ಸಾಪ್ತಾಹಿಕಪ್ರಭ

ತುಂಬುತಿದೆ ಹಿಮಗಿರಿಯ ಹಳ್ಳಕೊಳ್ಳ

ರಾಜ ಗಾಂಭೀರ್ಯದಿಂದ ನಿಂತಿತ್ತು ಕುಂಗ್ರಿ ಬೌದ್ಧವಿಹಾರ. ಮಧ್ಯದ ಅಂಗಣದಲ್ಲಿ ಮಕ್ಕಳು ಸಜ್ಜಾಗಿದ್ದರು. ಮೊನಾಸ್ಟ್ರಿಯ ವರಾಂಡದಲ್ಲಿ ಯತಿಗಳು ಕೂತಿದ್ದರು. ಹಿರಿಯ ಸನ್ಯಾಸಿಗಳ್ಯಾರೋ ಧರ್ಮಶಾಲಾದಿಂದ ಈ ಉತ್ಸವಕ್ಕಾಗಿಯೇ ಬಂದಿದ್ದರಂತೆ. ಅವರ ಜತೆಗೆ ಒಬ್ಬ ಪುಟ್ಟ ಬಾಲ ಲಾಮಾನೂ ಇದ್ದ. ಆತ ಯಾವುದೋ ಉನ್ನತ ಸ್ಥಾನದಲ್ಲಿದ್ದವನೇ ಆಗಿರಬೇಕು ಎಂಬುದು ಆತನ ಸುತ್ತಲಿದ್ದ ಲಾಮಾಗಳು ತೋರಿಸುತ್ತಿದ್ದ ಅಭಿಮಾನದಿಂದಲೇ ಗೊತ್ತಾಗುತ್ತಿತ್ತು. ಈತ ಯಾವುದೋ ಹಿರಿಯ ಲಾಮಾನ ಮರುಜನ್ಮ ಇರಬಹುದು ಎಂದುಕೊಂಡೆವು.
ಟಿಬೆಟಿಯನ್ ಸಂಸ್ಕೃತಿಯಲ್ಲಿ ಪುನರ್ಜನ್ಮದ ಕಲ್ಪನೆ ಪ್ರಮುಖ. ಇಲ್ಲಿ ದಲಾಯಿ ಲಾಮಾ ಎಂಬುದೊಂದು ಸ್ಥಾನ. ಅವರು ಎಂದಿಗೂ ಸಾಯುವುದಿಲ್ಲ. ಸತ್ತ ಕೂಡಲೇ ಇನ್ನೊಂದು ಮಗುವಾಗಿ ಹುಟ್ಟಿ ಬರುತ್ತಾರೆ. ಲಾಮಾ ಎಲ್ಲಿ ಮರುಹುಟ್ಟು ಪಡೆಡಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಅವರದೇ ಅಸಕ್ತಿಕರ ವಿಧಿಗಳಿವೆ. ನೀವು ಹಾಲಿವುಡ್ ನಿರ್ದೇಶಕ ಮಾರ್ಟಿನ್ ಸ್ಕಾರ್ಸೆಸೆಯ 'ಕುಂದುನ್‌' ಚಿತ್ರ ನೋಡಿದ್ದರೆ ಇದು ಗೊತ್ತಿರುತ್ತದೆ. ಇದು ದಲಾಯಿ ಲಾಮರ ಜೀವನ ಕಥನ ಹೇಳುವ ಅದ್ಭುತ ಮೂವಿ.
ಮೊದಲು ಒಂದು ರೂಪಕ. ಸ್ಥಳೀಯ ಜನರಂತೆ ಬಟ್ಟೆ ತೊಟ್ಟ ಪುಟ್ಟ ಪುಟ್ಟ ಮಕ್ಕಳು ಒಟ್ಟು ಸೇರಿದರು. ಒಬ್ಬ ದೊಡ್ಡ ಹಳದಿ ಟೊಪ್ಪಿ ಧರಿಸಿ, ವೇದಿಕೆಯ ಮೇಲೇರಿದ. ಆತ ಸ್ಪಿಟಿಯ ಮೂಲಕ ಹಾದುಹೋಗುತ್ತಿದ್ದ ಬೌದ್ಧ ಸಂತ. ಆತನ ಕನಸಲ್ಲಿ ಬುದ್ಧ ಬರುತ್ತಾನೆ. ಅಲ್ಲಿ 'ಧಮ್ಮ' ಸ್ಥಾಪಿಸಬೇಕೆಂಬ ಆದೇಶ. ಸ್ಥಳೀಯರ ಪ್ರತಿಭಟನೆ. ಸ್ಪಿಟಿ ಕಣಿವೆಗೆ ಮಾರಕ ರೋಗಗಳ ದಾಳಿ. ಸಂತನಿಂದ ಅವುಗಳ ನಿವಾರಣೆ. ಎಲ್ಲವೂ ಹಾಡು, ಮನಮುಟ್ಟುವ ಸಂಭಾಷಣೆಗಳ ಮೂಲಕ. ಇದು ಸ್ಪಿಟಿಯಲ್ಲಿ ನೂರಾರು ವಿಹಾರಗಳನ್ನು ಕಟ್ಟಿದ ರಿಂಚೆನ್ ಝಾಂಗ್‌ಪೋ ಕಥನ ಇದ್ದಿರಬಹುದು. ಅವರ ನಿರೂಪಣೆಯಲ್ಲಿ ಬೋಟಿ ಮತ್ತು ಹಿಂದಿ ಮಿಕ್ಸ್ ಆಗಿದ್ದರಿಂದ ಸಂಪೂರ್ಣ ಅರ್ಥವಾಗುತ್ತಿರಲಿಲ್ಲ. ಧರ್ಮ ಸ್ಥಾಪನೆಯ ಹಿಂದೆ ನಾಟಕವಾಗಿಸಬಲ್ಲ ರಂಜನೀಯ ಕತೆಗಳಿರುತ್ತವೆ; ಕಠೋರ ಮುಖಾಮುಖಿಯ ನಿಜಸತ್ಯಗಳು ರೂಪಕವಾಗಿಸಲಾಗದೆ ಅಡಗಿರುತ್ತವೆ.
ಅದಾದ ಮೇಲೆ ಚಾರ್ಚಾ ನೃತ್ಯ. ಒಂದಷ್ಟು ಹೆಣ್ಣುಮಕ್ಕಳು ನವಿಲುಗರಿಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಬಂದು ಸ್ಪಿಟಿ ಗಾಯನಕ್ಕೆ ಕುಣಿದರು. ತಾಳಗಳು ಅಲ್ಲಲ್ಲಿ ತಪ್ಪಿದವು. ನಾಲಿಗೆ ಕಚ್ಚಿಕೊಂಡು ನಾಚಿಕೆ ತೋರಿಸಿದರು. ಬಳಿಕ ಕಿನ್ನೌರಿ ಡ್ಯಾನ್ಸ್. ಝಗಮಗಿಸುವ ಮಣಿಗಳು, ಕಲ್ಲಿನ ಆಭರಣಗಳಿಂದ ಅಲಂಕರಿಸಿಕೊಂಡು ತರುಣಿಯರು ಬಂದು ಹಾಡುಗಳಿಗೆ ಕುಣಿದರು. ಇವರು ತೋರಿಸಿದ್ದು ಸ್ಪಿಟಿಯ ಪಕ್ಕದ ಕಿನ್ನೌರ್ ಕಣಿವೆಯ ಜನಪದವನ್ನು. ಈ ಕಿನ್ನೌರ್ ಎಂಬ ಕಿನ್ನರಭೂಮಿಯ ಬಗ್ಗೆ ನಿಮಗೆ ಇನ್ನೊಮ್ಮೆ ಹೇಳುವೆ.
ಪ್ರತಿಯೊಂದು ಐಟಂ ಮುಗಿದಾಗಲೂ ನೆರೆದ ಹಳ್ಳಿಜನ ಭಾರಿ ಚಪ್ಪಾಳೆ ತಟ್ಟುತ್ತಿದ್ದರು. ಮೇಲ್ನೋಟಕ್ಕೆ ನಮ್ಮ ಹಳ್ಳಿಯ ಸ್ಕೂಲ್‌ಡೇಗಳಿಗೂ ಆ ಉತ್ಸವಕ್ಕೂ ಅಂಥ ಫರಕ್ಕೇನೂ ಕಾಣಿಸಲಿಲ್ಲ. ತಮ್ಮ ಜನಜೀವನದ ರಂಜನೀಯ ಕ್ಷಣಗಳನ್ನು ಕಲೆಯ ರೂಪದಲ್ಲಿ ನೋಡಿ ಖುಷಿಪಡುವುದು ಎಲ್ಲ ಕಾಲಗಳ, ಎಲ್ಲ ದೇಶಗಳ ಜನರ ಸಹಜ ಸ್ವಭಾವವೇ ತಾನೆ? ಆದರೆ ವ್ಯತ್ಯಾಸ ಇದ್ದದ್ದು ಅವರ ಸಂಭ್ರಮ, ಮುಗ್ಧತೆಯಲ್ಲಿ. ನಮ್ಮೂರ ಜನ ಉಳಿಸಿಕೊಂಡಿಲ್ಲದ ಮುಗ್ಧತೆ ಅಲ್ಲಿ ಕಂಡಿತು. ಅವರ ಕಣ್ಣುಗಳಲ್ಲಿ ಸಂಭ್ರಮದ ಕಣ್ಣೀರಿತ್ತು. ವರ್ಷಕ್ಕೊಮ್ಮೆ ಭೇಟಿಯಾಗುವ ಅಲ್ಲಿನ ಹೆಣ್ಣುಮಕ್ಕಳು, ಥೇಟ್ ನಮ್ಮಂತೆಯೇ, ಒಟ್ಟಿಗೆ ಕೂತು ಹರಟುತ್ತಿದ್ದರು.
ದೂರದಲ್ಲಿ ಮುಗುಳುನಗುತ್ತ ತಣ್ಣಗೆ ಕೂತಿರುವಂತೆ ಸುತ್ತ ಬಿಳುಪು ಹಿಮ ಹೊತ್ತ ಬೆಟ್ಟಸಾಲು. ಅವುಗಳಾಚೆಯಿಂದ ಕಿನ್ನರರು, ಗಂಧರ್ವರು ತಮ್ಮ ಹಾಡುಗಳನ್ನು ಹರಿಬಿಟ್ಟಂತೆ; ದೇವತೆಗಳು ವೀಣಾವಾದನದ ತಂಗಾಳಿಯನ್ನು ಸೂಸಿದಂತೆ; ರಾಗಾಮೃತವೊಂದು ಅಲ್ಲಿನ ಹವೆಯಲ್ಲಿ ಬೆರೆತು ನಮಗೆಲ್ಲ ಜೀವಚೈತನ್ಯವನ್ನು ಸ್ವಲ್ಪಸ್ವಲ್ಪವೇ ಊಡಿಸಿದಂತೆ; ಸ್ವಪ್ನಲೋಕದಲ್ಲಿ ತೇಲಿ ತೇಲಿಹೋದಂತೆ... ಅಡಿಗರ 'ಹಿಮಗಿರಿಯ ಕಂದರ' ಪದ್ಯದ ಸಾಲುಗಳು ನೆನಪಾದವು:
ಏಕವರ್ಣದವರ್ಣನೀಯ ಶಾಂತಿಯ ತಂತಿ
ಮೀಟುತಿರೆ ಅಲ್ಲಲ್ಲಿ ಹಸುರ ಬೆರಳು,
ದೇವಲೋಕದ ಪಕ್ಷಿ ಬಂದು ಕೊಂಕಲು ಕೊರಳು
ಅರಳುವುದು ಮಂದಾರ ಗೀತದುರುಳು.
ನಾರದರ ತುಂಬುರರ ತಂಬೂರಿದನಿ ತುಳುಕಿ
ತುಂಬುತಿದೆ ಹಿಮಗಿರಿಯ ಹಳ್ಳಕೊಳ್ಳ...
(ಮುಂದಿನ ವಾರ- ದಮ್ ಇದ್ರೆ ಧಂಕರ್)
= ಹರೀಶ್ ಕೇರ
harishkhera@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ