ಎಸ್.ವಿ. ನಾಗರಾಜ್, ಚಿಕ್ಕಮಗಳೂರು
ತಂದೆಗೆ ಮೊದಲನೆ ಹೆಂಡತಿಯ ಒಬ್ಬನೆ ಮಗ. ಎರಡನೇ ಹೆಂಡತಿಗೆ 4 ಹೆಣ್ಣು ಹಾಗೂ 4 ಗಂಡು ಮಕ್ಕಳಿದ್ದು ತಂದೆ ಹಾಗೂ ಚಿಕ್ಕಮ್ಮ ನಿಧನರಾಗಿದ್ದಾರೆ. ತಂದೆ ಬದುಕಿದ್ದಾಗಲೇ ಎರಡನೇ ಹೆಂಡತಿಯ ಹೆಸರಿಗೆ ಮನೆ ಹಾಗೂ ತೋಟ ನೋಂದಣಿ ಮಾಡಿಸಿದ್ದು ಬೇರೆ 12 ಎಕರೆ ಕೃಷಿಭೂಮಿ ಇರುತ್ತದೆ. ಆ ಆಸ್ತಿಯಲ್ಲಿ ನನಗೆ ಪಾಲಿದೆಯೇ?
ನಿಮಗೂ ಇತರ ಸಹೋದರ-ಸಹೋದರಿಯರಂತೆ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕು ಇದೆ. ಚಿಕ್ಕಮ್ಮನ ಹೆಸರಿನಲ್ಲಿದ್ದ ಮಾತ್ರಕ್ಕೆ ಅದು ಅವರದಾಗುವುದಿಲ್ಲ. ನೀವು ಕೋರ್ಟಿನಲ್ಲಿ ದಾವಾ ಹಾಕಬಹುದು.
ತಹಸೀಲ್ದಾರರಿಗೆ ಅರ್ಜಿ ಕೊಡಿ
ಸಿದ್ದಪ್ಪ ಶೆಟ್ಟಿ, ಲಿಂಗಂಪಲ್ಲಿ, ಸೇಡಂ
ತಂದೆಯ ಆಸ್ತಿಯನ್ನು ತಂದೆಯ ಚಿಕ್ಕಪ್ಪನ ಮಗನು ಒತ್ತುವರಿ ಮಾಡಿಕೊಂಡಿದ್ದಾನೆ. ಇದನ್ನು ಹೇಗೆ ತೆರವು ಮಾಡಿಸುವುದು?
ತಹಸೀಲ್ದಾರರಿಗೆ ಅರ್ಜಿ ಕೊಟ್ಟು ನಿಮ್ಮ ಆಸ್ತಿಯನ್ನು ಸರ್ವೆ ಮಾಡಿಸುವಂತೆ ಕೇಳಿ. ಸರ್ವೆಯವರು ಒಂದು ಎದುರು ಪಾರ್ಟಿಗೆ ನೋಟೀಸ್ ನೀಡಿ ಅಳತೆ ಮಾಡಿ ನಿಮ್ಮ ಆಸ್ತಿಯ ಎಲ್ಲೆಯನ್ನು ನಿಗದಿಪಡಿಸಿಕೊಡುತ್ತಾರೆ. ಆಗ ನೀವು ತಹಸೀಲ್ದಾರ್ ಅಥವಾ ನ್ಯಾಯಾಲಯದ ಮೂಲಕ ನಿಮ್ಮ ಆಸ್ತಿಯನ್ನು ರಕ್ಷಣೆ ಮಾಡಿಕೊಳ್ಳಬಹುದು.
ಹೊಸ ದಾವಾ ಹಾಕಿ
ಊರು, ಹೆಸರಿಲ್ಲ
ಆಸ್ತಿ ವ್ಯಾಜ್ಯದಲ್ಲಿ ನಮ್ಮ ತಂದೆಯವರು ನ್ಯಾಯಾಲಯದಲ್ಲಿ ಈ ಬಗ್ಗೆ ಯಾವುದೇ ತಕರಾರಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಇದನ್ನು ಪ್ರಶ್ನಿಸಿ ಮಕ್ಕಳು ದಾವೆ ಹೂಡಬಹುದೇ?
ನಿಮ್ಮ ಹೇಳಿಕೆ ಕೊಟ್ಟ ದಾವಾದಲ್ಲಿ ನೀವುಗಳು ವಾದಿ/ಪ್ರತಿವಾದಿಯಾಗಿದ್ದರೆ ನೀವು ಹಾಕಿದ ದಾವಾದಂತೆ ಆಸ್ತಿ ಹಂಚಿಕೊಳ್ಳಲು ಯಾವ ಅಡ್ಡಿಯೂ ಇಲ್ಲ. ಆದರೆ ಬೇರೆ ವಾದಿ/ಪ್ರತಿವಾದಿಗಳಾಗಿದ್ದರೆ ನಿಮಗೆ ಸಂಬಪಂಧಪಡುವುದಿಲ್ಲ.
- ಎಚ್.ಆರ್. ಕಸ್ತೂರಿರಂಗನ್