ಸಾಪ್ತಾಹಿಕಪ್ರಭ

ಬದುಕಿನ ಹೊಸ ಸಿಲಬಸ್

ಜಾತ್ರೆಯಲ್ಲಿ ರಂಪಾಟ ನಡೆಸಿ, ರಚ್ಚೆ ಹಿಡಿದು, ಬಿದ್ದು ಬೋರಾಡಿ ಕೊಡಿಸಿಕೊಂಡ ಗೊಂಬೆಯನ್ನು ಕಳೆದುಕೊಂಡಂಥ ನಿರಾಸೆಯ ಸ್ಥಿತಿ. ಯಾರೊಂದಿಗೂ ಹೇಳಿಕೊಳ್ಳಲು ಆಗದ, ನನ್ನೊಳಗೇ ಅನುಭವಿಸಲೂ ಆಗದ ಸಂದಿಗ್ಧ ಕಾಡುತ್ತಿದ್ದುದು ಸುಳ್ಳಲ್ಲ. ಅವತ್ತು ನಿನ್ನನ್ನು ಅದೆಷ್ಟು ನಂಬಿದ್ದೆ ಎಂದರೆ ಬಹುಶಃ ನಾನವತ್ತು ಆ ಬಟಾಬಯಲಲ್ಲಿ ಹಾಗೆ ನೆನೆದು ತೊಪ್ಪೆಯಾಗುತ್ತೇನೆಂದು ನಿರೀಕ್ಷಿಸಿರಲಿಲ್ಲ. ನಿನ್ನ ನಂಬಿಕೆಯ ಛತ್ರದಲ್ಲಿ ಭದ್ರವಾಗಿ ನಿಂತಿದ್ದ ನಾನು ಎಂಥದ್ದೇ ಕುಳಿರ್ಗಾಳಿ, ಬಿರುಬಿಸಿಲು, ಹುಚ್ಚು ಮಳೆಗೂ ನಲುಗಲು ಸಾಧ್ಯವೇ ಇಲ್ಲವೆಂದು ಭ್ರಮಿಸಿದ್ದೆ. (ಅದು ಭ್ರಮೆ ಎಂಬುದು ನನಗೆ ತಿಳಿದದ್ದು ಕೊನೆಗೆ). ಆದರೆ ನಿನ್ನ ಭವ್ಯ ಆಡಂಬರದ ವ್ಯಕ್ತಿತ್ವದ ಸೂರು ಹೀಗೆ ಒಳಗೊಳಗೇ ಗೆದ್ದಲು ಹಿಡಿದು ತೂತು ಬಿದ್ದಿದೆ ಎಂಬುದು ತಿಳಿಯದೇ ಹೋಯಿತು. ಗಟ್ಟಿ ಆಶ್ರಯವಿಲ್ಲದೇ ಬಹುತೇಕ ಬೀದಿಯಲ್ಲಿ ನಿಂತಿದ್ದ ನನಗೆ ಕತ್ತೆತ್ತಿ ನೋಡಿದಾಗ ಕಂಡದ್ದು ಸುತ್ತೆಲ್ಲ ಕವಿದ ಕರಿ ಮೋಡಗಳೇ. ಯಾವುದಾದರೊಂದು ದಿಕ್ಕಿಗೆ ಓಡಲೇ ಬೇಕಿತ್ತು. ಕುಂಭದ್ರೋಣವಲ್ಲ, ಕನಿಷ್ಠ ತುಂತುರು ಹನಿಗಳನ್ನೂ ಎದುರಿಸಿ ನಿಲ್ಲಲಾಗದಷ್ಟು ದುರ್ಬಲವಾಗಿತ್ತು ನನ್ನ ನಿಲುವು. ಕಾಲುಗಳೇ ಬಲಿತಿರಲಿಲ್ಲ, ಇನ್ನು ಮನಸ್ಸಿನ ಸ್ಥಿತಿ ಕೇಳಬೇಕೆ? ಆದರೂ ಓಡಲೇಬೇಕಿತ್ತು. ಹಾಗೆ ಓಟಕ್ಕೆ ಸಜ್ಜಾಗುತ್ತಿದ್ದಾಗಲೇ ಎದುರಿಗೆ ಕಂಡದ್ದು ನಿನ್ನ ನಿಲುವು. ಸಂಶಯಿಸಲು ಕಾರಣವೇ ಇರಲಿಲ್ಲ. ಹೆಸರು ದೊಡ್ಡದಾಗಿತ್ತು ನಿನ್ನದು. ಪಾಂಡಿತ್ಯದ ಜತೆಗೆ ಅಕಾಡೆಮಿಕ್ ಎನ್ನಬಹುದಾದ ಹಿನ್ನೆಲೆಯ ಪಾತಿನಿಧಿತ್ವ ನಿನಗಿತ್ತು. ನೆಮ್ಮದಿಯ ನಿದ್ದೆಗೆ ಮಡಿಲು ಹುಡುಕುವ ಕಂದನನ್ನ ಎದೆಗವಚಿ, ಬಾಯಿಗೆ ಮೊಲೆಯನ್ನಿಟ್ಟರೆ ಏನಾಗಬಹುದಾಗಿತ್ತೋ ಅದೇ ಆದದ್ದು ನನಗೆ. ನಾನು ಜಾರುತ್ತಿರುವುದು ನಿದ್ದೆಗಲ್ಲ ಅಂಥ ಭ್ರಮೆಗೆ, ವಿಸ್ಮೃತಿಗೆ ಎಂಬುದು ಅರಿವಾಗುವ ಹೊತ್ತಿಗೆ ನೀನು ಪೂಸಿದ್ದ ಹುಸಿ ಪ್ರೀತಿಯ ಘಮಲಿನಲ್ಲಿ ಅರೆಪ್ರಜ್ಞಾವಸ್ಥೆ ತಲುಪಿಬಿಟ್ಟಿದ್ದೆ. ನಿನ್ನ ಅಪ್ಪುಗೆಯಲ್ಲೇ ದೊಡ್ಡವಳಾಗಿದ್ದೆ. ಮತ್ತೆ ಮುಂದಕ್ಕೆ ಒಂದೂ ಹೆಜ್ಜೆ ಕಿತ್ತಿಡಲಾಗದ ದೌರ್ಬಲ್ಯ. ಅದೊಂದು ರೀತಿಯ ಅಡಿಕ್ಷನ್.
ಹೌದು, ಅದು ಅಡಿಕ್ಷನ್ನೇ...!

ಏಕೆಂದರೆ... ನಿನ್ನ ಕಣ್ಣುಗಳಲ್ಲಿ ಮಿಂಚಿತ್ತು. ಅವೇ ಏನೇನೋ ಪಿಸುಮಾತುಗಳನ್ನು ಹೇಳುತ್ತಿದ್ದವು. ಎದೆಯೊಳಗಡಗಿದ್ದ ನೂರು ನೋವಿನ್ನೇ ಚಾದರ ಮಾಡಿಕೊಂಡು ಹಾಗೆಯೇ ಹೊದ್ದು ಬಂದಿದ್ದ ನನ್ನ ಮಂಪರನ್ನು ಹೋಗಲಾಡಿಸಿದ್ದು, ನಿದ್ದೆಯಿಂದ ಹೊರತಂದದ್ದು ನಿನ್ನ ಹಾಸ್ಯ ಲೇಪಿತ ಮಾತುಗಳು. ಬೊಗಸೆಯೊಡ್ಡಿದರೆ ಅಲ್ಲಿ ನಗುವೇ ಚೆಲ್ಲಾಡಿಕೊಂಡು ಬರುತ್ತಿತ್ತು. ಅನಾಥ ಪ್ರಜ್ಞೆಯನ್ನು ಮರೆಯಲಾರಂಭಿಸಿದ್ದೆ. ಕಳೆದುಕೊಂಡದ್ದೆಲ್ಲವನ್ನು ನಿನ್ನಲ್ಲೇ ಕಾಣಲಾರಂಭಿಸಿದ್ದೆ. ಲವಲವಿಕೆಯಲ್ಲಿ ಭಾವದಲ್ಲಿದ್ದಾಗಲೇ ನಮ್ಮಿಬ್ಬರ ನಡುವೆ 'ಸಂಬಂಧ'ದ ಸೇತುವೆ ಬಲಿತದ್ದು. ಕೊನೆಕೊನೆಗೆ ಎಲ್ಲ ಮಿತಿಗಳನ್ನೂ ಮೀರಿ ಹರಿದಿತ್ತು ಪ್ರೀತಿ. ನಾನು- ನೀನು ಏನು ಎಂಬುದನ್ನು ಕೇಳಿಕೊಳ್ಳುವ ಗೋಜಿಗೇ ಹೋಗದೇ ಒಪ್ಪಿ ಅಪ್ಪಿಬಿಟ್ಟೆ. ಕೈ ಮದರಂಗಿಯಲ್ಲೂ ನಿನ್ನದೇ ನೆನಪುಗಳ ಮುಗ್ಧ ಒಲವು. ಹೊಳೆ ನೀರಲ್ಲಿ ಕಾಲದ್ದಿ ಕುಳಿತಾಗ ಜುಳು ನಿನಾದದೊಂದಿಗೆ ತೇಲುವ ಲಂಗದ ನೆರಿಗೆಗಳಲ್ಲೂ ನಿನ್ನ ಮುಖವೇ... ಮುಂಜಾವಿನ ತಂಗಾಳಿಯಂತಿದ್ದ ನಿನ್ನ ಸನಿಹ, ಸಾಮೀಪ್ಯ ಹೊತ್ತೇರುತ್ತಿದ್ದಂತೆ ಹೀಗೆ ಬಿರುಬಿಸಿಲಿನ ಬಾಣಲೆಯಾಗುತ್ತದೆ ಎಂದು ಕಲ್ಪಿಸಿಕೊಂಡಿರಲೂ ಇಲ್ಲ. ಒಂದಾಗಿದ್ದ ನನ್ನ ಸಂಬಂಧದ ಹಸಿರೆಲೆ ಬಾಡಿದ್ದು ಅವತ್ತು ಕ್ಲಾಸ್‌ರೂಮಿನಿಂದ ಸ್ಟಾಫ್‌ರೂಮಿಗೆ ನಿನ್ನ ನೋಡಲು ಓಡೋಡಿ ಬಂದಾಗ. ನನಗಷ್ಟೇ ಅಲ್ಲ, ನನ್ನ ಹಲವು ಗೆಳತಿಯರಿಗೂ ನೀನು 'ಆ ಪಾಠ' ಹೇಳಿಕೊಡುವವನೆಂಬ ಸತ್ಯ ರಪ್ಪನೆ ಅಪ್ಪಳಿತ್ತು ನನ್ನ ಕಪಾಳಕ್ಕೆ. ಕೆಲವರಿಗಂತೂ ನನಗಿಂತ ಹೆಚ್ಚಿನ ಪ್ರಾಕ್ಟಿಕಲ್ ತರಗತಿಗಳನ್ನೇ ತೆಗೆದುಕೊಂಡಿದ್ದೆ. ಆ ಕ್ಷಣದಲ್ಲಿ ನನ್ನ ಬೆರಳುಗಳನ್ನು ನಾನೇ ಸಂದಿಗೆ ಸಿಕ್ಕಿಸಿಕೊಂಡು ಬಾಗಿಲೆಳೆದುಕೊಂಡ ಅನುಭವ. ಅವಡುಗಚ್ಚಿ ನೋವು ಸಹಿಸುವುದೇ ದಾರಿಯಾಗಿತ್ತು.ಸ್ಪೆಷಲ್ ಕ್ಲಾಸ್‌ಗಳು ಬದುಕಿನ ಪರೀಕ್ಷೆಗೆ ಪೂರಕವಲ್ಲ ಎಂಬ ಜ್ಞಾನೋದಯ ಈಗಾಗಿದೆ. ಹೊಸ ಸಿಲೆಬಸ್ ಅನ್ನು ಕಂಡುಕೊಂಡಿದ್ದೆನೆ. ಹೊಚ್ಚ ಹೊಸ ಪುಟಗಳಲ್ಲಿ ಸಚಿತ್ರ ಅಕ್ಷರಗಳು ಮೂಡಲಾರಂಭಿಸಿವೆ. ಕಾಲಚಕ್ರ ತಿರುಗುವುದು ನಿಂತು, ನಾನು ಕೆಳಗೇ ಉಳಿದುಬಿಡುತ್ತೇನೇನೋ ಎಂದುಕೊಂಡಿದ್ದು ಸುಳ್ಳಾಗಿದೆ. ಮೆಲ್ಲಗೆ ಮೇಲಕ್ಕೆ ಏರಲಾರಂಭಿಸಿದ್ದೇನೆ. ಈಗಲೂ ನಿನ್ನನ್ನು ದೂರುವುದಿಲ್ಲ. ಏಕೆಂದರೆ ಕಳೆದುಕೊಂಡದ್ದು ಬದುಕನ್ನಲ್ಲ, ನಿನ್ನನ್ನಷ್ಟೇ ಎಂಬುದು ಅರ್ಥವಾಗಿದೆ. ರಾತ್ರಿಗಳನ್ನು ನೆಮ್ಮದಿಯ ನಿದ್ದೆಯಲ್ಲಿ ಕಳೆಯುತ್ತಿದ್ದೇನೆ. ಬೆಳಗ್ಗೆದ್ದು ಆಗಿರುತ್ತಿದ್ದ ಮಂಪರು ಈಗಿಲ್ಲ. ಸ್ವಚ್ಛ, ಸಮೃದ್ಧ ನಿದ್ದೆ ಎಲ್ಲ ಮಂಪರನ್ನೂ ಹೋಗಲಾಡಿಸುತ್ತಿದೆ. ಆ ಸವಿ ನಿದ್ದೆ ಎಂಥದ್ದು ಗೊತ್ತಾ? ಕೆಟ್ಟದ್ದನ್ನೇನನ್ನೋ ಕೊನೆಗೂ ಸುಟ್ಟು ಬಿಸುಟು ಬಂದು ಮಲಗಿದ ನಂತರ ಆವರಿಸುತ್ತದಲ್ಲಾ, ಅಂಥದ್ದು! ಅದೇ ನಿರುಮ್ಮಳತೆಯಲ್ಲಿದ್ದೇನೆ ನಾನೀಗ.

-  ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!

'ತಂದಿಟ್ಟ ಗಿಡ ಮನೆಗೇ ಹಾನಿ ಮಾಡಿದ್ರೆ..'; 'ನೋ ಕ್ಲಾಸ್', BiggBoss ಇತಿಹಾಸದ ಅತಿದೊಡ್ಡ ನಿರ್ಧಾರದ ಸುಳಿವು ನೀಡಿದ ಕಿಚ್ಚಾ ಸುದೀಪ್

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಅಪಘಾತಕ್ಕೆ ಬಿಗ್ ಟ್ವಿಸ್ಟ್: ಸ್ನೇಹಿತನಿಂದಲೇ ಭೂಮಿಕಾ ಕೊಲೆ?