ಯುದ್ಧವೇ professional
ಫೆಬ್ರವರಿ 12, 2013 ಮಂಗಳವಾರ. ಅಮೆರಿಕ ಅಧ್ಯಕ್ಷ ಒಬಾಮ ಟಿವಿಗಳಲ್ಲಿ ಕಾಣಿಸಿಕೊಂಡು, 'ಈ ಪ್ರಯತ್ನ ಕೂಡಲೇ ನಿಲ್ಲಬೇಕು. ಇಲ್ಲವಾದರೆ ತಕ್ಕ ಕ್ರಮ ಎದುರಿಸಿ' ಅಂತ ಘೋಷಿಸಿದ್ದೇ ತಡ, ಒಂದರ ಹಿಂದೊಂದರಂತೆ ಘೋಷಣೆ, ಬೆದರಿಕೆಗಳ ಸುರಿಮಳೆ.
ಜಪಾನ್, ದಕ್ಷಿಣ ಕೊರಿಯ, ರಷ್ಯ, ಇಂಗ್ಲೆಂಡ್, ಫ್ರಾನ್ಸ್, ಸಿಂಗಪುರ, ಮಲೇಷ್ಯದಂತಹ ದೇಶಗಳ ಅಧ್ಯಕ್ಷರುಗಳು ತಮ್ಮ ಹೇಳಿಕೆಗಳನ್ನು ತಾರಕಸ್ವರದಲ್ಲಿ ಕೂಗಿ ಹೇಳಲು ಕ್ಯೂ ನಿಂತುಬಿಟ್ಟರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾ ಕಿ ಮೂನ್ ಕೂಡ, 'ನಿಮ್ಮ ಪ್ರಯೋಗಗಳನ್ನು ಕೂಡಲೇ ಸ್ಥಗಿತಗೊಳಿಸಿ.' ಅಂತ ಘಂಟಾಘೋಷವಾಗಿ ಹೇಳಿದರು. ಹೆಗಲಿಗೆ ಕೈಹಾಕಿ ಕುಶಲ ಕೇಳುವ ಗೆಳೆಯ ಚೀನಾ ಕೂಡ (ಒಳಗೊಳಗೆ ಬೆಂಬಲಿಸಿದರೂ), ಈ ಪರೀಕ್ಷೆಗಳನ್ನೆಲ್ಲ ಕೈಬಿಟ್ಟು ಸುಮ್ಮನಿದ್ದರೆ ಏನು ನಷ್ಟ ಅಂತ ಆಪ್ತಸಲಹೆ ಕೊಟ್ಟು ಕೈತೊಳೆದುಕೊಂಡಿತು.
ಇಷ್ಟೆಲ್ಲ ಅಧ್ವಾನಕ್ಕೆ ಕಾರಣವಾಗಿದ್ದು ಉತ್ತರ ಕೊರಿಯ ಎಂಬ ದೇಶ. ತಾನೇ ಹೇಳಿಕೊಂಡಂತೆ - ಬಹಳ ಸಣ್ಣಪ್ರಮಾಣದಲ್ಲಿ ನಡೆಸಿದ, ಮಾಪಕಗಳಲ್ಲಿ 4.9ರಷ್ಟು ದಾಖಲಾದ ನ್ಯೂಕ್ಲಿಯರ್ ಪರೀಕ್ಷೆ. 2006ರ ಪರೀಕ್ಷೆಯ ಹತ್ತುಪಟ್ಟು, 2009ರ ಪರೀಕ್ಷೆಯ ಎರಡು ಪಟ್ಟು ಶಕ್ತಿಶಾಲಿಯಾಗಿದ್ದ ಈ ಪರೀಕ್ಷೆಯಿಂದ ಉತ್ತರ ಕೊರಿಯ ಅಮೆರಿಕೆಗೆ ತನ್ನ ತಾಕತ್ತು ತೋರಿಸಲು ಹೊರಟಿತ್ತು. ಗಾಯದ ಮೇಲೆ ಗೀರೆಳೆದಂತೆ, ಪರೀಕ್ಷೆ ನಡೆಸಿದ ಮೇಲೆ, 'ನಮ್ಮ ವ್ಯವಹಾರಗಳಲ್ಲಿ ಪದೇಪದೇ ಮೂಗು ತೂರಿಸುವ ಅಮೆರಿಕಕ್ಕೆ ನಾವು ಕೊಡುತ್ತಿರುವ ಎಚ್ಚರಿಕೆ ಇದು. ಅದರ ಹಸ್ತಕ್ಷೇಪ ನಿಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಪರೀಕ್ಷೆಗಳನ್ನು ನಡೆಸುತ್ತ ಹೋಗುತ್ತೇವೆ' ಅಂತ ಹೇಳಿಕೆ ಕೂಡ ಬಿಡುಗಡೆ ಮಾಡಿತು. ಅಚ್ಚರಿಯ ಮಾತೆಂದರೆ 'ಜಗತ್ತಿನ ಸೂಪರ್ ಪವರ್ ನಾಯಕನಾಗಿ ಹೊರಹೊಮ್ಮುತ್ತಿರುವ ನಮ್ಮ ದೇಶದ ಯುದ್ಧ ಸಿದ್ಧತೆಗೆ ಹೆದರಿ ಬಾಲಮುದುರಿ ಕುಂಯ್ ಗುಡುತ್ತಿರುವ ಅಮೆರಿಕ' ಅಂತ ರಾಷ್ಟ್ರೀಯ ಚಾನೆಲ್‌ನಲ್ಲಿ ಬಂದ ಸುದ್ದಿಯನ್ನು ನೋಡಿ ಪ್ಯೊಂಗ್‌ಯಾಂಗಿನ ಬೀದಿಗಳಲ್ಲಿ ಜನ ಸಂಭ್ರಮಿಸಿ ಕುಣಿದರು. ಇದು ದೇಶಪ್ರೇಮವೋ? ಹಿಸ್ಟೀರಿಯ ಎನ್ನುತ್ತೀರೋ?
ಈ ಎಲ್ಲ ರಾಜಕೀಯ ಪ್ರೇರಿತ ರಾದ್ಧಾಂತ, ಗೊಂದಲಗಳನ್ನು ಬದಿಗಿಟ್ಟು, ಉತ್ತರ ಕೊರಿಯದ ಸುತ್ತ ಸುಮ್ಮನೆ ನಿಷ್ಪಕ್ಷಪಾತವಾಗಿ ಒಂದು ಸುತ್ತು ಹಾಕ್ಕೊಂಡು ಬರೋಣ, ಬನ್ನಿ.
21ನೇ ಶತಮಾನದ ಶಿಲಾಯುಗ
ನಮ್ಮ ಸುತ್ತಾಟವನ್ನು ರಾಜಧಾನಿ ಪ್ಯೊಂಗ್‌ಯಾಂಗಿನ ಯೂನಿವರ್ಸಿಟಿಯಿಂದಲೇ ಶುರುಮಾಡೋಣ. ಇಲ್ಲಿ ಫಾರಿನ್ ಲಾಂಗ್ವೇಜ್ ವಿಭಾಗದ ತರುಣ ವಿದ್ಯಾರ್ಥಿ ನಿರರ್ಗಳವಾಗಿ ಶುದ್ಧ ಇಂಗ್ಲಿಷಿನಲ್ಲಿ ಮಾತಾಡುವುದನ್ನು ನೋಡಿ ಆಶ್ಚರ್ಯ! 'ಇಷ್ಟು ಚೆನ್ನಾಗಿ ಇಂಗ್ಲಿಷ್ ಹೇಗೆ ಕಲಿತೆ' ಎಂದು ಕೇಳಿದರೆ ಆತ, 'ಇದೆಲ್ಲ ನಮ್ಮ ಮಹಾನಾಯಕನ ದಯೆ' ಎನ್ನುತ್ತಾನೆ. 'ನಿನ್ನ ದೇಶದ ಮಹಾನಾಯಕರನ್ನು ಬಿಟ್ಟರೆ ಬೇರೆ ಯಾರು ಇಷ್ಟ' ಎಂದು ಕೇಳಿದರೆ - 'ಸ್ಟಾಲಿನ್ ಮತ್ತು ಮಾವೋ'. 'ನೆಲ್ಸನ್ ಮಂಡೇಲನ ಬಗ್ಗೆ ಕೇಳಿಲ್ಲವೇ' ಅಂತ ಪ್ರಶ್ನಿಸಿದರೆ, 'ಹಾಗೆಂದರೇನು' ಅಂತ ತಬ್ಬಿಬ್ಬುಗೊಳಿಸುತ್ತಾನೆ.
ಉತ್ತರ ಕೊರಿಯದ ಟಿವಿಯನ್ನು (ಮತ್ತು ಅದರಲ್ಲಿ ಬಿತ್ತರಗೊಳ್ಳುವ ಒಂದೇ ಒಂದು ಚಾನೆಲ್ಲನ್ನು) ಯಾವ ಹೊತ್ತಲ್ಲಿ ತಿರುಗಿಸಿದರೂ ಅದರಲ್ಲಿ ಕೊರಿಯವನ್ನಾಳಿದ ಎರಡು ಮಹಾನ್ ನಾಯಕರ ಕತೆ-ಚಿತ್ರಗಳೇ ಮತ್ತೆಮತ್ತೆ ಬರುತ್ತಿರುತ್ತವೆ. ಬಿಟ್ಟರೆ, ಕೊರಿಯದ ಮಾದರಿ ಹಳ್ಳಿಗಳು, ಮಾದರಿ ಗದ್ದೆಗಳು ಹೇಗಿವೆ ಎನ್ನುವುದನ್ನು ತೋರಿಸುತ್ತಾರೆ. ಇಲ್ಲಿನ ಜನ, ಇವಿಷ್ಟನ್ನು ಬಿಟ್ಟರೆ ಬೇರೆ ಯಾವುದೇ ದೇಶದ ಯಾವುದೇ ಇತರ ಕಾರ್ಯಕ್ರಮವನ್ನಾಗಲೀ, ಡಾಕ್ಯಮೆಂಟರಿಗಳನ್ನಾಗಲೀ ನೋಡಿಲ್ಲ. ವಿಶೇಷವೆಂದರೆ, ಉತ್ತರ ಕೊರಿಯದ ಯಾವ ಪ್ರಜೆಗೂ ಫೇಸ್‌ಬುಕ್ ಅಥವಾ ಟ್ವಿಟ್ಟರ್ ಅಕೌಂಟ್ ಇಲ್ಲ. ಯಾಕೆಂದರೆ, ಇಂಟರ್ನೆಟ್‌ನಂಥ ಇಂಟರ್ನೆಟ್ಟನ್ನೇ ಈ ದೇಶದಿಂದ ಗಡೀಪಾರು ಮಾಡಿದ್ದಾರೆ! ಕೊರಿಯದ ಒಳಗೆ ಕ್ವಾಂಗ್‌ಮ್ಯಾಂಗ್ ಎಂಬ ಅಂತರ್ಜಾಲ ವ್ಯವಸ್ಥೆಯನ್ನು ಬಳಸಲಾಗುತ್ತದೆ. ಇದರಲ್ಲಿ ಉತ್ತರ ಕೊರಿಯದೊಳಗಿನ ಪ್ರಜೆಗಳು ಮಾಹಿತಿ ವಿನಿಮಯ ಮಾಡಿಕೊಳ್ಳಲು ಅನುಕೂಲವಾಗುವಂತೆ ಕೆಲವೇ ಕೆಲವು ವೆಬ್‌ಸೈಟುಗಳು, ಮೆಸೇಜ್ ಬೋರ್ಡ್‌ಗಳು ಮತ್ತು ಚಾಟ್ ಆಯ್ಕೆಗಳಿವೆ.
ಇದನ್ನು ಉಪಯೋಗಿಸಬೇಕಾದರೆ ನೀವು ಮಹಾನಾಯಕನ ವಂಶಜನೆಂಬ ಅಂಕಿತವನ್ನು ನಿಮ್ಮ ಪೃಷ್ಠದಲ್ಲಿ ಹೆಮ್ಮೆಯಿಂದ ಹೊತ್ತಿರಬೇಕು. ಇಲ್ಲವೇ ಸರಕಾರಿ ಯಂತ್ರದಲ್ಲಿ ಒಪ್ಪಿಗೆಯ ಮುದ್ರೆಯೊತ್ತಿಕೊಂಡು ಬಂದ ವಿಜ್ಞಾನಿಯೋ, ಶಿಕ್ಷಕನೋ ಆಗಿರಬೇಕು.
ಉತ್ತರ ಕೊರಿಯದಲ್ಲಿರುವುದು ಕೊರ್ಯೊಲಿಂಕ್ ಎಂಬ ಒಂದೇ ಒಂದು ಮೊಬೈಲ್ ನೆಟ್‌ವರ್ಕ್ ಕಂಪೆನಿ. ಅದು ಲೋಕಲ್ ಮತ್ತು ಎಸ್‌ಟಿಡಿ ಸೇವೆಯನ್ನು ಮಾತ್ರ ಒದಗಿಸುತ್ತದೆ. ಕೊರಿಯದ ಇಂಟರ್ನೆಟ್ಟಿನಲ್ಲಿ ಮೋರ್ಝಿಲ್ಲ ಆಗಲೀ, ಇಂಟರ್ನೆಟ್ ಎಕ್ಸ್‌ಪ್ಲೋರರ್ ಆಗಲೀ ಇಲ್ಲ. ಅಂತರ್ಜಾಲದ ಎಲ್ಲ ಕೆಲಸ ನಡೆಯುವುದು ನೇನಾರ (ಅಂದರೆ, ನನ್ನ ದೇಶ) ಅನ್ನುವ ಪೋರ್ಟಲ್ ಮೂಲಕ. ಇಲ್ಲಿನ ಎಲ್ಲ ಕಂಪ್ಯೂಟರುಗಳು ನಡೆಯುವುದು 'ರೆಡ್‌ಸ್ಟಾರ್' ಎಂಬ (ಕೆಂಪು ನಕ್ಷತ್ರ - ಕಮ್ಯುನಿಷ್ಟ್ ನಾಯಕರ ತಲೆಯ ಮೇಲಿನ ಪ್ರಭಾವಳಿ) ಆಪರೇಟಿಂಗ್ ಸಿಸ್ಟಂ ಆಧಾರದಲ್ಲಿ. ದೇಶದ ರಾಜಧಾನಿ ಪೊಂಗ್‌ಯಾಂಗಲ್ಲಿ ಎಷ್ಟು ಸೈಬರ್ ಕೆಫೆಗಳಿವೆ ಹೇಳಿ. ಕೇವಲ ಒಂದು!
ಈ ದೇಶದ ಪ್ರತಿಶಾಲೆಯ ಪ್ರತಿ ತರಗತಿಯಲ್ಲೂ ಎರಡು ಮಹಾನಾಯಕರ ಫೋಟೋಗಳು ತೂಗುಬಿದ್ದಿರುತ್ತವೆ. ಕಿಮ್ ಇಲ್‌ಸಂಗ್ ಮತ್ತು ಅವನ ಮಗ ಕಿಮ್ ಜಾಂಗ್‌ಇಲ್. ಇವರೇ ಈ ದೇಶವನ್ನಾಳಿದ ಮಹಾಪುರುಷರು. ವ್ಯಾಟಿಕನ್ ಸಿಟಿ ಬೈಬಲ್ಲಿಗೆ ವಿರುದ್ಧವಾಗಿ ಹೋಗಬಹುದು, ಆದರೆ ಕೊರಿಯ ಈ ಅವತಾರಪುರುಷರ ಆದರ್ಶಗಳಿಗೆ ವಿರುದ್ಧಹೋಗುವುದು ಕನಸಿನಲ್ಲೂ ಸಾಧ್ಯವಿಲ್ಲ. ಕಿಮ್ ಇಲ್‌ಸಂಗ್ ಹುಟ್ಟಿದ ವರ್ಷ 1912 - ಕೊರಿಯದ ನವೋದಯ ವರ್ಷ. ಈ ನಾಯಕ ಹುಟ್ಟಿದ ವರ್ಷದಿಂದ ಮೊದಲ್ಗೊಂಡು ಕೊರಿಯದ ಪಂಚಾಂಗ, ಕಾಲವನ್ನು ಲೆಕ್ಕ ಹಾಕುತ್ತದೆ. ಅದರ ಪ್ರಕಾರ, ಈಗ ಕೊರಿಯದಲ್ಲಿ ವರ್ಷ - ಜುಕೆ 102. ಇಲ್ಲಿ ಗ್ರೆಗೊರಿಯನ್ ಕ್ಯಾಲೆಂಡರಿಗೆ ಕವಡೆ ಕಿಮ್ಮತ್ತೂ ಇಲ್ಲ.
ಇನ್ನು, ಇಲ್ಲಿ ನರ್ಸರಿ ಶಾಲೆಗಳಲ್ಲಿ ಮಕ್ಕಳಿಗೆ ಶಿಶುಗೀತೆಗಳನ್ನು ಹೇಗೆ ಹೇಳಿಕೊಡುತ್ತಾರೆ ನೋಡಿ?
ಒಳ್ಳೆಯದು - ಕೊರಿಯ, ಕೆಟ್ಟದ್ದು - ಅಮೆರಿಕ ಮಹಾನ್‌ಶಕ್ತಿ - ಕಿಮ್ ಇಲ್‌ಸಂಗ್, ದುಷ್ಟಶಕ್ತಿ - ಅಮೆರಿಕ; ಅತ್ಯುತ್ಕೃಷ್ಟ - ನನ್ನ ದೇಶ, ದಟ್ಟದರಿದ್ರ - ಅಮೆರಿಕ!
ಸರ್ಕಸ್ ಪಲಾಯನ
ಇಷ್ಟೆಲ್ಲ ಸುಖಸಂಪತ್ತು ತೇಲಾಡಿಕೊಂಡಿರುವ ಸುಭಿಕ್ಷ ರಾಜ್ಯವನ್ನು ಕೂಡ ಬಿಟ್ಟು ಓಡಿಹೋಗುವ ಹಂಚಿಕೆ ಹಾಕುವ ಕೆಲವು ಬುದ್ಧಿವಂತರು ಇದ್ದಾರೆ. ಹಾಗೆ, ಸೈನಿಕರ ಕಣ್ಣು ತಪ್ಪಿಸಿ, ಕರೆಂಟು ಹಾಯುವ ದೊಡ್ಡದೊಡ್ಡ ತಂತಿಬೇಲಿಗಳನ್ನು ಜೀವದ ಹಂಗು ತೊರೆದು ಹಾರಿ ಹೊರಬರುವ ಧೈರ್ಯವಂತರ ಸಂಖ್ಯೆ ಕಮ್ಮಿಯೇನಿಲ್ಲ. ಪ್ರತಿವರ್ಷ, ಹೀಗೆ ಕುದಿಯುವ ನರಕದಿಂದ ಪಾರಾಗಿ ದಕ್ಷಿಣ ಕೊರಿಯ ಸೇರುವವರ ಸಂಖ್ಯೆ ಹತ್ತಿರಹತ್ತಿರ ಮೂರು ಸಾವಿರ.
ಇವರನ್ನು ದಕ್ಷಿಣ ಕೊರಿಯ ಪ್ರೀತಿಯಿಂದ ಸ್ವಾಗತಿಸಿ ತನ್ನ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ಅನುವು ಮಾಡಿಕೊಡುತ್ತದೆ.ಇಂಥವರನ್ನು ಸೇರಿಸಿ, ದಕ್ಷಿಣ ಕೊರಿಯದ ಸರಕಾರ ವಿಶೇಷ ಸರಕಾರೀ ಶಾಲೆಗಳಲ್ಲಿ ತಿಂಗಳುಗಟ್ಟಲೆ ಟ್ರೈನಿಂಗ್ ಕೊಡುಡುತ್ತದೆ. ನಾವು-ನೀವು ಹುಟ್ಟಿದ ಮೊದಲ ಹತ್ತುವರ್ಷದಲ್ಲಿ ಕಲಿತ ಜಗತ್ತಿನ ಜ್ಞಾನವನ್ನು ಈ ಅಮಾಯಕ ಮುಗ್ಧರು ಈ ಶಾಲೆಗಳಲ್ಲಿ ಕಲಿತು ಹೊಸಜಗತ್ತಿಗೆ ಹೆಜ್ಜೆ ಇಡುತ್ತಾರೆ.
ಇದು ಯಶಸ್ವಿಯಾಗಿ ಹೊರ ಹಾರಿ ಹೋದವರ ಕತೆಯಾಯ್ತು. ಹೊರ ಹಾರಲು ಹೋಗಿ ಬೇಲಿಯಲ್ಲಿ ಸಿಕ್ಕಿಹಾಕಿಕೊಂಡು ಅರೆಬೆಂದು ಹೋದವರ, ಹಾರುವ ಮೊದಲೆ ಸೈನಿಕರ ಕೈಯಲ್ಲಿ ಸಿಕ್ಕಿಬಿದ್ದವರ ಕತೆ ಏನು ಅಂತ ಕೇಳುತ್ತೀರಾ? ಅವರನ್ನು ಉತ್ತರ ಕೊರಿಯ ಸರಕಾರವೇ ಬಹಳ ಮುತುವರ್ಜಿ ವಹಿಸಿ ರಿ ಎಜುಕೇಶನ್ ಸೆಂಟರ್ ಎಂಬ ಹೆಸರಿನ ಮಾದರಿ ಶಾಲೆಗಳಿಗೆ ಕಳಿಸುತ್ತದೆ. ಹುಟ್ಟಿದಂದಿನಿಂದ ಇಂದಿನವರೆಗೆ ಇಷ್ಟೆಲ್ಲ ಚೆನ್ನಾಗಿ ನೋಡಿಕೊಂಡರೂ ವಿವೇಚನೆ ಅನ್ನುವ ವಿಷವನ್ನು ತಲೆಯಲ್ಲಿ ತುಂಬಿಸಿಕೊಂಡ ಈ ತಪ್ಪಿತಸ್ಥರಿಗೆ ಇನ್ನಷ್ಟು ಶಿಕ್ಷಣದ ಅಗತ್ಯ ಇದೆ ಎನ್ನುವುದು ಸರಕಾರದ ನಿಲುವು. ಅದಕ್ಕಾಗಿಯೇ ರಿ ಎಜುಕೇಶನ್. ಕೊರಿಯನ್ ಭಾಷೆಯಲ್ಲಿ ಈ ಶಾಲೆಗಳಿಗೆ ಕ್ವಾನ್ಲಿಸೋ ಎಂದು ಹೆಸರು. ಹೊರದೇಶಗಳಿಂದ ಬಂದಿಳಿದ ಯಾವನೇ ಆಗಲಿ, ಅವನಿಗೆ ಈ ಶಾಲೆಗಳಿಗೆ ಪ್ರವೇಶವಿಲ್ಲ. ಇಲ್ಲಿ ಕೊಡುವ ಶಿಕ್ಷಣ ನಾಜಿ ಸೈನಿಕರ ಯಾತನಾ ಶಿಬಿರಗಳಿಗಿಂತಲೂ ಹಲವಾರು ಪಟ್ಟು ಹೆಚ್ಚು ಕ್ರೂರವಾಗಿದೆ. ಇಲ್ಲಿಗೆ ಬಂದು ಸೇರಿದವರಿಗೆ ಅನ್ನಾಹಾರಗಳು ಇಲ್ಲ. ದಿನಕ್ಕೆ ಹತ್ತು-ಹದಿನೈದು ಗಂಟೆಗಳ ಕಠಿಣ ದುಡಿಮೆ. ಇವರೇ ಹೊಲಗಳಲ್ಲಿ ಎತ್ತುಗಳಾಗಿ ನೇಗಿಲು ಹೊರಬೇಕು. ಟನ್‌ಗಟ್ಟಲೆ ಭಾರವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಬೇಕು. ಆಜ್ಞೆಗೆ ತಪ್ಪಿದ ಅಥವಾ ಒಪ್ಪದ ಕೈದಿಯನ್ನು ಪಿಜನ್ ಪನಿಷ್‌ಮೆಂಟ್ ಎಂಬ ಹೆಸರಲ್ಲಿ ಘನಘೋರವಾಗಿ ಹಿಂಸಿಸಲಾಗುತ್ತದೆ. ಕೈದಿಗಳ ಕೈಗಳನ್ನು ಬೆನ್ನ ಹಿಂದೆ ಕಟ್ಟಿಹಾಕಿ ಬೆನ್ನು ಬಗ್ಗಿಸಿ ಹಕ್ಕಿಗಳಂತೆ ಮೂರ್ನಾಲ್ಕು ದಿನ ನಿಲ್ಲಿಸಿ ಬಾಸುಂಡೆ ಬರುವಂತೆ ಹೊಡೆಯಲಾಗುತ್ತದೆ. ನಿಶ್ಶಕ್ತರಾದವರನ್ನು ಗುಂಡಿಟ್ಟು ಕೊಲ್ಲಲಾಗುತ್ತದೆ. ದೇಶ ಕಾಯುವ ಕೆಲಸದಲ್ಲಿ ಬೇಜಾರಾದ ಯೋಧರಿಗೆ ತಮ್ಮೆಲ್ಲ ಸಿಟ್ಟು, ಸೆಡವು, ಅತೃಪ್ತಿ, ಬೇಸರಗಳನ್ನು ಹೊರಹಾಕಲು ಬೇಕಾದ ಗೊಂಬೆಗಳು ಈ ಕೈದಿಗಳು. ಅವರನ್ನು ಬಡಿದು, ಹೊಡೆದು, ರೇಪ್‌ಮಾಡಿ, ಅಂಗಾಂಗ ಕತ್ತರಿಸಿ ಕೊಂದುಹಾಕುವ ಎಲ್ಲ ಅಪ್ರತಿಮ ಅಧಿಕಾರಗಳನ್ನು ಇಲ್ಲಿ ಸೈನಿಕರಿಗೆ ಕೊಡಲಾಗಿದೆ. ಇವಿಷ್ಟೂ ಶಾಲೆಗಳಲ್ಲಿ ಕೂಡಿಹಾಕಿರುವ ಒಟ್ಟು ನರಕವಾಸಿಗಳ ಸಂಖ್ಯೆ ಬರೋಬ್ಬರಿ ಎರಡೂವರೆ ಲಕ್ಷ!
ಸಾವಿನ ಮನೆಗೆ ಗಟ್ಟಿಪಂಚಾಂಗ
ಈ ಸಾವಿನ ಮನೆಗಳಲ್ಲಿ ಇದ್ದವರು, ಇರುವವರು ಕೇವಲ ಸಾಮಾನ್ಯ ಜನ ಅಂತ ಅಂದುಕೊಳ್ಳಬೇಡಿ. ಉತ್ತರ ಕೊರಿಯದ ಕ್ಷಿಪಣಿ ತಯಾರಿ, ಅಣ್ವಸ್ತ್ರ ಪರೀಕ್ಷೆಯಂಥ ಹತ್ತುಹಲವಾರು ಜಗಧ್ವಿಂಸಕ ಕಾರ್ಯಕ್ರಮಗಳ ರೂಪುರೇಷೆ ತಯಾರಿಸಿ ಪಂಚಾಂಗ ಹಾಕಿದ ಸಿಯೋ ಸಾಂಗ್‌ಗುಕ್ ಎಂಬ ವಿಜ್ಞಾನಿ ಕೂಡ ಈ ಯಾತನಾಶಿಬಿರಗಳಲ್ಲಿ ದಿನಗಳೆದಿದ್ದ. ಬುದ್ಧಿವಂತಿಕೆಯ ವಿಚಾರದಲ್ಲಿ ನಮಗೆ ಅಬ್ದುಲ್ ಕಲಾಂ ಇದ್ದ ಹಾಗೆ ಕೊರಿಯಕ್ಕೆ ಸಾಂಗ್‌ಗುಕ್. ಈತ ತನ್ನ ಉನ್ನತ ಶಿಕ್ಷಣ ಪೂರೈಸಿದ್ದು ರಷ್ಯದಲ್ಲಿ. ಮರಳಿ ತಾಯ್ನಾಡಿಗೆ ಬಂದು ದೇಶದ ಅಧ್ಯಕ್ಷರ ಹೆಸರಿನ ಕಿಮ್ ಇಲ್‌ಸಂಗ್ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರ ಬೋಧಿಸುತ್ತಿದ್ದ ಸಾಂಗ್‌ಗುಕ್ ಒಮ್ಮೆ ಗೆಳೆಯರ ಜತೆ ಪಟ್ಟಾಂಗ ಹೊಡೆಯುತ್ತ 'ರಷ್ಯನ್ನರು ತಂತ್ರಜ್ಞಾನದ ವಿಷಯದಲ್ಲಿ ಅದ್ವಿತೀಯರು. ನನ್ನನ್ನು ಎಷ್ಟು ಸಂಬಳ ಕೊಟ್ಟಾದರೂ ಉಳಿಸಿಕೊಳ್ಳಬಯಸಿದ್ದರು' ಅಂತ ಹೇಳಿಕೊಂಡದ್ದೇ ನೆಪವಾಗಿ, ಈ ಮನುಷ್ಯನಿಗೆ ರಷ್ಯನ್ನರ ಜೊತೆ ಗುಪ್ತವ್ಯವಹಾರ ಇದೆ ಅಂತ ಕೊರಿಯನ್ ಸರಕಾರ ಸಾಂಗ್‌ಗುಕ್‌ನನ್ನು ನೇರವಾಗಿ ಯಾತನಾಶಿಬಿರಕ್ಕೆ ಕಳಿಸಿಬಿಟ್ಟಿತು. ಮುಂದೆ ಕೆಲವರ್ಷಗಳ ನಂತರ ಇಲ್‌ಸಂಗ್ ರಷ್ಯಕ್ಕೆ ಭೇಟಿಕೊಟ್ಟಾಗ ಅಲ್ಲಿಯ ವಿಜ್ಞಾನಿಗಳ ಬಳಿ ತನ್ನ ದೇಶಕ್ಕೆ ಕ್ಷಿಪಣಿ ತಂತ್ರಜ್ಞಾನದಲ್ಲಿ ಬೆಳೆಯಲು ಸಹಾಯ ಮಾಡುವಂತೆ ಕೋರಿದ. ಅವರು ನಕ್ಕು, 'ನಮ್ಮ ಸಹಾಯ ಯಾಕೆ ಬೇಕು? ಸಾಂಗ್‌ಗುಕ್ ನಿಮ್ಮ ಜತೆ ಇರುವಾಗ?' ಅಂತ ಕೇಳಿದರು. ಅಧ್ಯಕ್ಷನಿಗೆ ಜ್ಞಾನೋದಯವಾಯಿತು. ವಾಪಸು ಬಂದವನೇ ಸಾಂಗ್‌ಗುಕ್‌ನನ್ನು ಮರಣಶಿಬಿರದಿಂದ ಕರೆಸಿ ಕ್ಷಿಪಣಿ ಯೋಜನೆಯ ಅಧ್ಯಕ್ಷಗಿರಿ ಕೊಟ್ಟುಬಿಟ್ಟ.
ಮುಂದೆ ಆಗಲಿದ್ದ ಅನಾಹುತಗಳ ಮುನ್ಸೂಚನೆ ಇಲ್ಲದೆ ಸಾಂಗ್‌ಗುಕ್ ದೇಶದ ಅಧ್ಯಕ್ಷನ ಹೆಗಲಿಗೆ ಹೆಗಲು ಕೊಟ್ಟು ದುಡಿದು ಕೊರಿಯಕ್ಕೆ ಬೇಕಾದ ಎಲ್ಲ ಕ್ಷಿಪಣಿ, ಅಣ್ವಸ್ತ್ರ ತಂತ್ರಜ್ಞಾನವನ್ನು ತಯಾರು ಮಾಡಿಕೊಟ್ಟ. ಭಸ್ಮಾಸುರನಿಗೆ ವರಕೊಟ್ಟು ಜಾತ್ರೆಗೆ ಕಳಿಸಿದ ಹಾಗಾಯಿತು. ಉತ್ತರ ಕೊರಿಯ ಅಲ್ಲಿಂದೀಚೆಗೆ ಒಂದಕ್ಕಿಂತ ಒಂದು ದೊಡ್ಡ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತ, ಮಿಸೈಲುಗಳನ್ನು ಹಾರಿಸುತ್ತ ಪೂರ್ವ ಏಷ್ಯಾದ ನಿದ್ದೆಗೆಡಿಸುತ್ತ ಬಂದಿದೆ. ಭವಿಷ್ಯದಲ್ಲಿ ಒಂದುವೇಳೆ, ಅದು ಕಳ್ಳು ಕುಡಿದ ಹುಚ್ಚನಂತೆ ತಲೆಕೆಟ್ಟು ಯರ್ರಾಬಿರ್ರಿಯಾಗಿ ಅಣ್ವಸ್ತ್ರಗಳನ್ನು ಪ್ರಯೋಗಿಸಲು ಪ್ರಾರಂಭಿಸಿದರೆ, ಅದರ ಪರಿಣಾಮವನ್ನು ಚೀನಾ, ದಕ್ಷಿಣ ಕೊರಿಯ, ಜಪಾನ್, ಅಮೆರಿಕ ಮತ್ತು ಬಹುತೇಕ ಈಶಾನ್ಯ ಮತ್ತು ಆಗ್ನೇಯ ಏಷ್ಯಾ ದೇಶಗಳು ಅನುಭವಿಸಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ, ನಷ್ಟದ ದೊಡ್ಡ ಬಿಸಿತುತ್ತನ್ನು ನುಂಗಬೇಕಾಗುವುದು ಸ್ವತಃ ಉತ್ತರ ಕೊರಿಯವೇ ಎನ್ನುವುದು ಮತ್ತು ಅದನ್ನು ತಿಳಿಯುವ ವಿವೇಕ ಇನ್ನೂ ಅದಕ್ಕೆ ಬಂದಿಲ್ಲ ಅನ್ನುವುದೇ ದೊಡ್ಡ ದುರಂತ.
ಸ್ವಾರ್ಥಿ ಚೀನಾ
ಅಣ್ವಸ್ತ್ರ ಕ್ಷಿಪಣಿ ಪರೀಕ್ಷೆ ನಡೆಸಿ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿರುವ ಉತ್ತರ ಕೊರಿಯಕ್ಕೆ ಮಿತ್ರರೇ ಇಲ್ಲ ಎಂದುಕೊಳ್ಳಬೇಡಿ. ಧುರ್ಯೋದನನಿಗೂ ಶಕುನಿ ಬೆನ್ನಹಿಂದೆ ನಿಲ್ಲಲಿಲ್ಲವೆ? ಉತ್ತರ ಕೊರಿಯಕ್ಕೆ ಇದುವರೆಗೂ ಬೆಂಗಾವಲಾಗಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತ ಬಂದಿರುವುದು ಚೀನಾ. ಜೋಳದ ಜಾಗದಲ್ಲಿ ಬಾಂಬಿನ ಬೆಳೆ ತೆಗೆಯುತ್ತ, ಆಸ್ಪತ್ರೆ ಕಟ್ಟುವಲ್ಲಿ ಲೇಬರ್ ಕ್ಯಾಂಪ್‌ಗಳನ್ನು ಹುಟ್ಟಿಸುತ್ತ ಭಯಾನಕವಾಗಿ ಬೆಳೆದು ಸುಡುಗಾಡಾಗಿರುವ ಉತ್ತರ ಕೊರಿಯ ಚೀನಾಕ್ಕೆ ಬೇಕು. ಯಾಕೆಂದರೆ, ಯಾವುದೇ ಕೈಗಾರಿಕೆ ನಡೆಸಲು ಸಾಧ್ಯವಿಲ್ಲದೆ ನಿರ್ವೀರ್ಯವಾಗಿ ಕೂತಿರುವ ಕೊರಿಯಕ್ಕೆ ಪೊರಕೆಯಿಂದ ಪ್ಲುಟೋನಿಯಂವರೆಗೆ ಎಲ್ಲವನ್ನೂ ರಫ್ತು ಮಾಡಿ ಕಿಸೆ ತುಂಬಿಸಿಕೊಳ್ಳುವ ಜಾಣ ಈ ಚೀನಾ. ಇಡೀ ಜಗತ್ತನ್ನೇ ತನ್ನ ಮಾರುಕಟ್ಟೆ ಎಂದು ಭಾವಿಸಿ ದೇಶದೇಶಗಳನ್ನೇ ಬಗೆದು ಕೊಳ್ಳೆ ಹೊಡೆಯಹೊರಟಿರುವ ಚೀನಾ, ಉತ್ತರ ಕೊರಿಯದ ಜತೆ ಕಳೆದ ವರ್ಷ ನಡೆಸಿದ ವ್ಯಾಪಾರ ವಹಿವಾಟು ಆರು ಬಿಲಿಯನ್ ಡಾಲರುಗಳಿಗೂ ಹೆಚ್ಚು! ಕಳೆದ ಮೂರು ವರ್ಷಗಳಲ್ಲಿ ಉತ್ತರ ಕೊರಿಯಕ್ಕೆ ಚೀನಾದ ರಫ್ತುಪ್ರಮಾಣ ಎಂಭತ್ತು ಪ್ರತಿಶತ ಹೆಚ್ಚಾಗಿದೆ. ಕೊರಿಯ ಬಡವಾಗುತ್ತ ಹೋದಂತೆ ಚೀನಾ ಅದನ್ನು ಇನ್ನಷ್ಟು ಮತ್ತಷ್ಟು ಬಿಗಿಯಾಗಿ ಹಿಡಿದುಕೊಳ್ಳುತ್ತಾ ಹೋಗುತ್ತದೆ. ಅದಕ್ಕಾಗಿಯೇ ಅಮೆರಿಕವನ್ನು ಕೊರಿಯದೆದುರು ಎತ್ತಿಕಟ್ಟಿ ರಾಜಕೀಯ ಲಾಭದ ಪಾಯಸ ಹೀರುತ್ತಿದೆ. ಅತ್ತ ಚೀನಾದ ಕೈಯಲ್ಲಿ ಹಿಂಜಿಸಿಕೊಂಡು ಇತ್ತ ಅಮೆರಿಕದೆದುರು ಒಳಗೊಳಗೆ ಅಂಜಿಕೊಂಡು ನಾಶವಾಗುತ್ತ ಹೋಗುತ್ತಿರುವ ಉತ್ತರ ಕೊರಿಯವನ್ನು ರಕ್ಷಿಸುವವರು ಯಾರು?
ಕಥೆ ಹೇಳಿದ ಪಾಲ್!
ಗೂಗಲ್ ಕಂಪನಿಯ ಚೇರ್ಮನ್ ಎರಿಕ್ ಸ್ಮಿತ್ ಜತೆ, ಉತ್ತರ ಕೊರಿಯದ ನರಕದಿಂದ ಪಾರಾಗಿ ಸಿಯೋಲ್ (ದಕ್ಷಿಣ ಕೊರಿಯ) ಸೇರಿದ 'ಪಾಲ್' ಎಂದು ಹೆಸರಿಸಿಕೊಂಡ ಕೊರಿಯನ್ ಹಂಚಿಕೊಂಡ ಕತೆ ಇದು.
- ರೋಹಿತ್ ಚಕ್ರತೀರ್ಥ
rohithmath@gmail.com