ಸಾಪ್ತಾಹಿಕಪ್ರಭ

ಭಗತ್ ಜಗತ್ತು

ಭಗತ್ ಸಿಂಗ್ ಅಜ್ಜಿ ಜಯಾಕೌರ್‌ಳ ಪ್ರೀತಿಯ ಮಗುವಾಗಿದ್ದ. ಅವಳಿಗೆ ಮೊಮ್ಮಗನ ಮದುವೆ ನೋಡುವ ಆಸೆ. ಆಕೆಯ ಸ್ವಭಾವ ಡಿಕ್ಟೇಟರ್ ತರಹದ್ದು. ಒಮ್ಮೆ ಹೇಳಿದರೆ ಮುಗಿಯಿತು. ತಂದೆ ಕಿಶನ್‌ಸಿಂಹ ತಾಯಿಯ ಮಾತಿಗೆ ಸಮ್ಮತಿಸಿ ಮಗನಿಗೆ ಹುಡುಗಿಯನ್ನು ನೋಡಿ ನಿಶ್ಚಿತಾರ್ಥಕ್ಕೆ ದಿನವನ್ನು ಗೊತ್ತುಮಾಡಿದ್ದಾಯಿತು.
ನಿಶ್ಚಿತಾರ್ಥಕ್ಕೆ ಕೆಲವೇ ದಿನಗಳಿಗೆ ಮುಂಚೆ ಭಗತ್‌ಸಿಂಗ್ ಮನೆಬಿಟ್ಟು ಲಾಹೋರಿಗೆ ಹೋದ.ಅಲ್ಲಿಂದ ಎಲ್ಲಿಗೆ ಹೋದನೋ ಗೊತ್ತಿಲ್ಲ. ಒಟ್ಟಿನಲ್ಲಿ ಪರಾರಿಯಾದ. ಅವನ ತಂದೆಗೆ ಅವನು ತನ್ನ ಮೇಜಿನ ಮೇಲೆ ಬರೆದಿಟ್ಟಿದ್ದ ಕಾಗದ ಸಿಕ್ಕಿತು. ಅದರ ಒಕ್ಕಣೆ ಹೀಗಿತ್ತು:
'ಪೂಜ್ಯ ತಂದೆಯವರಿಗೆ ನಮಸ್ಕಾರಗಳು...
ನನ್ನ ಜೀವನವನ್ನು ಭಾರತ ಸ್ವಾತಂತ್ರ್ಯ ಸಾಧನೆಯ ಕಾರ್ಯಕ್ಕಾಗಿ ನಾನು ಮುಡುಪಿಡಲು ಪಣತೊಟ್ಟಿದ್ದೇನೆ. ಆದ್ದರಿಂದ ನನ್ನ ಜೀವನದಲ್ಲಿ ವಿಶ್ರಾಂತಿಯಾಗಲೀ, ಸಾಮಾನ್ಯ ಲೌಕಿಕ ರೀತಿಯ ಸುಖ ಸಂತೋಷಗಳಾಗಲೀ ಇರುವುದಿಲ್ಲ. ಅಂಥ ಮುಳ್ಳಿನ ಹಾದಿ ಆಯ್ದುಕೊಂಡಿದ್ದೀನಿ. ನಾನು ಚಿಕ್ಕವನಾಗಿದ್ದಾಗ ಉಪನಯನ ಸಂಸ್ಕಾರದ ಸಮಯದಲ್ಲಿ ನೀವು ನನ್ನನ್ನು ದೇಶಸೇವಾ ಕಾರ್ಯಕ್ಕಾಗಿ ಸಮರ್ಪಿಸಿರುವುದಾಗಿ ಎಲ್ಲರ ಮುಂದೆ ಘೋಷಿಸಿದ್ದಿರಿ. ಈಗ ನಾನು ಪಿತೃವಾಕ್ಯ ಪರಿಪಾಲಕನಾಗಿ ನಿಮ್ಮ ಪ್ರತಿಜ್ಞೆ ಈಡೇರಿಸಲು ಹೊರಡುತ್ತಿದ್ದೇನೆ. ನೀವು ನನ್ನನ್ನು ಕ್ಷಮಿಸುವಿರೆಂದು ನಂಬಿದ್ದೇನೆ.
ನಿಮ್ಮ ವಿಧೇಯ,
ಭಗತ್‌ಸಿಂಗ್
ಈ ಪಲಾಯನದೊಂದಿಗೆ ನ್ಯಾಷನಲ್ ಕಾಲೇಜಿನ ಅಭ್ಯಾಸವೂ ಕೊನೆಗೊಂಡಿತು. ಇದು 1923ರ ಉತ್ತರಾರ್ಧದಲ್ಲಿ ನಡೆದ ಸಂಗತಿ.

ಕಾಕೋರಿ ಕಾಂಡಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಕ್ರಾಂತಿಕಾರಿಗಳ ಬಗ್ಗೆ ವಿಷಯ ಸಂಗ್ರಹಿಸಲು ಮತ್ತು ಇತರ ಕ್ರಾಂತಿಕಾರಿಗಳ ಬಗ್ಗೆ ತಿಳಿದುಕೊಳ್ಳಲು ಭಗತ್ ಸಿಂಗ್‌ನನ್ನು ಸಂಶಯದ ಮೇಲೆ ಲಾಹೋರಿನಲ್ಲಿ ಬಂಧಿಸಿ ಜೈಲಿನಲ್ಲಿಡಲಾಯಿತು. ಆ ಸಂದರ್ಭದಲ್ಲಿ ಭಗತ್‌ಸಿಂಗ್ ಆ ಜೈಲಿನ ಜೀವನದಲ್ಲಿ ತನ್ನ ನಡವಳಿಕೆಯ ಮೂಲಕ ಒಬ್ಬ ಕ್ರಾಂತಿಕಾರಿ ಹೇಗಿರಬೇಕೆಂಬುದರ ಅದ್ಭುತ ಪರಿಚಯವನ್ನು ಮಾಡಿಕೊಟ್ಟ.
ಪೊಲೀಸರ ತ್ರಾಸವನ್ನು ಸಹಿಸುವಾಗ ಅವನು ಬಂಡೆಯಂತಿರುತ್ತಿದ್ದ. ತನ್ನ ರಹಸ್ಯಗಳನ್ನು ಅವಿತಿಡುವಾಗ ಎಂಥ ಮುಗ್ಧನಂತೆ ನಟಿಸುತ್ತಿದ್ದನೆಂದರೆ ಅತ್ಯಂತ ಬುದ್ಧಿವಂತನಾದ ಆಫೀಸರನೂ ದಿಕ್ಕುತೋಚದಂತಾಗುತ್ತಿದ್ದ. ಪೊಲೀಸರ ಜೈಲೆಂದರೆ ಹರಟೆಯ ಕಟ್ಟೆಯಾಗಲೀ, ಧರ್ಮಛತ್ರವಾಗಲೀ ಅಲ್ಲ. ಅಂದ ಮೇಲೆ ಬ್ರಿಟಿಷ್ ಆಡಳಿತದಲ್ಲಿ ಕೇಳಬೇಕೇ? ಅದೊಂದು ಸಾಕ್ಷಾತ್ ನರಕವೇ ಆಗಿತ್ತು.

ಅಸೆಂಬ್ಲಿ ಭವನದಲ್ಲಿ ಬಾಂಬ್ ಎಸೆದ ಪ್ರಕರಣದಲ್ಲಿ ಆಸಫ್‌ಆಲೀ, ಬಟುಕೇಶ್ವರ ದತ್ತರ ವಕೀಲರಾಗಿದ್ದರು. ಅವರು ಗುಟ್ಟೊಂದನ್ನು ಬಿಟ್ಟುಕೊಡುತ್ತಾ (ಎರಡು ಬಾಂಬ್‌ಗಳನ್ನೂ ಭಗತ್‌ಸಿಂಗನೇ ಎಸೆದನೋ ಅಥವಾ ಇಬ್ಬರೂ ಒಂದೊಂದು ಬಾಂಬ್ ಎಸೆದರೋ ಎಂಬುದರ ಬಗ್ಗೆ) ಹೀಗೆ ತಿಳಿಸಿದ್ದಾರೆ;
"ಹೆಚ್ಚಿನವರಿಗೆ ಬಟುಕೇಶ್ವರ ದತ್ತ ಒಂದು ಬಾಂಬ್ ಹಾಕಿದ್ದ ಎಂಬ ಭಾವನೆ ಇದೆ. ಆದರೆ ನಿಜ ತಿಳಿದಿರುವುದು ಕೆಲವರಿಗೆ ಮಾತ್ರ. ಬಿ.ಕೆ. ದತ್ತ ಬಾಂಬನ್ನು ಎಸೆಯಲೇ ಇಲ್ಲ. ಕೋರ್ಟಿನಲ್ಲಿ ಹೇಳಿಕೆ ನೀಡುವಾಗ, ತಾನೂ ಒಂದು ಬಾಂಬನ್ನು ಎಸೆದಿದ್ದೆ ಎಂದು ಅವನು ಹೇಳಿಕೊಂಡ. ನಾನು ಸುಳ್ಳು ಹೇಳಿಕೆಯನ್ನು ತಡೆಯಲು ಯತ್ನಿಸಿದಾಗ ಅವನು ಗಂಭೀರ ಮುದ್ರೆಯಲ್ಲಿ 'ನಾನು, ಭಗತ್‌ಸಿಂಗ್ ದೀರ್ಘಕಾಲದಿಂದ ಜೊತೆಗಿದ್ದೇವೆ, ಸ್ನೇಹಿತರು. ನೀವು ನಮ್ಮ ಕೇಸನ್ನು ಕೈಗೆ ತೆಗೆದುಕೊಂಡು ಎಷ್ಟೇ ಕಾದಾಡಿದರೂ ಅವನಿಗೆ ದೀರ್ಘಕಾಲದ ಜೈಲುವಾಸ ಇದ್ದೇ ಇರುತ್ತದೆ. ಸರಿ, ನೀವು  ನನ್ನನ್ನು ಬಿಡಿಸುತ್ತೀರಿ ಅಂದುಕೊಳ್ಳಿ ಆಗ ನಾನು ಭಗತ್‌ಸಿಂಗ್‌ನನ್ನು ಬಿಟ್ಟು ಹೇಗಿರಲಿ? ಏನು ಮಾಡಲಿ? ನಾನು ಅವನನ್ನು ಬಿಟ್ಟು ಖಂಡಿತ ಇರಲಾರೆ' ಎಂದ. ಕಡೆಗೆ 'ತನ್ನನ್ನು ಉಳಿಸಿಕೊಳ್ಳಲು ತಾನು ನಿರಪರಾಧಿ ಎಂದು ಹೇಳಿಕೊಳ್ಳುವುದೂ ಇಲ್ಲ' ಎಂತಲೂ ಹೇಳಿಬಿಟ್ಟಿದ್ದ."

ಕೋರ್ಟಿನಲ್ಲಿ ವಾದವಿವಾದ ನಡೆದು, ಅಂತಿಮ ತೀರ್ಪು ಹೊರಬಿತ್ತು. ಭಗತ್‌ಸಿಂಗ್‌ಗೆ ನ್ಯಾಯಾಧೀಶರು ಮರಣದಂಡನೆ (ನೇಣು ಶಿಕ್ಷೆ) ಘೋಷಿಸಿದ್ದರು; ಅಕ್ಟೋಬರ್ 5ರ ರಾತ್ರಿ ಜೈಲಿನಲ್ಲಿ ಭಗತ್‌ಸಿಂಗ್‌ನ ಕೊನೆಯ ಊಟ ಮುಗಿಯಿತು. ಆರೋಪಿಗಳೊಂದಿಗೆ ಕೆಲವರು ಜೈಲಿನ ಆಫೀಸರರೂ ಇದ್ದು ಊಟಮಾಡಿ, ನಂತರ ಅಲ್ಲಿಂದ ಹೊರಟುಹೋದರು. 'ತನ್ನ ಜೀವನದ ಬಗ್ಗೆ ಯೋಚನೆಯನ್ನೇ ಮಾಡದ ಈತ ಎಂಥವನು? ಸಾವಿಗೆ ಹೆದರದ ಇವನೆಂಥವ?' ಎಂದು ಆ ಆಫೀಸರರು ಆಶ್ಚರ್ಯಪಡುತ್ತಿದ್ದರು. ಆ ಡಿನ್ನರ್ ಒಂದು ಆನಂದದ ಸಮಾರಂಭದಂತಿತ್ತು. ಅದರಲ್ಲಿ ನಗು, ಅಟ್ಟಹಾಸ, ರೇಗಿಸುವುದು, ಚುಟುಕುಗಳನ್ನು ಹೇಳುವುದು, ಹೀಗೆ ಏನೇನೋ... ಕಾಲೇಜಿನಲ್ಲಿ ನಡೆಯುವ ಫೇರ್‌ವೆಲ್ ಪಾರ್ಟಿಯಂತಿತ್ತು. ಆರೋಪಿಗಳು ಆಫೀಸರರ ಬಗ್ಗೆ ಪ್ರೀತಿ ಸೌಹಾರ್ದತೆ ತೋರಿಸಿದರೆ, ಆಫೀಸರರೂ ಆತ್ಮೀಯತೆಯಿಂದ ಮನರಂಜನೆ ಮಾಡುತ್ತಿದ್ದರು. ಭಾರತದ ಜೈಲುಗಳಲ್ಲಿ ಇಂಥ ಕೈದಿಗಳನ್ನು ಜೀವನದಲ್ಲಿಯೇ ಯಾರೂ ನೋಡಿರಲಿಲ್ಲ. ನಂತರವೂ ನೋಡುವುದು ಸಾಧ್ಯವಿಲ್ಲ. ಭಗತ್‌ಸಿಂಗ್ ಕ್ರಾಂತಿ ಮತ್ತು ನ್ಯಾಯಾಲಯದ ಹೀರೊ ಮಾತ್ರನಾಗಿರದೆ ಜೈಲುಗಳಿಗೂ ಹೀರೊ ಆಗಿದ್ದ.

ಭಗತ್ ಸಿಂಗ್ ಮಾನವೀಯತೆಯ ಸಾಕಾರಮೂರ್ತಿಯಾಗಿದ್ದ. ಲಾಹೋರಿನ ಜೈಲಿನಲ್ಲಿ ತನ್ನ ಪ್ರೀತಿಯ ಅಮಾಯಕ ಜೊತೆಗಾರರು ಅನುಭವಿಸಿದ ಸಂಕಷ್ಟಗಳನ್ನು ನೆನೆದು ಆತನ ಕಣ್ಣುಗಳಲ್ಲಿ ಅಶ್ರುಧಾರೆ ಒಂದೇಸಮನೆ ಸುರಿಯುತ್ತಿತ್ತು;  ಇದ್ದಕ್ಕಿದ್ದಂತೆ ಅವನ ಮುಖದಲ್ಲಿ ಭಾವನೆಗಳ ಏರಿಳಿತಗಳು ಅತ್ಯಂತ ಶೀಘ್ರಗತಿಯಲ್ಲಿ ಉಂಟಾಗತೊಡಗಿದವು. ಪ್ರಾರಂಭದಲ್ಲಿ ಮುಖದಲ್ಲಿ ಒತ್ತಡ ಉಂಟಾದಂತಿತ್ತು. ನಂತರ ಕುದಿಯುವ ಕೋಪ ಮುಖದಲ್ಲಿ ವ್ಯಕ್ತವಾಯಿತು. ಆನಂತರ ವ್ಯಥೆಯ ರೇಖೆ ಒಂದು ಕ್ಷಣ ಕಾಣಿಸಿಕೊಂಡಿತು. ನಂತರ ಅದು ಅತ್ಯಂತ ತೀಕ್ಷ್ಣವಾಯಿತು. ಕಣ್ಣುರೆಪ್ಪೆಗಳು ಮೊದಲು ಹೊಡೆದುಕೊಂಡವು. ಆಮೇಲೆ ಎಲ್ಲವೂ ಮಾಯವಾಗಿ ತಣ್ಣನೆಯ ಅಶ್ರುಧಾರೆ ಅವನ ಕೆನ್ನೆಗಳ ಮೇಲೆ ಧಾರಾಕಾರವಾಗಿ ಇಳಿಯಲಾರಂಭಿಸಿತು.
ಭಗತ್‌ಸಿಂಗ್ ಅತ್ತನೇ? ಅವನಿಗೆ ಗಲ್ಲು ಶಿಕ್ಷೆ ಆದದ್ದಕ್ಕೆ ಅತ್ತನೇನು? ಅದನ್ನು ಯಾರು ತಾನೇ ಒಪ್ಪಲು ಸಾಧ್ಯ? ಮೃತ್ಯುವನ್ನೇ ಒಂದು ವರದಾನದ ರೂಪದಲ್ಲಿ ಪಡೆದುಕೊಳ್ಳಲು ಸ್ವತಃ ಭಗತ್‌ಸಿಂಗ್‌ನೇ ಒಂದು ದೀರ್ಘವಾದ ಯೋಜನೆಯನ್ನು ಮಾಡಿರಲಿಲ್ಲವೇ? ಮೃತ್ಯುವಿನ ಬಗ್ಗೆ ಹೀಗೆ ಅಳಲು ಅವನಿಗೆ ಭಯವೆಲ್ಲಿತ್ತು? ಹಾಗಾದರೆ ಅವನು ಅತ್ತಿದ್ದೇಕೆ?

ಗಲ್ಲುಶಿಕ್ಷೆಗಿಂತ ಸ್ವಲ್ಪ ಮುಂಚೆ, ಭಗತ್‌ಸಿಂಗ್ ಬಟುಕೇಶ್ವರ ದತ್ತರಿಗೆ ಮತ್ತು ಪ್ರೊ. ಮೋತಿಸಿಂಹರಿಗೆ ಬರೆದಿದ್ದ ಪತ್ರಗಳಲ್ಲಿದ್ದ ಈ ಪಂಕ್ತಿಗಳಲ್ಲಿ ಆ ಮಹಾಸಾಧಕನ ಮನಸ್ಥಿತಿ ಎಂಥ ಉತ್ತುಂಗಕ್ಕೆ ತಲುಪಿತ್ತು, ತನ್ನ ಹೌತಾತ್ಮ್ಯದಲ್ಲಿ ಸಾಕ್ಷಾತ್ ಭಗವಂತನ ದರ್ಶನವನ್ನೇ ಆತ ಮಾಡುತ್ತಿದ್ದ ಎಂಬುದು ಅತ್ಯಂತ ಸ್ಪಷ್ಟವಾಗಿ ಗೋಚರಿಸುತ್ತದೆ- 'ನಾನು ನನ್ನ ದೇವರ ದೃಗ್ಗೋಚರ ಸ್ವರೂಪವನ್ನು ನೇಣುಗಂಬದ ಬಲಿಪೀಠದ ಮೇಲೆ
ಕಾಣುತ್ತಿದ್ದೇನೆ.'
ಎಷ್ಟೋ ಜನ, ಎಷ್ಟೋ ರೂಪಗಳಲ್ಲಿ, ಎಷ್ಟೋ ರೀತಿಗಳಲ್ಲಿ ಈಶ್ವರನನ್ನು ಸಾಕ್ಷಾತ್ಕರಿಸಿಕೊಂಡಿದ್ದಾರೆ. ಆದರೆ ತಾನು ಸ್ವೀಕರಿಸಿದ ಧ್ಯೇಯ ಸಾಧನೆಯ ಸಲುವಾಗಿ ಮೃತ್ಯುವಿನೊಡನೆ ಅನುಸಂಧಾನ ನಡೆಸಿ ಭಗವಂತನನ್ನು ಸಾಕ್ಷಾತ್ಕರಿಸಿಕೊಂಡ ಏಕೈಕ ಮಹಾನ್ ವ್ಯಕ್ತಿಯಾಗಿ ಇತಿಹಾಸದ ಪುಟಗಳಲ್ಲಿ ವಿಜೃಂಭಿಸುತ್ತಾ ಕಂಗೊಳಿಸುತ್ತಿದ್ದಾನೆ ಯುಗದ್ರಷ್ಟಾ ಭಗತ್‌ಸಿಂಗ್!
(ಶ್ರೀ ಸಮುದ್ಯತಾ ಸಾಹಿತ್ಯ:
ಪುಟಗಳು: 450, ಬೆಲೆ: 300 ರು.)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್