ಸಾಪ್ತಾಹಿಕಪ್ರಭ

ಮಡಿವಂತರ ಶರಬತ್ತು!

ಸಮ್ಮೇಳನ ಸುಮ್ಮನೆ!? ವಿನಾಯಕ ಭಟ್ಟ ಮೂರೂರು ಕಳೆದವಾರದ 'ಸಾಪ್ತಾಹಿಕ ಪ್ರಭ'ದಲ್ಲಿ ಅಚ್ಚರಿ- ಅನುಮಾನ ಪಟ್ಟಿರುವಂತೆ 'ಸಮ್ಮೇಳನ ಸುಮ್ಮನೆ'ಯೇ!

ಸಮ್ಮೇಳನ ಸುಮ್ಮನೆ!?

ವಿನಾಯಕ ಭಟ್ಟ ಮೂರೂರು ಕಳೆದವಾರದ 'ಸಾಪ್ತಾಹಿಕ ಪ್ರಭ'ದಲ್ಲಿ ಅಚ್ಚರಿ- ಅನುಮಾನ ಪಟ್ಟಿರುವಂತೆ 'ಸಮ್ಮೇಳನ ಸುಮ್ಮನೆ'ಯೇ! ಕಸಾಪ ಹುಟ್ಟಿದ್ದು ರಾಜಾಶ್ರಯದಿಂದಾದರೂ, ಬೆಳೆದಿದ್ದು ನಿಸ್ವಾರ್ಥ ಸಾಹಿತಿಗಳಿಂದ. ಆ ದಿನಗಳಲ್ಲಿ ಸಾಹಿತಿಯೇತರರು ಪರಿಷತ್ತಿನ ಕಡೆ ತಿರುಗಿಯೂ ನೋಡುತ್ತಿರಲಿಲ್ಲ. ಕೇವಲ ಎರಡು ರಸ್ತೆಗಳ ದಾಟಿನಲ್ಲಿ ವಾಸವಿದ್ದ ಟಿ.ಪಿ. ಕೈಲಾಸಂ ಇದನ್ನು 'ಮಡಿವಂತರ ಸಾಹಿತ್ಯ ಶರಬತ್ತು' ಎಂದು ಗೇಲಿ ಮಾಡಿದ್ದುಂಟು.
ಆಗ ಇದ್ದ ಕನಿಷ್ಠ ಸಿಬ್ಬಂದಿಗೂ ಸಕಾಲಕ್ಕೆ ಸಂಬಳ ನೀಡಲಾಗದಂಥ ದಯನೀಯ ಸ್ಥಿತಿಯಿಂದ ಕಸಾಪ ಇಂದು ಆರ್ಥಿಕವಾಗಿ ಸದೃಢವಾಗಿದೆ. ಆಜೀವ ಸದಸ್ಯರ ಸಂಖ್ಯೆ ಒಂದೂವರೆ ಲಕ್ಷ ಮೀರಿದೆ. ಕೇಂದ್ರ ಹಾಗೂ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಪಟ್ಟಕ್ಕಾಗಿ ನಡೆಯುವ ಚುನಾವಣೆಗಳು ಯಾವ ವಿಧಾನಸಭಾ ಚುನಾವಣೆಗೂ ಕಮ್ಮಿಯಿಲ್ಲವೆಂಬಷ್ಟು ದುಂದುಗಾರಿಕೆಯಿಂದ ನಡೆಯುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೆಂದಿಗಿಂತಲೂ ಹೆಚ್ಚಾಗಿ ಹಣಬಲ- ಜಾತಿಬಲ ಕೆಲಸ ಮಾಡುತ್ತಿವೆ. ತಮಾಷೆಯ ಸಂಗತಿಯೆಂದರೆ ಪರಿಷತ್ತಿನ ಸದಸ್ಯತ್ವ ಪಡೆಯಲಾಗಲಿ, ಚುನಾವಣೆಯಲ್ಲಿ ಸ್ಪರ್ಧಿಸಲಾಗಲಿ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ- ಅರ್ಹತೆಯೇನೂ ಅಗತ್ಯವಿಲ್ಲ ಎಂಬುದು! ಕನ್ನಡ ಓದಲು- ಬರೆಯಲು ಬಾರದವರೂ ಇಲ್ಲಿ ಆಜೀವ ಸದಸ್ಯರಾಗಬಹುದು. ಇಂದು ಇಷ್ಟೊಂದು ದೊಡ್ಡ ಸಂಸ್ಥೆಯ ಸದಸ್ಯ ಬಲವನ್ನು ಹೊಂದಿಯೂ, ತಾನು 'ಆರು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ' ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಕಸಾಪ ಇಲ್ಲ. ಕಾರಣ ಇದು ಕನ್ನಡ 'ಮನಸ್ಸುಗಳ' ಏಕಮೇವ ಸಂಸ್ಥೆಯಾಗೇನೂ ಉಳಿದಿಲ್ಲ. ಪುಸ್ತಕ ಪ್ರಕಟಣೆ, ಉಪನ್ಯಾಸ ಏರ್ಪಾಟು, ಸಮ್ಮೇಳನ- ಇವನ್ನು ಸರ್ಕಾರಿ ಅನುದಾನಿತ ಇತರ ಸಂಸ್ಥೆಗಳೂ ಮಾಡುತ್ತಿವೆ. ಸಾಹಿತ್ಯ, ನಾಟಕ, ಚಿತ್ರಕಲೆ, ಸಂಗೀತ, ನೃತ್ಯ, ಯಕ್ಷಗಾನ... ಹೀಗೆ ಹಲವು ಪ್ರಕಾರಗಳಿಗೆ ಪ್ರತ್ಯೇಕ ಅಕಾಡೆಮಿಗಳಿವೆ. ಜಾನಪದ, ಅಕಾಡೆಮಿಯೊಂದಿಗೆ ಜಾನಪದ ಪರಿಷತ್ತು ಕೂಡಾ ಇದೆ. ಹೀಗಿರುವಾಗ 'ವಾರ್ಷಿಕ ವಿಧಿ'ಯಂತೆ ನಡೆಯುವ ಸಮ್ಮೇಳನಗಳಲ್ಲಿ ವೈವಿಧ್ಯತೆಯನ್ನಾಗಲೀ, ಮೌಲ್ಯವನ್ನಾಗಲೀ ಹುಡುಕುವುದು 'ಬೇವನ್ನು ಬಿತ್ತಿ ಮಾವನ್ನು ಬಯಸಿದಂತೆ'!
'ಸಮ್ಮೇಳನ ಆಯೋಜನೆಗಾಗಿ ಸರ್ಕಾರದ ಉದಾರ ಅನುದಾನವಲ್ಲದೆ', ಸ್ಥಳೀಯ ಸಂಸ್ಥೆಗಳಿಂದ ಉದ್ಯಮ ಪತಿಗಳಿಂದಲೂ (ಜಾಹೀರಾತುಗಳ ಮೂಲಕ) ಹಣ ಬರುತ್ತದೆ. ಸಂಬಂಧಿತ ಜಿಲ್ಲೆಯ ಸರ್ಕಾರಿ ನೌಕರರ ಒಂದು ದಿನದ ಸಂಬಳವೂ ಸೇರುತ್ತದೆ. ಇಂತಿಷ್ಟು ಸಂಪನ್ಮೂಲಗಳಿದ್ದೂ ಪ್ರತಿ ಸಮ್ಮೇಳನಕ್ಕೆ 'ಸಂತೆ ಹೊತ್ತಿಗೆ ಮೂರು ಮೊಳ ನೇಯುವ' ಕೆಲಸವೇ ಆಗುವುದು ವಿಷಾದನೀಯ. ತಮ್ಮನ್ನು ಬಂಡಾಯ- ಎಡಪಂಥೀಯ  ಅಂತೆಲ್ಲ ಗುರ್ತಿಸಿಕೊಳ್ಳುವ ಭಂಡ ಸಾಹಿತಿಯೊಬ್ಬರು 'ಸಮ್ಮೇಳನಕ್ಕಾಗಿ ಸರ್ಕಾರ ನೀಡುವುದು ಭಿಕ್ಷೆಯಲ್ಲ. ಮಂತ್ರಿಗಳೇನೂ ಇದನ್ನು ತಮ್ಮ ಜೇಬಿನಿಂದ ಕೊಡುವುದಿಲ್ಲ. ಇದು ಸಾರ್ವಜನಿಕರು ನೀಡಿದ ತೆರಿಗೆ ಹಣದಿಂದ ಬರುವಂಥದ್ದು' ಎಂದೆಲ್ಲ ಗುಡುಗುತ್ತಾರೆ; ಆದರೆ ಸಮ್ಮೇಳನಾಧ್ಯಕ್ಷರಾಗಿದ್ದ 'ಮಹಿಳಾಮಣಿ'ಯೊಬ್ಬರಿಗೆ ಕಸಾಪ ಅಧ್ಯಕ್ಷರು '11 ಲಕ್ಷ 11 ಸಾವಿರದ 111 ರು.ಗಳ ದೊಡ್ಡ ಮೊತ್ತದ ಉಡುಗೊರೆ ನೀಡುವಾಗ ಮಾತ್ರ ತುಟಿ ಹೊಲಿಸಿಕೊಂಡವರಂತೆ ಕೂತಿರುತ್ತಾರೆ!' ಇದು 'ಯಾರಪ್ಪನ' ಹಣವೋ ತಿಳಿಯದು!

ಅಧ್ಯಕ್ಷ 'ಕಾರಣ'!
ಇನ್ನು ಸಮ್ಮೇಳನಾಧ್ಯಕ್ಷರ ಆಯ್ಕೆಯ ನಿರ್ದಿಷ್ಟ ಮಾನದಂಡ ಎಂಬುದೇನೂ ಇರುವುದಿಲ್ಲ. ಒಮ್ಮೆ ಮಹಿಳೆ ಎಂಬ ಕಾರಣಕ್ಕೆ, ಇನ್ನೊಮ್ಮೆ ಅಲ್ಪಸಂಖ್ಯಾತರೆಂಬ ಕಾರಣಕ್ಕೆ, ಮಗದೊಮ್ಮೆ ಪಾಪ- 'ತುಂಬಾ ವಯಸ್ಸಾಗಿದೆ' ಎಂಬ ಕಾರಣಕ್ಕೆ, ಇಲ್ಲವೇ ದೊಡ್ಡ ಪ್ರಶಸ್ತಿ ಪಡೆದರೆಂಬ ಕಾರಣಕ್ಕೆ- ಹೀಗೆ ಪರಿಷತ್ತಿನ ಪಟ್ಟಭದ್ರರ ಮನಸೋ ಇಚ್ಚೆಗನುಸಾರ 'ನಾಮಕರಣ' ನಡೆಯುತ್ತದೆ. ಅಧಿಕೃತ ಪ್ರಕಟಣೆಗೆ ಮುಂಚೆ ಶಾಸ್ತ್ರಕ್ಕಾದರೂ ಇರಲಿ ಎಂಬಂತೆ ಅಂಥ 'ಅದೃಷ್ಟವಂತ'ರ ಜೊತೆಗೆ ಮೂರೋ ನಾಲ್ಕೋ ಹೆಸರುಗಳನ್ನು ತೂರಿಬಿಡುವುದು ಸಂಪ್ರದಾಯ! ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಮೂಗು ತೂರಿಸಿದ ಉದಾಹರಣೆ ಇಲ್ಲವೇ ಇಲ್ಲ. ಸಮ್ಮೇಳನಾಧ್ಯಕ್ಷರಾಗಲು ಸದ್ಯಕ್ಕೆ ಇರಬಹುದಾದ ಅರ್ಹತೆ ಎಂದರೆ- ಇವರೆಷ್ಟು ಕಟುವಾಗಿ ಸರ್ಕಾರವನ್ನು ಟೀಕಿಸುತ್ತಾರೆ ಎಂಬುದಷ್ಟೇ. ಇವರ ಇನ್ನೆರಡು ಜನಾಬ್ದಾರಿಗಳೆಂದರೆ- ತೆರೆದ ವಾಹನದಲ್ಲಿ ಕುಳಿತು ರಸ್ತೆ ಬದಿಯಲ್ಲಿ ನಿಂತ ಪ್ರೇಕ್ಷಕರತ್ತ ಕೈ ಬೀಸುತ್ತಾ ಮೆರವಣಿಗೆಯಲ್ಲಿ ವಿಜೃಂಭಿಸುವುದು ಹಾಗೂ 50-60 ಪುಟಗಳಷ್ಟು ಭಾಷಣ ಬರೆದೋ- ಬರೆಸಿಕೊಂಡೋ ತಂದು, ಸಮಯದ ಅಭಾವದಿಂದ ಅದನ್ನೋದಲು ಸಾಧ್ಯವಾಗದೆ ಬಾಯಿಗೆ ಬಂದಷ್ಟು ಬಡಬಡಿಸುವುದಷ್ಟೇ. ಯಾವುದೇ ಗೋಷ್ಠಿಯಲ್ಲಿ ಇವರು ಭಾಗವಹಿಸಬೇಕೆಂಬ ಕಡ್ಡಾಯವೇನಿಲ್ಲ. 'ಸಮ್ಮೇಳನಾಧ್ಯಕ್ಷರೊಡನೆ ಸಂವಾದ'ವಂತೂ ಅರ್ಥಹೀನ ಆದಿಬಿಟ್ಟಿದೆ.

ಪ್ರಶ್ನೋತ್ತರಗಳಲ್ಲಿ ಒಂದು ಮಾದರಿ ಹೀಗಿರುತ್ತದೆ...
ಪ್ರಶ್ನೆ, 'ನಿಮ್ಮ ಪ್ರಕಾರ ಸಂಶೋಧನೆ ಎಂದರೇನು?'. ಅದಕ್ಕೆ ಬಂದ ಉತ್ತರ, 'ಶೋಧನೆಯೆಂದರೆ ಹುಡುಕುವುದು, ಸಂಶೋಧನೆಯೆಂದರೆ ಹೆಚ್ಚು ಹುಡುಕುವುದು!' ಇಷ್ಟೇ. ಹಾಗಾದರೆ 'ಹುಡುಕುತ್ತಲೇ ಇರುವುದಕ್ಕೆ' ಏನೆನ್ನಬೇಕೆಂಬುದು ನನ್ನ ಪ್ರಶ್ನೆ!

'ಡಾಕ್ಟರ್‌'ಗಳ ಕಾವ್ಯವಾಚನ
ಇತ್ತೀಚಿನ ವಿವಿಗಳ ಸಂಖ್ಯೆ ಹೆಚ್ಚಿದ್ದು, ಅದಕ್ಕನುಗುಣವಾಗಿ ಪಂಡಿತರ (ಡಾಕ್ಟರೇಟುಗಳು) ಸಂಖ್ಯೆಯೂ ಬೆಳೆದಿದೆ. ಇಂಥವರ ಗುಣಮಟ್ಟ ಹೇಗೇ ಇರಲಿ, ಕವಿಗೋಷ್ಠಿಯಲ್ಲಿ ಇವರಿ
ಗೊಂದು ಅವಕಾಶವಿದ್ದೇ ತೀರಬೇಕು. ಪ್ರತಿ ಗೋಷ್ಠಿಯಲ್ಲೂ ಕನಿಷ್ಠ 20 ಕವಿಗಳಿದ್ದರೆ, ವಾಚಕರ ಜೊತೆಗೆ ಇಬ್ಬರಾದರೂ ಅಭಿಮಾನಿ 'ಬಂಧುಗಳು' ಇರುವರಾದ್ದರಿಂದ ಪ್ರೇಕ್ಷಕರ ಅಭಾವವಂತೂ ಇರುವುದಿಲ್ಲ! ಬಿಜಾಪುರದ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ವಿಷ್ಣುನಾಯಕರು ಈ 'ಕಾವ್ಯ ನಮೂನೆ'ಗಳನ್ನು ಕಂಡು ಬೆರಗಾಗಿ 'ಸರಿಯಾಗಿ ಹೋಮ್‌ವರ್ಕ್ ಮಾಡ್ಕೊಂಡು ಬನ್ನಿ' ಎಂದು ಮಾರ್ಮಿಕವಾಗಿ ಹೇಳಬೇಕಾಯಿತು!
ಸಾಹಿತ್ಯ ಎಂದರೆ ನಿರ್ದಿಷ್ಟ ವಿಷಯದಲ್ಲಿ ಅರಿವು ಮತ್ತು ಆ ಮೂಲಕ ಆನಂದವನ್ನೋ ಚಿಂತನೆಯನ್ನೋ ಉಂಟುಮಾಡುವ ಅಕ್ಷರರೂಪ. ನಿಜ ಅರ್ಥದಲ್ಲಿ 'ವಸುಧೈವ ಕುಟುಂಬಕಂ' ಎಂಬಂತೆ ಇರುವ ಆಧುನಿಕ ಜಗತ್ತಿನ ಸಾಹಿತ್ಯ ಕಥೆ, ಕಾದಂಬರಿ, ಕಾವ್ಯ, ನಾಟಕ, ಇತಿಹಾಸ- ಮುಂತಾದ ಪ್ರಕಾರಗಳಿಂದ ತುಂಬಾ ಮುಂದೆ ಹೋಗಿದೆ. ವಿಜ್ಞಾನ, ತಂತ್ರಜ್ಞಾನ, ಪ್ರವಾಸ, ಪರಿಸರ, ನೈರ್ಮಲ್ಯ, ವೈದ್ಯ, ಕಾನೂನು- ಈ ವಿಷಯಗಳಲ್ಲೂ ಮಹತ್ತರ ಕೃತಿಗಳು ಬರುತ್ತಿವೆ. ಕೆಲವೊಂದು ಚಲನಚಿತ್ರ ಗೀತೆಗಳು ಶ್ರೇಷ್ಠ ಭಾವಗೀತೆಗೂ ಸರಿಸಾಟಿಯಾಗಬಲ್ಲವು. ಹಾಗೆಯೇ ಟಿ.ವಿ. ಧಾರಾವಾಹಿಗಳಲ್ಲೂ ಸಾಹಿತ್ಯ ಶ್ರೇಷ್ಠತೆ ಇದೆ. ಹಾಗಿರುವಾಗ ಇಂಥ ಎಲ್ಲ ಪ್ರಕಾರಗಳಲ್ಲೂ ವಿಚಾರಗೋಷ್ಠಿಯಿರುವುದು ಆಪೇಕ್ಷಣೀಯ.

'ಖೋಟಾ' ಪುಂಡಾಟಿಕೆ!
ಬಿಜಾಪುರದ ಸಮ್ಮೇಳನವು ಕೆಲವೊಂದು ನಾಚಿಕೆಗೇಡಿನ ಸಂಗತಿಗಳನ್ನು ಹೊರಹಾಕಿದೆ. ಅವುಗಳಲ್ಲೊಂದು 'ಖೋಟಾ' ಪ್ರತಿನಿಧಿಗಳ ಪುಂಡಾಟಿಕೆ. ಸಮ್ಮೇಳನದ ಮೊದಲ ದಿನವೇ ಒಒಡಿ (ಅನ್‌ಅಫಿಶಿಯಲ್ ಡ್ಯೂಟಿ) ಪ್ರಮಾಣ ಪತ್ರ ನೀಡಬೇಕೆಂದು ಒತ್ತಾಯಿಸಿ ಅವರು ನಡೆಸಿದ ದಾಂಧಲೆ ನಿಜಕ್ಕೂ ಖಂಡನೀಯ. ಪ್ರತಿನಿಧಿ ಶುಲ್ಕ ನೀಡದೆ, ಸಮ್ಮೇಳನದಲ್ಲೂ ಭಾಗವಹಿಸದೇ ಐದು ದಿನಗಳ ಸಂಬಳ ಸಹಿತ ರಜೆ ಗಿಟ್ಟಿಸಿ ತಮ್ಮಿಷ್ಟದ ಸ್ಥಳಗಳಿಗೆ ಪ್ರವಾಸ ಹೋದವರ ಸಂಖ್ಯೆ ಸಾವಿರ ಸಾವಿರ. ನನಗೆ ತಿಳಿದ ಮಟ್ಟಿಗೆ ಕನಕಪುರ, ಮೂಡಬಿದಿರೆ, ಉಡುಪಿ ಸಮ್ಮೇಳನಗಳನ್ನು ಹೊರತು ಪಡಿಸಿ ಉಳಿದಂತೆ ಪ್ರತಿ ಸಮ್ಮೇಳನದಲ್ಲೂ ಊಟದ ವ್ಯವಸ್ಥೆಯದೇ ಒಂದು ಸಮಸ್ಯೆ. ಅಧಿಕೃತ ಪ್ರತಿನಿಧಿಗಳು ಭೋಜನಾಲಯಕ್ಕೆ ಪ್ರವೇಶಿಸಲು ಅಸಾಧ್ಯ ಎನಿಸುವಷ್ಟು ಗೊಂದಲ, ಗದ್ದಲ, ಗಲಾಟೆ.

ಇದಕ್ಕಿರುವ ಪರಿಹಾರೋಪಾಯ ಎಂದರೆ ಪ್ರತಿನಿಧಿಗಳಿಗೆ ಮಾತ್ರವೇ ಈ ಸೌಲಭ್ಯ ಕಲ್ಪಿಸುವುದು ಹಾಗೂ ಬ್ಯಾಡ್ಜ್ ಇರುವವರನ್ನಷ್ಟೇ ಒಳಬಿಡುವುದು. ಸಾರ್ವಜನಿಕರಿಗೆ ಪ್ರತ್ಯೇಕ ವ್ಯವಸ್ಥೆ ಬೇಕು.
'ಸಾಧಕರಿಗೆ ಸನ್ಮಾನ' ಇದೊಂದು ಪ್ರಹಸನ! ಹಲವು ಗಂಟೆಗಳೇ ಬೇಕಾಗುವಷ್ಟು ಉದ್ದದ ಸಾಧಕರ ಪಟ್ಟಿಯಲ್ಲಿ ಕಸಾಪ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಗೆದ್ದ ಅಭ್ಯರ್ಥಿಗಳ ಕಟ್ಟಾ ಬೆಂಬಲಿಗರು ಕೂಡಾ ಸೇರಿರುತ್ತಾರೆ. ಈ ಪಟ್ಟಿಯು ವಿಶೇಷ ಸಾಧನೆಗೈದ ಬರಹಗಾರರು, ಮುದ್ರಕರು, ಪ್ರಕಾಶಕರು, ಚಿತ್ರಕಲಾವಿದರು, ಸುಗಮ ಸಂಗೀತಗಾರರು ಇಂಥವರಿಗಷ್ಟೇ ಸೀಮಿತಗೊಂಡರೆ ನಿಜಕ್ಕೂ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾದೀತು.

ಹೊಣೆಗೇಡಿತನ
ಪ್ರತಿ ಸಮ್ಮೇಳನದಿಂದ ಇನ್ನೊಂದು ಸಮ್ಮೇಳನಕ್ಕೆ ಒಂದು ವರ್ಷದಷ್ಟು ಕಾಲಾವಕಾಶ ಇರುತ್ತದೆ, ಆದಾಗ್ಯೂ ಹಿಂದಿನ ವರ್ಷವೇ ಸಿದ್ಧವಾಗಬೇಕಿದ್ದ 'ಸ್ಮರಣ ಸಂಚಿಕೆ' ಈ ವರ್ಷ ಬಂದಿದೆಯೆಂದರೆ ಅದು ಹೊಣೆಗೇಡಿತನ. ಸಮ್ಮೇಳನ ಕ್ರಮಸಂಖ್ಯೆಯಷ್ಟೇ ಸಂಖ್ಯೆಯ ಪುಸ್ತಕಗಳನ್ನು ಕಸಾಪ ಪ್ರಕಟಿಸಬೇಕೆಂಬ ಯೋಜನೆ ಇರುತ್ತದಾದರೂ ಅದರಲ್ಲಿ ಅರ್ಧದಷ್ಟು ಸಿದ್ಧವಾದರೂ ಅದೇ ದೊಡ್ಡ ಸಾಧನೆ. ಇಷ್ಟಾಗಿ ಇಲ್ಲಿ ಪ್ರಕಟಗೊಳ್ಳುವುದು ಹೆಚ್ಚಾಗಿ ಮರುಮುದ್ರಣದ ಪುಸ್ತಕಗಳಷ್ಟೇ. ಇದೇ ಕೆಲಸವನ್ನು ಖಾಸಗಿಯವರಿಗೆ ವಹಿಸಿದರೆ ಮೂರೇ ತಿಂಗಳಲ್ಲಿ ಪೂರೈಸಬಲ್ಲರು.

ಇನ್ನು ಕೊನೆಯದಾಗಿ ಸಮ್ಮೇಳನದಲ್ಲಿ ಮಂಡಿತವಾಗಿ ಅನುಮೋದಿಸಲಾಗುವ ನಿರ್ಣಯಗಳ ಕುರಿತಂತೆ ನನ್ನದೊಂದಿಷ್ಟು ಅನಿಸಿಕೆ ಮತ್ತು ಸಲಹೆ. ಸಮ್ಮೇಳನಗಳು ಸರ್ಕಾರದ ನೆರವಿನ ಮೇಲೆಯೇ ನಡೆಯುತ್ತವಾದ್ದರಿಂದ, ಅನಗತ್ಯವಾಗಿ ಆಳುವ ಪಕ್ಷವನ್ನು ಕಟುವಾಗಿ ಟೀಕಿಸುವ ಬದಲು ಬೇಡಿಕೆಗಳು ಪರಿಷತ್ತಿಗಷ್ಟೇ ಸೀಮಿತವಾಗಿರಲಿ. ಸರ್ಕಾರ ಕೈಗೊಳ್ಳುವ ಎಲ್ಲ ಯೋಜನೆಗಳ ಕುರಿತು ಪ್ರತಿಪಕ್ಷದ ನಾಯಕರಂತೆ ಮಾತಾಡುವುದು ಖಂಡಿತ ಬೇಡ. ಮಂಡಿತವಾಗುವ ಯಾವುದೇ ನಿರ್ಣಯ ಪರಿಷತ್ತಿಗೆ ಸಾಹಿತ್ಯ ಯೋಜನೆಗಳಿಗೆ ಮಾತ್ರವೇ ಸೀಮಿತವಾಗಿರಲಿ. ಸಮ್ಮೇಳನಾಧ್ಯಕ್ಷರು ಲಿಖಿತ ರೂಪದಲ್ಲಿರುವ ಭಾಷಣವನ್ನಷ್ಟೇ ವಾಚಿಸಬೇಕು ಮತ್ತು ಆ ವಾಚನದ ಕಾಲಾವಧಿ ಒಂದು ಗಂಟೆ ಮೀರದಿರಲಿ.
ಒಟ್ಟಿನಲ್ಲಿ ಸಮ್ಮೇಳನ, 'ಎಲ್ಲಮ್ಮನ- ಎಲ್ಲಪ್ಪನ ಜಾತ್ರೆ' ಆಗದಿರಲಿ ಎಂಬುದು ನನ್ನ ಆಶಯ.

3 ವರ್ಷಕ್ಕೊಮ್ಮೆ ಸಮ್ಮೇಳನ

ಸಾಹಿತ್ಯ ಸಮ್ಮೇಳನದ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು. ಪ್ರತಿ ವರ್ಷದ ಬದಲು 3 ವರ್ಷಕ್ಕೊಮ್ಮೆ ಮಾಡಲಿ. ಅರ್ಧದಿನ ಅಧ್ಯಕ್ಷರ ಮೆರವಣಿಗೆಯಂಥ ವಸ್ತು ವೈಭವಕ್ಕಿಂತ ವಿಷಯ ವೈಭವೀಕರಣವಿರಬೇಕು. ತಮಿಳುನಾಡು- ಮಾಹಾರಾಷ್ಟ್ರ ಮಾದರಿಯನ್ನು ನಾವು ಅಳವಡಿಸಿಕೊಳ್ಳಬಹುದು. ಅಲ್ಲಿ ಸಾಹಿತ್ಯ ಸಮ್ಮೇಳನಗಳಿಗೆ ಮುಖ್ಯಮಂತ್ರಿ ಆದಿಯಾಗಿ ಎಲ್ಲ ಜನಪ್ರತಿನಿಧಿಗಳನ್ನೂ ಆಹ್ವಾನಿಸುತ್ತಾರೆ. ಆದರೆ ವೇದಿಕೆಯಲ್ಲಿ ಅವಕಾಶವಿಲ್ಲ. ಸಭಾಸದರು ಕುಳಿತುಕೊಳ್ಳುವಲ್ಲಿ ಮುಂದಿನ ಸ್ಥಾನವನ್ನು ಜನಪ್ರತಿನಿಧಿಗಳಿಗಾಗಿ ಮೀಸಲಿಡುತ್ತಾರೆ. ಸಮ್ಮೇಳನದಲ್ಲಿ ಆಡಳಿತದ ಬಗ್ಗೆ, ಸರ್ಕಾರ ಎಷ್ಟರ ಮಟ್ಟಿಗೆ ಭಾಷೆಗೆ, ಆಡಳಿತದಲ್ಲಿ ಭಾಷೆ ಜಾರಿಗೆ ಪ್ರಯತ್ನ ಮಾಡಿದೆ. ಎಲ್ಲಿ ಎಡವಿದೆ ಎಂಬುದೆಲ್ಲ ಚರ್ಚೆಯಾಗುತ್ತದೆ. ಸಮ್ಮೇಳನಕ್ಕೆ ಬಾರದ ಜನಪ್ರತಿನಿಧಿಗಳಿಗೆ ವೇದಿಕೆಯಿಂದ ಛೀಮಾರಿ ಹಾಕಲಿ.
ನಮ್ಮ ರಾಜ್ಯದಲ್ಲಿ ಸಾರ್ವಜನಿಕ ಜೀವನದ ಶುದ್ಧೀಕರಣ ಆಗಬೇಕಿದೆ. ಅದರ ಬಗ್ಗೆ ಚರ್ಚಿಸಬಹುದಾಗಿತ್ತು. ಇದ್ಯಾವುದಕ್ಕೂ ಸಮ್ಮೇಳನದಲ್ಲಿ ಅವಕಾಶವಿರಲಿಲ್ಲ. ವಿವಿಧ ಮಜಲುಗಳ ಸಾಹಿತ್ಯ ಮತ್ತು ಸಾಹಿತಿಗಳನ್ನು ಗುರುತಿಸಿ ಅವಕಾಶ ನೀಡಬೇಕು.
- ಎಚ್. ವಿಶ್ವನಾಥ್


- ಕೆ.ಎನ್. ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!