ಅದೊಂದು ದಿನ ಜಗದೇವಪ್ಪ ಆ ಬೆಕ್ಕನ್ನು ಇಲಿಗಳು ಹೆಚ್ಚಾಗಿ ಓಡಾಡುವ ಕೋಣೆಯೊಳಗೆ ಹಾಕಿ, ಹೊರಗಿನ ಚಿಲಕ ಬಂದ್ ಮಾಡಿ ಮಲಗಿದ್ದ. ಮಧ್ಯರಾತ್ರಿ ಸಮಯ. ಬೆಕ್ಕು ಗುರ್..ಗುರ್.. ಎಂದು ಅರಚುತ್ತಿತ್ತು. ಜಗದೇವಪ್ಪ ಎದ್ದು ಲೈಟ್ ಹಾಕಿ ಹೆಂಡತಿಯನ್ನ ಎಬ್ಬಿಸಿದ. 'ನೋಡು, ಆ ಬೆಕ್ಕು ಒಂದೂ ಇಲಿ ಹಿಡದಿಲ್ಲ ಅಂತಿದ್ದಿವಲ್ಲ, ಹಿಡದು ತೋರಸ್ತು. ಬಾ ಇಲ್ಲಿ' ಎಂದು ಹಗೂರಕ ಕಿಡಕಿ ತಗದು ನೋಡಿದರೆ ಅದು ಗುರ್.. ಗುರ್.. ಅಂತ ಮಾಡಿದ್ದು ಇಲಿ ಹಿಡಕೊಂಡು ಅಲ್ಲ, ಬದಲಾಗಿ ಟೊಮೆಟೊ ಜತೆ ಆಟ ಆಡತಾ ಹಾಗೆ ಆವಾಜ್ ಮಾಡುತ್ತಿತ್ತು. ಅದರ ಕಣ್ಣಳತೆಯಲ್ಲಿಯೇ ಇಲಿಯೊಂದು ಈ ಬೆಕ್ಕಿನ ಮುಖವನ್ನು ನೋಡುತ್ತಲೇ ಕಣ್ಣು ಮಿಟುಕಿಸುತ್ತಾ ಟೊಮೆಟೊ ಮೆಲ್ಲುತ್ತಿತ್ತು.
ಚಹಾದ ಅಂಗಡಿ ನಿರಕಿಗೆ ಸಿಗಿಸಿದ ರೇಡಿಯೋದಲ್ಲಿ ನೀನಾರಿಗಾದೆಯೋ ಎಲೆ ಮಾನವಾ.. ಅನ್ನೋ ಹಾಡು ಲಯವಾಗಿ ತೇಲಿಬರುತ್ತಿತ್ತು. ಜಗದೇವಪ್ಪ ಅಲ್ಲೇ ರಸ್ತೆಯ ನಡುವೆ ಕುಳಿತ ಗೋವುಗಳ ಹಿಂಡನ್ನು ಕಂಡು, ಚಾದೊಳಗೆ ಬನ್ ಅದ್ದಿ ತಿನ್ನುತ್ತಾ ಮನಸಿನಲ್ಲಿಯೇ 'ಈ ಗೋವಿಗೆ ಬುದ್ಧಿವಂತನೆಂಬೋ ಮನುಷ್ಯ ಪ್ರಾಣಿ, ನೀನೊಂದು ಸಂಭಾವಿತ ಜೀವಿ ಎಂದು ದೇವರ ಪೀಠದಲ್ಲಿ ಅದನ್ನು ಕುಳ್ಳರಿಸಿ, ನಿನ್ನ ಹೊಟ್ಟೆಯಲ್ಲಿಯೇ ಕೋಟ್ಯಾನುಗಟ್ಟಲೆ ದೇವತೆಗಳು ಠಿಕಾಣಿ ಹೂಡಿವೆ ಎಂದು ಅದರ ಹಣೆಗೆ ಕುಂಕುಮ ಇಟ್ಟ ಮೇಲೂ ಅದರ ನಸೀಬ್ ಹಿಂಗಲಿಲ್ಲ. ಅದು ರಸ್ತೆಯ ಬದಿ ಅಂಟಿಸಿರುವ ಈಸ್ಟ್‌ಮನ್ ಕಲರ್ ಸಿನಿಮಾದ ಪೋಸ್ಟರ್‌ದಿಂದ ಹಿಡಿದು, ಬ್ಲ್ಯಾಕ್ ಆಂಡ್ ವೈಟ್‌ವರೆಗೂ..ಕಲರ್ ಪ್ಲಾಸ್ಟಿಕ್ ಹೊಟ್ಟೆಯಿಂದ ಹಿಡಿದು..ಎಣ್ಣೆ ಮೆತ್ತಿದ ಪೇಪರ್‌ವರೆಗೂ ಮೇಯುವ ಕರ್ಮ ತಪ್ಪಲಿಲ್ಲ...' ಹೀಗೆಲ್ಲಾ ಯೋಚಿಸುತ್ತಾ ಅರ್ಧ ಬನ್ ತಿಂದು, ಇನ್ನರ್ಧ ಅಲ್ಲಿಯೇ ಮಲಗಿದ್ದ ನಾಯಿಯೊಂದನ್ನು ಚು..ಚು.. ಎಂದು ಕರೆದು, ಹಾಕಿ ಅಲ್ಲಿಂದ ನಡೆದಿದ್ದ.
ಹೀಗೆ ಇಲ್ಲಿಗೆ ಬಂದು ದಿನಾಲು ಸಾಯಂಕಾಲ ಅರ್ಧ ಚಾ ಹಾಗೂ ಅರ್ಧ ಬನ್ ತಿಂದು ವಾಕಿಂಗ್‌ಗೆ ಹೋಗುವದನ್ನು ಜಗದೇವಪ್ಪ ಒಂದು ದಿನಚರಿಯನ್ನಾಗೇ ಮಾಡಿಕೊಂಡಿದ್ದ. ಅವನು ಮೂಲತಃ ಬಾಗಲಕೋಟ ಜಿಲ್ಲೆಯ ಚಿಮನೂರಿನವನು. ಹುಬ್ಬಳ್ಳಿಗೆ ಬಂದು ಅದಾಗಲೇ ನಾಲ್ಕು ದಶಕಗಳೇ ಆಗಿತ್ತು. ಕನ್ನಡ ಶಾಲೆಯ ಮೇಸ್ಟ್ರಾಗಿ ನಿವೃತ್ತಿಯಾಗಿರುವ ನಮ್ಮ ಕಥಾನಾಯಕ ಎಲ್ಲ ಪ್ರಾಣಿ, ಪಕ್ಷಿಗಳ ಬಗ್ಗೆಯೂ ಕನಿಕರ, ಪ್ರೀತಿ ಉಳ್ಳವನು. ತನ್ನಿಂದ ಅವುಗಳಿಗೆ ಏನೂ ಸಹಾಯ ಮಾಡಲಾಗದಿದ್ದರೂ ಚಿಂತೆಯಿಲ್ಲ, ಕೇಡಾಗಬಾರದು ಎನ್ನುವ ತತ್ವದವನು. ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಶಿಕ್ಷಕರ ಕಾಲನಿಯಲ್ಲಿ ಸಹಕಾರಿ ಸಂಘದ ನೆರವಿನಿಂದ ದಕ್ಕಿದ ಮೂವತ್ತು ನಲವತ್ತು ಸೈಜಿನ ಸೈಟಿನಲ್ಲಿ ಮನೆಯೊಂದನ್ನು ಕಟ್ಟಿಕೊಂಡಿರುವ ಜಗದೇವಪ್ಪ, ಹೆಂಡತಿ ರುಕ್ಮಿಣಿ, ಮಗ ಸತೀಶ, ಮಗಳು ತನುಜಾಳೊಂದಿಗೆ ಬರೋ ಪೆನ್ಶನ್‌ನಲ್ಲಿ ಕಟಾಕಟಿ ಬದುಕು ತೆಗೆಯುತ್ತಿದ್ದವನು. ಮನೆ ಕಟ್ಟುವಾಗಲೇ ಮೇಲೆ ಒಂದೆರಡು ಕೋಣೆ ಎಬ್ಬಿಸಿದ್ದು ಈಗ ಅವನಿಗೆ ತುಂಬಾ ಆಸರೆಯಾಗಿತ್ತು. ಆ ರೂಮಿನ ಬಾಡಿಗೆ ಹಾಗೂ ಪೆನ್ಶನ್ ಎರಡೂ ಸೇರಿ ಪ್ರತಿ ತಿಂಗಳು ಇಪ್ಪತ್ತು ಸಾವಿರ ರುಪಾಯಿ ಕೈಗೆ ಬರುತ್ತಿತ್ತು. ಕಳೆದ ವರ್ಷವಷ್ಟೇ ನಿವೃತ್ತಿಯಾಗಿರುವ ಜಗದೇವಪ್ಪ ಇನ್ನೂ ಸಾಕಷ್ಟು ಗಟ್ಟಿ ಮುಟ್ಟಾಗಿದ್ದವನು. ಅದಕ್ಕೆ ಕಾರಣ ಅವನಿಗೆ ಯಾವುದೇ ದುರಭ್ಯಾಸಗಳು ಇರಲಿಲ್ಲ. ಇದ್ದದ್ದು ಒಂದೇ.. ಸೀದಾ ಮನೆಯಿಂದ ನಾಲ್ಕನೇ ಮುಖ್ಯ ರಸ್ತೆ ಹಿಡಿದು ಕೆಳಗಿನ ಸರ್ಕಲ್‌ವರೆಗೆ ಹೋಗಿ, ಅಲ್ಲಿರೋ ಒಂದು ಗೂಡಂಗಡಿಯಲ್ಲಿ ಅರ್ಧ ಚಾ, ಅರ್ಧ ಬನ್ನು ತಿಂದಾಗಲೇ ಅವನ ಅಂದಿನ ದಿನಚರಿ ಪೂರ್ಣವಾಗುತ್ತಿತ್ತು. ಇನ್ನರ್ಧ ಬನ್ನನ್ನು ಅಲ್ಲೇ ಹತ್ತಿರದಲ್ಲಿ ಮುದುಡಿ ಮಲಗಿರುತ್ತಿದ್ದ ಕೆಂದು ಬಣ್ಣದ ನಾಯಿಯೊಂದನ್ನು ಕರೆದು, ಅದಕ್ಕೆ ಹಾಕುತ್ತಿದ್ದ. ಅದು ತುಂಡಾಗಿದ್ದ ತನ್ನ ಮೊಂಡು ಬಾಲವನ್ನೇ ನಿಮಿರಿಸಿ ಅಲ್ಲಾಡಿಸಿ ಕಣ್ಣು ಮುಚ್ಚಿ..ತೆರೆದು ಜಗದೇವಪ್ಪನನ್ನು ನೋಡುತ್ತಾ ಆ ಬನ್ನನ್ನು ತಿಂದಾಗಲೇ ಅವನಿಗೆ ಸಮಾಧಾನವಾಗುತ್ತಿತ್ತು.
ಅದೇನೋ ಅವನಿಗೆ ಗೊತ್ತಿಲ್ಲವಂತೆ. ಅವನಿಗೆ ಬಾಲ್ಯದಿಂದಲೂ ಈ ನಾಯಿ, ಬೆಕ್ಕು, ಆಕಳು, ಎಮ್ಮೆ ಎಲ್ಲಾ ಪ್ರಾಣಿಗಳ ಬಗ್ಗೆ ಒಂಥರಾ ಅಕ್ಕರೆ. ಅವನು ಚಿಕ್ಕವನಿದ್ದಾಗ ಒಂದು ದಿನ ತಾನು ಮಲಗುವ ಹಾಸಿಗೆಯಲ್ಲಿ ನಾಯಿಗೂ ಪಾಲು ಕೊಟ್ಟಿದ್ದನಂತೆ. ಅದು ಅವನ ಮುಖವನ್ನು ಲೊಚಲೊಚನೆ ನೆಕ್ಕಿ ಥ್ಯಾಂಕ್ಸ್ ಹೇಳುವುದನ್ನು ಕಂಡು ಇವನಪ್ಪ ಅವನನ್ನು ಹಿಗ್ಗಾ ಮುಗ್ಗಾ ಥಳಿಸಿದ ಬಾಲ್ಯದ ಘಟನೆಯನ್ನೂ ಜಗದೇವಪ್ಪ ಮರೆತಿರಲಿಲ್ಲ.
ಜಗದೇವಪ್ಪ ಹುಬ್ಬಳ್ಳಿಗೆ ಬಂದ ಹೊಸತರಲ್ಲಿ ಶಾಲೆಯಿಂದ ಮನೆಗೆ ಬರುವಾಗ ಒಂದು ಬಿಡಾಡಿ ನಾಯಿಯನ್ನು ಚು..ಚು.. ಅಂತ ಕರದಿದ್ದೇ ಅದು ಅವನನ್ನು ನಿಯತ್ತಾಗಿ ಬಾಲ ಅಲ್ಲಾಡಿಸುತ್ತಾ ಮನೆಯವೆರೆಗೂ ಹಿಂಬಾಲಿಸಿತ್ತು. ಅದಕ್ಕೆಂದೇ ಪಾರ್ಲೆ ಬಿಸ್ಕಿಟ್ ಪ್ಯಾಕೇಟನ್ನು ಕೊಂಡು, ಒಂದೊಂದಾಗಿ ತೆಗೆದು ಅದರ ಮುಂದೆ ಹಾಕಿದ್ದ. ಹೆಂಡತಿ ರುಕ್ಮಿಣಿಗೂ ಪ್ರಾಣಿಗಳಂದರೆ ತುಂಬಾ ಪ್ರೀತಿ.. ಆದರೆ ಗಂಡನಷ್ಟಲ್ಲ. ಹಾಗೆ ಗಡಬಡಿಸಿ ಬಿಸ್ಕೆಟ್ ತಿಂದ ಆ ನಾಯಿ ಅಲ್ಲೇ ಠಿಕಾಣಿ ಹೂಡಿತ್ತು. ಮತ್ತೆ ಹೋಗದಿರಲಿ ಅಂತ ಅದಕ್ಕೆ ತುಸು ಬೆಲ್ಲವನ್ನೂ ತಂದು ಹಾಕಿದ್ದ. ಹೆಂಡತಿ ಒಂದು ಬಟ್ಟಲಲ್ಲಿ ನೀರಿಟ್ಟಳು. ಅದು ಚಪಕ್..ಚಪಕ್.. ಅಂತ ನೀರನ್ನು ಚಪ್ಪರಿಸಿ ಕುಡಿಯುವುದನ್ನು ನೋಡಿ 'ಪಾಪ ತುಂಬಾ ನೀರಡಿಕೆಯಾಗಿದೆ' ಅಂದಿದ್ದಳು. ಅದಕ್ಕೆ ಗುಲ್ಲೂ ಎಂದು ನಾಮಕರಣ ಮಾಡಿದರು. ಆ ದಿನದಿಂದ ಹಿಡಿದು ಗುಲ್ಲೂ ಅಲ್ಲೇ ಐದಾರು ವರ್ಷ ಕಳೆದ. ಆಮೇಲೆ ಅದೇನಾಯಿತೋ. ಇದ್ದಕ್ಕಿದ್ದಂಗೆ ನಾಪತ್ತೆಯಾಗಿದ್ದ. ಆಗ ಜಗದೇವಪ್ಪ ಇಡೀ ಕೇರಿ ತುಂಬಾ ತಿರುಗಾಡಿ ಕುರು..ಕುರು.. ಚು..ಚು. ಅಂತ ಮಕ್ಕಳಂತೆ ಅಲೆದಾಡಿ ಅದನ್ನು ಹುಡುಕಿದ್ದ. ಕಂಡಕಂಡವರಿಗೆಲ್ಲಾ 'ತುಸು ಕೆಂದು ಬಣ್ಣ, ಹಣೆ ಮೇಲೆ ಬಿಳಿ ಮಚ್ಚೆ ಇರೋ ನಾಯಿಯನ್ನ ಕಂಡೀರಾ...' ಅಂತ ಕೇಳುತ್ತಾ ತಿರುಗಿದ್ದ. ಪಕ್ಕದ ಮನೆ ಶ್ರೀನಿವಾಸರಾಯರು ಮತ್ತು ಅವರ ಹೆಂಡತಿ ಪದ್ದಕ್ಕ ವರಾಂಡಾದಲ್ಲಿ ಕುತ್ಗೊಂಡು 'ಇವನದೇನು ಮಹಾ ನಾಯಿ, ಕೇಳೂದ ನೋಡಿ' ಅಂತ ಹಂಗಿಸಿದ್ದಿತ್ತು. ಈ ಶ್ರೀನಿವಾಸರಾಯರು ಬ್ಯಾಂಕಲ್ಲಿದ್ದವರು. ಅವರಿಗೆ ಈ ನಾಯಿ, ಬೆಕ್ಕು ಅಂದರೆ ಒಂಥರಾ ಅಲರ್ಜಿ. ಹೆಂಡತಿಗಂತೂ ಅವುಗಳನ್ನ ಕಂಡರೆ ಸಾಕು, ಕೈಗೆ ಕಲ್ಲೆತ್ತಿಕೊಳ್ಳೋ ಗುಣ. ಸುಮ್ಮನೇ ತನ್ನ ಪಾಡಿಗೆ ತಾನು ಬೇರೆಯವರ ಮನೆ ಮುಂದೆ ಮಲಗಿರೋ ನಾಯಿಯನ್ನೂ ಅವಳು ಕಲ್ಲು ತಾಗಿಸದೇ ಬಿಡುತ್ತಿರಲಿಲ್ಲ. ಆಕಳು ಬಂದರೆ ಮಾತ್ರ ಅದರ ಹಣೆಗೆ ಕುಂಕುಮವಿಟ್ಟು ನಮೋ ನಮೋ ಎನ್ನುವ ಇವರ ಪ್ರಾಣಿ ಪ್ರೀತಿಯ ಬಗ್ಗೆ ಜಗದೇವಪ್ಪನಿಗೆ ಮರುಕವೆನಿಸುತ್ತಿತ್ತು.
ಗುಲ್ಲೂ ಹೋದ ಮೇಲೆ ಬೇಜಾರಾಗಿ ಜಗದೇವಪ್ಪ ಮತ್ಯಾವುದೇ ನಾಯಿಯನ್ನು ಮನೆಗೆ ತಂದಿರಲಿಲ್ಲ. ಆ ಕೇರಿಯ ಕಡೆಯ ಮನೆಯ ಶ್ರೀಕಾಂತ ಪವಾರ ಜಗದೇವಪ್ಪನ ಪ್ರಾಣಿ ಪ್ರೀತಿಯನ್ನ ಕಂಡು, ಒಂದು ಮುದ್ದಾದ ಬಿಳಿಯ ಬೆಕ್ಕನ್ನು ಕೊಟ್ಟಿರುವುದಿತ್ತು. ಜಗದೇವಪ್ಪನ ಪಾಲಿಗದು ಬಯಸದೇ ಬಂದ ಭಾಗ್ಯ. ಕಾರಣ ಮನೆಯೊಳಗೆ ಇಲಿಗಳು ಹೆಚ್ಚಾಗುತ್ತಿದ್ದವು. ಮನೆಯ ಹಿಂದಿರುವ ಹೊಟೇಲ್‌ನವರಿಗೆ 'ನಮ್ಮ ಮನೆಯ ಹಿಂಬದಿ ಮುಸುರೆ ಚೆಲ್ಲಬೇಡಿ' ಎಂದು ಹೇಳಿದರೂ ಅವರು ಕೇಳುತ್ತಿರಲಿಲ್ಲ. ಇಲಿಗಳ ಕಿರಿಕಿರಿ ಸಾಕುಸಾಕಾಗಿತ್ತು. ಆ ಬೆಕ್ಕು ಬಂದ ನಂತರ ಆ ಸಮಸ್ಯೆಗೆ ಒಂದು ಪರಿಹಾರ ಸಿಗಬಹುದು ಅಂತ ಜಗದೇವಪ್ಪ ದಂಪತಿ ನಿಟ್ಟುಸಿರು ಬಿಟ್ಟಿದ್ದರು. ಆ ಬೆಕ್ಕು ಬಿಳಿಬಿಳಿಯಾಗಿ ನೋಡಲಿಕ್ಕೆ ಕ್ಯೂಟ್ ಆಗಿತ್ತು. ಹೀಗಾಗಿ ರುಕ್ಮಿಣಿ, ಜಗದೇವಪ್ಪ ಮಗ ಸತೀಶ ಮೂವರೂ ಅದನ್ನು ಮುದ್ದಿಸುವವರೇ..
ಆ ಮುದ್ದಿನ ಸೊಕ್ಕು ಅತಿಯಾಗಿ ಆ ಬೆಕ್ಕು ಮಿಯಾಂವ್.. ಮಿಯಾಂವ್.. ಎಂದು ಹಾಯಾಗಿ ಮನೆಯ ಸದಸ್ಯರ ಮೈ ಸವರುತ್ತಿತ್ತೇ ಹೊರತು, ಹಾಲು ಹಾಕಿದರೂ ಕುಡಿಯುತ್ತಿರಲಿಲ್ಲ. ಹಾಗೆಂದು ತೆನಾಲಿರಾಮನ ಹಾಗೆ ಅವರು ಬಿಸಿ ಹಾಲನ್ನಂತೂ ಇಟ್ಟಿರಲಿಲ್ಲ. ಇಲಿ ಹಿಡಿಯಲೆಂದು ತಂದ ಆ ಬೆಕ್ಕು ದಿನಕಳೆದಂತೆ ಶುದ್ಧ ಸಸ್ಯಾಹಾರಿಯಾಗತೊಡಗಿದ್ದು ಗಂಡ, ಹೆಂಡತಿಗೆ ಅಚ್ಚರಿ ಮೂಡಿಸಿತ್ತು. ಆ ಬೆಕ್ಕು ಗಜ್ಜರಿ, ಸೌತೆಕಾಯಿ, ಟೊಮೆಟೊ ತಿನ್ನುತ್ತ ಬೆಳೆಯತೊಡಗಿತು. ಇಂಥಾ ಒಂದು ವೆಜಿಟೇರಿಯನ್ ಬೆಕ್ಕಿನ ವಾರ್ತೆ ಊರ ತುಂಬಾ ಹರಡತೊಡಗಿತು. ಟಿ.ವಿ.ಯವರು, ಪತ್ರಿಕೆಯವರು ಜಗದೇವಪ್ಪನ ಮನೆಗೆ ಬಂದು ಆ ಬೆಕ್ಕಿನ ಫೋಟೊ ಜತೆಗೆ ಆ ಮನೆಯವರ ಫೋಟೊ ತೆಗೆದು ಪ್ರಚಾರ ಕೊಟ್ಟರು. ಪ್ರತಿದಿನ ಜಗದೇವಪ್ಪನ ಮನೆಗೆ ಆ ಬೆಕ್ಕನ್ನು ನೊಡಲಿಕ್ಕೆ ಬರುವವರದೇ ಒಂದು ದೊಡ್ಡ ಕಿರಿಕಿರಿಯಾಯ್ತು. ಬಂದವರೆಲ್ಲಾ ಬರೀ ಬೆಕ್ಕನ್ನು ನೊಡಿ ಸುಮ್ಮನೇ ಹೋಗುತ್ತಾರೆಯೇ.. ಸಾಧ್ಯವಿಲ್ಲ. ಆ ಬೆಕ್ಕು ಸೌತೆಕಾಯಿ, ಟೊಮೆಟೊ ತಿನ್ನುವುದನ್ನು ನೋಡಿಯೇ ಹೋಗುವವರು. ಅದರ ಮೇಲೆ ಪ್ರಶ್ನೆ ಬೇರೆ. 'ಆಂಟಿ.. ಇದು ಸಸ್ಯಾಹಾರಿ ಆಗಲಿಕ್ಕೆ ಯಾರು ಕಾರಣ..?'
'ಬರೀ ಟೊಮೆಟೊ ಮಾತ್ರ ತಿನ್ನುತ್ತಾ..?' 'ಯಾವ ತರಕಾರಿ ಇಷ್ಟ..?' 'ಹಾಲು ಕುಡಿಯಲ್ಲವಾ..'
ಅಯ್ಯಯ್ಯಪ್ಪಾ.. ಆ ಪ್ರಶ್ನೆಗಳ ಸುರಿಮಳೆಗೆ ಹೆಂಡತಿ ರುಕ್ಮಿಣಿ ಉತ್ತರಿಸಿ ಹೈರಾಣಾಗಿ ಹೋಗುತ್ತಿದ್ದಳು. ಅನೇಕ ಬಾರಿ ಬೇಕಾದರೆ ಆ ಬೆಕ್ಕನ್ನ ತಗೊಂಡು ಹೋಗಿ ಎಂದು ತಮಾಷೆಗೆ ಹೇಳಿದ್ದೂ ಇತ್ತು.
ಅದೊಂದು ದಿನ ಜಗದೇವಪ್ಪ ಆ ಬೆಕ್ಕನ್ನು ಇಲಿಗಳು ಹೆಚ್ಚಾಗಿ ಓಡಾಡುವ ಕೋಣೆಯೊಳಗೆ ಹಾಕಿ, ಹೊರಗಿನ ಚಿಲಕ ಬಂದ್ ಮಾಡಿ ಮಲಗಿದ್ದ. ಮಧ್ಯರಾತ್ರಿ ಸಮಯ. ಬೆಕ್ಕು ಗುರ್..ಗುರ್.. ಎಂದು ಅರಚುತ್ತಿತ್ತು. ಜಗದೇವಪ್ಪ ಎದ್ದು ಲೈಟ್ ಹಾಕಿ ಹೆಂಡತಿಯನ್ನ ಎಬ್ಬಿಸಿದ. 'ನೋಡು, ಆ ಬೆಕ್ಕು ಒಂದೂ ಇಲಿ ಹಿಡದಿಲ್ಲ ಅಂತಿದ್ದಿವಲ್ಲ, ಹಿಡದು ತೋರಸ್ತು. ಬಾ ಇಲ್ಲಿ' ಎಂದು ಹಗೂರಕ ಕಿಡಕಿ ತಗದು ನೋಡಿದರೆ ಅದು ಗುರ್.. ಗುರ್.. ಅಂತ ಮಾಡಿದ್ದು ಇಲಿ ಹಿಡಕೊಂಡು ಅಲ್ಲ, ಬದಲಾಗಿ ಟೊಮೆಟೊ ಜತೆ ಆಟ ಆಡತಾ ಹಾಗೆ ಆವಾಜ್ ಮಾಡುತ್ತಿತ್ತು. ಅದರ ಕಣ್ಣಳತೆಯಲ್ಲಿಯೇ ಇಲಿಯೊಂದು ಈ ಬೆಕ್ಕಿನ ಮುಖವನ್ನು ನೋಡುತ್ತಲೇ ಕಣ್ಣು ಮಿಟುಕಿಸುತ್ತಾ ಟೊಮೆಟೊ ಮೆಲ್ಲುತ್ತಿತ್ತು. ಮುಂದೆ ಕೆಲ ತಿಂಗಳುಗಳ ಬಳಿಕ ಆ ಬೆಕ್ಕೂ ಇದ್ದಕ್ಕಿದ್ದಂಗೆ ಮಾಯವಾಗಿತ್ತು.
ಬಿಡುವಿರುವಾಗಲೆಲ್ಲಾ ಜಗದೇವಪ್ಪ ಅತ್ಯಂತ ಆಸಕ್ತಿಯಿಂದ ಎನಿಮಲ್ ಪ್ಲಾನೆಟ್ ಚಾನೆಲ್ ನೋಡುತ್ತಿದ್ದ. ಹೆಂಡತಿಗೂ ಇಷ್ಟವೇ. ಆದರೆ ಮೂರ್ನಾಲ್ಕು ವರ್ಷದಿಂದ ನಿರಂತರವಾಗಿ ನೋಡುತ್ತಿದ್ದ ತನ್ನ ಮೆಚ್ಚಿನ ಧಾರವಾಹಿ ತಪ್ಪಿದಾಗ ಮಾತ್ರ ಅವಳ ಮುಖ ಗಂಟಾಗುತ್ತಿತ್ತು. ಅನೇಕ ಬಾರಿ ಈ ಪ್ರಾಣಿಗಳು ಮನುಷ್ಯನ ಸಂಪರ್ಕಕ್ಕೆ ಬಂದದ್ದಾದರೂ ಹೇಗೆ.. ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ಜಗದೇವಪ್ಪ ಯೋಚಿಸುತ್ತಿದ್ದ. ವರ್ಷದಿಂದ ವರ್ಷಕ್ಕೆ ಕಾಡು ನಾಶವಾಗುತ್ತಿದೆ, ವನ್ಯಜೀವಿಗಳು ಮನುಷ್ಯ ನಿರ್ಮಿಸಿಕೊಂಡ ಕಾಂಕ್ರೀಟ್ ಕಾಡಿನತ್ತ ನುಗ್ಗುತ್ತಿವೆ ಎಂದೆಲ್ಲಾ ಯೋಚಿಸುವಾಗಲೇ ತಾನು ವಾಕಿಂಗ್‌ಗೆ ತೆರಳುವಾಗ ರಸ್ತೆಯ ಬದಿಯಿದ್ದ ಮಾವಿನತೋಟ ತಕ್ಷಣ ನೆನಪಾಯಿತು. ಎರಡ್ಮೂರು ಎಕರೆಯಷ್ಟಿರುವ ಮಾವಿನತೋಟ ಅಲ್ಲಿತ್ತು ಅಂತ ಈಗ ಯಾರಿಗೂ ಹೇಳಲಾಗುವದಿಲ್ಲ. ಬರೀ ಒಂದೇ ವಾರದೊಳಗೆ ಬುಲ್ಡೋಜರ್ ಹಚ್ಚಿ ಅಲ್ಲಿ ಸೈಟ್ ಮಾಡಿಯಾಗಿದೆ. ಆ ಜಾಗೆಯಲ್ಲಿ ರಾತ್ರೋರಾತ್ರಿ ಸ್ಟಾರ್‌ಸಿಟಿ ಡೆವಲಪರ್ಸ್ ಅನ್ನೋ ಬೋರ್ಡೂ ಬಿದ್ದಾಗಿತ್ತು.
=
ಆ ದಿನ ಜಗದೇವಪ್ಪ ಗಣೇಶಪೇಟೆಯಲ್ಲಿರುವ ಮೀನು ಮಾರುಕಟ್ಟೆಗೆ ತೆರಳಿದ್ದ. ರಸ್ತೆಯ ಎರಡೂ ಬದಿಯಲ್ಲಿ ಒಂದು ಬಗೆಯ ಯುನಿಫಾರ್ಮ್ ಹಾಕಿಕೊಂಡು ಕಬಡ್ಡಿ ಆಡುವವರ ಹಾಗೆ ಒಂದಷ್ಟು ಜನ ಎದುರು ಬದುರಾಗಿ ನಿಂತಿದ್ದರು. ಅಲ್ಲಿ ಹಾದು ಹೋಗುವ ಒಬ್ಬರನ್ನು 'ಇದೆಲ್ಲಾ ಏನು..' ಅಂತ ಕೇಳಿದ್ದೇ ಅವನು ಅತ್ಯಂತ ಉದಾಸೀನದಿಂದ 'ಅದೇನೋ ಬಿಡಾಡಿ ನಾಯಿಗಳನ್ನ ಹಿಡಿತಾರಂತ. ಅವರೆಲ್ಲಾ ಪೂನಾದಿಂದ ಬಂದವರು' ಅಂದಾಗ ಅಲ್ಲಿ ತಮ್ಮ ಪಾಡಿಗೆ ತಾವು ಮಲಗಿರೋ ನಾಯಿಗಳನ್ನು ಕಂಡು ಜಗದೇವಪ್ಪನಿಗೆ ಕನಿಕರ ಬಂದು, ಅದರ ಕಾರ್ಯಾಚರಣೆ ಉಸ್ತುವಾರಿಯನ್ನು ಹೊತ್ತಿರುವ ನೌಕರನೊಬ್ಬನ ಬಳಿ ಹೋಗಿ, 'ಎಲ್ಲೋ ಯಾವದೋ ಒಂದು ನಗರದಲ್ಲಿ, ಯಾವದೋ ಒಬ್ಬನಿಗೆ ನಾಯಿ ಕಡೀತು ಅನ್ನೋ ಕಾರಣಕ್ಕೆ ಇಡೀ ರಾಜ್ಯದಲ್ಲಿರುವ ಎಲ್ಲ ನಾಯಿಗಳನ್ನು ಸಾಯಿಸುವದು ನ್ಯಾಯವೇ..' ಅಂದಾಗ ಆ ಮನುಷ್ಯ ತುಸು ಸಿಟ್ಟಿನಿಂದಲೇ 'ಅವನ್ನೆಲ್ಲಾ ನಿಮ್ಮ ಮನೆಗೆ ತಗೊಂಡು ಹೋಗಿಬಿಡ್ರಿ' ಅಂದದ್ದೇ ಜಗದೇವಪ್ಪ ಮರು ಮಾತಾಡಲಿಲ್ಲ. ನಾಯಿಗಳನ್ನ ಸಾಯಿಸುವುದು, ಅವುಗಳ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡೋದು ಇವೆಲ್ಲವೂ ಮನುಷ್ಯನ ಕ್ರೌರ್ಯದ ಮುಖಗಳಾಗಿ ಕಂಡಿದ್ದಿತ್ತು.
ಜಗದೇವಪ್ಪನಿಗೆ ನಾಯಿಗಳ ಬಗ್ಗೆ ಅಗಾಧವಾದ ಪ್ರೀತಿ. ನಾಯಿಗಳ ಬಗ್ಗೆ ಅವನು ಮಾತಾಡದೇ ಇರೋ ದಿನಗಳೇ ಇರತಿರಲಿಲ್ಲ. ನಾಯಿಗಳಲ್ಲೂ ಹೆಣ್ಣು ನಾಯಿಗಳ ಬಗ್ಗೆ ಒಂಥರಾ ತಾತ್ಸಾರ. ಸಾಕುವವರೆಲ್ಲಾ ಬಹುತೇಕವಾಗಿ ಗಂಡು ಕುನ್ನಿಗಳನ್ನೇ. ಹಾಗಿದ್ದರೆ ನಾಯಿ ಪಾಡು ಅನ್ನೋ ಮಾತು ಹೆಣ್ಣು ಕುನ್ನಿಗೆ ಸಂಬಂಧಿಸಿದ್ದೇ ಇರಬೇಕು. ಹೀಗೆ ಒಂದು ಬಾರಿ ರಾತ್ರಿ ಊಟ ಆದ ಮೇಲೆ ಬಾಳೆಹಣ್ಣು ತಿನ್ನುತ್ತಾ, ಈ ನಾಯಿಗಳ ಲಿಂಗ ಪ್ರಮಾಣವನ್ನ ಕುರಿತು ಹೆಂಡತಿಯ ಜತೆಗೆ ಮಾತಾಡುತ್ತಿದ್ದ. ಹೆಂಡತಿಗೆ ತನ್ನ ಗಂಡನ ಪ್ರಾಣಿ ಪ್ರೀತಿಯ ಬಗ್ಗೆ ಗೌರವವಿತ್ತು. ಹಾಗಾಗಿಯೇ ಅವನು ಹೇಳುವುದನ್ನೆಲ್ಲಾ ಚಿತ್ತಗೊಟ್ಟು ಕೇಳುತ್ತಿದ್ದಳು. ಮಕ್ಕಳಿಗೆ ಆ ತಾಳ್ಮೆ ಇರಲಿಲ್ಲ. ಒಂದೊಂದು ಕೇರಿಯೊಳಗ ಒಂದೇ ಹೆಣ್ಣು ನಾಯಿ, ಹತ್ತು ಗಂಡು ನಾಯಿ. ಆ ಹತ್ತೂ ಗಂಡು ನಾಯಿಗಳು ತಮ್ಮ ಸಹಜಪ್ರವೃತ್ತಿಯಾದ ಲೈಂಗಿಕ ಬಯಕೆಯನ್ನ ಅದು ಹೇಗೆ ಈಡೇರಿಸಿಕೊಳ್ಳಬೇಕು.. ಅನ್ನೋ ಪ್ರಶ್ನೆ ಇಟ್ಟಿದ್ದೇ ಅವನ ಹೆಂಡತಿ 'ಸಾಕು ಸಾಕು. ಮಲಗ ಬನ್ನಿ' ಅಂತ ಎಬ್ಬಿಸಿದ್ದಳು.
ಬೆಳಗ್ಗೆ ಚಾ ಕುಡಿಯುವ ವೇಳೆಯಲ್ಲಿ ಮಗ ಸತೀಶ 'ಅಪ್ಪಾ ನಿನಗೆ ಈ ಪ್ರಾಣಿ..ಪಕ್ಷಿ ಅಂದರೆ ಅಷ್ಟೆಲ್ಲಾ ಯಾಕೆ..' ಅಂದಾಗ, 'ಅವುಗಳ ನೋಟ, ವರ್ತನೆಗಳಲ್ಲಿ ವ್ಯವಹಾರಿಕತೆ ಇರೋದಿಲ್ಲ. ಈ ಪ್ರಾಣಿ, ಪಕ್ಷಿಗಳ ಬಗೆಗಿನ ಪ್ರೀತಿ ನಿನ್ನೆ ಮೊನ್ನೆಯದಲ್ಲ, ನಾನಿನ್ನೂ ಆಗ ಪ್ರಾಥಮಿಕ ಶಾಲೆಯಲ್ಲಿದ್ದೆ. ಆವಾಗಿನಿಂದಲೂ ಐತಿ. ನಮ್ಮ ಮನಿಯೊಳಗ ಮೋತಿ ಅನ್ನೋ ನಾಯಿ ಇತ್ತು. ಅದು ಭಾಳ ಜಾಣ. ಸಾಯುವಾಗಲೂ ನಮ್ಮ ಮನೆಯ ಹೊಸ್ತಿಲ ಮೇಲೆ ತಲೆ ಇಟ್ಟು ಸತ್ತ ನಾಯಿ' ಅಂತ ಅದನ್ನ ನೆನೆದು ನಿಟ್ಟುಸಿರುಬಿಟ್ಟಿದ್ದ. ಜಗದೇವಪ್ಪ ಪ್ರಾಣಿ-ಪಕ್ಷಿಗಳ ಮಾತು ಎತ್ತಿದರೆ ಸಾಕು ಹೀಗೆ ತೀರಾ ಎಮೋಶನಲ್ ಆಗುತ್ತಿದ್ದ.
ಚಹಾ ಕುಡಿಯುವ ವೇಳೆ ಪಕ್ಕದ ಮನೆಯಲ್ಲಿ ಏನೋ ಗದ್ದಲವಾದಂತೆ ಕೇಳಿಸಿತು. ಬಾಜೂ ಮನೆಯ ಶ್ರೀನಿವಾಸರಾಯರ ಮೊಮ್ಮಗ ನವೀನ ಓಡಿ ಬಂದು, 'ಸರ್, ನಮ್ಮ ಮನ್ಯಾಗ ಮುಂಗುಸಿ ಬಂದೈತಿ, ಅಜ್ಜಿ ನಿಮ್ಮನ್ನ ಕರಕೊಂಡು ಬರಲಿಕ್ಕೆ ಹೇಳ್ಯಾರ' ಅಂದ. ಆ ನವೀನ ಪದ್ದಕ್ಕಳ ಮಗಳ ಮಗ. ಬೆಂಗಳೂರಲ್ಲಿ ನೌಕರಿ ಮಾಡೊ ಪದ್ದಕ್ಕನ ಮಗಳು, ಅಳಿಯ ಇದ್ದೊಬ್ಬ ಮಗನ್ನ ಇಲ್ಲೇ ಓದಲಿಕ್ಕೆ ಬಿಟ್ಟಿರುವುದಿತ್ತು. 'ನನ್ನನ್ಯಾಕೆ ನಿಮ್ಮಜ್ಜಿ ಕರೀತಾಳೊ.. ನಾನೇನು ಮುಂಗಸಿ ಹಿಡಿಯವನಾ..' ಅನ್ಕೊಂತೇ ಇವನು ಹಗೂರಕ ನಡದಿದ್ದ. ಹೆಂಡತಿ ರುಕ್ಮಿಣಿ 'ಅವೆರಡಕ್ಕೂ ಮೊದಲೇ ಪ್ರಾಣಿ ಪಕ್ಷಿ ಅಂದರ ಆಗೂದಿಲ್ಲ. ಹೋಗಿ ಹೋಗಿ ಆ ಮುಂಗಸಿಗಿ ಅವರ ಮನ್ಯಾಗ ಹೋಗೂ ಹರಕತ್ತು ಏನು ಬಂತೋ ಯಾರಿಗ್ಗೊತ್ತ...ನೀವು ಮತ್ತ ಹಾವಮುಂಗಸಿ ಕತಿ ಹೇಳಕೊಂತ ಕೂಡಬ್ಯಾಡ್ರಿ' ಎಂದಳು. 'ಐದು ನಿಮಿಷದೊಳಗ ಬರ್ತೆನೆ' ಅಂದವನೇ ಹೊರಟ. ಅಲ್ಲಿಯವರೆಗೆ ಅದು ಶ್ರೀನಿವಾಸರಾಯರ ಮನೆತುಂಬಾ ಓಡಾಡಿ ಆಗಷ್ಟೇ ಬಾಂಬೆ ಡೈಯಿಂಗ್ ರಗ್ಗಲ್ಲಿ ಹೋಗಿ ಬೆಚ್ಚಗೆ ಕುಳಿತಿತ್ತು. ಜಗದೇವಪ್ಪ 'ಮನಿಯೊಳಗ ಮುಂಗುಸಿ ಬಂದೈತಿ ಅಂದ್ರ ದೊಡ್ಡ ಚಾನ್ಸ್ ಐತಿ' ಎನ್ನುತ್ತಿರುವಂತೆ, ಅಲ್ಲಿಂದ ಅದು ಟಣ್ಣನೇ ಜಿಗಿದು ಓಡಿಹೋಯಿತು. 'ಅದೇನೂ ಮಾಡೂದಿಲ್ಲ. ಹೆದರಿ ಓಡಿಹೋಯ್ತು' ಅನ್ನುತ್ತಾ ಬಂದ. ಶ್ರೀನಿವಾಸರಾಯರು, ಪದ್ದಕ್ಕ ದೊಡ್ಡ ಭಾರ ಇಳಿದಂಗ ದೀರ್ಘವಾಗಿ ನಿಟ್ಟುಸಿರು ಬಿಟ್ಟಿದ್ದರು.
ಜಗದೇವಪ್ಪ ನಿತ್ಯ ಸಂಜೆ ವಾಕಿಂಗ್ ಹೋಗೋವಾಗ ಮನೆಯಲ್ಲಿ ಚಾ ಕುಡಿದರೂ ಸೀದಾ ಸರ್ಕಲ್‌ಗೆ ಹೋಗಿ ಅರ್ಧ ಚಾ ಒಂದು ಬನ್ ತಗೊಂಡು, ಅರ್ಧ ಬನ್ ಅಲ್ಲಿರೋ ನಾಯಿಗೆ ಹಾಕಿ, ಅದು ತಿನ್ನೋವರೆಗೂ ಅದನ್ನ ನೋಡತಾ ನಿಂತು ಖುಷಿಪಡತಿದ್ದ. ನಾಯಿ ಹಾಗೆ ಅರ್ಧ ಬನ್ ತಿಂದು ಮುಗಿಸಿದ ಮೇಲೆ ಇವನು ಮುಂದೆ ಹೆಜ್ಜೆ ಹಾಕುತ್ತಿದ್ದ. ಆ ರೋಡಲ್ಲಿ ಇದ್ದರವರೆಲ್ಲ ಇವನಂಗೇ ಬೇರೆಬೇರೆ ಇಲಾಖೆಯಲ್ಲಿದ್ದು ನಿವೃತ್ತರಾದವರೇ... ಎಲ್ಲರೂ ತಮ್ಮ ಕಾಲದಲ್ಲಿ ಹೀಂಗಿರಲಿಲ್ಲ ಅಂತ ಮಾತಾಡುವವರೇ. ಎಲ್ಲರ ಬಾಯಲ್ಲೂ ಸಂಸಾರ ತಾಪತ್ರಯಗಳು. ಮಗನ ಉದ್ಯೋಗ, ಸೊಸೆಯ ಕಿರಕಿರಿ, ಮದುವೆಯಾದ ಎರಡೇ ವರ್ಷದಲ್ಲಿ ಡೈವೋರ್ಸ್, ಎರಡನೇ ಸಂಬಂಧ, ಹೆಚ್ಚುತ್ತಿರುವ ಸೈಟ್ ರೇಟುಗಳು, ಟಿ.ವಿ ಧಾರವಾಹಿಗಳು ಇವುಗಳನ್ನೇ ವಾಕಿಂಗ್ ಮುಗಿಯುವವರೆಗೂ ಮೆಲುಕು ಹಾಕುತ್ತಿದ್ದರು. ಒಬ್ಬ ಹಿರಿಯನಂತೂ ತನ್ನನ್ನು ಮಗ ಸೊಸೆ ಮನೆಯಿಂದಲೇ ಹೊರಹಾಕಿದ್ದನ್ನ ಧಾರವಾಹಿ ಕತೆ ಥರಾ ಜಗ್ಗಿಜಗ್ಗಿ ಹೇಳುತ್ತಿದ್ದ. ಅವನೀಗ ಒಂದು ಖಾಸಗಿ ವೃದ್ಧಾಶ್ರಮದಲ್ಲಿರುತ್ತಿದ್ದ. ಕಣ್ಣು ಮುಚ್ಚಿದ್ದರೂ ನಡೆಯುತ್ತದೆ, ಕಿವಿ ತೆರೆದಿರಬೇಕು ಎನ್ನುವ ಜಗದೇವಪ್ಪ ಹೀಗೆ ವಾಕಿಂಗ್ ಮಾಡುವಾಗಲೇ ಅದೆಷ್ಟೋ ವಿಷಯಗಳನ್ನ ಕೇಳಿ ತಿಳಿದಿದ್ದ.
ಬುದ್ದಿಜೀವಿ ಮನುಷ್ಯನ ಸಹವಾಸಕ್ಕಿಂತಲೂ ಪ್ರಾಣಿಗಳು ಅದೆಷ್ಟೋ ಮಿಗಿಲು ಎನ್ನುವ ಜಗದೇವಪ್ಪ, ದೂರದಲ್ಲಿ ಏನನ್ನೋ ಮೂಸುತ್ತಿದ್ದ ನಾಯಿಯೊಂದನ್ನು ಚು..ಚು.. ಎಂದು ಕರೆದ. ಅದು ನೋಡಲು ತುಂಬಾ ಚೆನ್ನಾಗಿತ್ತು. ಯಾರೋ ಸಾಕಿದ್ದಿರಬಹುದು ಎಂದುಕೊಂಡ. ಅವನು ಹಾಗೆ ಕರೆದಿದ್ದೇ ತಡ, ಆ ನಾಯಿ ಅವನೆಡೆಗೆ ಬಾಲ ಅಲ್ಲಾಡಿಸುತ್ತಾ ನೆಗೆಯುತ್ತಾ ಓಡಿ ಬಂತು. ಅದು ಓಡಿ ಬರುವ ರೀತಿ ಕಂಡು ಅವನಿಗೆ ಹೆದರಿಕೆಯೂ ಆಗಿತ್ತು. ಕಚ್ಚುವ ಸಾಧ್ಯತೆಗಳನ್ನು ಪೂರ್ಣವಾಗಿ ಮರೆಯುವುದಾದರೂ ಹೇಗೆ? ಅದು ಅವನನ್ನೇ ಹಿಂಬಾಲಿಸಿತು. ಅಲ್ಲಲ್ಲಿ ಮೂತ್ರಿ ಮಾಡುತ್ತಾ ಅವನನ್ನು ಮನೆಯವರೆಗೂ ಹಿಂಬಾಲಿಸುತ್ತಾ ಬಂತು. ಜಗದೇವಪ್ಪನಿಗೆ ತುಂಬಾ ಖುಷಿಯಾಯ್ತು. 'ಉಳಿದರೆ ಉಳೀಲಿ ನಾಯಿ ಚಲೋ ಐತಿ' ಅಂತ ಹೆಂಡತಿಯ ಕಡೆಯಿಂದ ಮಾತು ಬಂದದ್ದೇ ಒಂದೆರಡು ಚಪಾತಿ ಹಾಕಿದ. ಅದು ಖುಷಿಯಿಂದ ತಿಂದು ಅಲ್ಲಿಯೇ ಹೊಸ್ತಿಲ ಹೊರಗೆ ಕುಳಿತಿತ್ತು. ದೂರದಿಂದಲೇ ಇದನ್ನು ಗಮನಿಸುತ್ತಿದ್ದ ಪಕ್ಕದ ಮನೆ ಪದ್ದಕ್ಕ 'ಅಲ್ನೋಡಿ ಮತ್ತೊಂದು ಅರಿಷ್ಟ. ಲಕ್ಷ್ಮಿ ಬರೋ ವ್ಯಾಳೆದೊಳಗ ಹ್ಯಾಂಗ ಬಾಗಿಲದೊಳಗ ಸಾಡೆಸಾತಿನ ಕುಂದರಸಿಕೊಂಡಾರ' ಅಂತ ಗಂಡಗ ಹೇಳತಿದ್ದಳು. ಗುಲ್ಲೂ ಅನ್ನೋ ನಾಯಿ ನೆನಪಲ್ಲಿ ಅದಕ್ಕೂ ಗುಲ್ಲೂ ಅಂತಲೇ ಕರೀಲಿಕ್ಕ ಶುರುಮಾಡಿದರು. ಆ ನಾಯಿ ನಿಯತ್ತಾಗಿ ಅಲ್ಲೇ ಉಳಿದುಬಿಟ್ಟತು. ಹಗಲು ಗಡದ್ದಾಗಿ ನಿದ್ದೆ ಹೊಡದು, ರಾತ್ರಿಯಿಡೀ ಬೊಗಳುತ್ತಾ ಮನೆ ಸುತ್ತಲೂ ಗಸ್ತು ತಿರಗೋ ಈ ನಾಯಿ ಗುಣ ಜಗದೇವಪ್ಪಗೆ ಇಷ್ಟವಾಗಿತ್ತು. ಅದು ಮತ್ತೆಮತ್ತೆ ಶ್ರೀನಿವಾಸರಾಯರ ಗೇಟ್ ಬಳಿಯ ಗೋಡೆಯ ಮೇಲೆ ಮೂತ್ರಿ ಮಾಡುತ್ತಿತ್ತು. ಇದನ್ನು ಕಂಡದ್ದೇ ಪದ್ದಕ್ಕ, 'ನಾಯಿ ಸಾಕ್ತಾರೆ. ಕಟ್ಟಿ ಇಟಕೋಬೇಕು ಅಂತ ಗೊತ್ತಾಗಲ್ಲ. ಬ್ಯಾರೆಯವರ ಮನಿ ಮುಂದ ಉಚ್ಚಿ ಸಂಡಾಸ್ ಮಾಡಿದರೂ ಅವರಿಗೆ ಖಬರಿಲ್ಲ' ಅಂತ ಜೋರಾಗಿ ರುಕ್ಮಿಣಿಗೆ ಕೇಳೂವಂಗ ಹಿಂದಿನ ಮನಿ ಶಾರಕ್ಕನ ಮುಂದ ಹೇಳತಿದ್ದಳು. ಮೊದಲೇ ಅದು ಪ್ರಾಣಿದ್ವೇಷಿ, ಅದರ ಬಾಯಿಗೆ ಏನು ಹತ್ತೂದು ಅಂತ ರುಕ್ಮಿಣಿ ಸುಮ್ಮನಾಗಿದ್ದಳು.
ಅವತ್ತೊಂದಿನ ರುಕ್ಮಿಣಿ ಚಿಕ್ಕಮ್ಮಗ ಆರಾಮ ಇರಲಿಲ್ಲ ಅಂತ ಮಾತಾಡಿಸಿ ಬರಲಿಕ್ಕ ಊರಿಗೆ ಹೋಗಿ ಬರೂದರೊಳಗ ಗುಲ್ಯಾ ನಾಪತ್ತೆಯಾಗಿತ್ತು. ಗಂಡ-ಹೆಂಡತಿಗೆ ಶಾಕ್ ಆಯ್ತು. ಇವರನ್ನ ಕಂಡದ್ದೇ ಓಡಿ ಬಂದು ಮ್ಯಾಲ ಜಿಗಿಯೋ ಗುಲ್ಯಾ ಕಾಣೆಯಾಗಿತ್ತು. ಜಗದೇವಪ್ಪ ಪಕ್ಕದ ಮನಿ ಶ್ರೀನಿವಾಸರಾಯರನ್ನ ಕೂಗಿ 'ಸಾರ್‌ನಮ್ಮ ನಾಯಿ..' ಅಂತಾ ಇದ್ದಂಗೆ ಅವನ ಮೊಮ್ಮಗ ಓಡಿ ಬಂದು 'ಹಿಡಕೊಂಡು ಹೋದರು' ಅಂದ. ಶ್ರೀನಿವಾಸರಾಯರು ಕಣ್ಣು ಚಿವುಟುವದರೊಳಗ ಹುಡುಗನ ಬಾಯಿಂದ ಆ ಮಾತು ಜಾರಿತ್ತು. ಶ್ರೀನಿವಾಸರಾಯರಿಗೆ ಏನು ಮಾತಾಡೂದು ಅಂತ ಗೊತ್ತಾಗದೇ 'ಅದ್ಯಾರೋ ನಾಯಿ ಹಿಡಿಯುವವರಂತೆ. ಬೆಳಗ್ಗೆ ಹಿಡಕೊಂಡು ಹೋದರು'. ನವೀನ ತುಸು ಮುಂದೆ ಬಂದು, 'ಅವರಿಗೆ ಹಿಡಕೊಂಡು ಹೋಗಲಿಕ್ಕೆ ಅಜ್ಜಾನೇ ದುಡ್ಡು ಕೊಟ್ಟಿದ್ದು' ಅಂದಾಗ ಪದ್ದಕ್ಕ ನವೀನನ ತಲೆಗೆ ಒಂದೇಟು ಹಾಕಿ, 'ಹುಡುಗಗ ಗೊತ್ತಿಲ್ಲ. ಮಳ್ಳ ಮಳ್ಳ ಹೇಳ್ತಾನೆ. ಏನು ಮಾಡೂದು ನೀವು ಹೋದ ಮ್ಯಾಲ ಅದು ಒದರೂದು ಕೇಳಲಾರದಕ್ಕ ಅಕ್ಕಪಕ್ಕದ ಮನಿಯವರು ಕಾರ್ಪೊರೇಶನ್‌ಗೆ ಕಂಪ್ಲೇಂಟ್ ಕೊಟ್ಟಿರಬೇಕು'. ನವೀನ ಅಜ್ಜಿ ಕೈಯಿಂದ ಕೊಸರಿಕೊಂಡು 'ಅಜ್ಜಿ ಸುಳ್ಳ ಹೇಳತೈತಿ, ನಿಮ್ಮ ಬೆಕ್ಕನ್ನೂ..' ಅಂತಾ ಇದ್ದಂಗೆ ಪದ್ದಕ್ಕ ಮೊಮ್ಮಗನನ್ನ ದರದರ ಒಳಗೆ ಎಳೆದೊಯ್ದಳು. ಅಷ್ಟರೊಳಗ ಜಗದೇವಪ್ಪಗೆ ಎಲ್ಲಾ ವಿಷಯ ಗೊತ್ತಾಗಿತ್ತು. ತಾವು ಊರಲ್ಲಿ ಇಲ್ಲದಿರುವಾಗಲೇ ಮೊದಲಿನ ನಾಯಿ, ಬೆಕ್ಕು ನಾಪತ್ತೆಯಾಗಿದ್ದು ನೆನಪಾಗಿ ಇವರ ನೀಚತನದ ಬಗ್ಗೆ ಕಸಿವಿಸಿಯಾಗಿತ್ತು. ಇಂಥಾ ಜನ ಪಕ್ಕದಲ್ಲಿದ್ದದ್ದನ್ನು ಮರೆತು ನಾಯಿ, ಬೆಕ್ಕು ಸಾಕುವ ಪ್ರಯತ್ನ ಮಾಡಿದ್ದು ತನ್ನ ತಪ್ಪು ಎಂದು ಸುಮ್ಮನಾಗಿದ್ದ.
=
ಬೆಳಗಾಗುತ್ತಿದ್ದಂತೆ ಶ್ರೀನಿವಾಸರಾಯರ ಮನೆ ಮುಂದೆ ಪೋಲಿಸ್ ಜೀಪೊಂದು ಭರ್ರನೇ ಧಾವಿಸಿ ಬಂತು. ಓಣಿಯ ಜನರೆಲ್ಲಾ ಏನಾಯ್ತು ಎಂದು ಧಾವಿಸಿ ಬಂದರು. ಪೋಲಿಸ್ ಅಧಿಕಾರಿ 'ಈ ಕಳ್ಳತನ ಎಷ್ಟು ಹೊತ್ತಿಗೆ ನಡೀತು' ಅಂತ ಶ್ರೀನಿವಾಸರಾಯರನ್ನ ವಿಚಾರಿಸುತ್ತಿದ್ದರು. 'ಕಳ್ಳರು ಮುಖವಾಡ ಧರಿಸಿದ್ದರು. ಅದರಲ್ಲೊಬ್ಬ ಹಿಂದಿಯಲ್ಲಿ ಏಯ್ ಕುತಿಯಾ, ಪಿಚಲಿ ಬಾರ್ ಒ ಕುತ್ತೆ ತುಜೆ ಬಚಾಯಿತಿ. ಇಸ್ ಬಾರ್ ನಯಿ ಖೊಲ್ ದರವಾಜಾ' ಅಂತ ತನಗೆ ಚಾಕೂ ತೋರಿಸದ ಅನ್ನಾಕಹತ್ತಿದ್ದರು. ಪದ್ದಕ್ಕ ಕದ್ದಕೊಂಡು ಹೋದ ಬಂಗಾರ ನೆನದು ಅಳುತಿದ್ದಳು. ಪೋಲಿಸ್ ಅಧಿಕಾರಿ 'ಆ ನಾಯಿ ಏನಾಯ್ತು' ಅಂತ ಕೇಳಿದ್ದಕ್ಕೆ ಪದ್ದಕ್ಕ 'ಅದು ನಮ್ಮದಾಗಿರಲಿಲ್ಲ, ಪಕ್ಕದ ಮನೆಯವರದು' ಅನ್ನುತ್ತಿದ್ದಂತೆ ಇನ್ಸ್‌ಪೆಕ್ಟರ್, 'ಇರಲಿ ಅದಕ್ಕೇನಾಯ್ತು' ಅಂದಾಗ ಅವಳ ಬಳಿ ಉತ್ತರವಿರಲಿಲ್ಲ. ಇಬ್ಬರೂ ನೆಲ ನೋಡುತ್ತಾ ನಿಂತಿದ್ದರು. ಜೀಪಿನಿಂದ ಜಿಗಿದು ಓಡಿ ಬಂದ ಪೋಲಿಸ್ ನಾಯಿ ಮನೆಯನ್ನೆಲ್ಲಾ ಮೂಸುತ್ತಿತ್ತು. ಅದು ಒಂದು ಬಾರಿ ಶ್ರೀನಿವಾಸರಾಯರ ಮತ್ತು ಪದ್ದಕ್ಕಳ ಮುಖವನ್ನು ದಿಟ್ಟಿಸಿ ನೋಡಿದ್ದೇ ಬೊಗಳುತ್ತಾ ಮನೆಯ ಹಿಂಬದಿ ಓಡಿ ಹೋಯಿತು. ಕಳ್ಳರು ಮುಖವಾಡಗಳನ್ನು ಅಲ್ಲೇ ಹಿತ್ತಲಲ್ಲಿ ಬಿಸಾಕಿ ಜಿಗಿದಿದ್ದರು. ನಾಯಿ ಆ ಮುಖವಾಡಗಳ ಎದುರು ನಿಂತು ಬೊಗಳುತ್ತಲೇ ಇತ್ತು.
- ಡಾ ಎಸ್.ಬಿ. ಜೋಗುರ
jogursb@yahoo.in