ಅನಿಲ್ ಪರಿಚಯ
ಚಿತ್ರಕಲಾ ಪರಿಷತ್ತಿನ ಕಲಾ ಇತಿಹಾಸ ಪ್ರಾಧ್ಯಾಪಕ. ಅವರ ಕಲೆಗಳು 'ಕನ್ನಡಪ್ರಭ' ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕಲೆಗೆ ಸಂಬಂಧಿಸಿದ ಬರಹಗಳಿಂದಲೂ ಅವರು ಪರಿಚಿತರು. ಚಿತ್ರಕಲಾ ಪರಿಷತ್ತಿನ ಹಳೇ ವಿದ್ಯಾರ್ಥಿಯಾಗಿರುವ ಇವರು ಶಾಂತಿನಿಕೇತನದ ವಿಶ್ವಭಾರತಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಲಂಡನ್‌ನ ರಾಯಲ್ ಕಾಲೇಜ್‌ನಲ್ಲಿ ಸಮಕಾಲೀನ ಕ್ಯುರೇಶನ್ ಮತ್ತು ಸ್ವಿಜ್ಜರ್ಲೆಂಡ್‌ನಲ್ಲಿ ಕಲಾವಿಮರ್ಶೆಗೆ ಕುರಿತಂತೆ ಉನ್ನತ ಅಧ್ಯಯನ ಮಾಡಿದ್ದು, ಯುನೆಸ್ಕೋ ಆಶ್‌ಬರ್ಗ್ ಫೆಲೋಶಿಪ್ ಹಾಗೂ ಪ್ರೊ ಹಲ್ವೆಟಿಯಾ ಕ್ರಿಟಿಕ್ ಇನ್ ರೆಸಿಡೆನ್ಸಿ ಫೆಲೋಶಿಪ್ ಕೂಡಾ ಪಡೆದಿದ್ದಾರೆ.
'ನೋಡುವ ಬಗೆ' (ಜಾನ್‌ಬರ್ಜರ್‌ರ 'Ways of Seeing' ಪುಸ್ತಕದ ಅನುವಾದ), 'ಶಂಕರಗೌಡ ಬೆಟ್ಟದೂರು', 'ಕೆ.ಟಿ. ಶಿವಪ್ರಸಾದ್', 'ನೋಟ ಪಲ್ಲಟ', 'ಶಾಂತಿನಿಕೇತನ', 'ಫಿನ್‌ಲ್ಯಾಂಡ್' (ಪ್ರವಾಸ ಕಥನ) ಮೊದಲಾದ ಪುಸ್ತಕಗಳನ್ನು ಅನಿಲ್ ರಚಿಸಿದ್ದಾರೆ.
ಬಿ.ಸಿ. ಸನ್ಯಾಲ್ ಪ್ರಶಸ್ತಿ ಲಭಿಸಿದ ಮೊದಲ ಕನ್ನಡಿಗರು ನೀವು.. ಏನನಿಸುತ್ತಿದೆ?
ನನಗೆ ಈ ಪ್ರಶಸ್ತಿ ಲಭಿಸಿದೆ ಎಂದು ಗೊತ್ತಾಗಿರುವುದೇ ತುಂಬಾ ತಡವಾಗಿ. ಈ ಬಗ್ಗೆ ನನಗೆ ದೆಹಲಿ ಕಲಾ ಶಾಲೆಯವರು ಇಮೇಲ್ ಕಳುಹಿಸಿದ್ದರೂ ನಾನು ಇಮೇಲ್ ಚೆಕ್ ಮಾಡಿರಲಿಲ್ಲ. ಕೊನೆಗೆ ಪ್ರಶಸ್ತಿ ಪತ್ರ ಮತ್ತು ಪ್ರಶಸ್ತಿ ಫಲಕ ಪೋಸ್ಟ್ ಮೂಲಕ ಬಂದಾಗಲೇ ನನಗೆ ಇದರ ಅರಿವಾಗಿದ್ದು. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ ಸುಭೋದ್ ಗುಪ್ತಾ ಅವರ ಜತೆ ನನಗೆ ಈ ಪ್ರಶಸ್ತಿ ಲಭಿಸಿರುವುದು ತುಂಬಾ ಖುಷಿ ತಂದಿದೆ.
ಕಲಾ ಇತಿಹಾಸ ಪ್ರಾಧ್ಯಾಪಕರಾಗಿ ನಿಮ್ಮ ಅನುಭವ?
ಕಲಾ ಇತಿಹಾಸ ವಿದ್ಯಾರ್ಥಿಯಾಗಿದ್ದಾಗ ನಾವು ಇಂಗ್ಲಿಷ್ ಪುಸ್ತಕಗಳನ್ನು ರೆಫರ್ ಮಾಡಬೇಕಿತ್ತು. ಪ್ರಾಧ್ಯಾಪಕನಾದ ಮೇಲೆ ಇದೇ ವಿಷಯವನ್ನು ನಾನು ಮಾತೃಭಾಷೆಯಲ್ಲಿ ಹೇಗೆ ಸರಳವಾಗಿ ಹೇಳಬೇಕೆಂಬುದರ ಬಗ್ಗೆ ಚಿಂತಿಸಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖನಾದೆ. ಹಾಗೆ ಕಲೆಯ ಪಾಠ ಮಾಡುತ್ತಿದ್ದಂತೆ ವಿವಿಧ ಪತ್ರಿಕೆಗಳಲ್ಲಿ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಕಲಾ ವಿಮರ್ಶೆ ಬರೆಯತೊಡಗಿದೆ. ಓರ್ವ ಅಧ್ಯಾಪಕನಾಗಿ ಹೇಳುವುದಾದರೆ ವಿದ್ಯಾರ್ಥಿಗಳಿಗೆ ನಾವು ಕ್ರಿಯೇಟಿವ್ ಆಗಿರುವುದನ್ನು ಕಲಿಸೋಕೆ ಆಗಲ್ಲ, ಕಲಿಸಿರುವುದನ್ನು ಕ್ರಿಯೇಟಿವಿಟಿ ಎಂದು ಹೇಳೋಕೆ ಆಗಲ್ಲ.
ಈಗಿನ ಕಲಾವಿದ್ಯಾರ್ಥಿಗಳು ಹೇಗಿದ್ದಾರೆ?
ಎರಡು ದಶಕಗಳ ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ತುಂಬಾ ವ್ಯತ್ಯಾಸವಿದೆ. ಈಗಿನ ವಿದ್ಯಾರ್ಥಿಗಳಿಗೆ ಹೊರಗಿನ ಸೆಳೆತ ಜಾಸ್ತಿ ಇದೆ. ಮಾಧ್ಯಮ ಹಾಗೂ ಟೆಕ್ನಾಲಜಿ ಅವರ ಮೇಲೆ ಪ್ರಭಾವ ಬೀರಿದ್ದು, ವಿದ್ಯಾರ್ಥಿಗಳು ನೇರಾನೇರ ಪ್ರಶ್ನೆ ಕೇಳುತ್ತಾರೆ. ಕಾಲದೊಂದಿಗೆ ಗುರು- ಶಿಷ್ಯ ಸಂಬಂಧ ಕೂಡಾ ಬದಲಾಗಿದ್ದು, ನಮ್ಮ ನಿದ್ಯಾರ್ಥಿಗಳನ್ನು ನಾವು ಸಹಕಲಾವಿದರು ಎಂಬಂತೆಯೇ ಪರಿಗಣಿಸುತ್ತೇವೆ.
ನಿಮ್ಮ ಅನಿಸಿಕೆಯಂತೆ ಈಗಿನ ಕಲಾ ಮಾಧ್ಯಮ ಹೇಗಿದೆ?
90ರ ದಶಕದಲ್ಲಿ ಭಾವನಾತ್ಮಕವಾಗಿದ್ದ ಕಲೆ ಈಗ ಧೀಮಂತವಾಗಿದೆ. ಕಲೆಗಳ ಬಗ್ಗೆ ಮಾತುಕತೆ, ಚರ್ಚೆಗಳು ಜಾಸ್ತಿಯಾಗಿದೆ. ಟೆಕ್ನಾಲಜಿ ಕೂಡಾ ಕಲೆಗೆ ಪೂರಕವಾಗಿದೆ.
- ರಶ್ಮಿ ಕಾಸರಗೋಡು
rashkasar@gmail.com