ಒಮ್ಮೆ ಸಂಗೀತ ಕಾರ್ಯಾಗಾರವೊಂದರಲ್ಲಿ ಹೀಗೊಂದು ಪ್ರಶ್ನೆ ಎದುರಾಗಿತ್ತು- 'ಪ್ರತಿಯೊಂದು ರಾಗಕ್ಕೂ ಇಂತಿಂಥದೇ ಸ್ವರಗಳು ಎಂದು ನಿರ್ಧರವಾಗಿದೆಯಲ್ಲವೆ? ಹಾಗಾದರೆ ಈ ಸ್ವರಗಳಿಂದ ರಾಗಗಳು ಹುಟ್ಟುತ್ತವೆಯೋ ಅಥವಾ ಆ ರಾಗಗಳಿಂದ ಸ್ವರಗಳೋ?'
ಬಹಳ ಆಳವಾದ ಪ್ರಶ್ನೆ ಇದು. ನಾವು ವಿದ್ಯಾರ್ಥಿಗಳೆಲ್ಲ ಅಂದುಕೊಂಡೆವು, 'ಸ್ವರಗಳನ್ನು ಹಾಡದೇ ರಾಗ ಎಂದರೆ ಏನರ್ಥ? ಸ್ವರ ಹಾಡುತ್ತ ರಾಗ ತಾನೆ? ಆದ್ದರಿಂದ ಸ್ವರಗಳೇ ಮೊದಲು' ಎಂದು ಒಕ್ಕೊರಲಿನಲ್ಲಿ ಹೇಳಿಬಿಟ್ಟೆವು. ಆಗ ಪ್ರಾರಂಭವಾಯಿತು ಅದರೊಳ ಅರ್ಥದ ಚರ್ಚೆ.
ಕಾರ್ಯಾಗಾರಕ್ಕಾಗಿ ಬಂದಿದ್ದ ಆ ವಿದ್ವಾಂಸರು ಹೇಳಿದರು, 'ಮೊದಲ ಹಂತದಲ್ಲಿ ಇದು ನಿಜ. ಸ್ವರಗಳನ್ನು ಹಾಡಿ ಹಾಡಿ ಆ ರಾಗವನ್ನು ಕಲಿಯುತ್ತ ಹೋಗುತ್ತೇವೆ. ಆದರೆ ರಾಗಗಳನ್ನು ಸಾಕ್ಷಾತ್ಕರಿಸಿಕೊಂಡ ಹಂತದಲ್ಲಿ ಆ ರಾಗವೇ ಮೊದಲು ಆವಿರ್ಭೂತವಾಗಿ ಕಲಾವಿದನ್ನು ಎಳೆದುಕೊಂಡು ಹೋಗುತ್ತದೆ. ಅದು ಕೇವಲ ಸ್ವರವಾಗಿರುವುದಿಲ್ಲ'.
ಅದಕ್ಕೇ ಒಂದು ರಾಗದ ಆಳವಾದ ಅಧ್ಯಯನ ಮಾಡಬೇಕೆಂದು ಗುರುಗಳ ಬಳಿ ಹೋದಾಗ, 'ಸರಿ ಒಂದು ರಾಗ ಹಾಡು' ಎಂದರು. ಬಾಗೇಶ್ರೀ ರಾಗ ಹಾಡಬೇಕೆಂದು ಪ್ರಾರಂಭಿಸಿದೆ. ಗುರುಗಳು ಹೇಳಿದರು, 'ನೀನು ಸಾ ಸರಿಯಾಗಿ ಹಾಡುತ್ತೀಯ. ಆದರೆ ಬಾಗೇಶ್ರೀ ರಾಗದ ಸಾ ಹಾಡುತ್ತಿಲ್ಲ!' ಬಾಗೇಶ್ರೀ ರಾಗದ ಸಾ ಷಡ್ಜ, ಪಂಚಮಗಳು ಅಚಲ ಸ್ವರಗಳಲ್ಲವೇ? ಎಲ್ಲ ರಾಗಕ್ಕೂ ಸಾ ಒಂದೆ ಅಲ್ಲವೇ? ಅರ್ಥವೇ ಆಗಲಿಲ್ಲ. ಆಗ ಅವರು ಹೇಳಿದರು- 'ನೋಡು, ನಿನ್ನ ವಿಚಾರ ನಿಜ. ಆದರೆ ಹಾಡುವಾಗ ಹೇಗಿರಬೇಕೆಂದರೆ.. ಆ ರಾಗ ಪೂರ್ತಿ ನಿನ್ನ ಮನಸ್ಸನ್ನು ತುಂಬಿ, ಒಳಗೆ ಆಗಲೇ ಅದು ಮೂರ್ತರೂಪಗೊಂಡಿರಬೇಕು. ಆಗ ನೀನು ಹಚ್ಚುವ ಆ ಮೊದಲ ಸಾ ಕೂಡ ಆ ರಾಗವನ್ನೇ ಬಿಂಬಿಸುತ್ತಿರುತ್ತದೆ. ಸೂಕ್ಷ್ಮ ಕೇಳುಗನಿಗೆ ಅದು ತಿಳಿಯುತ್ತದೆ ಕೂಡ'.
ಅವರೇ ಹೇಳುವಂತೆ, 'ಆ ರಾಗವೇ ಬಂದು ಹಾಡಿಸ್ಕೋತದ. ಹೀಗೆ ಆ ರಾಗಗಳಲ್ಲಿ ಮುಳುಗುವ ಸಾಮರ್ಥ್ಯವೇ ಆ ಕಲಾವಿದನನ್ನು ಉತ್ಕೃಷ್ಟ ಶ್ರೇಣಿಯಲ್ಲಿ ನಿಲ್ಲಿಸ್ತದ'.
ಪಂ. ಭೀಮಸೇನ ಜೋಶಿಯವರ ಸಂಪರ್ಕದಲ್ಲಿದ್ದವರು ಹೇಳುವಂತೆ ಒಂದು ಕಾರ್ಯಕ್ರಮದಲ್ಲಿ ತೋಡಿ ಹಾಡಬೇಕೆಂದರೆ 3-4 ದಿನ ಮೊದಲೇ ಅವರ ಮನ ತೋಡಿ ರಾಗದೊಳಗೆ ಮುಳುಗಿರುತ್ತಿತ್ತಂತೆ. ಕುಳಿತರೂ, ನಿಂತರೂ , ಮಾತನಾಡುತ್ತಿದ್ದರೂ ಸತತ ಅದೇ ಚಿಂತನ, ಮಥನ, ಮನನ. ಅದಕ್ಕೇ ಎಷ್ಟೋ ಬಾರಿ ತಿಳಿದವರು ಕಲಾವಿದರನ್ನು ಕಾರ್ಯಕ್ರಮಕ್ಕೆ ಮುಂಚೆ ಮಾತನಾಡಿಸಲು ಹಿಂಜರಿಯುತ್ತಾರೆ. ಎಷ್ಟೋ ಸಲ ಅವರು ಉತ್ತರವನ್ನೇ ಕೊಡದಿರುವ, ಹತ್ತಿರದವರನ್ನೇ ಗುರುತಿಸದೇ ಹೋದ ವಿಚಿತ್ರ ಪ್ರಸಂಗಗಳಿವೆ. ಈ ತನ್ಮಯತೆಯಿಂದಲೇ ಅವರ ಪ್ರತಿ ಉಸಿರೂ, ಸ್ವರ, ಸ್ವಭಾವವೇ ಆ ರಾಗಮಯವಾಗಿ ಅದ್ಭುತವಾಗಿ ಅದು ಕೇಳುಗನೆದುರು ಪ್ರತ್ಯಕ್ಷವಾಗುತ್ತದೆ.
- ಶ್ರುತಿ ಭಟ್
shrutikbhat@gmail.com