ಮಕ್ಕಳ ಸಾಹಿತ್ಯ ಎಂದು ಹೇಳಿ ದೊಡ್ಡವರು ಬರೆದುಕೊಟ್ಟಿದನ್ನೇ ಮಕ್ಕಳು ತಮ್ಮ ಸಾಹಿತ್ಯವೆಂದು ಒಪ್ಪಿಕೊಳ್ಳಬೇಕೆ? ಮಕ್ಕಳು ತಮ್ಮ ಸಾಹಿತ್ಯವನ್ನು ತಾವೇ ನಿರ್ಮಿಸಿಕೊಳ್ಳಲಾರರೇ? ಎಂಬ ಮಹತ್ವದ ಪ್ರಶ್ನೆಯನ್ನು ನಾವು ಇಂದು ಎತ್ತಬೇಕು. ಮಕ್ಕಳ ಸಾಹಿತ್ಯದ ಪರ್ಸನಲ್ ಸೆಶನ್ ಬಗ್ಗೆ ಚಿಂತಿಸಬೇಕು. ಮಗುವನ್ನು ಪ್ಯಾಸಿವ್ ಲರ್ನ್ ಸ್ಥಿತಿಯಿಂದ ಆಕ್ಟಿವ್ ಲರ್ನ್ ಮಾಡಲು ಮಗುವೇ ತನ್ನ ಸಾಹಿತ್ಯವನ್ನು ನಿರ್ಮಿಸಿಕೊಳ್ಳಲು ಹೇಳಿಕೊಡುವುದು ಒಂದು ಶ್ರೇಷ್ಠವಾದ ವಿಧಾನವಾಗಬಹುದು.
ಮಕ್ಕಳಲ್ಲಿ ಬಹಳ ಸೃಜನಶೀಲ ಶಕ್ತಿಯಿರುತ್ತದೆ. ಏಳು- ಎಂಟು- ಒಂಬತ್ತು- ಹತ್ತು ಈ ನಾಲ್ಕು ತರಗತಿಗಳ ಮಕ್ಕಳಿಗೆ ಒಂದಷ್ಟು ಮಕ್ಕಳ ಕಥೆಗಳು, ಹಾಡುಗಳು ಮತ್ತು ನಾಟಕಗಳನ್ನು ಓದುವ- ಬರೆಯುವ ಕಮ್ಮಟಗಳನ್ನು ನಡೆಸಿದರೆ, ಅವರಲ್ಲಿ ಬಹಳ ಮಕ್ಕಳು ತಾವು ಕೂಡ ಕವನಗಳನ್ನು ಮತ್ತು ಕಥೆಗಳನ್ನು ಬರೆಯಬಲ್ಲವೆಂಬುದನ್ನು ತೋರಿಸಿಕೊಡುತ್ತಾರೆ. ಇಷ್ಟಕ್ಕೂ ನಾವು ಮಕ್ಕಳಿಗೆ ಶಿಶು ಸಾಹಿತ್ಯವೆಂದು ಏನನ್ನಾದರೂ ಕೊಡುವ ಉದ್ದೇಶವಾದರೂ ಏನು? ಕೇವಲ ಓದಿ ಹಾಡಿ ಸಂತೋಷಪಡಲಿ ಎಂದಷ್ಟೇ ಅಲ್ಲವಲ್ಲ ಅವರಲ್ಲಿ ವಿಚಾರಶೀಲತೆ, ಸೃಜನಶೀಲತೆ, ಕಲ್ಪನಾಶಕ್ತಿ ಬೆಳೆಯಬೇಕು ಎನ್ನುವುದು ನಮ್ಮ ಉದ್ದೇಶ ತಾನೆ? ಅದಕ್ಕೆ ನಾವು ಅವರಿಗೆ ಕ್ರಿಯಾಶೀಲ ವಿಧಾನವನ್ನು ತೋರಿಸಿಕೊಡಬೇಕು. ಪುಸ್ತಕಗಳಲ್ಲಿ ಮುದ್ರಿತವಾಗಿ ದೊರೆಯುವುದಷ್ಟೇ ಶಿಶುಸಾಹಿತ್ಯ ಎಂಬ ನಂಬಿಕೆಯನ್ನು ತೊರೆಯಬೇಕು. ಇವತ್ತು ಮಕ್ಕಳಲ್ಲಿರುವ ವಿಚಾರಶೀಲತೆ, ಸೃಜನಶೀಲತೆ, ಕಲ್ಪನಾಶಕ್ತಿ ಬೆಳೆಯದಿದ್ದರೆ, ಅದಕ್ಕೆ ಕಾರಣ ಅದನ್ನು ಬೆಳೆಯದಂತೆ ಹತ್ತಿಕ್ಕುವ ತಾಯಿತಂದೆಯರೇ ಎಂದು ತಿಳಿಯಬೇಕಾಗುತ್ತದೆ. ಮಕ್ಕಳು ಎಂಜಿನಿಯರಾಗುವಲ್ಲಿ ಇದು ಅಡ್ಡಿಯಾಗಬಹುದು ಎಂಬ ಭಯ ಬಹಳ ಮಂದಿಗೆ. ಈ ಭಯ ಎಷ್ಟು ಬಲವಾಗಿರುತ್ತದೆ ಎಂದರೆ, ಮಗು ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ತೋರಿದರೂ ತಾಯಿತಂದೆಯರಿಗೆ ಭಯವಾಗುತ್ತದೆ! ಎಂಜಿನಿಯರ್ ಎಂದರೆ ಬಹಳ ಮಂದಿ ತಿಳಿದುಕೊಂಡಿರುವುದು ಕೇವಲ ಟೆಕ್ನೀಶಿಯನ್ ಎಂದು, ಸೈಂಟಿಸ್ಟ್ ಎಂದು ಅಲ್ಲ! ಎಂಜಿನಿಯರಾಗಬೇಕಾದವರು ಎಂಜಿನಿಯರಾಗಲಿ. ಆದರೆ ಅವರದು ಬರಡು ವ್ಯಕ್ತಿತ್ವವಾಗದಿರಲಿ. ಶಾಲೆಯಲ್ಲಿ ಓದುವ ಕಾಲಕ್ಕೆ ಹಾಡುತ್ತಿದ್ದ, ಕಥೆ ಕವನ ಬರೆಯುತ್ತಿದ್ದ ಮನಸ್ಸುಗಳು ಮುಂದೆ ಕೇವಲ ಎಂಜಿನಿಯರ್ ಆಗಿ, ವರ್ಷಗಳ ಬಳಿಕ, ತಾವು ಬಹಳ ಸುಂದರವಾದುದೇನನ್ನೋ ಕಳೆದುಕೊಂಡೆವಲ್ಲ ಎಂದು ಪರಿತಪಿಸುವಂತಾಗದಿರಲಿ.
ಇವತ್ತು ಸುಮಾರು ಮೂರು ವರ್ಷ ಪ್ರಾಯವಾಗುವುದಕ್ಕೂ ಮೊದಲೇ ಮಗು ಟಿವಿಯಲ್ಲಿ ಕಾರ್ಟೂನ್‌ಗಳನ್ನು ನೋಡತೊಡಗುತ್ತದೆ. ಈ ಕಾರ್ಟೂನ್ ಚಿತ್ರಗಳನ್ನು ಒಂದರ್ಥದಲ್ಲಿ ಅಪ್ರಬುದ್ಧ ಮಕ್ಕಳ ದೃಶ್ಯ ಸಾಹಿತ್ಯ ಎನ್ನುವುದಾದರೆ ಇದರಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ಹೋಗಲಾಡಿಸುವಂಥ ಬೇರೆ ಸಾಹಿತ್ಯವನ್ನು ನೀಡಬೇಕಾದ ಅಗತ್ಯವಿದೆ. ಇಲ್ಲವಾದರೆ ಮಕ್ಕಳಲ್ಲಿ ಪ್ರಬುದ್ಧ ಚಿಂತನೆ ಮೂಡದೆ ಇರಬಹುದು!
= ಕೆ.ಟಿ. ಗಟ್ಟಿ
(ಮಕ್ಕಳ ಸಾಹಿತ್ಯದ ರೀತಿ ನೀತಿಗಳು)