ಪೂರಿಯಾ ಎಂಬ ರಾಗವಿದೆ. ಭಾವೋದ್ದೀಪಕ, ಸುಂದರ. ಆದರೆ ಹಾಡಲು ಅಷ್ಟೇ ಕಠಿಣವಾದ ಸಾಯಂಕಾಲದ ರಾಗವದು. ಒಬ್ಬ ಕಲಾವಿದ ಪೂರಿಯಾವನ್ನು ಸಮರ್ಥವಾಗಿ ಹಾಡುತ್ತಾನೆಂದರೆ ಅವನು ನಿಜಕ್ಕೂ ಸಾಧನೆ ಮಾಡಿದ್ದಾನೆ ಎನ್ನಬಹುದಾದಷ್ಟು ಕಠಿಣ ಹಾಗೂ ಭಾವಪೂರ್ಣ ರಾಗ ಅದು. ಆ ರಾಗದ ಅತೀ ಮುಖ್ಯ ಅಂಶವೆಂದರೆ ಆ ರಾಗದ 'ಕೋಮಲ ರಿಷಭ'. ಇಡೀ ರಾಗವೇ ಆ ಒಂದು 'ಕೋಮಲ ರಿಷಭ' ಸ್ವರದ ಮೇಲೆ ನಿರ್ಧರಿತವಾಗುವಷ್ಟು ಅದು ಮಹತ್ವವಾಗಿದೆ. ಆ ರಿಷಭವಾದರೋ ಮೃದುವಾದ ಪುಷ್ಪದ ಮೇಲಿನ ಹನಿ ಬಿಂದುವಿನಂತೆ... ಕೈಗೆ ಸಿಕ್ಕೂ ಸಿಗದಂತೆ ಕಾಡಿ ಕಾಡಿ ಮರುಳು ಮಾಡುವ ಮೋಹಿನಿಯಂತೆ... ಮಾತಿಗೆ ನಿಲುಕದ್ದು ಅದು.
ಒಮ್ಮೆ ಧಾರವಾಡದಲ್ಲಿ ಉಸ್ತಾದ್ ಅಬ್ದುಲ್ ಕರೀಂ ಖಾನ್ ಅವರ ಗಾಯನವಿತ್ತು. ಒಳ್ಳೆ ಕೇಳುಗರಿಂದ ತುಂಬಿದ್ದ ಆ ಖಾಸಗಿ ಬೈಠಕ್‌ನಲ್ಲಿ ಉಸ್ತಾದರು ಅಂದು ಪೂರಿಯಾ ರಾಗವನ್ನು ಪ್ರಾರಂಭಿಸಿದರು. ಈ ರಾಗದಲ್ಲಿ ಒಂದು ವಿಶಿಷ್ಟ ಶೈಲಿಯಲ್ಲಿ ಆ 'ಕೋಮಲ ರಿಷಭ'ವನ್ನು ಹಾಡುವ ವಿಧಾನವಿದೆ. ಉಸ್ತಾದರು ಹಾಡಲು ಪ್ರಾರಂಭಿಸಿದರು. ಮಂದ್ರದಲ್ಲಿ ಷಡ್ಜ, ರಿಷಭ, ಕೆಳಗಿನ ನಿಷಾಧ - ಹೀಗೆ ಒಂದೊಂದಾಗಿ ಪೂರಿಯಾದ ಸ್ವರಗಳನ್ನು ತಮ್ಮ ಅಗಾಧ ಕಂಠಸಿರಿಯಲ್ಲಿ ಚಿತ್ರಿಸತೊಡಗಿದರು. ಕೇಳುಗರೂ ತಲೆದೂಗುತ್ತ ಮೈಮರೆತರು. ಸುಮಾರು 15 - 20 ನಿಮಿಷ ಆಗಿರಬೇಕು. ಉಸ್ತಾದರು ಇನ್ನೂ ಅಲ್ಲೇ ಮಂದ್ರದಲ್ಲೇ ಹಾಡುತ್ತಿದ್ದರು. ಮತ್ತೆಮತ್ತೆ ಆ ಕೋಮಲ ರಿಷಭವನ್ನು ಹಚ್ಚುತ್ತಿದ್ದರು. ಮತ್ತೆ ಷಡ್ಜಕ್ಕೆ ಬರುತ್ತಿದ್ದರು. ಮತ್ತೆ ರಿಷಭವನ್ನು ಹಚ್ಚುತ್ತಿದ್ದರು. ಹೀಗೇ ನಡೆಯುತ್ತಿತ್ತು. ಅದು ಸುಮಧುರವಾಗಿದ್ದರೂ 20ಕ್ಕೂ ಹೆಚ್ಚು ನಿಮಿಷ ಹೀಗೇ ಆದಾಗ ಕೇಳುಗರಲ್ಲಿ ಸಣ್ಣದಾಗಿ ಗೊಂದಲ ಪ್ರಾರಂಭವಾಯಿತು. 'ಇದೇನು ಇಂದು ಯಾಕೋ ಉಸ್ತಾದರು ಮುಂದೆ ಹಾಡುತ್ತಲೇ ಇಲ್ಲವಲ್ಲ' ಎಂದು ಒಬ್ಬರ ಮುಖವನ್ನೊಬ್ಬರು ನೋಡತೊಡಗಿದರು. ಯಾರೋ ಇಬ್ಬರು ಮೆಲ್ಲಗೆ ಒಬ್ಬರಿಗೊಬ್ಬರು ಕೇಳಿಕೊಂಡರು. ಅಲ್ಲಿಯವರೆಗೂ ಕಣ್ಣು ಮುಚ್ಚಿ ಪೂರ್ತಿ ಮೈ ಮರೆತಿದ್ದ ಖಾನ್ ಸಾಹೇಬರು ಆ ಸೂಕ್ಷ್ಮ ಶಬ್ದಕ್ಕೋ ಏನೋ ಎಂಬಂತೆ ಕಣ್ಣು ತೆರೆದು ಕೇಳುಗರನ್ನು ನೋಡಿ ಹೇಳಿದರಂತೆ, 'ನನಗೆ ನಿಮ್ಮ ಆಶ್ಚರ್ಯ ಅರ್ಥವಾಗುತ್ತದೆ. ಆದರೆ ಏನು ಮಾಡಲಿ? ಯೇ ಪೂರಿ (ಅಂದರೆ ಪೂರಿಯಾ ರಾಗ) ಅಬತಕ್ ತೇಲ್‌ಸೆ ನಿಕಲ್ ರಹಿ ಹೈ, ಇಸೆ ಘೀ ಸೆ ನಿಕಾಲನೇಕಿ ಕೋಶಿಶ್‌ಕರ್ ರಹಾ ಹೂಂ'
ಕೊನೆಗೂ ಅವರು ಆ ಪೂರಿಯಾವನ್ನು ಒಳ್ಳೇ ತುಪ್ಪದಲ್ಲಿ ಘಮಘಮಿಸುವ ಪೂರಿಯಂತೆಯೇ ಹಾಡಿ ಆ ಕಛೇರಿಯನ್ನು ಸ್ಮರಣೀಯವಾಗಿಸಿದ್ದು ಇತಿಹಾಸ. ಆದರೆ ಆ 'ಕೋಮಲ ರಿಷಭ'ದ ಮಹತ್ವ, ಸಾಧನೆ, ಅದರ ಶಕ್ತಿಯ ಅಗಾಧತೆಗೆ ಅಲ್ಲದೆ ಆ ಕಲಾವಿದರ ಪರಿಪೂರ್ಣತೆಯ ದೃಷ್ಟಿಗೆ ಇದೊಂದು ಉದಾಹರಣೆಯಷ್ಟೆ. ಅದಕ್ಕೇ ಒಮ್ಮೆ ಪಂ.ವಿನಾಯಕ ತೊರವಿಯವರು ಹೇಳುತ್ತಿದ್ದರು, 'ಪೂರಿಯಾದ ರಿಷಭವನ್ನು ಕಿಂಚಿತ್ ಕೆಡಿಸಿದರೂ ಅದು ಹೇಗಿರುತ್ತದೆಂದರೆ ಒಳ್ಳೆಯ ಹಾಲಿನ ಪಾಯಸ ಮಾಡಿ ಏಲಕ್ಕಿ ಹಾಕುವ ಬದಲು ಇಂಗು ಹಾಕಿದಂತಿರುತ್ತದೆ'.
ಅಂಥ ಶಕ್ತಿ ಈ ಕೋಮಲ ಸ್ವರಕ್ಕಿದೆ.
- ಶ್ರುತಿ ಭಟ್