ಸಾಪ್ತಾಹಿಕಪ್ರಭ

ಸೀದಾಸಾದಾ ಜೋಕು!

ಅಂದು ಮುಂಬೈನಲ್ಲಿ ಉಸ್ತಾದ್ ಅಲ್ಲಾದಿಯಾ ಖಾನ್ ಸಂಗೀತ ಮಹೋತ್ಸವ. ಅಲ್ಲಿ ಪಂ. ವಿನಾಯಕ ತೊರವಿಯವರ ಗಾಯನ ಕಾರ್ಯಕ್ರಮವಿತ್ತು. ಗ್ರೀನ್‌ರೂಂನಲ್ಲಿ ಪಂಡಿತ್‌ಜಿ ಹಾಗೂ ಸಹಕಲಾವಿದರೆಲ್ಲ ಸೇರಿ ರಿಯಾಝ್ ಮಾಡಿ, ವಾದ್ಯಗಳನ್ನೆಲ್ಲ ಶ್ರುತಿಪಡಿಸಿಕೊಂಡು ಹೀಗೇ ಸಂಗೀತದ ವಿಚಾರಗಳನ್ನು ಮಾತಾಡುತ್ತ ಕುಳಿತಿದ್ದರು. ಇನ್ನೇನು ಕಾರ್ಯಕ್ರಮ ಪ್ರಾರಂಭವಾಗಬೇಕು ಅಷ್ಟರಲ್ಲಿ ನಿರೂಪಕಿಯು ಪಂಡಿತ್‌ಜಿ ಬಳಿ ಬಂದು ಅವರಿಗೆ ವಂದಿಸಿ ಕೇಳಿದಳು, 'ಪಂಡಿತ್‌ಜಿ, ನೀವು ಇವತ್ತು ಯಾವ ರಾಗ ಹಾಡುತ್ತೀರಿ ಎಂದು ತಿಳಿಸಿದರೆ ನಾನು ಅದನ್ನು ನನ್ನ ನಿರೂಪಣೆಯಲ್ಲಿ ಹೇಳುತ್ತೇನೆ' ಎಂದಾಗ 'ನಾನು ರಾಗ ಯಮನ್ ಹಾಡಲಿದ್ದೇನೆ' ಎಂದು ಅವರು ಆಕೆಗೆ ತಿಳಿಸಿದರು. ಅವಳು ಅದನ್ನು ಬರೆದುಕೊಂಡು ಅತ್ತ ಹೊರಟು ಹೋದಳು.
ಇತ್ತ ಕಾರ್ಯಕ್ರಮವನ್ನು ಉದ್ಘೋಶಿಸಿದೊಡನೆ ಪಂಡಿತ್ ಜಿ ಹಾಗೂ ತಬಲಾ- ಹಾರ್ಮೋನಿ ಸಾಥಿಯವರೆಲ್ಲ ವೇದಿಕೆಗೆ ಬಂದು, ಕುಳಿತು ಸಜ್ಜಾದರು. ಈ ಲಲನಾ ಮಣಿ- ಕಾರ್ಯಕ್ರಮ ನಿರೂಪಕಿ, ಕಲಾವಿದರ ಪರಿಚಯ ಪತ್ರಗಳನ್ನೆಲ್ಲ ಓದಿ, ಕೊನೆಯಲ್ಲಿ... 'ಪಂಡಿತ್‌ಜಿ ರಾಗ ಯಮನ್ ಹಾಡಲಿದ್ದಾರೆ' ಎಂದು ಹೇಳುವಲ್ಲಿ, ಅದೇನು ಅವಳ ಅಜ್ಞಾನವೋ, ಸಂಗೀತ ಜ್ಞಾನವೋ ಅಥವಾ ವಿಶೇಷವಾದುದನ್ನು ಹೇಳಬೇಕೆಂಬ ಉತ್ಸಾಹವೋ-   'ಅಬ್ ಪಂಡಿತ್‌ಜಿ ಬಹುತ್ ಸೀದಾಸಾದಾ ರಾಗ್ ಯಮನ್ ಪ್ರಸ್ತುತ್ ಕರ್ ರಹೇ ಹೈ' ಎಂದುಬಿಡಬೇಕೆ!?
'ಸೀದಾ ಸಾದಾ' ಬೇರೇನೂ ಶಬ್ದ ಸಿಗಲಿಲ್ಲವೇ ಇವಳಿಗೆ? ಯಮನ್ ರಾಗವನ್ನು ಆಕೆ ಗುರುತಿಸಿದ ರೀತಿಗೆ ಪಂಡಿತ್‌ಜಿಗೂ ಒಂದು ಕ್ಷಣ ಗಲಿಬಿಲಿಯಾಯಿತು. ಅಲ್ಲಿ ಸೇರಿದ್ದ ಆ ಪರಿಣತ ಶ್ರೋತೃಗಳಿಗೂ ಆಶ್ಚರ್ಯ. ಅದನ್ನಲ್ಲಿಗೇ ಬಿಟ್ಟು, ಪಂಡಿತ್‌ಜಿ ಸಹಕಲಾವಿದರನ್ನೊಮ್ಮೆ ನೋಡಿ ನಕ್ಕು ತಮ್ಮ ಕಛೇರಿ ಪ್ರಾರಂಭಿಸಿದರು. ಅದ್ಭುತ ಯಮನ್ ಅದು! ಮನ ಮುಟ್ಟುವಂಥ ವಿಶಿಷ್ಟ ಸ್ವರ ಸಂಯೋಜನೆಗಳು, ಎಲ್ಲಿಂದ ಪ್ರಾರಂಭವಾಗಿ ಹೇಗೆ ಮುಗಿಯುತ್ತವೆ ಎಂದೇ ತಿಳಿಯದಂಥ ರಾಗ ಚಿತ್ರಣ- ಸ್ವರಗಳ ಅನಾವರಣ, ನೂರಾರು ವೈವಿಧ್ಯಗಳು, ಒಂದಕ್ಕಿಂತ ಒಂದು ಹೊಸದು! ಹೀಗೆ ಅಪರಿಮಿತವಾಗಿ ಯಮನ್ ಅನ್ನು ಪಂಡಿತ್‌ಜಿ ಬೆಳೆಸುತ್ತಿದ್ದರೆ ಅದಕ್ಕೆ ಕೇಳುಗರ 'ವಾಹ್ ವಾಹ್‌' ಎಂಬ ದಾದ್‌ನ ಜೊತೆ- ಹೀಗೆ ಹಾಡುತ್ತ ಹಾಡುತ್ತ 'ಯಮನ್‌'ದೊಳಗೆ ಮುಳುಗಿದಾಗ ಪಂಡಿತ್‌ಜಿ ಕೇಳುಗರತ್ತ ನೋಡಿ ಹೇಳಿದರು, 'ಇದು ಸೀದಾ ಸಾದಾ ರಾಗ ಎಂದು ನಿರೂಪಣೆಯಲ್ಲಿ ಹೇಳಿದ್ದರು, ಈಗ ನೀವೇ ನಿರ್ಧರಿಸಿ'!
ಶ್ರೋತೃಗಳಿಂದ ಜೋರಾಗಿ ಕರತಾಡನ. ಅಲ್ಲದೇ ಆ ಕೆಳುಗರು ಎದ್ದುನಿಂತು ಹೇಳಿದರು, 'ಪಂಡಿತ್‌ಜಿ ಯೇ ಸೀದಾ ಸಾದಾ ನಹಿ, ಯೇ ತೊ ಸಿದ್ಧ ರಾಗ ಹೈ, ಸಿದ್ಧ ರಾಗ್‌'!
ಹೀಗಿದೆ ಈ ಯಮನ್ ಮೋಡಿ. ಅದಕ್ಕೇ ಒಳ್ಳೆಯ ಗುರುಗಳು ಇಂಥ ರಾಗಗಳನ್ನೆಲ್ಲ ಒಂದೊಂದು ವರ್ಷ ಕಲಿಸುತ್ತಾರೆ! ಅಷ್ಟು ಕಲಿತು, ನಂತರ ಎಷ್ಟೋ ವರುಷ ಅದನ್ನು ಹಾಡಿ ಹಾಡಿ ಅಭ್ಯಾಸ ಮಾಡಿ, ಬೇರೆ ಬೇರೆ ಕಲಾವಿದರ ವಿಚಾರಗಳನ್ನು ಕೇಳಿ, ಅರಿತು ಅದನ್ನು ಅಳವಡಿಸಿಕೊಂಡು - ಹೀಗೆ ಒಂದೊಂದು ರಾಗಗಳು ಸಿದ್ಧಿಸಬೇ ಕಾಗುತ್ತವೆ. ಅದಕ್ಕೇ ಅದೊಂದು ಸಾಕ್ಷಾತ್ಕಾರ!

- ಶ್ರುತಿ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!