ನನ್ನ ಇರಾನಿಯನ್ ಪ್ರಕಾಶಕ ಅರಾಶ್ ಹೆಜಾಝಿ ಹೇಳಿದ ಕತೆ ಇದು.
ಒಬ್ಬ ಅಧ್ಯಾತ್ಮ ಜ್ಞಾನವನ್ನು ಅರಸುತ್ತ ನಿತ್ಯದ ಉಡುಪಿನೊಂದಿಗೆ ಒಂದು ಎತ್ತರದ ಬೆಟ್ಟವನ್ನೇರಿದ. ಅಲ್ಲಿ ಧ್ಯಾನ ಮಾಡುತ್ತ ತನ್ನ ಉಳಿದ ಜೀವನವನ್ನು ಕಳೆಯಲು ನಿರ್ಧರಿಸಿದ.
ಆದರೆ ಅವನ ಉಡುಪು ಬೇಗನೆ ಕೊಳಕಾದುದರಿಂದ ಅದನ್ನು ಒಂದು ಸಲ ಬದಲಾಯಿಸುವುದಷ್ಟೇ ಸಾಲದು ಎಂಬುದನ್ನಾತ ತಿಳಿದುಕೊಂಡ. ಅವನು ಬೆಟ್ಟದಿಂದ ಇಳಿದು ಸಮೀಪದಲ್ಲಿದ್ದ ಒಂದು ಹಳ್ಳಿಗೆ ಹೋದ ಮತ್ತು ತನಗೆ ಇನ್ನೊಂದಿಷ್ಟು ಬಟ್ಟೆ-ಬರೆಗಳನ್ನು ನೀಡುವಂತೆ ಅಲ್ಲಿಯವರನ್ನು ಅಂಗಲಾಚಿದ. ಅವರಿಗೆಲ್ಲ ಇವನು ಜ್ಞಾನೋದಯಕ್ಕಾಗಿ ಹಂಬಲಿಸುವವನೆಂದು ತಿಳಿದಿತ್ತು. ಅವರು ಇವನಿಗೆ ಒಂದು ಜೊತೆ ಹೊಸ ಇಜಾರ ಹಾಗೂ ಒಂದು ಹೊಸ ಅಂಗಿಯನ್ನು ಕೊಟ್ಟರು.
ಅವರಿಗೆ ಧನ್ಯವಾದ ಸಲ್ಲಿಸಿ, ಪರ್ವತದ ತುದಿಯಲ್ಲಿ ಕಟ್ಟುತ್ತಿದ್ದ ಕುಟೀರಕ್ಕೆ ಆತ ಹಿಂತಿರುಗಿದ. ಅವನು ತನ್ನ ರಾತ್ರಿಗಳನ್ನು ಕುಟೀರದ ಗೋಡೆಗಳನ್ನು ಕಟ್ಟುತ್ತ ಮತ್ತು ಹಗಲುಗಳನ್ನು ಧ್ಯಾನ ಮಾಡುತ್ತ ಕಳೆಯುತ್ತಿದ್ದ. ಅವನು ಮರಗಳ ಹಣ್ಣುಗಳನ್ನು ತಿನ್ನುತ್ತಿದ್ದ ಮತ್ತು ಹತ್ತಿರದಲ್ಲಿದ್ದ ಚಿಲುಮೆಯ ನೀರನ್ನು ಕುಡಿಯುತ್ತಿದ್ದ.
ಒಂದು ತಿಂಗಳ ಬಳಿಕ ಒಣಗಲು ಹಾಕಿದ ತನ್ನ ಉಡುಪುಗಳನ್ನು ಇಲಿಯೊಂದು ಕಚ್ಚಿ ಚೂರು ಮಾಡಿದ್ದು ಅವನಿಗೆ ಗೊತ್ತಾಯಿತು. ಇನ್ನೊಮ್ಮೆ ಆ ಹಳ್ಳಿಗೆ ಹೋದ ಮತ್ತು ತನಗೆ ಒಂದು ಬೆಕ್ಕನ್ನು ಕೊಡಲು ಕೇಳಿಕೊಂಡ. ಅವನ ಅಧ್ಯಾತ್ಮ ಚಟುವಟಿಕೆಗಳನ್ನು ಗೌರವಿಸುತ್ತಿದ್ದ ಆ ಹಳ್ಳಿಯ ಜನರು ಅವನಿಗೆ ಒಂದು ಬೆಕ್ಕನ್ನು ಕೊಟ್ಟರು.
ಏಳು ದಿನಗಳ ನಂತರ ಕೇವಲ ಹಣ್ಣುಗಳನ್ನಷ್ಟೇ ತಿಂದು ಜೀವಿಸ ಬೇಕಾದುದರಿಂದ ಮತ್ತು ಹತ್ತಿರದಲ್ಲೆಲ್ಲಿಯೂ ಇಲಿಗಳೇ ಇಲ್ಲದಿದ್ದುದರಿಂದ ಆ ಬೆಕ್ಕು ಉಪವಾಸ ಬೀಳುವಂತಾಯಿತು. ಹಾಲನ್ನು ಅರಸುತ್ತ ಆತ ಪುನಃ ಆ ಹಳ್ಳಿಗೆ ಹೋದ. ಹಾಲು ಅವನಿಗಾಗಿ ಅಲ್ಲ ಮತ್ತು ಆತ ಪ್ರಕೃತಿದತ್ತವಾದುದನ್ನು ಬಿಟ್ಟು ಬೇರೇನನ್ನೂ ತಿನ್ನದೆ ಜೀವಿಸುತ್ತಿರುವವನೆಂದು ತಿಳಿದಿದ್ದ ಅಲ್ಲಿಯ ಜನರು ಮಗದೊಮ್ಮೆ ಅವನಿಗೆ ಸಹಾಯ ಮಾಡಿದರು.
ಬೆಕ್ಕು ಆ ಹಾಲನ್ನು ಕೂಡಲೇ ಮುಗಿಸಿತು. ಈಗ ಆತ ತನಗೊಂದು ದನವನ್ನು ನೀಡುವಂತೆ ಆ ಹಳ್ಳಿಗರನ್ನು ಕೇಳಿಕೊಂಡ. ಆ ದನವು ಬೆಕ್ಕಿಗೆ ಬೇಕಾಗಿರುವುದಕ್ಕಿಂತಲೂ ಹೆಚ್ಚಿನ ಹಾಲನ್ನು ಕೊಡುತ್ತಿದ್ದುದರಿಂದ ಉಳಿದುದನ್ನು ವ್ಯರ್ಥಮಾಡುವುದು ಬೇಡವೆಂದು ಆತನೂ ಹಾಲು ಕುಡಿಯತೊಡಗಿದ. ಸ್ವಲ್ಪ ಸಮಯದಲ್ಲಿಯೇ ಬೆಟ್ಟದ ಮೇಲಿನ ಪರಿಶುದ್ಧ ಗಾಳಿಯನ್ನು ಉಸಿರಾಡುತ್ತ, ಹಣ್ಣುಗಳನ್ನು ತಿನ್ನುತ್ತ, ಹಾಲನ್ನು ಕುಡಿಯುತ್ತ, ವ್ಯಾಯಾಮ ಮಾಡುತ್ತ, ಧ್ಯಾನ ಮಾಡುತ್ತ, ಆತ ಸುಂದರಾಂಗನಾಗಿ ಮಾರ್ಪಟ್ಟ. ಕುರಿಯನ್ನು ಹುಡುಕುತ್ತ ಆ ಬೆಟ್ಟಕ್ಕೆ ಹೋದ ಯುವತಿ ಅವನ ಮೇಲೆ ಮೋಹಗೊಂಡಳು. ಅವನು ಶಾಂತ ರೀತಿಯಲ್ಲಿ ಧ್ಯಾನ ಮಾಡಲೂ ಸಮಯ ಸಿಗಬೇಕಾದರೆ ಅವನ ಗೃಹಕೃತ್ಯಗಳನ್ನು ನೋಡಿಕೊಳ್ಳಲು ಅವನಿಗೆ ಹೆಂಡತಿಯ ಅಗತ್ಯವಿದೆಯೆಂದು ಅವಳು ಅವನ ಮನವೊಲಿಸಿದಳು.
ಮೂರು ವರ್ಷಗಳ ಅನಂತರ...
ಅವನಿಗೆ ಮದುವೆಯಾಗಿತ್ತು, ಇಬ್ಬರು ಮಕ್ಕಳು, ಮೂರು ದನಗಳು ಮತ್ತು ಒಂದು ಹಣ್ಣಿನ ತೋಟಿ ಇತ್ತು. ಅವನು ಒಂದು ಧ್ಯಾನ ಕೇಂದ್ರವನ್ನು ನಡೆಸುತ್ತಿದ್ದ ಮತ್ತು ಅವನ 'ಚಿರಯವ್ವನದ ದೇಗುಲ'ಕ್ಕೆ ಭೇಟಿ ನೀಡಲು ಕಾಯುತ್ತಿರುವವರ ಒಂದು ಉದ್ದ ಪಟ್ಟಿಯೇ ಇತ್ತು.
ಯಾರಾದರೂ ಇದೆಲ್ಲ ಹೇಗೆ ಆರಂಭವಾಯಿತು ಎಂದು ಕೇಳಿದರೆ ಆತ ಹೇಳುತ್ತಿದ್ದ, 'ನಾನು ಇಲ್ಲಿಗೆ ಕೇವಲ ಒಂದು ಜೊತೆ ಉಡುಪಿನೊಂದಿಗೆ ಬಂದಿದ್ದೆ. ಎರಡು ವಾರಗಳ ಅನಂತರ ಒಂದು ಇಲಿ ಅವುಗಳಲ್ಲೊಂದನ್ನು ಚೂರು ಮಾಡಿತು... ಮತ್ತು ...'
ಆದರೆ ಅವನ ಕತೆಯ ಮುಕ್ತಾಯದಲ್ಲಿ ಯಾರಿಗೂ ಆಸಕ್ತಿ ಇರಲಿಲ್ಲ. ತನ್ನ 'ಚಿರಯವ್ವನದ ದೇಗುಲ'ದಲ್ಲಿ ಉಳಕೊಳ್ಳಲು ಶುಲ್ಕ ನಿಗದಿಪಡಿಸುವುದನ್ನು ಸಮರ್ಥಿಸಿಕೊಳ್ಳಲು ಕತೆ ಹೆಣೆಯುತ್ತಿರುವ ಒಬ್ಬ ಚಾಣಾಕ್ಷ ವ್ಯಾಪಾರಸ್ಥನಾತ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಾಗಿತ್ತು.
- ಪೌಲೋ ಕೊಯೆಲೋ
ಅನು: ನಂದಿನಿ ಡಿ.ಕಾಮತ್