ಸಪ್ತಕದಲ್ಲಿ ಷಡ್ಜ ಮತ್ತು ಪಂಚಮ ಎರಡು ಅಚಲ ಸ್ವರಗಳು ಎನ್ನಿಸಿಕೊಂಡಿವೆ. ಉಳಿದೆಲ್ಲ ಸ್ವರಗಳು ಅಂದರೆ ರೆ - ಗ-ಧ- ನಿ ಈ ನಾಲ್ಕು ಸ್ವರಗಳಲ್ಲಿ ಎರಡು ವಿಧಗಳಿವೆ. ಕೋಮಲ ಮತ್ತು ಶುದ್ಧ. 'ಕೋಮಲ' ಎಂದರೆ ಅವು ನಿಜವಾಗಿಯೂ ಕೋಮಲವೇ. ಒಬ್ಬ ಕಲಾವಿದರು ಈ ಕೋಮಲ ಸ್ವರಗಳನ್ನು ಅರ್ಥೈಸುತ್ತ ಬಹು ಸುಂದರವಾಗಿ ಅವುಗಳನ್ನು ಈ ರೀತಿ ಉದಾಹರಿಸಿದರು- 'ಕೋಮಲ ಸ್ವರಗಳೆಂದರೆ ಸ್ತ್ರೀಯಂತೆ. ಮೃದು, ಸೂಕ್ಷ್ಮ, ಕೋಮಲ, ಭಾವನಾತ್ಮಕ. ಎಲ್ಲೋ ಆಳದಲ್ಲಿ ಅವಲಂಬನೆಗಾಗಿ ಬಾಗುವ ಬಳ್ಳಿಯ ಬಳುಕಿರುತ್ತದೆ. ಸೃಷ್ಟಿಸಬಲ್ಲಂಥ ಶಕ್ತಿ ಇರುತ್ತದೆ. ಅದು ಒಲಿಯುವುದೂ ಬೇಗ, ಸಿಟ್ಟಿಗೇಳುವುದೂ ಬೇಗ...'
ದೇವ ದೇವತೆಗಳ ಉಪಾಸನೆಯಲ್ಲೂ ಹಾಗೆಯೇ. ದೇವಿಯ ಉಪಾಸನೆ ಬಹು ಶೀಘ್ರ ಪರಿಣಾಮಕಾರಿ. ಆದರೆ ಉಪಾಸನೆಯಲ್ಲೇನಾದರೂ ಯಡವಟ್ಟಾದರೆ ಅಷ್ಟೇ ಶೀಘ್ರವಾಗಿ ಕೋಪ-ತಾಪಗಳೂ ಉಂಟಾಗುತ್ತವೆ. ಹಾಗೆ ಈ ಕೋಮಲ ಸ್ವರಗಳು..ಸರಿಯಾಗಿ ಹಾಡಿದರೆ ತತ್‌ಕ್ಷಣ ಭಾವನೆಗಳನ್ನು ಬಡಿದೆಬ್ಬಿಸುತ್ತವೆ. ಅದೇ ಒಂದು ಸ್ವಲ್ಪ ಮನಸ್ಸು ಅದರ ಮೇಲಿನ ಏಕಾಗ್ರತೆಯನ್ನು ಬದಲಿಸಿತೆಂದರೆ ಇಡೀ ರಾಗವನ್ನು, ವಿಚಾರಗಳನ್ನು, ಕೊನೆಗೆ ಕಾರ್ಯಕ್ರಮವನ್ನೇ ಕೆಡಿಸಿಬಿಡಬಲ್ಲ ಅಪರಿಮಿತ ಶಕ್ತಿ ಅವಕ್ಕಿದೆ...ಅದಕ್ಕೇ ನಮ್ಮ ಶರೀರದಲ್ಲಿನ ಷಟ್ಚಕ್ರಗಳ ಎಡ ಭಾಗ ಅಥವಾ ಇಡಾ ನಾಡಿ ಕೋಮಲ ಸ್ವರಗಳನ್ನು ಪ್ರತಿನಿಧಿಸುತ್ತವೆ. ಇದು ಭಾವನೆಗಳನ್ನು ಉದ್ದೀಪಿಸುವ ನಾಡಿ. ಬಲ ಭಾಗ ಅಥವಾ ಪಿಂಗಳಾ ನಾಡಿ ಶುದ್ಧ ಸ್ವರಗಳನ್ನು ಬಿಂಬಿಸುತ್ತವೆ.
ಹಿಂದುಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ರಾಗಗಳ ಸಮಯ ಚಕ್ರವನ್ನು ಮಾಡುವಾಗ ಈ ಅಂಶವನ್ನು ಬಹಳ ಅರ್ಥಗರ್ಭಿತವಾಗಿ ಬಳಸಿದ್ದಾರೆ. ಬೆಳಗಿನ ಹಾಗೂ ಸಂಜೆಯ ರಾಗಗಳಿಗೆ, ಸಂಧ್ಯಾ ಕಾಲದ ರಾಗಗಳಿಗೆ ಕೋಮಲ ಸ್ವರವೇ ಪ್ರಧಾನವಾಗಿದೆ. ಈ ರಾಗಗಳನ್ನು ಹಾಡುವಾಗ ಒಳ್ಳೆಯ ಸಾಧಕರೇ ಬೇಕು. ಅದರಲ್ಲೂ 'ಕೋಮಲ ರಿಷಭ'ವಂತೂ ಭಾವನೆಗಳ ದೊಡ್ಡ ಖಜಾನೆ. ಬೆಳಿಗ್ಗೆ ಬ್ರಾಹ್ಮೀ ಮುಹೂರ್ತ ಅಂದರೆ ಬೆಳಗಿನ ಮೂರು ಗಂಟೆಗೆ ಹಾಡುವ ಭಟಿಯಾರ್‌ನಿಂದ ಹಿಡಿದು ಮುಂದಿನ ಲಲಿತ್, ಭೈರವ್, ರಾಮ್‌ಕಲಿ, ತೋಡಿ,ಅಹಿರ್ ಭೈರವ್, ಅಸಾವರಿ ತೋಡಿ ಹೀಗೆ ಈ ರಾಗಗಳಲ್ಲೆಲ್ಲ ಕೋಮಲ ರಿಷಭ ಸ್ವರದ್ದೇ ದರ್ಬಾರು.
-ಶ್ರುತಿ ಭಟ್