ಸಾಪ್ತಾಹಿಕಪ್ರಭ

ಸಂಧಾನ ಶಾಸ್ತ್ರಿ

ಆನೆ ಮೇಲೆ, ಒಂಟೆ ಮೇಲೆ, ಕುದುರೆ ಮೇಲೆ ಕುಳಿತು ನಾವು ಚಿಕ್ಕವಯಸ್ಸಿನಲ್ಲಿ 'ಟೂ' ಬಿಟ್ಟಿದ್ದೇವೆ. ಸಣ್ಣ ಸಣ್ಣ ಕಾರಣಗಳಿಗೆ ಅಥವಾ ವಿನಾಕಾರಣ ನಾವು ಶಾಲಾದಿನಗಳಲ್ಲಿ ನಮಗೆ ತುಂಬಾ ಹತ್ತಿರವಾದವರ ಜೊತೆ ಮಾತು ಬಿಟ್ಟಿದ್ದೇವೆ. ಸ್ವಲ್ಪ ಹೊತ್ತಿನ ನಂತರವೇ ನಾವು ಹಾಗೆ ಮಾಡಬಾರದಿತ್ತು ಎಂದೆನಿಸಿ ಅವರನ್ನು ಮಾತನಾಡಿಸಬೇಕೆನಿಸುತ್ತದೆ. ಆದರೆ ಏನೋ ಅಳುಕು. ನಾವಾಗಿಯೇ ಮಾತನಾಡಿಸಲು ಹೋದರೆ ಮುಖಭಂಗವಾಗಬಹುದು ಅಥವಾ ನಾವು ಸೋತಂತಾಗುವುದು ಎಂಬ ನಂಬಿಕೆ ನನ್ನ ಕತ್ತರಿ ಬೆರಳಿನ ಮಧ್ಯೆ ತನ್ನ ಬೆರಳನ್ನು ಹಾಕಿ ಬಿಡಿಸಿಕೊಳ್ಳದಿದ್ದರೆ? (ಅದೊಂದು ಸಂಗ ಕಟ್ಟುವ, ಸ್ನೇಹ ಪುನಹ ಸ್ಥಾಪಿಸುವ ಪ್ರಕ್ರಿಯೆ) ಅವಮಾನವಾಗಿಬಿಟ್ಟರೆ ಎಂಬ ಹಿಂಜರಿಕೆ. ನಾನು ಓದುತ್ತಿದ್ದ ಮಾಧ್ಯಮಿಕ ಶಾಲೆಯಲ್ಲಿ ರಾಮಶಾಸ್ತ್ರಿಗಳೆಂಬ ಕನ್ನಡ ಮೇಷ್ಟ್ರು ಕ್ಲಾಸಿಗೆ ಬಂದು ಹಾಜರಾತಿ ತೆಗೆದುಕೊಂಡು ತಕ್ಷಣ ಮಾಡುತ್ತಿದ್ದ ಮೊದಲ ಕೆಲಸವೆಂದರೆ 'ಇವತ್ತು ಯಾರು ಯಾರು ಮಾತುಬಿಟ್ಟಿದ್ದಾರೆ ?' ಎಂದು ವಿಚಾರಿಸುತ್ತಿದ್ದರು. ಹುಡುಗರಿಗೆ ಎಷ್ಟೊಂದು ಸಂಭ್ರಮ. ಎಲ್ಲರೂ ಉತ್ಸಾಹದಿಂದ 'ಸಾರ್ ರಮೇಶ ಸುರೇಶ ಮಾತುಬಿಟ್ಟಿದ್ದಾರೆ ಸಾರ್‌' ಎಂದು ಕಿರುಚುತ್ತಿದ್ದರು. ಸಂಗ ಬಿಟ್ಟ ಆ ಇಬ್ಬರನ್ನು ಅಕ್ಕಪಕ್ಕದಲ್ಲಿ ಕೂರುವಂತೆ ಮಾಡುತ್ತಿದ್ದರು. ಹಿಂದೇಟು ಹಾಕಿದರೆ ಮಿಕ್ಕ ಹುಡುಗರು ಬಲವಂತವಾಗಿ ಎಳೆದು ಸೇರಿಸುತ್ತಿದ್ದರು. ಅಧ್ಯಾಪಕರ ಆಣತಿಯಂತೆ ರಮೇಶ ಸುರೇಶ ಸಂಗ ಕಟ್ಟಬೇಕು ಹಾಗೂ ಮಾತನಾಡಬೇಕು. ಎಲ್ಲ ಹುಡುಗರು ಜೋರಾಗಿ ಚಪ್ಪಾಳೆ ತಟ್ಟಬೇಕು. ಶಾಸ್ತ್ರಿಗಳು ತಮ್ಮ ಜೇಬಿನಿಂದ ಒಂದೊಂದು ಸುಂಟಿ ಪೆಪ್ಪರ್‌ಮೆಂಟೋ, ಕಿತ್ತಳೆ ತೊಳೆ ಪೆಪ್ಪರ್‌ಮೆಂಟೋ ಅವರಿಬ್ಬರಿಗೆ ಕೊಡುತ್ತಿದ್ದರು. ಬಹುಶಃ ಈ ಕಾರಣಕ್ಕಾಗೊ ಏನೋ ದಿನೇ ದಿನೆ ಸಂಗ ಬಿಡುವವರ ಸಂಖ್ಯೆ ಜಾಸ್ತಿಯಾಗುತ್ತಿದ್ದಿರಬಹುದು.
ಪ್ರತಿದಿನ ನಡೆಯುತ್ತಿದ್ದ ಈ ಶಾಸ್ತ್ರಿಗಳ ಸಂಧಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಯುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಶಾಸ್ತ್ರಿ ಮೇಷ್ಟ್ರು ಸತ್ತಾಗ ಅದು ನಿಂತುಹೋಯಿತು. ಅದರ ಪರಿಣಾಮ ನನ್ನ ಮೇಲೆ ಶಾಶ್ವತವಾಗಿ ಆಯಿತು. ನನ್ನ ಸಹಪಾಠಿ ಶ್ರೀಧರನ ಸಂಗ ಬಿಟ್ಟ ನಾನು ಮತ್ತೆ ಅವನನ್ನು ಮಾತನಾಡಿಸಲು ಇಡೀ ಜೀವನದಲ್ಲೇ ಸಾಧ್ಯವಾಗಲಿಲ್ಲ. ಅತಿ ಪ್ರತಿಭಾವಂತನಾದ ಶ್ರೀಧರ್ ಎಂಜಿನಿಯರಿಂಗ್ ಓದುತ್ತಿರುವಾಗ ಒಂದು ದಿನ ಮೆದುಳು ಜ್ವರ ಬಂದು ಸತ್ತುಹೋದ. ವಿಚಾರ ತಿಳಿದೊಡನೆ ಅವನ ಮನೆಗೆ ಓಡಿದೆ. ಆದರೆ ಮಾತನಾಡುವುದು ಹೇಗೆ ? ಸುಮ್ಮನೆ ನಿಂತಿದ್ದ ನನಗೆ ಶ್ರೀಧರ್ ಕಸಿನ್ ಶ್ರೀನಿವಾಸ ಕಾಣಿಸಿಕೊಂಡ. ಅವನೊಡನೆಯೂ ನಾನು ಮಾತು ಬಿಟ್ಟಿದ್ದೆ. ನನಗರಿವಿಲ್ಲದೆ ಅವನನ್ನು ಮಾತನಾಡಿಸಿಬಿಟ್ಟೆ. ಅವನಲ್ಲೂ ನನ್ನನ್ನು ಮಾತನಾಡಿಸುವ ಕಾತುರ ಕಾಣುತ್ತಿತ್ತು. ನಮ್ಮಿಬ್ಬರ ಕಣ್ಣಿನಲ್ಲೂ ಶ್ರೀಧರ ಹಾಗೂ ರಾಮಶಾಸ್ತ್ರಿ ಮೇಷ್ಟ್ರು ಕಾಣಿಸುತ್ತಿದ್ದರು ಎಂದು ಒಳಮನಸ್ಸು ಹೇಳುತ್ತಿತ್ತು. ಸ್ನೇಹ ಸಂಪರ್ಕವನ್ನು ಬೆಸೆಯುತ್ತಿದ್ದ ರಾಮಶಾಸ್ತ್ರಿಯವರಂಥ ಅಧ್ಯಾಪಕರ ಸಂಖ್ಯೆ ಹೆಚ್ಚಾದರೆ ಎಷ್ಟು ಚೆನ್ನ !

 - ಕೃಷ್ಣ ಸುಬ್ಬರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್

3rd T20I: ಆಲೌಟ್ ನಲ್ಲೂ ವಿಚಿತ್ರ ದಾಖಲೆ ಬರೆದ ಟೀಂ ಇಂಡಿಯಾ!

"ಜಗತ್ತಿಗೆ ಅಗತ್ಯವಿರುವ ಪರಿಹಾರಗಳು ನಿಮ್ಮಲ್ಲಿವೆ": ಚೆನ್ನೈನಲ್ಲಿ 'Gen Z ಯನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತು

3rd T20I: ಅಭಿಷೇಕ್ ಶರ್ಮಾ ಭರ್ಜರಿ ಬ್ಯಾಟಿಂಗ್, ವಿಂಡೀಸ್ ಗೆ ಗೆಲ್ಲಲು 224 ರನ್ ಗುರಿ ನೀಡಿದ ಭಾರತ