ಹಲವು ದಶಕ ಹಿಂದಿನ ಮಾತು. ಮಂಡ್ಯ ಜಿಲ್ಲೆಯ ಬೆಳ್ಳೂರು. ಇದು 'ಕನ್ನಡದ ಕಣ್ವ' ಎಂದೇ ಖ್ಯಾತನಾಮರಾಗಿದ್ದ ಬಿಎಂಶ್ರೀ ಅವರ ಹುಟ್ಟೂರು. ಅದೊಂದು ವರ್ಷ ಅಲ್ಲಿ ಶ್ರೀ ಅವರ ಜನ್ಮ ಶತಮಾನೋತ್ಸವ ಸಮಾರಂಭ. ಈ ಭವ್ಯ ಸಮಾರಂಭದ ದಿವ್ಯ ರೂವಾರಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು. ಸ್ವಾಮಿಗಳ ರೂವಾರಿತ್ವವೆಂದ ಮೇಲೆ ಹೇಳುವುದೇನಿದೆ? ಎಲ್ಲವೂ ಬಲು ಅಚ್ಚುಕಟ್ಟು, ಕಟ್ಟುನಿಟ್ಟು. ಎಲ್ಲದಕ್ಕೂ ಸ್ವಾಮಿಗಳದ್ದೇ ನಿರೂಪ, ನಿರ್ದೇಶನ. ಕಾರ್ಯಕ್ರಮದ ಉಸ್ತುವಾರಿಯನ್ನು ಸ್ವಾಮಿಗಳ ಅಪೇಕ್ಷೆಯಂತೆ ವಹಿಸಿಕೊಂಡಿದ್ದವರು ಸ್ವಾತಂತ್ರ್ಯ ಹೋರಾಟಗಾರ, ಸಾಹಿತಿ ಹೋ. ಶ್ರೀನಿವಾಸಯ್ಯನವರು.
ಸ್ವಾಮಿಗಳ ಅಪೇಕ್ಷೆಯಂತೆ ಈ ಸಮಾರಂಭದಲ್ಲಿ ಹಲವು ಸದಭಿರುಚಿಯ ಬೋಧನಾಪ್ರದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮಾಸ್ತಿ, ನಿಟ್ಟೂರು ಶ್ರೀನಿವಾಸಯ್ಯನವರು, ಎಂ.ವೀ. ಸೀತಾರಾಮಯ್ಯನವರು, ಪುತಿನ ಮೊದಲಾದ ಸಾಹಿತ್ಯ ಸೈಂಧವರೆಲ್ಲಾ ಪಾಲ್ಗೊಂಡಿದ್ದರು. ನಿಜ ಅರ್ಥದಲ್ಲಿ ಅದೊಂದು ಸರಳ ಸುಂದರ ಸಾಹಿತ್ಯ ಸಮ್ಮೇಳನ. ಸಾಹಿತಿಗಳ, ಸಾರಸ್ವತರ ಸಮಾಗಮ. ಸಮಾರಂಭಕ್ಕೆ ದಿನ ಮೊದಲೇ ಆಗಮಿಸಿದ್ದ ಈ ಅತಿಥಿಗಳಿಗೆಲ್ಲಾ ಜಗದ್ಗುರುಗಳ ಆದಿಚುಂಚನಗಿರಿಯ ಅತಿಥಿಗೃಹಗಳಲ್ಲೇ ಊಟೋಪಚಾರದ ವ್ಯವಸ್ಥೆ, ವಾಸ್ತವ್ಯ.
ಲಾಗಾಯ್ತಿನಿಂದಲೂ ಅಷ್ಟೆ, ಶ್ರೀ ಬಾಲಗಂಗಾಧರನಾಥ ಸ್ವಾಮಿಯವರು ಅತಿಥಿ ಸತ್ಕಾರ ಹಾಗೂ ಅನ್ನದಾಸೋಹಕ್ಕೆ ಹೆಸರಾದವರು. ಇಂತಹ ವಿಚಾರಗಳಲ್ಲಿ ಶ್ರೀಗಳ ಧಾರಾಳ ಮನೋಭಾವ ಮೇರೆ ಮೀರಿದ್ದು, ವರ್ಣನೆಗೆ ನಿಲುಕದ್ದು. ಅಲ್ಲಿದ್ದು, ಅವರ ತುಂಬು ಹೃದಯದ, ಮೃದು ಮಲ್ಲಿಗೆ ಮನಸ್ಸಿನ ಆತಿಥ್ಯವನ್ನು ಸ್ವೀಕರಿಸಿ ಕಂಡುಂಡು ಬಂದವರಿಗೆ, ಮಠದ ದೈನಂದಿನ ಶಿಸ್ತುಬದ್ಧ ಚಟುವಟಿಕೆಗಳನ್ನು ವಹಿವಾಟನ್ನು ಪ್ರತ್ಯಕ್ಷ ಗಮನಿಸಿ ಬಂದವರಿಗೆ ಇದು ತಮ್ಮ ಬದುಕಿನಲ್ಲಿ ಸಂಭವಿಸಿದ ಒಂದು ಸುಂದರ ಅನುಭವವೆಂದು ತೋರುವುದರಲ್ಲಿ ಸಂದೇಹವಿಲ್ಲ.
ಸಮಾರಂಭದ ದಿನ. ಆಗಮಿಸಿದ್ದ ಅತಿಥಿಗಳಿಗೆಲ್ಲಾ ಅಲ್ಲೇ ಸುಗ್ರಾಸ ಭೋಜನ. ಹಬ್ಬದಡಿಗೆ. ಆಗಮಿಸಿದ್ದ ಗಣ್ಯಾತಿಗಣ್ಯರೆಲ್ಲರೂ ಊಟಕ್ಕೆ ಕುಳಿತರು. ಮಾಡಿದ್ದ ಸೊಗಸಾದ ಸವಿರುಚಿಯ ಅಡುಗೆಯನ್ನು ಅಲ್ಲಿಯ ಮಠದಲ್ಲಿ ಆಶ್ರಯ ಪಡೆದಿದ್ದ ಬಾಲಕರು, ಹದಿನೈದರ ಹರೆಯದ ಹೈದರು ಸರಸರನೆ ಬಡಿಸಲಾರಂಭಿಸಿದರು.
ಊಟ ಮಾಡಲಾರಂಭಿಸಿದ ನಿಟ್ಟೂರರು ನಡುವೆ ಏನನ್ನೋ ಬಡಿಸಲು ಬಂದ ಬಾಲಕನೊಬ್ಬನನ್ನು ತಡೆದು 'ನೀನು ಊಟ ಮಾಡಿದ್ದೀಯಾ ರಾಜಾ' ಎಂದು ಕೇಳಲು ಆ ಬಾಲಕ ಮುಗುಳ್ನಗುತ್ತಾ 'ಇಲ್ಲಾ ಸಾರ್, ನಾವ್ಯಾರು ಇನ್ನೂ ಊಟ ಮಾಡಿಲ್ಲ. ಮೊದಲಿಗೆ 'ಅತಿಥಿ ದೇವೋಭವ' ಎಂಬಂತೆ ನಿಮ್ಮ ಊಟ. ನಿಮ್ಮದಾದ ಮೇಲೆ ನಮ್ಮ ಊಟ' ಎಂದ. ನಮ್ರತೆ ಹಾಗೂ ಸೌಜನ್ಯದಿಂದ ಆ ಬಾಲಕನಾಡಿದ ಈ ಮಾತನ್ನು ಕೇಳಿದ ನಿಟ್ಟೂರರು ಚಕಿತರಾಗಿ ಪಕ್ಕವೇ ಕೂತು ಊಟ ಮಾಡುತ್ತಿದ್ದ ಮಾಸ್ತಿಯವರಿಗೆ 'ಕೇಳಿದ್ರೇನ್ರೀ ಈ ಹುಡುಗನ ಮಾತನ್ನ? ಎಂತಹ ಸುಸಂಸ್ಕೃತಿ ಇಲ್ಲಿಯ ಮಕ್ಕಳದ್ದು!' ಎಂದವರೇ ಮತ್ತೆ ಆ ಹುಡುಗನತ್ತ ತಿರುಗಿ 'ಈ ರೀತಿಯ ಸನ್ನಡತೆಯನ್ನು ನಿಮಗೆ ಬೋಧಿಸಿದವರು ಯಾರು?' ಎಂದು ಕೇಳಲು ಆ ಹುಡುಗ ನಗುತ್ತ 'ಇನ್ನಾರು ಸಾರ್? ನಮ್ಮ ಪೂಜ್ಯ ಗುರುಗಳು' ಎಂದು ಹೇಳಿ ಮಿಕ್ಕವರಿಗೆ ಬಡಿಸಲು ಮುಂದೆ ನಡೆದ.
ಊಟ ಮಾಡಿದ್ದಾಯಿತು. ಮಾಸ್ತಿ, ನಿಟ್ಟೂರರು ಕೈ ತೊಳೆದುಕೊಂಡು ಹೊರಬಂದರು. ಮತ್ತವರಿಗೆ ಆಶ್ಚರ್ಯ ಕಾದಿತ್ತು. ಅಲ್ಲೊಂದು ಕಡೆ ಕೆಲವು ಹುಡುಗರು ಸಲೀಸಾಗಿ ಸರಳವಾಗಿ ಸಂಸ್ಕೃತದಲ್ಲೇ ಸಂಭಾಷಿಸುತ್ತಿದ್ದರು. ಕಣ್ಣರಳಿಸಿಕೊಂಡು ಕಿವಿ ನಿಮಿರಿಸಿಕೊಂಡು ಕಂಡು ಕೇಳುತ್ತಿದ್ದ ನಿಟ್ಟೂರರಿಗೆ ಕುತೂಹಲ ತಡೆಯಲಾಗಲಿಲ್ಲ. ಅವರ ಬಳಿ ಹೋದರು. ಇವರತ್ತ ಬಾಲಕರು ತಿರುಗಲು ನಿಟ್ಟೂರರು 'ಏನ್ರಪ್ಪಾ, ಇಷ್ಟು ಸೊಗಸಾಗಿ ನಿರರ್ಗಳವಾಗಿ ಸಂಸ್ಕೃತದಲ್ಲಿ ಮಾತನಾಡುತ್ತಿದ್ದೀರಲ್ಲಾ ನೀವೇನು ಸಂಸ್ಕೃತ ಭಾಷಾ ವಿದ್ಯಾರ್ಥಿಗಳೇ?' ಎಂದು ಕೇಳಲು ಅವರಲ್ಲೊಬ್ಬ 'ಹೌದು ಸಾರ್, ನಾವೆಲ್ಲಾ ಇಲ್ಲಿಯ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳು. ಸುತ್ತಮುತ್ತಲ ಗ್ರಾಮಗಳಿಂದ ಬಂದಿರುವವರು. ಕೃಷಿಕರ ಮಕ್ಕಳು. ಇಲ್ಲಿ ನಾವೆಲ್ಲರೂ ಮಾತನಾಡುವುದು ಸಂಸ್ಕೃತದಲ್ಲೇ. ಅದಿಲ್ಲಿ ಕಡ್ಡಾಯ' ಎನ್ನಲು ನಿಟ್ಟೂರರಿಗೆ ತಮ್ಮ ಕಿವಿಗಳನ್ನು ನಂಬಲಾಗಲಿಲ್ಲ!
ಈ ರೀತಿ ಸಂಸ್ಕೃತದ ಪ್ರಸಾರ, ಪ್ರಚಾರ, ಪರಿಚಯಕ್ಕೆ ಪ್ರಮುಖವಾಗಿ ಕಾರಣರಾಗಿದ್ದವರು ಬಾಲಗಂಗಾಧರನಾಥ ಸ್ವಾಮಿಯವರು. ಆ ಮಹಾನ್ ಗುರುವಿನದು ಬಹುಮುಖದ ವ್ಯಕ್ತಿತ್ವ. ವರ್ಣರಂಜಿತ ಬದುಕು. ಸಮಾಜ ಸುಧಾರಣೆಗಾಗಿ ಅವರು ಮಾಡಿದ ಪ್ರತಿಯೊಂದು ಕೆಲಸವೂ ಪವಾಡ ಸದೃಶ. ನೂರಾರು ಪ್ರತಿಭಾನ್ವಿತರು ಹತ್ತಾರು ಜನ್ಮಗಳಲ್ಲಿ ಮಾಡಲಾಗದ್ದನ್ನು ಬಾಲಗಂಗಾಧರನಾಥರು ಒಂದೇ ಜನ್ಮದಲ್ಲಿ ಮಾಡಿದ ಮುಗಿಸಿ ಸಾರ್ಥಕ್ಯ ಪಡೆದು ಕಣ್ಮರೆಯಾಗಿ ಹೋದರು.
ಬೆಳ್ಳೂರು ಒಂದು ಪುಟ್ಟ ಹಳ್ಳಿ. ಕುಗ್ರಾಮ. ಅದನ್ನು ಕಂಡವರಂತಿರಲಿ ಕೇಳಿದ್ದವರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಿರಲಿಲ್ಲವೇನೋ! ಇಂತಹ ಬೆಳ್ಳೂರಿಗೆ ಭಾರತದ ಭೂಪಟದಲ್ಲಿ ಎದ್ದು ವಿಜೃಂಭಿಸುವಂತೆ ಸ್ಥಾನವನ್ನು ದೊರಕಿಸಿಕೊಟ್ಟ ಕೀರ್ತಿ ಸಲ್ಲಬೇಕಾದ್ದು ಈ ಪರಮ ಪೂಜ್ಯರಿಗೆ.
ಇಂತಹ ಬೆಳ್ಳೂರಿನ ಬಳಿಯ ಆದಿಚುಂಚನಗಿರಿ ಬೆಟ್ಟವನ್ನೇ ತಮ್ಮ ಕರ್ಮಭೂಮಿ ಆಗಿಸಿಕೊಂಡು, ಅದರ ಸುತ್ತ ಅಂಧರಿಗೂ ಸೇರಿದಂತೆ ನಾನಾ ತೆರನಾದ ಸುವ್ಯವಸ್ಥಿತ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿ, ದಿನನಿತ್ಯ ಸಹಸ್ರಾರು ವಿದ್ಯಾರ್ಥಿಗಳಿಗೆ ಅನ್ನದಾಸೋಹದ ಜೊತೆಗೆ ಜ್ಞಾನದಾಸೋಹವನ್ನೂ ನೀಡುತ್ತ, ಆ ಬರಡು ಬೆಟ್ಟಕ್ಕೇ ಒಂದು ವಿಶಿಷ್ಟ ರೂಪ ಕೊಟ್ಟಿರುವ ಶ್ರೀ ಬಾಲಗಂಗಾಧರನಾಥ ಸ್ವಾಮಿಯವರು ಪ್ರಸ್ತುತ ಶತಮಾನ ಕಂಡಿರುವ ಓರ್ವ ಪವಾಡ ಪುರುಷೋತ್ತಮ ಎಂದರೆ ಉತ್ಪ್ರೇಕ್ಷೆಯ ಮಾತಾಗದು. ಇಂತಹ ಪುಣ್ಯ ಪುರುಷೋತ್ತಮನನ್ನು ಕಳೆದುಕೊಂಡ ನಾವು ಬಡವಾದೆವು, ನಾಡೂ ಬಡವಾಯಿತು.
(ನೆರವು: ಖ್ಯಾತ ಸಾಹಿತಿ ಹೋ. ಶ್ರೀನಿವಾಸಯ್ಯನವರ ಒಂದು ಲೇಖನ)
- ಬಿ.ಎಸ್. ಕೇಶವರಾವ್