ಸಾಪ್ತಾಹಿಕಪ್ರಭ

ಸಾಹಿತ್ಯ ಸೇವೆ, ಶೇವೆ?

ಜೈಪುರದಲ್ಲಿ ಇದೇ ತಿಂಗಳ 24ರಿಂದ 28ರವರೆಗೆ ಸಾಹಿತ್ಯೋತ್ಸವ ನಡೆಯುತ್ತಿದೆ. ದೊಡ್ಡ ಮೊತ್ತದ ಫೀಸು ಕಟ್ಟಿದವರನ್ನು ಮಾತ್ರ ಒಳಬಿಡುವ ಈ ಉತ್ಸವದ ಈ ಸಲದ ಅತಿಥಿಗಳ ಹೆಸರು ಅತ್ಲಾಗಿರಲಿ; ಚರ್ಚೆಯಾಗಲಿರುವ ವಿಷಯಗಳನ್ನು ಒಮ್ಮೆ ನೋಡಿ: ಸಲಿಂಗಕಾಮ ಸಾಹಿತ್ಯ, ಯಹೂದಿ ಕಾದಂಬರಿಗಳು, 18ನೇ ಶತಮಾನದ ಲೈಂಗಿಕ ಕ್ರಾಂತಿ, ಚಿಕಣಿ ಕಲಾಕೃತಿಗಳ ಇತಿಹಾಸ, ಯುದ್ಧ ವರದಿಗಾರಿಕೆ, ನ್ಯೂಯಾರ್ಕ್ ಅವಳಿ ಗೋಪುರ ಕುಸಿತಕ್ಕೆ ಸಂಬಂಧಿಸಿದ ಸಾಹಿತ್ಯ, ಅಮೆರಿಕದ ಪತನ ಮತ್ತು ಚೀನಾದ ಉತ್ಥಾನ... ಇದರಲ್ಲಿ ಯಾವುದಾದರೂ, ನಮ್ಮ- ನಿಮ್ಮ ಜಗತ್ತಿಗೆ ಸಂಬಂಧಿಸಿದ್ದು ಅಂತ ನಿಮಗೆ ಅನಿಸುತ್ತದೆಯೆ?
ಇಂಥ ಜೈಪುರ ಉತ್ಸವವನ್ನು ಮಾದರಿಯಾಗಿಟ್ಟುಕೊಂಡು ಧಾರವಾಡದಲ್ಲಿ ಸಾಹಿತ್ಯೋತ್ಸವ ನಡೆಸುವುದಾಗಿ ಗಿರಡ್ಡಿ ಟೀಂ ಹೇಳಿಕೊಂಡಿದೆ. ಶುಲ್ಕ 1,500 ರುಪಾಯಿಗಳಂತೆ. ಇಲ್ಲಿ ಯಾರು ಅತಿಥಿಗಳಾಗಿರುತ್ತಾರೆ, ಯಾರ್ಯಾರು ಬಂದು ಹೋಗುತ್ತಾರೆ ಎಂದು ಊಹಿಸುವುದು ಕಷ್ಟವೇನಲ್ಲ. ಸಾಹಿತ್ಯ ಸದ್ದಿಲ್ಲದೆ ಮೇಲ್ಮಧ್ಯಮ ಹಾಗೂ ಮಧ್ಯಮ ವರ್ಗದ ಸೊತ್ತಾಗಿಬಿಟ್ಟಿತೆ?
ಅತ್ತ ವಿಜಾಪುರದಲ್ಲಿ ಸಾಹಿತ್ಯ ಸಮ್ಮೇಳನದ ಸಿದ್ಧತೆ 'ಬರ'ದಿಂದ ನಡೆಯುತ್ತಿದೆ. ಒಂದೆಡೆ, ಬರೆಯುವುದರಿಂದಲೇ ನಿವೃತ್ತರಾದ ಸಾಹಿತಿಗಳಿಗೂ ವೃತ್ತಿಪರ ಬೋರ್‌ವೆಲ್‌ಗಳಿಗೂ ನಮ್ಮ ಖರ್ಚಿನಲ್ಲಿ ಮಣೆ ಹಾಕುವ ಸರ್ಕಾರಿ ಸಮ್ಮೇಳನ; ಇನ್ನೊಂದೆಡೆ ಎಲೈಟ್ ಮಂದಿಗೆ ಮಾತ್ರ ಆಹ್ವಾನವಿರುವಂತೆ ತೋರುವ ಖಾಸಗಿ ಸಾಹಿತ್ಯ ಉತ್ಸವಗಳು. ನಾವೆಲ್ಲಿ ಹಾಳಾಗೋಗಣ ನೀವೇ ಹೇಳಿ.
ಕ್ಲಾಸಿಕ್ ಓದಿ ನೋಡಿ
ಶೇಕ್ಸ್‌ಪಿಯರ್, ವರ್ಡ್ಸ್‌ವರ್ತ್ ಮುಂತಾದ ಘನ ಸಾಹಿತಿಗಳ ಕೃತಿಗಳನ್ನು ಓದಿದರೆ ಮೆದುಳು ಚುರುಕಾಗುತ್ತದೆ. ಅದು ಗೊತ್ತಿದ್ದದ್ದೇ. ಹೊಸ ಸುದ್ದಿ ಓದಿ: ಇಂದು ಬರುತ್ತಿರುವ 'ಯಶಸ್ವಿ ವ್ಯಕ್ತಿಯಾಗುವುದು ಹೇಗೆ?' ಎಂಬ ಮಾದರಿಯ ಸೆಲ್ಫ್ ಹೆಲ್ಪ್ ಪುಸ್ತಕಗಳನ್ನು ಓದುವುದಕ್ಕಿಂತಲೂ, ಮೇರು ಸಾಹಿತಿಗಳ ಕೃತಿಗಳನ್ನು ಓದುವುದು ಹೆಚ್ಚು ಉಪಕಾರಿ. ಅದನ್ನು ಓದಿದರೆ ಸುತ್ತಲಿನ ಜಗತ್ತನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ, ವಿಶ್ಲೇಷಣಾ ಚತುರತೆ, ಚಿತ್ರಕಶಕ್ತಿ ಹೆಚ್ಚುತ್ತದಂತೆ. ಇದು ಲಿವರ್‌ಪೂಲ್ ವಿಶ್ವವಿದ್ಯಾಲಯದಲ್ಲಿ ಮಾಡಲಾದ ಸಂಶೋಧನೆಯ ಫಲಿತ. ಓದುವಾಗ ಮೆದುಳಿನಲ್ಲಿ ಯಾವ ಕ್ರಿಯೆಗಳು ನಡೆಯುತ್ತವೆ ಎಂಬುದನ್ನು ಸ್ಕ್ಯಾನಿಂಗ್ ಮಾಡುತ್ತಾ ಕಂಡುಕೊಂಡ ಫಲಿತಾಂಶ ಇದು. ಹೀಗಾಗಿ ತಳ್ಳಿಹಾಕಲಾಗದು. ಕ್ಲಾಸಿಕ್‌ಗಳನ್ನು ಓದುವಾಗ ಮೆದುಳಿನಲ್ಲಿ ತೀವ್ರಗತಿಯ ಕಾಂತೀಯ ಚಟುವಟಿಕೆ ಕಂಡವಂತೆ.
ಇರಬಹುದು. ಗೋಪಾಲಕೃಷ್ಣ ಅಡಿಗರ 'ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣ ಶ್ಲೋಕ ರೇಶ್ಮೆತೊಗಲು' ಎಂಬ ಸಾಲು ಓದುವಾಗ ಉಸಿರು ಕೂಡ ಕಟ್ಟಿಹೋಗುತ್ತದೆ. ಇನ್ನು ಮೆದುಳಿನ ಪಾಡೇನು!
ಚರಿತ್ರೆ

ಚೀನಾ ಗೋಡೆ ಕಟ್ಟಿ ಮುಗಿದ ಸಂಜೆ
ಅಲ್ಲಿದ್ದ ಕೂಲಿಗಳೆಲ್ಲಿ ಹೋದರು?
ತರುಣ ಅಲೆಕ್ಸಾಂಡರ ಭಾರತವ ಗೆದ್ದ
ಅವನೊಬ್ಬನೇನಾ?
ಸೀಸರ್ ಗಾಲರ ಸೋಲಿಸಿದ
ಅವನ ಜತೆ ಒಬ್ಬ ಸಿಪಾಯಿ ಕೂಡ ಇರಲಿಲ್ವೆ?
ವಿಜಯದ ಪ್ರತಿ ಪುಟ
ಯಾರ ಕೈಯಲಿ ಮಗುಚುತ್ತೆ?
ಎಷ್ಟೊಂದು ವಿವರಗಳು
ಎಷ್ಟೊಂದು ಪ್ರಶ್ನೆಗಳು!
- ಬರ್ಟೋಲ್ಟ್ ಬ್ರೆಖ್ಟ್
ಏಟು ಝಡ್
ಜಗತ್ತಿನ ಅತ್ಯಂತ ಸಣ್ಣ ಹಾರರ್ ಕತೆ ಇದಂತೆ:  'ಜಗತ್ತಿನಲ್ಲಿ ಕಟ್ಟ ಕಡೆಯವನಾಗಿ ಉಳಿದಿದ್ದ ವ್ಯಕ್ತಿ, ಒಂದು ಕೋಣೆಯಲ್ಲಿ ಕುಳಿತಿದ್ದ. ಇದ್ದಕ್ಕಿದ್ದಂತೆ ಯಾರೋ ಬಾಗಿಲು ಬಡಿದರು'.
ಇದನ್ನು ಬರೆದವನು ಫ್ರೆಡ್ರಿಕ್ ಬ್ರೌನ್ ಎಂಬಾತ.
- ಕೇರ
harishkera@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?