ಸಾಹಿತ್ಯ ಸಮ್ಮೇಳನಕ್ಕೊಂದಿಷ್ಟು ಸಲಹೆಗಳು
79ನೇ ಸಾಹಿತ್ಯ ಸಮ್ಮೇಳನ ಪ್ರೇಕ್ಷಣೀಯ ಸ್ಥಳವಾದ ಬಿಜಾಪುರದಲ್ಲಿ ನಡೆಯಲಿದೆ. ಐದು ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಾಡಿರುವ ನಾನು, ಇನ್ನೂ ಹಲವಾರು ಪುಸ್ತಕ ವ್ಯಾಪಾರಿಗಳ ಜತೆ ಮಾತನಾಡಿ ಮುಂದಿನ ಸಮ್ಮೇಳನದಲ್ಲಿ ಪುಸ್ತಕ ಮಳಿಗೆಗಳನ್ನು ನಿರ್ಮಿಸುವಾಗ ಯಾವ್ಯಾವ ಸಂಗತಿಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳಬೇಕೆಂದು ಸಂಘಟಕರಿಗೆ ತಿಳಿಸಲು ಇಷ್ಟಪಡುತ್ತೇನೆ.
- ಈಗಾಗಲೇ ಬಿಸಿಲು ಮತ್ತು ಧೂಳಿನ ಬಗ್ಗೆ ಎಲ್ಲಾ ಪುಸ್ತಕ ವ್ಯಾಪಾರಿಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಂತಹ ಅವ್ಯವಸ್ಥೆ ಮೂಡದಂತೆ ಒಳ್ಳೆಯ ಮಳಿಗೆಗಳನ್ನು ನಿರ್ಮಿಸೋಣ.
- ವ್ಯಾಪಾರಿಗಳು ಇಡೀ ದಿನ ಮಳಿಗೆಯಲ್ಲಿ ಕೂತಿರುತ್ತಾರಾದ್ದರಿಂದ ತಮ್ಮ ಮೊಬೈಲನ್ನು ರೀಚಾರ್ಜ್ ಮಾಡಲು ಪರದಾಡುತ್ತಾರೆ. ಎರಡು ಮಳಿಗೆಗಳಿಗೆ ಒಂದರಂತೆ ಪ್ಲಗ್ ಪಾಯಿಂಟ್ ಇರುವಂತೆ ನೋಡಿಕೊಳ್ಳೋಣ.
ಪುಸ್ತಕಗಳನ್ನು ತಮ್ಮ ಊರಿಂದ ಸಮ್ಮೇಳನಕ್ಕೆ ಕಳುಹಿಸುವುದು ಮತ್ತು ಉಳಿದ ಪುಸ್ತಕಗಳ ಕಟ್ಟುಗಳನ್ನು ವಾಪಾಸ್ಸು ಕಳುಹಿಸುವುದು ದೊಡ್ಡ ಕೆಲಸ. ದೊಡ್ಡ ಪುಸ್ತಕದ ಅಂಗಡಿಯವರು ತಮ್ಮದೇ ಒಂದು ಸ್ವಂತ ವಾಹನದ ವ್ಯವಸ್ಥೆಯನ್ನು ಮಾಡಿಕೊಳ್ಳುತ್ತಾರಾದರೂ, ಪುಟ್ಟ ವ್ಯಾಪಾರಿಗಳು ಆ ಊರಿನಲ್ಲಿ ಮುಖ್ಯವಾಗಿರುವ ಖಾಸಗಿ ವಾಹನಗಳ ಸೇವೆಯನ್ನು ಪಡೆಯುತ್ತಾರೆ. ಉದಾಹರಣೆಗೆ ಗಂಗಾವತಿಯಲ್ಲಿ ವಿ.ಆರ್.ಎಲ್. ಸೇವೆಯನ್ನು ಎಲ್ಲಾ ಚಿಕ್ಕ ಪುಟ್ಟ ಮಳಿಗೆಯವರು ಪಡೆದಿದ್ದಾರೆ. ಇಲ್ಲಿಯ ಸಮಸ್ಯೆಯೇನಂದರೆ ಆ ಖಾಸಗಿ ಆಫೀಸಿನಿಂದ ಮಳಿಗೆಗಳಿಗೆ ಪುಸ್ತಕದ ಕಟ್ಟುಗಳನ್ನು ಸಾಗಿಸುವುದಾಗಿದೆ. ಅದಕ್ಕಾಗಿ ಸಾಕಷ್ಟು ಹಣವನ್ನು ವ್ಯಯಿಸುವುದಲ್ಲದೆ, ಆ ಭಾರದ ಕಟ್ಟುಗಳನ್ನು ನಾವೇ ಹೊತ್ತು ಪರದಾಡಬೇಕಾಗುತ್ತದೆ. ಭಾನುವಾರ ಅವರು ಮುಲಾಜಿಲ್ಲದೆ ತಮ್ಮ ಕಚೇರಿಯನ್ನು ಬಂದ್ ಮಾಡಿರುತ್ತಾರಾದ್ದರಿಂದ, ಸಾಕಷ್ಟು ವ್ಯಾಪಾರಿಗಳು ಅದಕ್ಕಾಗಿಯೇ ಸೋಮವಾರದ ತನಕ ಉಳಿಯಬೇಕಾಗುತ್ತದೆ. ಸಾಹಿತ್ಯ ಪರಿಷತ್ತಿನವರು ಖಾಸಗಿ ವಾಹನ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಪುಸ್ತಕಗಳನ್ನು ನೇರವಾಗಿ ಮಳಿಗೆಗೆ ತಂದುಕೊಡುವ ಮತ್ತು ವಾಪಸು ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಿದರೆ ನಮಗೆ ಅನುಕೂಲವಾಗುತ್ತದೆ. ಮಳಿಗೆಯ ಸಂಖ್ಯೆಗಳನ್ನು ಸಮ್ಮೇಳನ ಶುರುವಾಗುವ ಮೂರು ನಾಲ್ಕು ದಿನ ಮೊದಲೇ ಪ್ರಕಟ ಮಾಡಿದರೆ, ನೇರವಾಗಿ ನಮ್ಮ ಮಳಿಗೆಗಳಿಗೇ ಪುಸ್ತಕದ ಕಟ್ಟುಗಳನ್ನು ರವಾನಿಸುವ ಅನುಕೂಲವನ್ನೂ ಮಾಡಿಕೊಡಬಹುದು.
- ಪುಸ್ತಕ ವ್ಯಾಪಾರಿಗಳು ಬಿಸಿಲು ಮತ್ತು ಧೂಳಿನಲ್ಲಿ ಇಡೀ ದಿನ ಕಳೆಯುತ್ತಾರಾದ್ದರಿಂದ ಅವರಿಗೆ ಕುಡಿಯುವ ನೀರಿನ ಏರ್ಪಾಟನ್ನು ಮಾಡಬೇಕಾಗುತ್ತದೆ. ಉಡುಪಿ ಸಾಹಿತ್ಯ ಸಮ್ಮೇಳನದಲ್ಲಿ ಶ್ರೀ ಸಾಯಿಬಾಬ ಸಂಸ್ಥೆಯವರು ಇದನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದನ್ನು ಕೃತಜ್ಞತೆಯಿಂದ ನೆನೆಯುತ್ತೇನೆ. ನಾಡಿನ ಮುಖ್ಯ ಸೇವಾ ಸಂಸ್ಥೆಗಳಿಗೆ ಈ ವ್ಯವಸ್ಥೆಯನ್ನು ಮಾಡಿಕೊಡಲು ಕೇಳಿಕೊಂಡರೆ ಖಂಡಿತಾ ಯಾರಾದರೂ ಮುಂದೆ ಬರುತ್ತಾರೆ.
- ಮಳಿಗೆಗೆ ಕನಿಷ್ಠ 3 ಟೇಬಲ್ಲು ಮತ್ತು 3 ಕುರ್ಚಿಗಳು ಬೇಕಾಗುತ್ತವೆ.
- ಮಾರಾಟಗಾರರಿಗೆ ವಸತಿ ಸೌಲಭ್ಯ ಕಲ್ಪಿಸಿ. ಬೆಳಗ್ಗೆ ಎದ್ದು ಅವರೆಲ್ಲಾ ಸ್ನಾನ ಮತ್ತು ಶೌಚಕ್ಕೆ ಪರದಾಡುತ್ತಿರುವುದು ಕಂಡಾಗ ಮನಸ್ಸಿಗೆ ನೋವಾಯಿತು. ಮಾರಾಟಗಾರರಲ್ಲಿ ಸಾಕಷ್ಟು ಮಹಿಳೆಯರಿದ್ದರೆಂಬುದನ್ನು ನಾವು ಮರೆಯುವಂತಿಲ್ಲ.
- ಪುಸ್ತಕ ಮಳಿಗೆದಾರರ ಊಟಕ್ಕೆ ಯಾವುದೇ ವಿಶೇಷ ವ್ಯವಸ್ಥೆಗಳು ಇಲ್ಲ. ಸಾರ್ವಜನಿಕರ ಜತೆ ಊಟ ಮಾಡುವುದು ನಮಗೆ ಸಂತೋಷದ ಸಂಗತಿಯೇ ಆಗಿದೆ. ಆದರೆ ಅಲ್ಲಿ ತುಂಬಾ ಗಲಾಟೆಯಿದ್ದು ಸುಮಾರು ಎರಡು ತಾಸು ಕಾಲ ನಾವು ಸರದಿಯಲ್ಲಿ ನಿಲ್ಲಬೇಕಾಗುತ್ತದೆ. ಅಷ್ಟು ಹೊತ್ತು ಮಳಿಗೆ ಬಿಟ್ಟಿರುವುದು ಕಷ್ಟವಾಗುವುದರಿಂದ ಅವರೆಲ್ಲಾ ಹೊರಗೆ ಯಾವುದೋ ಹೋಟೆಲಿನಲ್ಲಿ ಊಟ ಮಾಡಿ ಬರುವ ಪರಿಸ್ಥಿತಿ ಇತ್ತು. ನಮಗೂ ನೋಂದಾಯಿತ ಸದಸ್ಯರಿಗಾಗಿ ವ್ಯವಸ್ಥೆ ಮಾಡಿದ ಊಟದ ಸಭಾಂಗಣದಲ್ಲಿ ಭೋಜನದ ವ್ಯವಸ್ಥೆ ಮಾಡಿಕೊಡಿ.
- ನಿಸ್ಸಂಶಯವಾಗಿ ಗಂಗಾವತಿಯಲ್ಲಿ ಪುಸ್ತಕದ ವ್ಯಾಪಾರ ಕಡಿಮೆಯಿತ್ತು. ಧಾರ್ಮಿಕ ಗ್ರಂಥ, ನಿಘಂಟು, ಮಕ್ಕಳ ಪುಸ್ತಕಗಳು, ಜೋಕ್ಸ್, ಮಾಹಿತಿ ಪುಸ್ತಕಗಳ ವ್ಯಾಪಾರವಾದರೂ ಸೃಜನಶೀಲ ಸಾಹಿತ್ಯವನ್ನು ಓದುವ ಹವ್ಯಾಸ ಅವರಲ್ಲಿ ಹೆಚ್ಚಿಲ್ಲವೆಂದು ಸ್ಪಷ್ಟವಾಗಿ ತೋರುತ್ತಿತ್ತು. ಹಾಗಿದ್ದರೆ ಈ ಭಾಗದಲ್ಲಿ ನಾವು ಹಲವು ಕಮ್ಮಟಗಳನ್ನು ಏರ್ಪಡಿಸಿ, ಓದುಗರಲ್ಲಿ ಪುಸ್ತಕದ ಅಭಿರುಚಿಯನ್ನು ಬೆಳೆಸುವುದು ನಮ್ಮ ಮುಖ್ಯ ಕರ್ತವ್ಯವಾಗಿರುತ್ತದೆ. ಬರೀ ಕಮ್ಮಟಗಳನ್ನು ಏರ್ಪಡಿಸಿದರೆ ಸಾಲದು, ಅದರ ಯಶಸ್ಸನ್ನು ಅಳೆಯುವ ಕೆಲಸವೂ ನಡೆಯಬೇಕು. ಈ ಕೆಲಸಕ್ಕೆ ಬಿಜಾಪುರವನ್ನು ಕಾರ್ಯಕ್ಷೇತ್ರವಾಗಿ ಬಳಸಿಕೊಳ್ಳಬಹುದು. ಈಗಿನಿಂದಲೇ ಅಲ್ಲಿ ಹೊಸ ಓದುಗರನ್ನು ಪ್ರೋತ್ಸಾಹಿಸುವಂಥ, ಉತ್ತಮ ಪುಸ್ತಕಗಳನ್ನು ಓದುವ ಅಭಿರುಚಿಯನ್ನು ಬೆಳೆಸುವಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳೋಣ. ಮುಂದಿನ ಸಮ್ಮೇಳನದಲ್ಲಿ ಪುಸ್ತಕ ವ್ಯಾಪಾರದ ಯಶಸ್ಸು, ನಮ್ಮ ಈ ಕಮ್ಮಟಗಳ ಯಶಸ್ಸಿನ ಮಾನದಂಡವೂ ಆಗುತ್ತದೆ.
- ನಾವು ತಿಂಗಳ ಮೊದಲೇ ಪರಿಷತ್ತಿಗೆ ಮಳಿಗೆಗಾಗಿ ಹಣ ತೆತ್ತು, ಸಾಲಿನ ಮೊದಲಿನಲ್ಲೋ ಅಥವಾ ಕೊನೆಯಲ್ಲೋ ಮಳಿಗೆಗಳನ್ನು ಪಡೆದುಕೊಂಡು ನಮ್ಮ ಅದೃಷ್ಟವನ್ನು ಕೊಂಡಾಡಿಯೋ, ಹಳಿದುಕೊಂಡೋ ಮೂರು ದಿನ ತಳ್ಳಿದೆವು. ಆದರೆ ಕಡೆಯ ದಿನ ಒಂದು ಅಚ್ಚರಿ ಕಾದಿತ್ತು. ಇಸ್ಕಾನ್‌ನವರು ತಮ್ಮ ಮೊಬೈಲ್ ವಾಹನವನ್ನು ಜನರೆಲ್ಲಾ ಓಡಾಡುವ ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡು ಭರ್ಜರಿ ವ್ಯಾಪಾರ ಮಾಡಿದರು. ಅವರು ಮಳಿಗೆಗಾಗಿ ಹಣ ನೀಡಿದ್ದರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ ಬೆಳಗ್ಗೆಯಿಂದ ಸಂಜೆಯವರೆಗೆ 'ಹರೆ ರಾಮ, ಹರೆ ಕೃಷ್ಣ' ಎಂದು ದೊಡ್ಡಧ್ವನಿಯಲ್ಲಿ ಹಾಡನ್ನು ಹಾಕಿ ಶಬ್ದಮಾಲಿನ್ಯ ಮಾಡಿದರು. ಅಲ್ಲಿ ಸುತ್ತಮುತ್ತಲಿದ್ದ ಮಳಿಗೆಯವರು ಮಾತನಾಡಲು ಸಾಧ್ಯವಾಗದಂತೆ ರೇಜಿಗೆ ಹುಟ್ಟಿಸಿದರು. ಮಳಿಗೆಯವರು ಹೋಗಿ ಎಷ್ಟು ಬೇಡಿಕೊಂಡರೂ ಧ್ವನಿ ತಗ್ಗಿಸದೆ ಭಂಡತನ ಪ್ರದರ್ಶಿಸಿದರು. ಅವರ 'ಹರೆ ರಾಮ, ಹರೆ ಕೃಷ್ಣ' ಆರ್ಭಟ ಅದೆಷ್ಟು ಜೋರಾಗಿತ್ತೆಂದರೆ, ನಾನು ಇಷ್ಟ ಪಡುವ ದೇವರುಗಳಾದ ರಾಮ ಮತ್ತು ಕೃಷ್ಣರನ್ನು ಸಂಜೆಯ ವೇಳೆಗೆ ದ್ವೇಷಿಸುವ ಸ್ಥಿತಿ ಮುಟ್ಟಿದ್ದೆ. ಇಂತಹ ಕಿರುಕುಳಗಳಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ನಮಗೆ ಬೇಕು.
- ಓದುಗರು ಯಾವ ತರಹದ ಪುಸ್ತಕಗಳು ಎಲ್ಲಿ ಸಿಗುತ್ತವೆಂದು ಪರದಾಡುತ್ತಿದ್ದರು. ಅವರಿಗೆ ಬೇಕಾದ ಪುಸ್ತಕಗಳನ್ನು ಪಡೆಯಲು ಸುಲಭವಾಗುವಂತೆ ಕತೆ, ಕಾದಂಬರಿ ಮಾರಾಟಗಾರರಿಗೆ ಒಂದು ಸಾಲು, ಧಾರ್ಮಿಕ ಗ್ರಂಥ ಮಾರಾಟಗಾರರಿಗೆ ಒಂದು ಸಾಲು, ಮಾಹಿತಿ ಪುಸ್ತಕಗಳ ಮಾರಾಟಕ್ಕೆ ಮತ್ತೊಂದು ಸಾಲು, ಸೆಕೆಂಡ್ ಹ್ಯಾಂಡ್ ಪುಸ್ತಕಗಳಿಗೆ ಒಂದು ಸಾಲು- ಹೀಗೆ ವ್ಯವಸ್ಥೆ ಮಾಡಿ ಅದನ್ನು ಅಧಿಕೃತವಾಗಿ ಸಾಲಿನ ಮೊದಲಲ್ಲಿ ಎಲ್ಲರಿಗೂ ಕಾಣುವಂತೆ ಬೋರ್ಡ್ ಹಾಕಿದರೆ ಅನುಕೂಲವಾಗುತ್ತದೆ. ಮಳಿಗೆಯ ನಾಲ್ಕೂ ದಿಕ್ಕಿನಲ್ಲಿ, ಯಾವ ಮಳಿಗೆಯಲ್ಲಿ ಯಾವ ಪ್ರಕಾಶನವಿದೆ ಎಂಬ ವಿವರಗಳನ್ನು ತಿಳಿಸಬೇಕು.
- ಒಟ್ಟಾರೆ ದಿನನಿತ್ಯ ಅಂದಾಜು ಎಷ್ಟು ಪುಸ್ತಕದ ವಹಿವಾಟು ಆಯಿತೆಂದು ತಿಳಿಯಲು ಪರ್ತಕರ್ತರು ಪರದಾಡುತ್ತಾರೆ. ಆ ಮಾಹಿತಿಯನ್ನು ಸರಿಯಾಗಿ ಸಂಗ್ರಹಿಸಿ ಅವರಿಗೆ ಲಭ್ಯವಾಗುವಂತೆ ಮಾಡುವ ಜವಾಬ್ದಾರಿಯನ್ನು ಪರಿಷತ್ತು ವಹಿಸಿಕೊಂಡರೆ ಅನುಕೂಲವಾಗುತ್ತದೆ.
- ಪುಸ್ತಕ ಮಾರಾಟಗಾರರಿಗೆ ಬ್ರೌನ್ ಟೇಪ್, ಕಟ್ಟರ್, ಬಣ್ಣದ ಸ್ಕೆಚ್ ಪೆನ್ ಮತ್ತು ಬ್ಯಾನರ್ ಕಟ್ಟಲು ದಾರ ಬೇಕಾಗುತ್ತದೆ. ಇವೆಲ್ಲವನ್ನೂ ಕೇವಲ 50 ರುಪಾಯಿಯಲ್ಲಿ ಪಡೆಯಲು ಸಾಧ್ಯವಾದರೂ ತುಂಬಾ ಜನ ಇದನ್ನು ತರಲು ಮರೆತು ಬಂದು ಪರದಾಡುತ್ತಾರೆ. ಇದನ್ನು ಪರಿಷತ್ತಿನವರು ಪ್ರತಿ ಮಳಿಗೆಗೂ ಉಡುಗೊರೆಯ ಪ್ಯಾಕಿನಂತೆ ಕೊಟ್ಟರೆ ವ್ಯಾಪಾರಿಗಳ ಮನಸ್ಸನ್ನು ಸುಲಭವಾಗಿ ಸಂತೃಪ್ತಿಗೊಳಿಸಬಹುದು. ಟೇಪಿನ ಮೇಲೆ ಸೊಗಸಾಗಿ ಸಮ್ಮೇಳನದ ವಿವರಗಳನ್ನು ಬಣ್ಣದಲ್ಲಿ ಮುದ್ರಿಸಿದರೆ ಒಳ್ಳೆಯ ಜಾಹೀರಾತು ಮಾಡಿದಂತಾಗುತ್ತದೆ. ಕೊನೆಯ ದಿನ ಮಳಿಗೆ ತೆರೆದ ಪ್ರತಿ ಪ್ರಕಾಶನ ಸಂಸ್ಥೆಗೆ ಒಂದು ಒಳ್ಳೆಯ ಸರ್ಟಿಫಿಕೇಟ್ ಮತ್ತು ನೆನಪಿನಲ್ಲಿಟ್ಟುಕೊಳ್ಳುವಂತಹ ಒಂದು ಮೊಮೆಂಟೋ ನೀಡಿದರೆ ಇನ್ನೂ ಚೆನ್ನಾಗಿರುತ್ತದೆ.
- ಸಮ್ಮೇಳನದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವುದು ತುಂಬಾ ಕಠಿಣ. ಜನದಟ್ಟಣೆಯಿಂದಾಗಿ ಈ ಸಮಸ್ಯೆ ಉದ್ಭವಿಸುತ್ತದೆ. ಮೊಬೈಲ್ ಕಂಪನಿಗಳೊಂದಿಗೆ ಮಾತನಾಡಿ ತಾತ್ಕಾಲಿಕವಾಗಿ ಏನಾದರೂ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವೆ ಎಂದು ವಿಚಾರಿಸೋಣ. ಅವರಿಗೂ ಲಾಭ, ನಮಗೂ ಲಾಭ.
- ಪುಸ್ತಕ ಮಳಿಗೆಗಳಲ್ಲಿ ಹಲವಾರು ತಮಾಷೆಯ ಪ್ರಸಂಗಗಳು ನಡೆಯುತ್ತಿರುತ್ತವೆ. ನನ್ನ ಮಳಿಗೆಗೆ ಕಾವಿವಸ್ತ್ರಧಾರಿಯೊಬ್ಬರು ಬಂದು, ಗಂಭೀರವಾಗಿ ಎಲ್ಲಾ ಪುಸ್ತಕಗಳನ್ನು ನೋಡಿ, ಕೊನೆಗೆ ಅಪಾರನ 'ಮದ್ಯಸಾರ' ಪುಸ್ತಕವನ್ನು ತೆಗೆದುಕೊಂಡು ಹೋದರು. ಯಾರಾದರೂ ಉದಯೋನ್ಮುಖ ಸಾಹಿತಿಗೆ ಎಲ್ಲಾ ಮಳಿಗೆಗಳವರೊಡನೆ ಮಾತನಾಡುವ ಅವಕಾಶ ಕಲ್ಪಿಸಿಕೊಟ್ಟು, ಇಂತಹ ಪ್ರಸಂಗಗಳನ್ನು ಕಲೆ ಹಾಕಿ ಒಂದು ಪುಸ್ತಕವನ್ನು ಪ್ರಕಟಿಸಿದರೆ, ಆ ಸಮ್ಮೇಳನದ ನೆನಪಿನ ಸಂಚಿಕೆಯಾಗಿ ಅದನ್ನು ಎಲ್ಲರಿಗೂ ಹಂಚಬಹುದು.
- ಸಮ್ಮೇಳನದಲ್ಲಿ ಪುಸ್ತಕ ವ್ಯಾಪಾರಿಗಳು, ಪ್ರಕಾಶಕರು ಮತ್ತು ಲೇಖಕರು ಸೇರಿರುತ್ತಾರೆ. ಪುಸ್ತಕ ಮಳಿಗೆಗಳಲ್ಲಿ ಕನ್ನಡ ಪುಸ್ತಕಗಳನ್ನು ಮುದ್ರಿಸುವ ಮುದ್ರಣಕಾರರು ಮತ್ತು ಮುಖಪುಟ, ರೇಖಾಚಿತ್ರ, ಡಿಟಿಪಿ ಕಲಾವಿದರಿಗೂ ಅವಕಾಶ ಮಾಡಿಕೊಡಬೇಕು. ರಾಜ್ಯದ ಬೇರೆಬೇರೆ ಮೂಲೆಯಲ್ಲಿ ಹಲವಾರು ಪ್ರಕಾಶಕರಿದ್ದಾರೆ. ಅವರಿಗೆ ಒಳ್ಳೆಯ ಮುದ್ರಣಕಾರರು ಯಾರು, ಅವರು ಯಾವ ಬೆಲೆಯಲ್ಲಿ ಮುದ್ರಿಸುತ್ತಾರೆ ಮುಂತಾದ ಮಾಹಿತಿ ದೊರೆಯುವಂತಾದರೆ ಹೆಚ್ಚು ಅನುಕೂಲವಾಗುತ್ತದೆ.
ಇವಿಷ್ಟೂ ನನ್ನ ಅನುಭವಕ್ಕೆ ಬಂದ ಸಂಗತಿಗಳು. ಇತರ ಪುಸ್ತಕ ಮಾರಾಟಗಾರರು ಈ ಪಟ್ಟಿಗೆ ತಮ್ಮ ಸಲಹೆಗಳನ್ನು ಸೇರಿಸಿದರೆ ಒಳ್ಳೆಯದು. ಒಟ್ಟಾರೆ ಬಿಜಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ವ್ಯಾಪಾರ ಸುಸಜ್ಜಿತವಾಗಿ ನಡೆಯಲೆಂಬುದು ನನ್ನ ಆಸೆ.
ಕೊನೆಯ ದಿನ ಸಂಜೆಯ ವೇಳೆಗೆ ಸುಸ್ತಾಗಿ ನಾನು ಅಡ್ಡಾಡಲು ಹೋದೆ. ಮಳಿಗೆಗಳ ತುದಿಯಲ್ಲಿ ಒಂದು ಸೈಕಲಿನ ಮೇಲೆ ಬೇಯಿಸಿದ ಶೇಂಗಾವನ್ನು ಒಬ್ಬ ಮಾರುತ್ತಿದ್ದ. ಶೇಂಗಾ ಕೊಂಡು ತಿನ್ನುತ್ತಾ ಅವನೊಡನೆ ಮಾತನಾಡಿದಾಗ ಅವನು ಸಮ್ಮೇಳನದಲ್ಲಿ ನನಗಿಂತಲೂ ಮೂರು ಪಟ್ಟು ಹೆಚ್ಚು ವ್ಯಾಪಾರ ಮಾಡಿದ್ದಾನೆಂದು ತಿಳಿಯಿತು. ಈ ಸಂಗತಿಗೆ ಮಾತ್ರ ನಾನು ಪರಿಷತ್ತನ್ನು ದೂರುವುದಿಲ್ಲ. ಆದರೆ ಆರು ಕೋಟಿ ಕನ್ನಡಿಗರಿಗೆ ಇದು ಖಂಡಿತಾ ಹೆಮ್ಮೆಯ ಸಂಗತಿಯಲ್ಲವೆಂದು ಹೇಳಲು ನನಗೆ ಸಂಕೋಚವಿಲ್ಲ.
- ವಸುಧೇಂದ್ರ
vas123u@rocketmail.com