ಅದು ಮನಸ್ಸಿನ ಕೊಳ. ಅದರಂಚಿನಲ್ಲಿ ಕುಳಿತು ನಾನೊಬ್ಬಳೇ ಮಾತಾಡಿಕೊಳ್ಳುತ್ತಿದ್ದೆ. ಅಲ್ಲಲ್ಲ. ಕೊಳದ ತಿಳಿನೀರಲ್ಲಿ ಮೂಡಿದ ಬಿಂಬ ನನ್ನೊಂದಿಗೆ ಮಾತಿಗಿಳಿದಿತ್ತು. ಕಲ್ಪನೆ, ಕನಸುಗಳ ಮೂಟೆ ಹೊತ್ತು ಹೊರಟ ದಿನದಿಂದ ವಾಸ್ತವದ ಬದುಕಿಗೆ ಕಾಲಿಟ್ಟ ದಿನದವರೆಗೆ. ಅಲ್ಲಿಂದ ಮತ್ತೆ ಮನಸು ಹೊರಳಿದ್ದ ಕ್ಷಣದವರೆಗೆ ಮಾತಿಗೆ ಪೂರ್ಣವಿರಾಮವಿರಲಿಲ್ಲ. ಕೊಳದಂಗಳದಲ್ಲಿ ನಾನು ಮತ್ತು ನಾನೇ! ಸಮಯ ಮಾತ್ರವೇ ನಮಗೆ ಸಾಕ್ಷಿ. ಅವನು ಕಾಲ. ಅದೇ ವಿಸ್ಮಯ!
ಒಂದೇ ಒಂದು ಕ್ಷಣ ಭಾವನೆಗಳ ಬದಿಗಿಟ್ಟು ಬದುಕಿನ ಬಗ್ಗೆ ಹೊರಳಿತ್ತು ಮಾತು. ನನ್ನ ನಾನು ಮರೆತಿದ್ದೆ. ಒಳಗೊಳಗೇ ಒದ್ದಾಡುತ್ತಿತ್ತು ಮನಸ್ಸು. ಎಲ್ಲೋ ಕ್ಷೀಣ ನರಳಿಕೆ. ನನ್ನ ನಿರ್ಲಕ್ಷ್ಯಕ್ಕೆ ಪ್ರತಿಕ್ರಿಯೆಯದು ಮನಸ್ಸಿನದ್ದು. ಅಂತರಂಗವನ್ನು ವಂಚಿಸಿ ನಾನು ಏನನ್ನೂ ಮಾಡಲಾರೆ. ಅದು ನನಗೆ ಗೊತ್ತೇ ಇದೆ. ಬೇರೆಲ್ಲರನ್ನೂ ನಂಬಿಸಬಲ್ಲೆ ನಾನು ಈ ಜಗತ್ತಿನಲ್ಲಿ. ನಟನೆ ನನಗೆ ಆಜನ್ಮ ಬಳುವಳಿ. ಈಗಂತೂ ಕಲಾವಿದೆಯ ಪಟ್ಟ. ರಂಗದ ಮೇಲೆ ನಿಂತೆನೆಂದರೆ ಸಾಮ್ರಾಜ್ಞೆಯ ಮೆರುಗು. ಶೃಂಗಾರದಿಂದಾರಂಭಿಸಿ ಕರುಣ, ಭೀಬತ್ಸ ಇತ್ಯಾದಿ ನವರಸಗಳನ್ನು ಒಂದರ ಬೆನ್ನಲ್ಲೇ ಒಂದನ್ನು ಅನಾವರಣಗೊಳಿಸುವ ಅತ್ಯದ್ಭುತ ಅಭಿವ್ಯಕ್ತಿ ನನ್ನದು. ಮತ್ತೆ ನೋವ ಮುಚ್ಚಿಟ್ಟು ಬದುಕಲ್ಲಿ ನಗಲು ಗೊತ್ತಿಲ್ಲವೇ? ನನ್ನ ನಾನಲ್ಲದೇ ಮತ್ತಿನ್ಯಾರು ನನ್ನಷ್ಟು ಅರಿತಿರಲು ಸಾಧ್ಯ? ಹಾಗಾಗಿಯೇ ನನ್ನ ನಾನು ವಂಚಿಸಿಕೊಳ್ಳುವಾಗಲೆಲ್ಲ ನನ್ನಂತರಂಗ ಪ್ರಶ್ನಿಸುತ್ತದೆ. ಸಹಜವಾಗಿರಲೇಬೇಕೆಂಬ ಪಣತೊಟ್ಟಿದ್ದೇನೆ ನಾನು. ಅದನ್ನು ನಿರ್ವಹಿಸುವುದು ನನಗೆ ತುಂಬಾ ಕರಗತ. ಒಂದಿನಿತೂ ತೋರಗೊಡದಂತೆ ನಗುತ್ತೇನೆ; ನೋವಿನಂಚಿನ ಕೊನೇ ದಂಡೆಯಲ್ಲಿ ನಿಂತು ಸಹ. ಆ ಬಗ್ಗೆ ನನ್ನಲ್ಲಿಯೇ ನಾನು ಹೆಮ್ಮೆ ಪಡಬೇಕೋ, ವಿಷಾದಕ್ಕೆ ಒಡ್ಡಿಕೊಳ್ಳಬೇಕೋ, ಭಂಡತನಕ್ಕೆ ಮರುಗಬೇಕೋ ಗೊತ್ತಿಲ್ಲ. ಭಾವ ದೀವಿಗೆಯ ಬೆಳಕಲ್ಲಿ, ಹೀಗೆ ಈ ಕೊಳದ ತೀರಕ್ಕೆ ಬಂದು ನಿಂತಾಗ ಎಲ್ಲ ಬಟಾನು ಬಯಲು. ಮುಖವಾಡಗಳಿಗೆ ಇಲ್ಲ ಪ್ರವೇಶವಿಲ್ಲ.
ಇಲ್ಲಿ ನಾನು ಅಪ್ರಯತ್ನಪೂರ್ವಕ ಅಳುತ್ತೇನೆ. ಚುಮುಚುಮು ಬೆಳಗಲ್ಲಿ ತಿಳಿಗೊಳದ ಮೇಲಿಂದ ಏಳುವ ಹಬೆಗೆ ಬೆರಗು ತೋರುತ್ತೇನೆ. ಕಲ್ಲೆಸೆದು ಕುಳಿತು, ನೀರ ಮೇಲೆ ಸುರುಸುರುಳಿಯಾಗಿ ಏಳುವ ತರಂಗಗಳೆದುರು ಮುಗುದವಾಗಿ ನಿಲ್ಲುತ್ತೇನೆ. ಬಾಲ್ಯದ ಕಸುವುಗಳನ್ನು ನೆನೆದು ಪುಳಕಗೊಳ್ಳುತ್ತೇನೆ. ಕಿತ್ತಾಟಕ್ಕೆ, ಹುಡುಗಾಟಕ್ಕೆ ನಾಚುತ್ತೇನೆ. ಮತ್ತೆ ನಾಳೆಯ ಬದುಕಿನ ನವೀಕರಣಕ್ಕೆ ದೃಢ ನಿರ್ಧಾರ ತಳೆಯುತ್ತೇನೆ. ಒಮ್ಮೊಮ್ಮೆ ಬೀಸುವ ಗಾಳಿ ಬೇಕಂತಲೇ ನನ್ನ ಇಷ್ಟೊಂದು ತಣ್ಣಗೆ ಕೊರೆಯುತ್ತಿರಬಹುದು ಎನಿಸುತ್ತದೆ. ಬಿಸಿಲು ಏರಿದಾಗಲೆಲ್ಲ ಸೂರ್ಯ ನನ್ನ ನೋಡಿಯೇ ಹೀಗೆ ಕೆಕ್ಕರಿಸುತ್ತಿರಬಹುದು ಎಂಬ ಭ್ರಮೆಗೆ ಬೀಳುತ್ತೇನೆ. ಮಳೆ ಹೊಯ್ದಾಗಲೆಲ್ಲ ಬದುಕನ್ನು ಹೀಗೆ ಕೊಚ್ಚೆಯಾಗಿಸಿ ರಾಡಿ ಎಬ್ಬಿಸಲೆಂದೇ ಅದು ಬಂದಿರಬೇಕೆಂಬ ಅಸಮಾಧಾನ. ಈ ನಿಸರ್ಗದ ಯಾವೊಂದೂ ನನಗೆ ಪೂರಕವಾಗಿ ಕಂಡಿದ್ದೇ ಇಲ್ಲವೇಕೆ ಎಂಬ ಜಿಜ್ಞಾಸೆ ಅನೇಕ ಸಲ ನನ್ನನ್ನು ಬಿಟ್ಟೂಬಿಡದಂತೆ ಕಾಡಿದ್ದಿದೆ. ಗಾಳಿ ಬೀಸಿದಾಗ ಒಮ್ಮೆಯೂ ನನ್ನ ಮೈ- ಮನಗಳು ಹಾಯ್ಗುಡಲಿಲ್ಲ. ಬಿಸಿಲು ಹೃದಯವನ್ನು ಬೆಚ್ಚಗಾಗಿಸಲೇ ಇಲ್ಲ. ಮಳೆ ತನುವ ತಣಿಸಲೇ ಇಲ್ಲ! ಕತ್ತಲೆ ಸವಿನಿದ್ದೆಗೆ, ನವಿರು ಕನಸುಗಳಿಗೆ ಆಸ್ಪದಗೊಡಲಿಲ್ಲ. ಬೆಳಗು ಹೊಂಗಿರಣಗಳ ಆಶಾಭಾವ ಮೂಡಿಸಲೂ ಇಲ್ಲ. ಹೀಗೇಕೆ ಎಂದುಕೊಳ್ಳುತ್ತಿರುವಾಗಲೇ ಅವರಿವರೆಲ್ಲ ಬಂದು ಹೋಗುತ್ತಿದ್ದಾರೆ ನನ್ನ ಪುಟಗಳಲ್ಲಿ. ಈಗೀಗ ನೋಡುತ್ತೇನೆ. ಜತೆಗಾತಿಯರ್ಯಾರಿಗೂ ಇಂಥ ಅನುಭೂತಿಗಳಿಲ್ಲ. ನಾನೀಗ ಒಂಟಿಯಲ್ಲ ಎಂಬ ಬಗ್ಗೆ ಸಂತಸಗೊಳ್ಳಲೋ, ಗೆಳತಿಯರ ಸಮಾನ ದುಃಖಕ್ಕೆ ಮರುಗಲೋ, ಬಿಸಿಲು ಬೆಳದಿಂಗಳ ಹಳಿದದ್ದಕ್ಕೆ ಪಶ್ಚಾತ್ತಾಪಪಡಲೋ...?
ಹೌದು, ನನ್ನ ಒತ್ತಡಗಳಿಗೆ ಯಾರಾದಾರು ಹೊಣೆ? ಮನದ ಕೊಳದೆದುರು ನಿಂತು ನೇರ ಕೇಳಿಬಿಟ್ಟೆ ನೀನು ಬರುವಿಯೇನು ನನ್ನ ಗೆಳೆತನಕ್ಕೆ? ಪ್ರತಿಬಿಂಬ ನಕ್ಕು ಅಪಹಾಸ್ಯ ಮಾಡಿದಂತೆನಿಸಿತು. ಸಂಕಲ್ಪ ನನ್ನದಾಗಬೇಕಂತೆ. ಪ್ರೀತಿಯ ನಿರಾಕರಣೆ ಅದಲ್ಲ. ದೀಪ ಹಚ್ಚಿಡಬಹುದು, ಬೆಳಕು- ಬೆಂಕಿಯ ನಿರ್ಧಾರ ಮಾಡುವವರಾರು? ಒಮ್ಮೊಮ್ಮೆ ಕಾಡುತ್ತವೆ ಪ್ರಶ್ನೆಗಳು- ಸುತ್ತಲಿನ ಮನಸ್ಸುಗಳು ಇಷ್ಟು ಹಿಮಗಟ್ಟಿ ಹೋಗಿವೆಯಾ? ಹಣತೆಯಲ್ಲ ಉರಿವ ಜ್ವಾಲೆಯಾಗಿ ನಾ ನಿಂತರೂ ಅವು ಕರಗುವುದಿಲ್ಲ. ಪ್ರೀತಿಯ ನದಿಯಾಗಿ ಹರಿಯುವುದಿಲ್ಲ. ಬದುಕಿನ ಕೊಳಕುಗಳನ್ನೆಲ್ಲ ಕೊಚ್ಚಿಕೊಂಡುಹೋಗಿ ತಿಳಿಗೊಳ್ಳುವುದೇ ಇಲ್ಲ. ಅವುಗಳದ್ದೇನಿದ್ದರೂ ಏಕಾಏಕಿ ಹಿಮಪಾತ. ಹೋಗಲಿ ಎಂದುಕೊಂಡರೆ ಗಟ್ಟಿಯಾಗಿ ಬೆಟ್ಟಕ್ಕಂಟಿ ನಿಲ್ಲುವ ಬಾಂಧವ್ಯದ ಬೆಸುಗೆ ಅವುಗಳಿಗೇಕಿಲ್ಲ? ಪ್ರಶ್ನೆ ಪ್ರಶ್ನೆಯಾಗಿಯೇ ಉಳಿಯತ್ತದೆ. ಯಾರಿಗೂ ಅರ್ಥವಾಗುವುದಲ್ಲ ಬಿಡಿ ನನ್ನ ಪ್ರೀತಿ. ಸ್ವೀಕೃತಿ ಏಕಿಲ್ಲ ಈ ಜಗದಲ್ಲಿ ನನ್ನ ಪ್ರೀತಿಗೆ? ಅಥವಾ ತಪ್ಪು ನನ್ನದೇ ಏನು? ನಾನೇ ಸರಿ ಇಲ್ಲವೇ ಹಾಗಿದ್ದರೆ? ಕೋಪ ನನ್ನ ಮೇಲೆಯೇ ನನಗೆ ಉಕ್ಕುತ್ತದೆ. ಕೊನೆಗುಳಿದದ್ದು ಅದೇ ಅಸಹಾಯಕ ಆಕ್ರೋಶ! ಅವನು ಗಂಡಸಾದರೆ ತಾನೆ ನಾನು ಹೆಣ್ಣೆಂಬುದು ಸಾಬೀತಾಗುವುದು? ಪ್ರಶ್ನೆಗಳೇ ಬಸಿರ ಒಳಹೊಕ್ಕು ಕುಳಿತಿವೆ. ಯಾರೋ ಮತ್ತೆ ಗುಸುಗುಟ್ಟುತ್ತಿದ್ದಾರೆ ಅವಳು ಬಂಜೆ!
= ರಾಧಾ ಸೋಚನಿ
abhyagatha@yahoo.co.in