ್ಟೂಟೆಂಡ್ ಎಡಿಷನ್ 15 ರುಪಾಯಿ.

ಜೀವವು ರಕ್ತ-ಮಾಂಸ ಮತ್ತು
ಹೃದಯದ ಮಿಡಿತದಲ್ಲಿದ್ದರೂ
ಬದುಕು ನಡೆನುಡಿಯಲ್ಲಿ ಕಾಣಬಹುದು.

ಕುರ್ಚಿ ಒಂದೇ ಆದರೂ
ಅದರ ಮೇಲೆ ಕುಳಿತುಕೊಳ್ಳುವವರು
ಮಹತ್ತರ ಬದಲಾವಣೆಗಳನ್ನು ತರಬಲ್ಲರು.

ಒಬ್ಬನ ಮುಖ ಆತನ ಕಥೆಯನ್ನು,
ಒಂದು ಪುಸ್ತಕದ ಅನೇಕ ಪುಟಗಳಿಗಿಂತ
ಹೆಚ್ಚು ಪರಿಣಾಮಕಾರಿಯಾಗಿ ಹೇಳುತ್ತದೆ.

ಯುದ್ಧಗಳು ಖಂಡಿತವಾಗಿ ಹಸಿವನ್ನು
ಸೃಷ್ಟಿಸುತ್ತವೆ. ಆದರೆ, ಕೆಲವೊಮ್ಮೆ ಹಸಿವೆಯು
ಯುದ್ಧಕ್ಕೆ ನಾಂದಿಯಾಗುತ್ತದೆ ಎಂಬುದನ್ನು
ಮರೆಯಬಾರದು.

ಒಳ್ಳೆಯ ಕೆಲಸಕ್ಕೆ ಸಿಗುವ
ನಿಜವಾದ ಪ್ರಶಸ್ತಿ ಎಂದರೆ ಮತ್ತಷ್ಟು
ಒಳ್ಳೆಯ ಕೆಲಸಗಳನ್ನು ಮಾಡಲು
ಸಿಗುವ ಅವಕಾಶಗಳೇ.

ಈ ಪುಸ್ತಕ ಬಿಡುಗಡೆ ದಿನವೇ
1,400 ಪ್ರತಿಗಳ ದಾಖಲೆ ಮಾರಾಟಗೊಂಡಿದೆ!

ನ್ಯಾ. ಶಿವರಾಜ ವಿ. ಪಾಟೀಲರ 'ಮುಂಜಾವಿಗೊಂದು ನುಡಿಕಿರಣ'
ಹೊತ್ತಗೆ ಹೊತ್ತು ತಂದ

 365
ನುಡಿಗಟ್ಟುಗಳು
ಈಗ ಮನಸ್ಸನ್ನು ಗಟ್ಟಿಗೊಳಿಸಲು ಸಜ್ಜುಗೊಂಡಿವೆ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಬಿಗ್ ಶಾಕ್‌; ಇಬ್ಬರಿಗೂ ಕೋರ್ಟ್ ಸಮನ್ಸ್