ಸಾಪ್ತಾಹಿಕಪ್ರಭ

ಮತ್ತೆ ಚುಕ್ಕಾಣಿಗೆ ವಸುಂಧರಾ ರಾಜೆ

ಭಾರತೀಯ ಜನತಾ ಪಾರ್ಟಿಯ ಪ್ರಭಾವವಿರುವ ಉತ್ತರ ಭಾರತದ ರಾಜ್ಯಗಳಲ್ಲಿ ರಾಜಸ್ಥಾನವೂ ಒಂದು. ದೇಶದ ಅತಿ ಬಡ ರಾಜ್ಯಗಳಲ್ಲಿ ಅದೂ ಒಂದು ರಾಜ್ಯ. ಪಾಕಿಸ್ತಾನಕ್ಕೆ ಅಂಟಿಕೊಂಡಿರುವ ಸೀಮೆ. ಅಲ್ಲಿ ಇನ್ನೂ ಮಧ್ಯಮ ವರ್ಗದ ಸಂಖ್ಯೆ ಕಡಿಮೆ. ಬಡವರ ಸಂಖ್ಯೆಯೇ ಹೆಚ್ಚು.
ಈಗ ಆ ರಾಜ್ಯದಲ್ಲಿ ಬಿಜೆಪಿಯ ನಾಯಕಿ ವಸುಂಧರಾ ರಾಜೆ. ರಜಪೂತ- ಜಾಟ್ ಹಾಗೂ ಹಿಂದುಳಿದ ಮರಾಠಾ ಸಮಾಜಕ್ಕೆ ಸೇರಿದ ವಸುಂಧರಾ ರಾಜೆ ಅವರಿಗೇ ಪಕ್ಷದ ಚುಕ್ಕಾಣಿಯನ್ನು ನೂತನ ಅಧ್ಯಕ್ಷ ರಾಜನಾಥ ಸಿಂಗ್ ಕೊಟ್ಟಿದ್ದಾರೆ. ಅದು ಚುನಾವಣೆಯಲ್ಲಿ ಗೆಲ್ಲುವ ತಂತ್ರ ಎನ್ನಲಾಗಿದೆ.
ವಂಶಪಾರಂಪರ್ಯ ಆಡಳಿತದ ವ್ಯವಸ್ಥೆಗೆ ರಾಜಸ್ಥಾನ ಹೆಸರು ಮಾಡಿಲ್ಲ. ಹಿಂದಿನ ರಾಜಪೂತರ ಹಲವಾರು ಸಣ್ಣ- ಪುಟ್ಟ ಸಂಸ್ಥಾನಗಳು ಸೇರಿದಂತೆ ರಚನೆಯಾಗಿರುವ ರಾಜ್ಯದಲ್ಲಿ ಯಾವ ಒಂದು ಸಂಸ್ಥಾನಗಳ ರಾಜ ಮನೆತನವೂ ನಿಯಂತ್ರಣ ಅಧಿಕಾರ ಪಡೆಯುವುದು ಸಾಧ್ಯವಾಗಲಿಲ್ಲ.
2003ರಲ್ಲಿ ಕೇಂದ್ರದಲ್ಲಿ ಮಂತ್ರಿಯಾಗಿ, ವಿಜ್ಞಾನ- ತಂತ್ರಜ್ಞಾನ, ವಿದೇಶಾಂಗ ಸಚಿವಾಲಯಗಳಲ್ಲಿ ಒಳ್ಳೆಯ ಕೆಲಸ ಮಾಡಿ ಹೆಸರು ಗಳಿಸಿದ್ದ ವಸುಂಧರಾ ಅವರನ್ನು ಅಂದಿನ ಪ್ರಧಾನಿ ಹಾಗೂ ಇತರ ಬಿಜೆಪಿ ನಾಯಕರು ಪಕ್ಷದ ಜವಾಬ್ದಾರಿಯನ್ನು ಹೊರಿಸಿ ಜೈಪುರಕ್ಕೆ ಕಳಿಸಲು ಇದ್ದಿದ್ದು ಒಂದೇ ಕಾರಣ: ಅವರಿಗೆ ಚಿಂತನೆ ಹಾಗೂ ಸಂಘಟನೆಯ ಶಕ್ತಿ ಇತ್ತು. ಅದು ಈಗಲೂ ಇದೆ. ಆ ಚುನಾವಣೆಯಲ್ಲಿ ವಸುಂಧರಾ ನಾಯಕತ್ವದಲ್ಲಿ ರಾಜಸ್ಥಾನದಲ್ಲಿ ಬಿಜೆಪಿ ಗೆದ್ದಿದ್ದು ಒಂದು ಸಹಜವಾದ ರಾಜಕೀಯ ಕ್ರಿಯೆ. ಐದು ವರ್ಷಗಳ ಆಡಳಿತದ ಹೊಣೆಯನ್ನು ಹೊತ್ತ ವಸುಂಧರಾ ಅಭಿವೃದ್ಧಿಗೆ, ಅದರಲ್ಲೂ ಹೆಚ್ಚಾಗಿ ಮಹಿಳೆಯರನ್ನು ರಾಜಕೀಯದಲ್ಲಿ ಮುಂದೆ ತರಲು ಮಾಡಿದ ಪ್ರಯತ್ನ ಒಂದು ದೊಡ್ಡ ಸಾಧನೆಯೇ.
ಆಗಲೇ ವಿತ್ತ ಖಾತೆಯ ಜವಾಬ್ದಾರಿಯನ್ನೂ ಹೊತ್ತಿದ್ದ ವಸುಂಧರಾ ರಾಜಸ್ಥಾನದ ಬಜೆಟ್‌ನ ಚಿತ್ರವನ್ನೇ ಬದಲಾಯಿಸಿದರು. ರೆವಿನ್ಯೂ ಕೊರತೆಯನ್ನು ಅಳಿಸಿ ಹಾಕಿದರು. ಜೈಪುರ ಪ್ರಗತಿಗೆ ಅಡಿಗಲ್ಲಿನಂತಹ ಹಲವಾರು ಯೋಜನೆಗಳನ್ನು ರೂಪಿಸಿದ್ದರು.
ಆದರೆ ಸಾಮಾಜಿಕ ನ್ಯಾಯ ವಿತರಣೆಯಲ್ಲಿ ಇತರ ಅಂಶಗಳನ್ನು ಮರೆತು ಮಹಿಳಾಭಿವೃದ್ಧಿಗೇ ಹೆಚ್ಚು ಒತ್ತು ಕೊಟ್ಟಿದ್ದರಿಂದ ವಸುಂಧರಾ ಕೆಲವು ಜಾತಿಗಳ ಮುಖಂಡರ ಕೆಂಗಣ್ಣಿಗೆ ತುತ್ತಾದರು. ಹಲವು ಆರೋಪಗಳನ್ನು ಎದುರಿಸಬೇಕಾಯಿತು. 2008ರ ಚುನಾವಣೆಯಲ್ಲಿ ವಸುಂಧರಾ ಗೆದ್ದರೂ ಬಿಜೆಪಿ ಸೋತಿತು. ಅವರು ವಿಧಾನ ಸಭೆಯಲ್ಲಿ ಪ್ರತಿಪಕ್ಷದ ನಾಯಕರಾದರು. ಆ ಸ್ಥಾನದಲ್ಲಿ ಬಹು ಕಾಲ ಉಳಿಯಲಿಲ್ಲ.
ಆ ಕಾಲಘಟ್ಟದಲ್ಲಿ ವಸುಂಧರಾ ರಾಜಕೀಯವಾಗಿ ನಿಷ್ಕ್ರಿಯರಾದರು. ವಿಧಾನ ಸಭೆಯಲ್ಲಿ ಮಾಡಬೇಕಾದ ಕೆಲಸವನ್ನಷ್ಟೇ ಮಾಡಿ ಮುಗಿಸಿದ ಶಾಸ್ತ್ರದಲ್ಲೇ ರಾಜಕೀಯ ಚಟುವಟಿಕೆಯನ್ನು ಸೀಮಿತಗೊಳಿಸಿದರು.
ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ನಾಯಕತ್ವ ವಸುಂಧರಾ ನಾಯಕತ್ವವನ್ನು ಒಪ್ಪಲಿಲ್ಲ. ಈಗ ಬಿಜೆಪಿಯ ನೂತನ ಅಧ್ಯಕ್ಷ ರಾಜನಾಥ ಸಿಂಗ್ ಮತ್ತೆ ರಾಜಸ್ಥಾನದ ಪಕ್ಷದ ಹೊಣೆಯನ್ನು ವಸುಂಧರಾ ಹೆಗಲಿಗೆ ಏರಿಸಿದ್ದಾರೆ. ಈ ವರ್ಷವೇ ಅಲ್ಲಿ ವಿಧಾನ ಸಭೆ ಚುನಾವಣೆ.
ಸದ್ಯಕ್ಕೆ ಅವರ ಚಟುವಟಿಕೆ ರಾಜಸ್ಥಾನಕ್ಕೇ ಸೀಮಿತ. ಆದರೆ ರಾಷ್ಟ್ರೀಯ ಪಕ್ಷದ ಪ್ರಧಾನ ಕಾರ್ಯದರ್ಶಿಯ ಸ್ಥಾನ ನೀಡುವುದಾಗಿ ಪಕ್ಷದ ನಾಯಕರು ಹೇಳಿದ್ದರೂ, ಅದನ್ನು ನಿರಾಕರಿಸಿದರು. ರಾಜಸ್ಥಾನದಲ್ಲಿ ಬಿಜೆಪಿಯ ಸೋಲಿನ ಕಳಂಕವನ್ನು ತೊಡೆದುಹಾಕುವವರೆಗೂ ಅವರಿಗೆ ವಿರಾಮವಿಲ್ಲ. ಈಗಾಗಲೇ ಬಿರುಗಾಳಿಯಂತೆ ರಾಜ್ಯದಲ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ. ಅಲ್ಲಿನ ಸ್ಥಳೀಯ ವಿರೋಧಿಗಳೂ ಅವರನ್ನು ನಾಯಕರೆಂದು ಒಪ್ಪದೇ ಬೇರೆ ಮಾರ್ಗವೇ ಇಲ್ಲ ಎನ್ನುವಂತಾಗಿದೆ.ಇನ್ನು ಹತ್ತು ದಿನಗಳಲ್ಲಿ ವಸುಂಧರಾ ರಾಜೆ ಅವರಿಗೆ ಅರವತ್ತು ವರ್ಷ ತುಂಬುತ್ತದೆ. ಗ್ವಾಲಿಯರ್ ರಾಜಮನೆತನದಲ್ಲಿ, ಬಿಜೆಪಿಯನ್ನು ರಾಷ್ಟ್ರೀಯ ನಾಯಕಿಯಾಗಿದ್ದ ವಿಜಯರಾಜೇ ಸಿಂಧ್ಯಾ ಅವರ ಪುತ್ರಿಯಾಗಿ, ಯಾವುದಕ್ಕೂ ಕಡಿಮೆ ಇಲ್ಲದಂತೆಯೇ ಬದುಕನ್ನು ಆರಂಭಿಸಿದ್ದು.
ಅಮ್ಮನ ಮಾರ್ಗದರ್ಶನ, ವಾಜಪೇಯಿ- ಆಡ್ವಾಣಿ ಹಾಗೂ ಇತರ ಹಿರಿಯ ನಾಯಕರ ಚಿಂತನೆ ಹಾಗೂ ಕೆಲಸವನ್ನು ತುಂಬಾ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿದ್ದರಿಂದ ವಸುಂಧರಾ ರಾಜೆ ಸಿಂಧ್ಯಾ ಎಳೆಯ ವಯಸ್ಸಿನಲ್ಲೇ ರಾಜಕೀಯ ತಂತ್ರಗಳ ಪರಿಚಯವನ್ನು ಪಡೆದಿದ್ದರು.
ಹುಟ್ಟಿದ್ದು ಮುಂಬೈನಲ್ಲಿ. ಮುಂಬೈನಲ್ಲೇ ವಿದ್ಯಾಭ್ಯಾದ. ಅರ್ಥಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಆನರ್ಸ್ ಪದವಿ. ಮದುವೆಯಾಗಿದ್ದು ಧೋಲ್‌ಪುರದ ಜಾಟ್ ರಾಜ ಹೇಮಂತ ಸಿಂಗ್ ಅವರನ್ನು.
ಆ ಮದುವೆ ಸುಗಮವಾಗಿರಲಿಲ್ಲ. ಒಂದು ಮಗುವಾದ ಅನಂತರ ವಿಚ್ಛೇದನದತ್ತ ಸಾಗಿತ್ತು. ಎಷ್ಟಾದರೂ ಅದು ಎರಡು ರಾಜಮನೆತನಗಳ ನಡುವಣ ಜಗಳ. ವರ್ಷಗಟ್ಟಲೆ ಎಳೆಯಿತು. ವಿಜಯರಾಜೇ ಸಿಂಧ್ಯಾ ಅವರ ಒತ್ತಡದಿಂದ 1982ರಲ್ಲಿ ವಸುಂಧರಾ ಅವರ ನಿಜರಾಜಕೀಯ ಪ್ರವೇಶ. 1982-85ರಲ್ಲಿ ರಾಜಸ್ಥಾನದ ವಿಧಾನ ಸಭೆ ಸದಸ್ಯೆ. ಅನಂತರ ನಾಲ್ಕು ಬಾರಿ ಜಲಾವರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ. ಈಗ ಆ ಕ್ಷೇತ್ರದ ಪ್ರತಿನಿಧಿ ವಸುಂಧರಾ ಪುತ್ರ ದುಷ್ಯಂತ ಸಿಂಗ್.
ವಸುಂಧರಾ ತಂಗಿ ಯಶೋಧರಾ ಮಧ್ಯ ಪ್ರದೇಶದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ (ಬಿಜೆಪಿ). ಅವರ ಸೋದರ ಮಾಧವರಾವ್ ಸಿಂಧ್ಯಾ ಅವರ ಪುತ್ರ ಜ್ಯೋತಿರಾದಿತ್ಯ ಈಗ ಕೇಂದ್ರದಲ್ಲಿ ಕಾಂಗ್ರೆಸ್ ಮಂತ್ರಿ. ರಾಹುಲ್ ಗಾಂಧಿಯ ಆತ್ಮೀಯ ಬಳಗದ ಸದಸ್ಯ.
ವಸುಂಧರಾ ಅವರಿಗೆ ವೈಯಕ್ತಿಕವಾಗಿ ಹೇರಳ ಆಸ್ತಿ ಇರುವುದು ನಿಜ. ಅವರ ತಾಯಿಯ ಮನೆತನಕ್ಕೆ ಲಂಡನ್‌ನಲ್ಲಿ ಮನೆ ಇದೆ. ಕಾಶಿ ವಿಶ್ವೇಶ್ವರ ದೇವಾಲಯದ ಬಾಗಿಲಿನ ಅಂಚಿಗೆ ಹೊದಿಸಿರುವ ಬೆಳ್ಳಿಯ ಪ್ರಭಾವಳಿ, ಅವರ ಮನೆತನದ ಕಾಣಿಕೆ. ದೆಹಲಿ, ಮುಂಬೈ, ಗ್ವಾಲಿಯರ್, ಇಂದೋರ್‌ನಲ್ಲಿ ಆಸ್ತಿ ಇದೆ. ಬಿರ್ಲಾ ಮನೆತನದ ಗ್ರಾಸಿಮ್ ಇಂಡಸ್ಟ್ರೀಸ್ ಜತೆ ನಿಕಟ ಸಂಬಂಧವಿದೆ. ಧೋಲ್‌ಪುರದ ರಾಜಮನೆತನದ ಆಸ್ತಿ-ಪಾಸ್ತಿಯ ಹಂಚಿಕೆಯ ವಿಭಾಗ ಸುಲಭವಾಗಿರಲಿಲ್ಲ. ವರ್ಷಗಟ್ಟಲೆ ಎಳೆದಾಡಿದ ಖಟ್ಲೆಗಳು. ಆ ಸಂಬಂಧದಲ್ಲೇ ವಸುಂಧರಾ ವಿರುದ್ಧ ಹಲವಾರು ಅಕ್ರಮಗಳ ಆರೋಪಗಳು ಇದ್ದವು. ಈಗ ಆ ವಿವಾದವೂ ಮುಗಿದಂತೆ ಕಂಡುಬರುತ್ತಿದೆ. ಆದರೂ ಅದಕ್ಕೆ ಅಧಿಕೃತ ಮುದ್ರೆ ಬಿದ್ದಿಲ್ಲ.
ವಸುಂಧರಾ ರಾಜೆ ಅವರನ್ನು ಬಿಜೆಪಿ ನಾಯಕತ್ವ ಕಡೆಗಣಿಸಿದಾಗ, ಆಕೆ ವಿಧಾನ ಸಭೆಯ ವಿರೋಧ ಪಕ್ಷದ ನಾಯಕರ ಸ್ಥಾನಕ್ಕೂ ರಾಜೀನಾಮೆ ಕೊಡಬೇಕಾಗಿ ಬಂತು. ಈಗ ಆ ಎಲ್ಲ ಸಮಸ್ಯೆಗಳೂ ಅವರ ಪಾಲಿಗೆ ಹಳೆಯ ಕನಸು. ಮುಂದಿನ ಕರ್ತವ್ಯದ ಕಡೆಗೆ ಅವರ ದೃಷ್ಟಿ ನೆಟ್ಟಿದೆಯಂತೆ. ದೀರ್ಘ ಕಾಲದ ಅನಂತರ, ಆಗಾಗ ದೆಹಲಿಯ ಅಶೋಕಾ ರಸ್ತೆಯ ಬಿಜೆಪಿ ಕಾರ್ಯಾಲಯಕ್ಕೆ ಹೋಗುತ್ತಾರಂತೆ. ಹೆಚ್ಚಿನ ಸಮಯವನ್ನು ಸದ್ಯಕ್ಕೆ ಜೈಪುರ, ಜೋಧಪುರ, ಉದಯಪುರಗಳಲ್ಲೇ ಕಳೆಯುತ್ತಿದ್ದಾರೆ.
ರಾಜಸ್ಥಾನದ ರಾಜಕೀಯದಲ್ಲಿ ಮಧ್ಯದಲ್ಲೇ ಬಿಟ್ಟು ಹೋಗಿದ್ದ ಅವರ ಸಂಬಂಧಗಳನ್ನು ಸುಧಾರಿಸಿಕೊಳ್ಳುವ, ಸಾಮಾಜಿಕ ಹೊಂದಾಣಿಕೆಯ ಕೆಲಸ ಆರಂಭವಾಗಿದೆ. ಒಂದೆರಡು ಕಡೆಗಳಲ್ಲಿ ಪ್ರವಾಸವನ್ನೂ ಮಾಡಿದ್ದಾಗಿದೆ.
ಕಳೆದ ಐದು ವರ್ಷಗಳಲ್ಲಿ ರಾಜಸ್ಥಾನದ ರಾಜಕೀಯದಲ್ಲಿ ಭಾರತೀಯ ಜನತಾ ಪಾರ್ಟಿ, ಉತ್ಸಾಹವನ್ನು ಕಳೆದುಕೊಂಡು ನಿಸ್ತೇಜವಾಗಿತ್ತು. ಅಲ್ಲಿನ ಮುಖ್ಯಮಂತ್ರಿ ಅಶೋಕ ಗೆಹ್ಲೊಟ್ ಅವರ ವಿರುದ್ಧ ಬೇಕಾದಷ್ಟು ಆರೋಪಗಳಿದ್ದರೂ, ಕಾಂಗ್ರೆಸಿಗೆ, ಪ್ರಾಯಶಃ ಈಗಲೂ ಅವರೇ ನಾಯಕರು.
ರಾಹುಲ್ ಗಾಂಧಿಗೆ ಕಾಂಗ್ರೆಸಿನ ಉಪಾಧ್ಯಕ್ಷರ ಸ್ಥಾನ ಸೂಚಕ ಕಿರೀಟವನ್ನು ತೊಡಿಸಿದ ಜೈಪುರ ಎಐಸಿಸಿ ಮೇಳವನ್ನು ಗೆಹ್ಲೊಟ್ ಯಶಸ್ವಿಯಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಅವರ ಪ್ರತಿಷ್ಠೆ ಕಾಂಗ್ರೆಸಿನಲ್ಲಿ ಹೆಚ್ಚಾಗಿರಬಹುದು.
ಗ್ವಾಲಿಯರ್ ಮೂಲದ ವಸುಂಧರಾ ರಾಜೆ ಸಿಂಧ್ಯಾ ಅವರನ್ನು ರಾಜಸ್ಥಾನದ ಧೋಲ್‌ಪುರ ಹಿಂದೆ ಮಹಾರಾಣಿ ಎಂದು ಒಪ್ಪಿತ್ತು. ಅನಂತರ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ, ಅವರ ನಾಯಕತ್ವವನ್ನು ಅಲ್ಲಿ ವಿರೋಧಿಸಿದವರು ಕಡಿಮೆ. (ಕೆಲವೇ ಬಿಜೆಪಿ ನಾಯಕರಷ್ಟೇ ವಿರೋಧ ಮಾಡಿದ್ದು ಎನ್ನುವವರಿದ್ದಾರೆ). ಈಗ ಪಕ್ಷದ ಪಾಲಿಗೆ ಕಳೆದು ಹೋಗಿದ್ದ ರಾಜಸ್ಥಾನವನ್ನು ಮರಳಿ ಪಡೆಯುವ ಹೊಣೆಗಾರಿಕೆಯನ್ನು ಪಕ್ಷ ವಸುಂಧರಾ ರಾಜೆ ಅವರಿಗೆ ವಹಿಸಿದೆ. ಅದನ್ನು ಅವರು ಬಲಾತ್ಕಾರದಿಂದಲೇ ಪಡೆದುಕೊಂಡಿದ್ದಾರೆ ಎನ್ನಬಹುದು.
ಇಡೀ ರಾಜ್ಯದಲ್ಲಿ ಸಂಘಟನೆಯ ಉತ್ಸಾಹಿ ತರುಣ- ತರುಣಿಯರ ದೊಡ್ಡ ಸೇನೆಯನ್ನೇ ಕಟ್ಟುವ ಕೆಲಸ ಈಗ ಆಗಬೇಕಷ್ಟೆ. ಅದು ವಸುಂಧರಾ ಅವರಿಗೆ ಅಸಾಧ್ಯವಾದದ್ದೇನೂ ಅಲ್ಲ.
-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ

Operation Sindoor ನಮ್ಮ ಆತ್ಮರಕ್ಷಣೆಯ ಕ್ರಮ, ಪರಮಾಣು ಬೆದರಿಕೆಗೆ ಎಂದಿಗೂ ಮಣಿಯಲ್ಲ: 3 'ಲಕ್ಷ್ಮಣ ರೇಖೆ' ಎಳೆದು ಪಾಕ್'ಗೆ ಭಾರತ ಖಡಕ್ ಎಚ್ಚರಿಕೆ..!