ಸಾಪ್ತಾಹಿಕಪ್ರಭ

ನೋಡಾ ಕೆನಡಾ

ಇದೇನು ಈ CANNAಡಿಯನ ಪ್ರೀತಿ? ಅಂದರ ಕೆನಡಾ ದೇಶದಾಗ ಇರೋ ಕನ್ನಡಿಗರ ಕನ್ನಡ ಪ್ರೀತಿ ಅಂತ. ಇದನ್ನು ಖುದ್ದು ನೋಡಲಿಕ್ಕೆ ಸಿಕ್ಕದ್ದು ಕೆನಡಾದ ಕನ್ನಡಿಗರ 2012ರ 'ನಾಡಹಬ್ಬ' ಕಾರ್ಯಕ್ರಮದಾಗ. ನೀವು ಕೆನಡಾದ ಸೌಂದರ್ಯ ನೋಡಬೇಕಾದರ ಕೆನಡಾಕ್ಕ ಅಂತನ ಹೋಗಬೇಕು. ನಾಲ್ಕ ವಾರ ಇದ್ದು ಅಲ್ಲಿನ ಕನ್ನಡಿಗರ ಪ್ರೀತಿ ಜೊತೆ ಆ ದೇಶದ ಸೊಬಗೂ ನೋಡಿ ಬರಬೇಕು.
ಮೂರ್ನಾಲ್ಕು ದಶಕಗಳಿಂದ ಕೆನಡಾದಾಗ ನೆಲೆಸಿರೋ ಕನ್ನಡಿಗರ ಕಥೆಗಳು ಭಾಳ ರೋಚಕ ಅವ. ಕನ್ನಡಿಗರು ಕೆಲವರಿಗೆ ವಿದೇಶಕ್ಕ ಹೋಗಿ ಅಲ್ಲೇ ಯಶಸ್ವಿಯಾಗೋದು ನೀರು ಕುಡದಷ್ಟು ಹಗುರ. ಆದರ ಹಲವರಿಗೆ ಅದು ಕಷ್ಟಗಳ ದಂಡಕಾರಣ್ಯದಾಗ ಮಿಣಕ- ಮಿಣಕ ದೀಪ ಹಿಡಿದು ಯಶಸ್ವಿಯಾದ ಕಥಾನಕ.
ಯುವರಾಜ ಪಾಟೀಲ ಕರ್ನಾಟಕದ ವಿಜಾಪುರದ ಕೊಂಡುಗುಳಿ ಗ್ರಾಮದ ಗೌಡರ ಮನೆತನದ ಹಿರಿಯ ಹುಡುಗ. ಎಂಜಿನಿಯರಿಂಗ್ ಪದವಿ ಪಡೆದು ಉದ್ಯೋಗಕ್ಕ ಬೆಂಗಳೂರಿಗೆ ಬಂದ. ಇಲ್ಲಿಂದ ಕೆನಡಾಕ್ಕ ಹಾರಿದ. ಒಟ್ಟಾವಾ ನಗರದಾಗ ಇನ್ನೊಬ್ಬ ಕನ್ನಡಿಗರಾದ ರಂಗ ಜಹಗಿರದಾರರ ಸಂಪರ್ಕಕ್ಕೆ ಬಂದ. ಅವರು 1968ರಾಗ ಎಂಜಿನಿಯರಾಗಿ ಕೆನಡಾ ಕಂಡವರು. ಕನ್ನಡ ಕೆಲಸದಾಗ ತೊಡಗಿಸಿಕೊಂಡರು. ಇದು ಎಲ್ಲ ನಡೆದದ್ದು 2000ನೇ ಇಸವಿಯೊಳಗ.
ಯುವರಾಜರ ಧರ್ಮಪತ್ನಿನೂ ಎಂಜಿನಿಯರ್, ಕೊಪ್ಪಳ ಜಿಲ್ಲಾದ ಮುಧೋಳ ದೇಸಾಯರ ಪುತ್ರಿ ಗೀತಾ. ಇವರು ಒಟ್ಟಾವಾದಿಂದ ಟೊರೆಂಟೊ ಹತ್ತಿರ ಇರೋ ಆರೋರಾಗೆ 2006ರಾಗ ಶಿಫ್ಟಾದರು. ಮುಂದ ಅಲ್ಲಿನ ಕನ್ನಡ ಸಂಘದ ಒಡನಾಟ ಶುರು ಆತು. 2010-11ರಾಗ ಯುವರಾಜ ಪಾಟೀಲ ಸಂಘದ ಅಧ್ಯಕ್ಷರಾದರು. ಆಗ ನನ್ನನ್ನ 'ಆಲ್ ದಿ ಬೆಸ್ಟ್‌' ನಾಟಕ ತಗೊಂಡು ಕೆನಡಾಕ್ಕ ಬರ್ರಿ ಅಂತ ಆಹ್ವಾನಿಸಿದ್ದರು. ಕಾರಣಾಂತರದಿಂದ 'ಆಲ್ ದಿ ಬೆಸ್ಟ್‌' ಬದಲಾಗಿ 'ರಾಶಿಚಕ್ರ' ಪ್ರದರ್ಶನ ಆತು.
ಅದ ಆಹ್ವಾನದ ಮ್ಯಾಲೆ ಕೆನಡಾದಾಗಿನ ಮೂರು ಊರುಗಳೊಳಗ ರಂಗಪ್ರದರ್ಶನ ನೀಡೋದಲ್ಲದ ಟೊರೆಂಟೊದ ಕನ್ನಡ ರಂಗಪ್ರಿಯರಿಗಾಗಿ ಒಂದು ರಂಗ ಶಿಬಿರ ಮಾಡಿ 'ನಾಗರಿಕತೆಯ ಹೊಸ್ತಿಲಲ್ಲಿ' ಎಂಬ ಸಣ್ಣ ಪ್ರಯೋಗ ನಿರ್ದೇಶಿಸಿದೆ. ಈ ಎಲ್ಲ ರಂಗಸಾಧ್ಯತೆಗಳಿಗೆ ಅಲ್ಲಿಯ ಸದ್ಯದ ಕನ್ನಡ ಸಂಘದ ಅಧ್ಯಕ್ಷೆ ವೈಜಯಂತಿ ಚಂದರ ಮತ್ತು ಅವರ ಪದಾಧಿಕಾರಿಗಳ ಟೀಮು ಬೆಂಬಲ ನೀಡಿತು.
ಟೊರೆಂಟೊಕ್ಕ ಹೊಂಟೇನಿ ಅಂತ ಗೊತ್ತಾದ ದಿವಸನ 'ನಮ್ಮ ಮಗಳ ಮನೆಗೆ ಹೋಗಿ ಬರಬೇಕು' ಅಂತ ಸದಾನಂದ ಮೈಯ್ಯರು ಹೇಳಿದ್ದರು. ಅವರ ಮಗಳು ಶಾಂತಲಾ- ಅಳಿಯ ಚೇತನ ಭಾರದ್ವಾಜ ಅಲ್ಲಿರತಾರ. ಹೊರಗ ವಾತಾವರಣ ಮೈನಸ್ ಎರಡು ಡಿಗ್ರಿ, ಬಿಸಿಬಿಸಿ ರಸಂನ ನಾಲ್ಕು ಬಟ್ಟಲು ಖಾಲಿ ಮಾಡಿದೆ. ಹರಟಿ-ಚಾಸ್ಟಿ ಮುಗಿಸಿ 'ಮತ್ತ ಸಿಗೋಣು' ಅಂದು ಮನಿಗೆ ಬಂದೆ.
'ನಾಡಹಬ್ಬ'ಕ್ಕ ಹೋದಾಗ ಶಿವಾ ದೇಸಾಯಿ, ವಿಜಯ ಐವಳ್ಳಿ ಮತ್ತು ಮಂಜು ಕುಪ್ಪ ಎಂಬ ಮೂವರು ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಪರ್ಕನೂ ಆತು. ಶಿವಾ ಕಲಬುರ್ಗಿಯವರು. ವಿಜಯ ಹುಬ್ಬಳ್ಳಿಯವರು ಮತ್ತು ಮಂಜು ಮೈಸೂರಿನವರು. ಮೂವರೂ ತಮ್ಮ ಧಾಡಸಿತನ ಮತ್ತ ವ್ಯವಹಾರ ನೈಪುಣ್ಯತೆಯಿಂದ ಯಶಸ್ಸನ್ನು ಕಂಡ ಜಾಣರು. ಕೆನಡಾದಾಗ ನಡೆಯುವ ಎಲ್ಲ ಕನ್ನಡ ಕೆಲಸಗಳಿಗೆ ಧನಸಹಾಯ ಮಾಡೋದಲ್ಲದ ನೈತಿಕ ಬೆಂಬಲ ಕೊಟ್ಟು ಹುರಿದುಂಬಿಸುವವರು.
ಧಾರವಾಡದ ಪ್ರಸಿದ್ಧ ಎನ್‌ಟಿಟಿಎಫ್ ಸಂಸ್ಥೆಯೊಳಗ ಪದವಿ ಪಡೆದ ಅನೇಕ ಟೂಲ್ ಆ್ಯಂಡ್ ಡೈ ಮೇಕರ್ಸ್  ಈಗ ಕೆನಡಾದ ಸತ್ಪ್ರಜೆಗಳು. ಅದರಾಗ ನಾಗಭೂಷಣ ಮಧ್ಯಸ್ಥ, ವಿಷ್ಣು ಭಟ್, ಬಸವರಾಜ ಹುನಗುಂದ, ವಿನಾಯಕ ಹಬ್ಬು ನನಗ ಮೊದಲಿಂದ ಪರಿಚಿತರು. ಇವರೆಲ್ಲ ನನ್ನ ತಮ್ಮ ಗೋಪಾಲ ಸರದೇಶಪಾಂಡೆಯ ಸಹಪಾಠಿಗಳು. ಕೆನಡಾ ನನಗ ತೋರಿಸುವ ಜವಾಬ್ದಾರಿ ಇವರದಾಗಿತ್ತು.
ಮಧ್ಯಸ್ಥರು ನಯಾಗಾರ ಫಾಲ್ಸ್‌ಗೆ ಕರೆದೊಯ್ದರು. ಮುಂಜಾನಿಯಿಂದ ಸಂಜಿತನಕ ಬೇಕಾಗುವಷ್ಟು ಅವಲಕ್ಕಿ, ಉಪ್ಪಿಟ್ಟು, ಅನ್ನ, ಚಪಾತಿ, ಪಲ್ಯ ಮತ್ತ ಫ್ಲ್ಯಾಸ್ಕ್‌ನ್ಯಾಗ ಬಿಸಿಬಿಸಿ ಚಹ ತಯಾರಿಸಿಕೊಟ್ಟವರು ಮಧ್ಯಸ್ಥರ ಪತ್ನಿ ಗೌರಿ. ಮೈನಸ್ ಒಂದು ಡಿಗ್ರಿ ಥಂಡಿಯೊಳಗ ನಯಾಗರ ಭೋರ್ಗರೆಯುವ ನೀರು ನೋಡಕೋತ ಒಂದು ಮುರ್ಕು ಅವಲಕ್ಕಿ ಮುಕ್ಕಿ ಬಿಸಿಬಿಸಿ ಚಹ ಗುಟಕರಿಸಿದ ಅನುಭವ ಹೇಳಾಕಾಗವಲ್ದು ಬಿಡ್ರಿ. ವಿಷ್ಣು ಭಟ್ಟ, ವಿನಾಯಕ ಹಬ್ಬು ಮತ್ತು ರೇಣುಕಾ ಪ್ರಸಾದರು ಸ್ವಾಮಿನಾರಾಯಣ ದೇವಸ್ಥಾನಕ್ಕ ಕರಕೊಂಡು ಹೋದರು. 27,000 ಮಿಲಿಯನ್ ಡಾಲರ್‌ನ್ಯಾಗ ಆ ಭವ್ಯ ಹಿಂದು ಕಟ್ಟಡ ನಿರ್ಮಾಣ ಆಗೇದ.
ಕೆನಡಾದಾಗ ಯಕ್ಷಮಿತ್ರರು ಅಂತ ಯಕ್ಷಗಾನ ಆಡೋ ಕಲಾವಿದರ ತಂಡ ಅದ. ಕರ್ನಾಟಕದಾಗ ಯಕ್ಷಗಾನ ಕಲೆ ಪ್ರಸಿದ್ಧ ಇರೋ ಜಿಲ್ಲಾದವರು ಇವರು. ಪರಮೇಶ್ವರ ಭಟ್ಟರ ಮ್ಯಾನೇಜಗಿರಿಯೊಳಗ ಪ್ರದರ್ಶಿತವಾದ 'ರಾಮಾಂಜನೇಯ' ಪ್ರಸಂಗ ಯಾವ ವೃತ್ತಿನಿರತ ಯಕ್ಷಗಾನ ತಂಡದ ಪ್ರದರ್ಶನಕ್ಕಿಂತ ಕಡಿಮೆ ಇರಲಿಲ್ಲ. ಎಂಜಿನಿಯರು, ಡಾಕ್ಟರು ಮತ್ತು ಪ್ರೊಫೆಸರ್‌ಗಳಾದ ಇವರು ಶ್ರದ್ಧೆ, ಕಾಳಜಿಯಿಂದ ರಿಹರ್ಸಲ್ ಮಾಡಿ ಪ್ರದರ್ಶಿಸಿದ್ದರು. ವಿನಾಯಕ ಹೆಗಡೆ ಎಂಬ ಹಿಂದುಸ್ಥಾನಿ ಸಂಗೀತ ಗಾಯಕರ ಭಾಗವತಿಕೆ, ರಘು ಕಟ್ಟಿನಕೇರಿಯವರ ಚಂಡೆ ನಾದ ರಂಗೇರಿಸಿತ್ತು. ವಿಘ್ನೇಶ ಅವರು ಯಕ್ಷಗಾನದ ಎಲ್ಲ ಪದ ಮತ್ತ ಅರ್ಥವನ್ನ 81 ಸ್ಲೈಡ್ ಮಾಡಿ ರಂಗದ ಎಡಭಾಗದಾಗ ಪ್ರೊಜೆಕ್ಟ್ ಮಾಡಿದ್ದರು.  
ರಂಗ ಕಾರ್ಯಾಗಾರದ ಜವಾಬ್ದಾರಿ ಯುವರಾಜ ಪಾಟೀಲರದ ಆಗಿತ್ತು. ಟೊರೆಂಟೊದಾಗ ರಂಗ ತಂಡದ ಗಿನ್ನಿ ಮುರಳೀಧರ, ದಿವಾಕರ ರುದ್ರಪಟ್ಟಣ, ಬೃಂದಾ ಮುರಳಿ, ವಿನಯ ಗರುಡಾಚಾರ ಮತ್ತು ವೆಂಕಿ ಕಾರ್ಯಾಗಾರದಾಗ ಸಕ್ರಿಯರಾಗಿದ್ದರು. ಕನ್ನಡ ಕವಿ ಮಾಧವಿ ಬಾಗೇವಾಡಿ, ಯೋಗಾ ಟೀಚರ್ ನಾಗವೇಣಿ ಕುಪ್ಪ, ಭರತನಾಟ್ಯ ಪಟು ವಚನಾ ಗುರಕಾರ, ಶಿಲ್ಪಾ ಬಾಗೇವಾಡಿ ಪ್ರೀತಿಯ ಆತಿಥ್ಯ ತೋರಿ, ಪ್ರದರ್ಶನ ತಯಾರಿ ಮಾಡಿದ ದಂಪತಿ ಉಷಾ ಜಯರಾಂ ಎಲ್ಲಾರ ಪ್ರಾಮಾಣಿಕ ಪ್ರಯತ್ನದಿಂದ ಶೋ ಚಂದ ಆತು. ಪ್ರದರ್ಶನ ನೋಡಲಿಕ್ಕೆ ಬಂದ ರಾಮನಿ ಮತ್ತವರ ಪತಿರಾಯರು, ಯುವರಾಜರ ತಮ್ಮ ಬಸವರಾಜ ಪಾಟೀಲ, ಮಗಳು ಪ್ರೇರಣಾ ಅವರಿಗೆಲ್ಲ ರಂಗಪ್ರಸ್ತುತಿ ಲೈಕ್ ಆತು.
ಜಗತ್ತಿನ್ಯಾಗಿನ ಮೂರನೇ ಎತ್ತರದ ಟವರ್ ಸಿಎನ್ ಟಾವರ್‌ನ್ನ ನಾನು, ಮಂಜು ಕುಪ್ಪ ನೋಡಾಕ ಹೋಗಿದ್ವಿ. ಕೆಳಗೆಲ್ಲ ಕಮರ್ಷಿಯಲ್ ಕಟ್ಟಡ. ಮ್ಯಾಲ ಹೋದಹಂಗ ಟೊರೆಂಟೊ ನಗರದ ಭವ್ಯ ನೋಟ. ಭಾಳ ಮಜಾ ಇತ್ತು. ಅಲ್ಲೊಂದು ಗಾಜಿನ ನೆಲ ಮಾಡ್ಯಾರ. ಅದರಾಗಿಂದ ಭೂಮಿ ನೋಡೋದು ಭಾಳ ಹೆದರಿಕಿ ತರಸ್ತಿತ್ತು. ಭುವಿಯಿಂದ 533.33 ಮಿಟರ್ ಅಂದ್ರ 1,815.4 ಫೂಟ ಎತ್ತರದಿಂದ ಇರವಿ ಸಾಲಿನಹಂಗ ಓಡ್ಯಾಡೋ ವಾಹನಗಳನ್ನ ನೋಡಿದರ ತಲಿ ತಿರಗೋದು ಗ್ಯಾರಂಟಿ.  
ಟೊರೆಂಟೊದಾಗಿನ ವಿಶೇಷ ಅಂದ್ರ ಡೌನಟೌನನ್ಯಾಗಿನ 'ಪಾಥ್‌'ಗಳು. ಅಂದರ ಆರೆಂಟು ಕಿ.ಮೀ. ನೆಲ ಮಹಡಿಯೊಳಗಿನ ದಾರಿಗಳು. ಒಂದು ಆಫೀಸ್‌ನಿಂದ ಇನ್ನೊಂದು ಆಫೀಸ್‌ಗೆ, ಒಂದು ಅಂಗಡಿಯಿಂದ ಇನ್ನೊಂದು ಅಂಗಡಿಗೆ ಹೋಗಲಿಕ್ಕೆ ಬಳಸಲಾಗುವ ದಾರಿಗಳು ಕನೆಕ್ಟೆಡ್! ಅಡ್ಡ-ಉದ್ದ, ಎಡಕ್ಕ- ಬಲಕ್ಕ ಯಾವ ದಿಕ್ಕಿಗೆ ಬೇಕಾದರೂ ಹೋಗಬಹುದು. ಆದರ ದಾರಿ ಗೊತ್ತಿರಬೇಕು. ಇಲ್ಲಂದ್ರ ಎಲ್ಲಬೇಕಲ್ಲೆ ಹೋಗಿ ದಾರಿ ತಪ್ಪಿಸಿಗೊಂಡು ಜಂತರ ಮಂತರದಾಗ ನಿಂತಹಾಂಗ ಆಗತದ. ರಾಯಲ್ ಥಿಯೇಟರ್, ಸಿಐಬಿಸಿ ಬ್ಯಾಂಕ್, ಫುಟ್ಬಾಲ್ ಗ್ರೌಂಡ್ ಎಲ್ಲ ತೋರಿಸಿದರು.
ಕೆನಡಾದಿಂದ ಬೆಂಗಳೂರಿಗೆ ಮರಳುವ ದಿನ ಹತ್ರ ಬರ್ತಿತ್ತು. ಮಾಂಟರೇಲ್, ಒಟ್ಟಾವಾದಾಗ ಪ್ರದರ್ಶನಗಳಿದ್ದವು. ಮುಂಜಾನಿ ಯುವರಾಜರ ಗಾಡಿಯೊಳಗ ವೈಜಯಂತಿ ಮತ್ತ ರೇಣುಕಾಪ್ರಸಾದರ ಕೂಡ 450 ಕಿ.ಮಿ. ದೂರದ ಮಾಂಟರೇಲಗೆ ಹೊರಟಿವಿ. ರಾತ್ರಿ 8ಕ್ಕ ಮಾಂಟರೇಲ್ ತಲುಪಿದ್ವಿ. ವಿಶು ಭಟ್- ತಾರಾ ಭಟ್ ಎಂಬ ದಂಪತಿ ಮನಿಯೊಳಗ ನಮ್ಮ ವಾಸ. ಅವರು 1968-69ರಾಗ ಕೆನಡಾಕ್ಕ ಬಂದವರು. 73-74ರಾಗ ಕನ್ನಡ ಸಂಘ ಕಟ್ಟಿದವರು. ಆಗ ತಮಿಳು ಸಂಘವಾಗಲಿ, ತೆಲುಗು ಸಂಘವಾಗಲಿ ಇರಲಿಲ್ಲ. ಹಿಂಗಾಗಿ ಕನ್ನಡ ಸಂಘದ ಕಾರ್ಯಕ್ರಮಕ್ಕ ಈ ತೆಲಗು- ತಮಿಳು ಮಂದಿ ಮೆಂಬರಶಿಪ್ ತಗೊಂಡಿದ್ರಂತ. ಹಿಂಗಾಗಿ ಆ ಮಂದಿನೂ ಕಾರ್ಯಕ್ರಮಕ್ಕ ಬರ್ತಾರ ಅಂತ ಸದ್ಯದ ಅಧ್ಯಕ್ಷ ವಿಶು ಭಟ್ ಹೇಳಿದರು. ಮಾರನೇ ದಿನ ಲೆಕ್ಕ ಹಾಕಿದ ಹಾಂಗ 200-250 ಮಂದಿ ಜಮಾಯಿಸಿದ್ದರು. ನನ್ನ 'ರಾಶಿಚಕ್ರ' ತಿರಗಿತು. ಊಟ ಮುಗಿಸಿ ನಮ್ಮ ಗಾಡಿ ಒಟ್ಟಾವಾಕ್ಕ ಹೊರಟಿತು.
ಮಾಂಟರೇಲ್‌ನಿಂದ ಒಟ್ಟಾವಾ ಎರಡ ತಾಸಿನ ದಾರಿ. ಒಟ್ಟಾವಾ ಕೆನಡಾದ ರಾಜಧಾನಿನೂ ಹೌದು. ಒಟ್ಟಾವಾದಾಗ ರಂಗ ಜಹಗಿರದಾರ ಅನ್ನುವವರ ಮನಿಯೊಳಗ ಆದರಾತಿಥ್ಯ. ಅವರ ಮನಿಯೊಳಗ ಅಮೆರಿಕ ಅಧ್ಯಕ್ಷ ಒಬಾಮಾನಿಗೆ ಕೈಕುಲುಕುತ್ತಿರುವ ಭಾರತೀಯ ಯುವತಿ ಫೋಟೊ. 'ನಮ್ಮ ಮಗಳರಿ ಸುಜಾತಾ. ವಾಷಿಂಗ್ಟನ್‌ನ್ಯಾಗ ಜರ್ನಲಿಸಂ ಮಾಡ್ತಾಳ. ಇತ್ತೀಚಿಗ ಒಬಾಮಾನ ಭೆಟ್ಟಿ ಆತರಿ...' ಜಹಗೀರದಾರರು ಹೇಳಿದರು. ಮೂವರು ಮಕ್ಕಳು. ನಿವೃತ್ತಿ ಜೀವನ. ಜಹಗಿರದಾರರ ಲೀಡರ್‌ಶಿಪ್‌ದೊಳಗ ಆಯೋಜಿತವಾದ ಕಾರ್ಯಕ್ರಮದಾಗ ಹಲವಾರು ಒಟ್ಟಾವಾ ಕನ್ನಡ ನಿವಾಸಿಗಳು ಬಂದಿದ್ದರು. ಎಡಕಲ್ಲು ಗುಡ್ಡದ ಮೇಲೆ ಚಿತ್ರದ ಚಂದ್ರು ಸರ್ ಮುಂದಿನ ಸಾಲಿನ್ಯಾಗ ಕೂತು 'ರಾಶಿಚಕ್ರ' ಪ್ರದರ್ಶನ ನೋಡಿ ಮನತುಂಬಿ ನಕ್ಕು ಆಗಾಗ ಚಪ್ಪಾಳೆ ಹೊಡದ ಹುರದುಂಬಿಸಿದರು.  
ಕೆನಡಾದಾಗಿನ ಕನ್ನಡಿಗರ ಜೀವನ-ಪ್ರೀತಿ-ಜೀವನೋಲ್ಲಾಸ-ಭಾಷಾಭಿಮಾನದ ಜತೆಗೆ ಅವರೆಲ್ಲ ಬಡಿಸಿದ ಅಚ್ಚುಕಟ್ಟಾದ ನಮ್ಮ ಊರಿನ ಊಟ ತಿಂಡಿ ಯಾವುದನ್ನೂ ಮರೆಯೋಹಂಗಿಲ್ಲ.

ಚಿತ್ರ-ಲೇಖನ: ಯಶವಂತ ಸರದೇಶಪಾಂಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!